ಕೊಪ್ಪಳದಲ್ಲಿ ಅರ್ಧ ಶತಮಾನ ದಾಟಿದ ಸಂಪೂರ್ಣ ರಾಮಾಯಣ
ಬಯಲಾಟ
ಮಾದಿಗ ಸಮಾಜದ ರಾಮಾಯಣ ದರ್ಶನ!
ಕೊಪ್ಪಳ: ಇದು ನಿಜಕ್ಕೂ ಐತಿಹಾಸಿಕ ಸಾಧನೆಯೇ ಸರಿ.
ಜನವರಿ ೨೨ರಂದು ಶ್ರೀರಾಮನ ಪ್ರತಿಷ್ಠಾಪನೆ ಅಯೋಧ್ಯೆಯಲ್ಲಿ
ನಡೆಯುತ್ತಿದೆ. ಜನವರಿ ೨೭ರಂದು ಕೊಪ್ಪಳದ ಅಧಿದೈವ ಶ್ರೀ
ಗವಿಸಿದ್ಧೇಶ್ವರನ ಮಹಾರಥೋತ್ಸವ. ಈ ಎರಡೂ ಮಹತ್ವದ
ಸಮಾರಂಭಗಳ ನಡುವೆ, ಪ್ರತಿ ವರ್ಷ ಶ್ರೀ ಗವಿಸಿದ್ಧೇಶ್ವರ ಜಾತ್ರಾ
ಮಹೋತ್ಸವದ ಅಂಗವಾಗಿ ಪ್ರದರ್ಶಿತವಾಗುವ ಸಂಪೂರ್ಣ ರಾಮಾಯಣ
ಬಯಲಾಟ ಐವತ್ತು ವರ್ಷಾಚರಣೆಯ ಸಂಭ್ರಮದಲ್ಲಿದೆ.
ಇದು ನಿಜಕ್ಕೂ ಅಭೂತಪೂರ್ವ ಸಾಧನೆಯೇ. ಏಕೆಂದರೆ, ಹಲವಾರು
ಮಹತ್ವದ ಅಂಶಗಳನ್ನು ಕೊಪ್ಪಳದ ಈ ಸಂಪೂರ್ಣ ರಾಮಾಯಣ
ಬಯಲಾಟ ಹೊಂದಿದೆ.
? ಈ ಬಯಲಾಟ ಕಳೆದ ಐವತ್ತು ವರ್ಷಗಳಿಂದ, ಪ್ರತಿ ವರ್ಷ ಕೊಪ್ಪಳದ
ಮಹಾರಥೋತ್ಸವದ ಮರುದಿನ (ಮದ್ದು ಸುಡುವ ದಿನ) ಜಾತ್ರೆಯ
ಸಂದರ್ಭದಲ್ಲಿ ಪ್ರದರ್ಶಿತವಾಗುತ್ತ ಬಂದಿದೆ.
? ಈ ನಾಟಕವನ್ನು ಪ್ರದರ್ಶಿಸುತ್ತಿರುವವರು ಕೊಪ್ಪಳ ನಗರದ ಶ್ರೀ
ಬಸವೇಶ್ವರ ನಗರದ ಪರಿಶಿಷ್ಟ ಸಮುದಾಯವಾದ ಮಾದಿಗ
ಸಮಾಜದವರು.
? ಸಂಪೂರ್ಣ ರಾಮಾಯಣ ಬಯಲಾಟದ ಎಲ್ಲಾ ವೆಚ್ಚವನ್ನು ಸಮಾಜದವರು
ತಾವೇ ವಂತಿಗೆ ಹಾಕಿ ನಿರ್ವಹಿಸಿಕೊಂಡು ಬಂದಿದ್ದಾರೆ. ಇದಕ್ಕಾಗಿ ಯಾರಿಂದಲೂ
ಚಂದಾ ಸಂಗ್ರಹಿಸುವುದಿಲ್ಲ. ದೇಣಿಗೆ ಪಡೆಯುವುದಿಲ್ಲ.
? ಈ ಬಯಲಾಟದ ಎಲ್ಲಾ ಕಲಾವಿದರು ಮಾದಿಗ ಸಮಾಜದವರು ಹಾಗೂ
ಪ್ರದರ್ಶನ ಸಂಪೂರ್ಣ ಉಚಿತ. ಪಾತ್ರಧಾರಿಗಳ ಪೈಕಿ ಬಹುತೇಕರು
ದುಡಿಯುವ ವರ್ಗಕ್ಕೆ ಸೇರಿದವರು. ನಿತ್ಯ ಕೂಲಿ ಮಾಡುವ ಜನರೇ
ಬಯಲಾಟದ ಮಹತ್ವದ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ.
