೧೯ನೇ ಶತಮಾನದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಟ ಮಾಡಿದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾ ಪುಲೆ
ಹುಲುಗಪ್ಪ ಮಾಗಿ
ಗಂಗಾವತಿ: ನಗರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸರ್ಕಲ್‌ನಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ದಲಿತ ಸಂಘಟನೆ ಒಕ್ಕೂಟದ ವತಿಯಿಂದ ಆಚರಣೆ ಮಾಡಲಾಯಿತು,
ಈ ಸಂದರ್ಭದಲ್ಲಿ ಅಂಬೇಡ್ಕರ್ ದಲಿತ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಹುಲುಗಪ್ಪ ಮಾಗಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರು ೧೯ನೇ ಶತಮಾನದಲ್ಲಿ ಭಾರತದ ಸಮಾಜ ಸುಧಾರಣಾ ಚಳವಳಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಮಹಿಳೆ ಸಾವಿತ್ರಿಬಾಯಿ ಪುಲೆ. ಇವರು ಜನವರಿ-೩, ೧೮೩೧ ರಂದು ಮಹಾರಾಷ್ಟ್ರದ ನೈಗಾಂವ್ ಎಂಬ ಗ್ರಾಮದಲ್ಲಿ ಜನಿಸಿದರು. ಸಾವಿತ್ರಿಬಾಯಿ ಫುಲೆ ಭಾರತದಲ್ಲಿ ಮಹಿಳಾ ಶಿಕ್ಷಣದ ಜ್ಯೋತಿಯನ್ನು ಹೊತ್ತ ದಾರ್ಶನಿಕರಾಗಿದ್ದರು ಮತ್ತು ಅಂದಿನ ಕಾಲಘಟ್ಟದಲ್ಲಿ ಮಹಿಳೆಯರು ತಮ್ಮ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಅವರು ಕನಸು ಕಾಣುವ ಧೈರ್ಯ ಮತ್ತು ಬದಲಾವಣೆಗೆ ಶ್ರಮಿಸಿದರು. ೧೮೪೮ ರಲ್ಲಿ ಸಾವಿತ್ರಿಬಾಯಿ ಮತ್ತು ಜ್ಯೋತಿರಾವ್ ಅವರು ಪುಣೆಯಲ್ಲಿ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರು ಮತ್ತು ಸಾವಿತ್ರಿಬಾಯಿ ಭಾರತದ ಮೊದಲ ಮಹಿಳಾ ಶಿಕ್ಷಕರಾದರು. ಅದು ಅವರ ದಿಟ್ಟ ಹೆಜ್ಜೆಯಾಗಿತ್ತು, ಆ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಪಾಪವೆಂದು ಪರಿಗಣಿಸಲಾಗಿತ್ತು. ಅಂತಹ ಮನಸ್ಮೃತಿ ಪದ್ಧತಿಯನ್ನು ವಿರೋಧಿಸಿ, ಇಬ್ಬರು ದಂಪತಿಗಳು ಸೇರಿಕೊಂಡು ಇಡೀ ಸಮಾಜದ ವಿರೋಧವನ್ನು ಎದುರಿಸಿ, ಧೈರ್ಯ ಕಳೆದುಕೊಳ್ಳದೆ ಯಾರಿಗೂ ಮತ್ತು ಯಾವುದಕ್ಕೂ ಎದೆಗುಂದದೆ ಅವರು ಶಿಕ್ಷಣವೇ ನಮ್ಮ ಶಕ್ತಿ ಎನ್ನುವ ಸ್ಲೋಗನ್‌ನನ್ನು ಇಟ್ಟುಕೊಂಡು ಧೈರ್ಯದಿಂದ ಮುನ್ನುಗ್ಗಿ ಮಹಿಳೆಯರಿಗೆ ಶಿಕ್ಷಣಕೊಟ್ಟಂತಹ ಮಹಾತಾಯಿ ಸಾವಿತ್ರಿಬಾಯಿ ಫುಲೆ ಅವರು ಎಂದು ಹುಲುಗಪ್ಪ ಮಾಗಿ ಹೇಳಿದರು.
ಅದೇ ರೀತಿಯಾಗಿ ಸಮಾಜ ಸೇವಕ ಹಿರಿಯ ಮುಖಂಡ ಪಾಮಪ್ಪ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರು ಸಾಮಾಜಿಕ ಸಮಾನತೆ ಮತ್ತು ನ್ಯಾಯದ ಸಂದೇಶವನ್ನು ಸಾರಲು ಕಾವ್