? ಸಂಪೂರ್ಣ ರಾಮಾಯಣ ಬಯಲಾಟದ ಸಂಭಾಷಣೆಗಳಲ್ಲಿ ಶೇ.೮೦ಕ್ಕಿಂತ
ಹೆಚ್ಚು ಭಾಗ ಹಳಗನ್ನಡದಲ್ಲಿದೆ. ಬಹುತೇಕ
ಅನಕ್ಷರಸ್ಥರಾಗಿರುವ ಕಲಾವಿದರೇ ಕಂಠಪಾಠ ಮಾಡಿ, ತಪ್ಪಿಲ್ಲದಂತೆ
ಸಂಭಾಷಣೆ ಒಪ್ಪಿಸುತ್ತಾರೆ.
? ಸಂಪೂರ್ಣ ರಾಮಾಯಣ ಬಯಲಾಟದ ಎಲ್ಲಾ ಪಾತ್ರಗಳನ್ನು
ಪುರುಷರೇ ನಿರ್ವಹಿಸುವುದು ವಿಶೇಷ. ಸ್ತ್ರೀ ಪಾತ್ರಗಳನ್ನೂ
ಪುರುಷರೇ ನಿರ್ವಹಿಸುತ್ತಾರೆ.
ಸಂಪೂರ್ಣ ರಾಮಾಯಣ
ಕೊಪ್ಪಳದ ಶ್ರೀರಾಮನ ಪಟ್ಟಾಭಿಷೇಕದ ಸಂದರ್ಭದಿಂದ ಬಯಲಾಟ
ಪ್ರಾರಂಭವಾಗುತ್ತದೆ. ದಶರಥ ಮಹಾರಾಜನ ಕೊನೆಯ ಪತ್ನಿ
ಕೈಕೇಯಿ, ಕೋಸಲ ರಾಜ್ಯದ ಉತ್ತರಾಧಿಕಾರಿಯಾಗಿ ತನ್ನ ಮಗ
ಭರತನಿಗೇ ಪಟ್ಟಾಭಿಷೇಕ ಮಾಡಬೇಕು ಎಂಬ ಬೇಡಿಕೆಯೊಂದಿಗೆ
ಪ್ರಾರಂಭವಾಗುವ ಬಯಲಾಟ, ಕ್ಷಣಕ್ಷಣಕ್ಕೂ ಆ ಸಂದರ್ಭದಲ್ಲಿ
ಅಯೋಧ್ಯೆಯ ಅರಮನೆಯಲ್ಲಿ ನಡೆಯುವ ನಾಟಕೀಯ
ಬೆಳವಣಿಗೆಗಳನ್ನು ಹಾಡು, ನೃತ್ಯದ ಮೂಲಕ
ಅನಾವರಣಗೊಳಿಸುತ್ತ ಹೋಗುತ್ತದೆ.
ದಶರಥ ಮಹಾರಾಜ ಹಿಂದೆ ಕೈಕೇಯಿಗೆ ಎರಡು ವರಗಳನ್ನಿತ್ತಿದ್ದ. ಆ
ವರಗಳನ್ನು ತನಗೆ ಬೇಕಾದಾಗ ಕೇಳುತ್ತೇನೆ ಎಂದಿರುತ್ತಾಳೆ
ಕೈಕೇಯಿ. ಈಗ ರಾಮನನ್ನು ಕೋಸಲ ಸಾಮ್ರಾಜ್ಯದ ಉತ್ತರಾಧಿಕಾರಿಯಾಗಿ
ಘೋಷಿಸುವ ಸಂದರ್ಭ ಬಂದಿರುವಾಗ, ಮಹಾರಾಜ ತನಗೆ ನೀಡಿದ್ದ
ವರಗಳನ್ನು ನೆನಪಿಸುವ ರಾಣಿ ಕೈಕೇಯಿ, ಅವನ್ನು ಈಡೇರಿಸುವಂತೆ
ಕೇಳಿಕೊಳ್ಳುತ್ತಾಳೆ.
ತನ್ನ ವಚನಕ್ಕೆ ಬದ್ಧ ಎನ್ನುವ ದಶರಥ ಮಹಾರಾಜ, ಯಾವ ವರಗಳು
ಬೇಕೋ ಕೇಳು ಎನ್ನುತ್ತಾನೆ. ಮೊದಲನೆಯ ವರವಾಗಿ,
ಶ್ರೀರಾಮಚಂದ್ರನು ನಾರುಮಡಿಯನ್ನುಟ್ಟು, ಜಟಾಧಾರಿಯಾಗಿ ೧೪ ವರ್ಷ
ವನವಾಸಕ್ಕೆ ಹೋಗಬೇಕು ಎನ್ನುತ್ತಾಳೆ ಕೈಕೇಯಿ. ಎರಡನೇ ವರವಾಗಿ,
ತನ್ನ ಪುತ್ರ ಭರತನನ್ನು ಕೋಸಲ ರಾಜ್ಯದ ಉತ್ತರಾಧಿಕಾರಿ ಎಂದು
ಪಟ್ಟಾಭಿಷೇಕ ಮಾಡಬೇಕು ಎನ್ನುತ್ತಾಳೆ.
ಸಾಮಾನ್ಯರೇ ಅಸಾಮಾನ್ಯ ನಟ-ನಟಿಯರು
ರಾಮಾಯಣ ಗ್ರಂಥದಲ್ಲಿಯೇ ಅತ್ಯಂತ ಭಾವತೀವ್ರತೆ ಹೊಂದಿರುವ ಈ
ಪ್ರಸಂಗವೇ ಕೊಪ್ಪಳದ ಸಂಪೂರ್ಣ ರಾಮಾಯಣ ಬಯಲಾಟದ ಮುಖ್ಯ
ಭಾಗವಾಗಿದೆ. ಕೇವಲ ಪರಿಣಿತ ನಟರು ಮಾತ್ರ ನಿಭಾಯಿಸಲು ಸಾಧ್ಯವಿರುವ
ಇಂತಹ ಕಠಿಣ ಪಾತ್ರಗಳು, ಸಂಭಾಷಣೆಗಳು ಹಾಗೂ
ಭಾವಾಭಿವ್ಯಕ್ತಿಯನ್ನು ಬಹುತೇಕ ಅನಕ್ಷಕರಸ್ಥರೇ ಇರುವ ಹಾಗೂ
ವೃತ್ತಿಪರರಲ್ಲದ ವ್ಯಕ್ತಿಗಳು ಸಮರ್ಥವಾಗಿ ನಿರ್ವಹಿಸುತ್ತ
ಬಂದಿರುವುದು ಅತ್ಯಂತ ವಿಶೇಷ ಎನ್ನುತ್ತಾರೆ ಪ್ರಮುಖ
ಪಾತ್ರಧಾರಿಗಳಲ್ಲಿ ಒಬ್ಬರಾಗಿರುವ ಶಿವಪುತ್ರಪ್ಪ ಹಿರೇಮನಿ. ಪ್ರಭು
ಶ್ರೀರಾಮಚಂದ್ರನ ಪಾತ್ರವನ್ನು ನಿರ್ವಹಿಸುವ ಅವರ ಅಭಿನಯ
ಪರಕಾಯ ಪ್ರವೇಶದಂತಿರುತ್ತದೆ ಎನ್ನುತ್ತಾರೆ ಬಯಲಾಟವನ್ನು
ನೋಡಿದವರು.
ಈ ಸಲದ ನಾಟಕದ ಪ್ರಮುಖ ಪಾತ್ರಧಾರಿಗಳು ಹೀಗಿದ್ದಾರೆ;
ಶ್ರೀ ರಾಮಚಂದ್ರ – ಶಿವಪುತ್ರಪ್ಪ ಹಿರೇಮನಿ
ಸೀತಾದೇವಿ – ರಾಜಶೇಖರ ದೊಡ್ಡಮನಿ
ಲಕ್ಷ್ಮಣ – ರಮೇಶ ದೊಡ್ಡಮನಿ
ಮಾಯಾಸ್ತ್ರೀ – ದೇವಪ್ಪ ಗಿಣಿಗೇರಿ
ಶೂರ್ಪನಖಿ – ನಿಂಗಪ್ಪ ದೊಡ್ಡಮನಿ
ತ್ರಿಸುರ – ನಿಂಗಪ್ಪ ದೊಡ್ಡಮನಿ
ಖರಾಸೂರ – ಆನಂದ ದೊಡ್ಡಮನಿ
ದುರ್ಷಾಸೂರ – ಆನಂದ ಕಿಡದಾಳ
ಹನುಮಂತ – ಮಹೇಶ ಕಂದಾರಿ
ಸುಗ್ರೀವ – ವಿಠ್ಠಲ ಹೊಳಿಯಪ್ಪನವರ
ವಾಲಿ – ಹರಿಪ್ರಸಾದ ಬಂಗಾರಿ
ರಾವಣಾಸುರ – ಗವಿಸಿದ್ದಪ್ಪ ಕಟ್ಟಿಮನಿ
ಕೈಕೇಯಿದೇವಿ – ದುರುಗಪ್ಪ ಕಂದಾರಿ
ಕೌಶಲ್ಯಾದೇವಿ – ರವಿ ಕಿರುಬಂಡಿ
ದಶರಥ – ದುರುಗಪ್ಪ ಕಂದಾರಿ
ಇಂದ್ರಜಿತ – ನೀಲಪ್ಪ ಮ್ಯಾಗಳಮನಿ
ಮಂಡೋಧರಿ – ರಾಕೇಶ ಗಿಣಿಗೇರಿ
ವಿಭೀಷಣ – ಪ್ರಕಾಶ ನಾಗಮ್ಮನವರ
ಕುಂಭಕರ್ಣ – ಮಂಜುನಾಥ ಕಿರುಬಂಡಿ
ಸನ್ಯಾಸಿ – ಶಿವಪುತ್ರಪ್ಪ ಬಂಗಾರಿ
ಮಾರೀಚ – ಹನುಮಂತಪ್ಪ ಗಿಣಿಗೇರಿ
ಮೂರೇ ವಾದ್ಯಗಳ ಬಳಕೆ
ಇಡೀ ಬಯಲಾಟದಲ್ಲಿ ಕೇವಲ ಮೂರು ವಾದ್ಯಗಳು ಪ್ರಮುಖವಾಗಿ
ಬಳಕೆಯಾಗುತ್ತವೆ. ಹಾರ್ಮೋನಿಯಂ, ಮದ್ದಲೆ (ಮೃದಂಗ) ಮತ್ತು
ತಾಳಗಳಿಂದಲೇ ನಾಟಕದ ಬಹುತೇಕ ಸಂಗೀತ ಸೃಷ್ಟಿಯಾಗುತ್ತದೆ. ಈ
ಎಲ್ಲ ವಾದ್ಯಗಳನ್ನು ಪರಿಣಿತ ಮಾಸ್ತರುಗಳು ನಿರ್ವಹಿಸುತ್ತಾರೆ.
ಜೊತೆಗೆ ಕಥಾ ನಿರೂಪಕರು, ಹಿಮ್ಮೇಳದವರು ನಾಟಕವನ್ನು ಪೋಷಿಸಿ,
ಮುನ್ನಡೆಸುವ ಪ್ರಮುಖ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾರೆ.
ಹಾರ್ಮೋನಿಯಂ ಮಾಸ್ತರ್ ದೇವಪ್ಪ ಹಳ್ಳಿಕೇರಿ, ಮದ್ದಲೆ ಮಾಸ್ತರ್
ಗೋವಿಂದಪ್ಪ ಹ್ಯಾಟಿ ಮತ್ತು ಕಥೆಗಾರ ಮಾಸ್ತರ್ ಹನುಮಂತಪ್ಪ
ಲೇಬಗೇರಿ ಅವರ ಕೊಡುಗೆ ಅತ್ಯಮೂಲ್ಯ. ಇವರಿಗೆ ಜೊತೆಯಾಗಿ
ಹಿಮ್ಮೇಳದ ಪ್ರಮುಖರಾಗಿರುವ ಚನ್ನಬಸಪ್ಪ ಹೊಳಿಯಪ್ಪನನವರ,
ಗವಿಸಿದ್ದಪ್ಪ ಗಿಣಿಗೇರಿ ಮತ್ತು ಇತರರು ನಾಟಕಕ್ಕೆ ಜೀವಂತಿಕೆ
ತಂದುಕೊಡುತ್ತಾರೆ.
ಶ್ರೀರಾಮಚಂದ್ರನ ಪಾತ್ರ ನಿರ್ವಹಿಸುವ ಶಿವಪುತ್ರಪ್ಪ ಹಿರೇಮನಿ,
ಸೀತಾದೇವಿ ಪಾತ್ರ ನಿರ್ವಹಿಸುತ್ತಿರುವ ರಾಜಶೇಖರ ದೊಡ್ಡಮನಿ,
ಮಾಯಾಸ್ತ್ರೀ ಪಾತ್ರ ನಿರ್ವಹಿಸುವ ದೇವಪ್ಪ ಗಿಣಿಗೇರಿ ಅವರು ತಮ್ಮ
ಪಾತ್ರಗಳ ಆಚೆಗೂ ಇಡೀ ಬಯಲಾಟದ ಹೊಣೆಗಾರಿಕೆಯನ್ನು
ಹೊತ್ತಿದ್ದಾರೆ. ಇವರೆಲ್ಲರಿಗೆ ಮಾರ್ಗದರ್ಶಕರಾಗಿ ಹಿರಿಯ ಕಲಾವಿದರಾಗಿರುವ
ಚಿರಂಜೀವಿ ದೊಡ್ಡಮನಿಯವರು ಇದ್ದಾರೆ.
ಇಡೀ ದೇಶ ಈಗ ಪ್ರಭು ಶ್ರೀರಾಮಚಂದ್ರನ ಮರುಸ್ಥಾಪನೆಯ
ಕ್ಷಣವನ್ನು ಎದುರು ನೋಡುತ್ತಿದೆ. ನಮ್ಮ ಉತ್ತರ ಕರ್ನಾಟಕದ
ಬಹುತೇಕ ಜಿಲ್ಲೆಗಳು ಶ್ರೀ ಗವಿಸಿದ್ಧೇಶ್ವರನ ರಥೋತ್ಸವಕ್ಕಾಗಿ
ಕಾಯುತ್ತಿವೆ. ಈ ಎರಡೂ ಮಹತ್ವದ ಸಂದರ್ಭಗಳಿಗೆ ತನ್ನದೇ ಆದ
ರೀತಿಯ ನಂಟು ಹೊಂದಿರುವ ಹಾಗೂ ಕೊಡುಗೆಯನ್ನು ಕಳೆದ
ಐವತ್ತು ವರ್ಷಗಳಿಂದ ನೀಡುತ್ತ ಬಂದಿರುವ ಕೊಪ್ಪಳದ ಸಂಪೂರ್ಣ
ರಾಮಾಯಣ ಬಯಲಾಟ ತಂಡ, ಅರ್ಧ ಶತಕದ ಸಂಭ್ರಮದಲ್ಲಿದೆ.
ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಬೇಕೆಂದರೆ, ಇದೇ ಜನವರಿ
೨೮ರಂದು ರಾತ್ರಿ ೮ ಗಂಟೆಗೆ, ಕೊಪ್ಪಳ ನಗರದ ಜೆ.ಪಿ. ಮಾರ್ಕೆಟ್
ಪ್ರದೇಶದಲ್ಲಿ ಪ್ರದರ್ಶನಗೊಳ್ಳಲಿರುವ ಬಯಲಾಟಕ್ಕೆ ನೀವು
ಹೋಗಲೇಬೇಕು. ವೃತ್ತಿಪರರಲ್ಲದಿದ್ದರೂ ಭಾವತೀವ್ರತೆಯಿಂದ
ಬಯಲಾಟದ ಪಾತ್ರಗಳಿಗೆ ಜೀವ ತುಂಬುವ ಹಿಂದುಳಿದ, ಬಡ ಹಾಗೂ
ಸ್ವಾವಲಂಬಿ ಕಲಾವಿದರಿಗೆ ನಿಮ್ಮ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.
ಕಳೆದ ಐವತ್ತು ವರ್ಷಗಳಿಂದ ಪ್ರತಿ ವರ್ಷ, ಕೊಪ್ಪಳದ ಗವಿಮಠದ
ಮಹಾರಥೋತ್ಸವದ ಮರುದಿನ ಪ್ರದರ್ಶನಗೊಳ್ಳುತ್ತಾ ಬಂದಿರುವ ಈ
ಬಯಲಾಟ ಇಂತಹ ಹಲವಾರು ಕಾರಣಗಳಿಗಾಗಿ ಮಹತ್ವ ಪಡೆದುಕೊಂಡಿದೆ
ಎಂಬುದನ್ನು ನೀವು ಕಣ್ಣಾರೆ ಕಾಣಬೇಕು.
ಅಂತಹ ಎಲ್ಲ ಸಹೃದಯಿಗಳಿಗಾಗಿ ಸಂಪೂರ್ಣ ರಾಮಾಯಣ ಬಯಲಾಟ ತಂಡ
ಅಂದು ಕಾಯುತ್ತಿರುತ್ತದೆ.
Comments are closed.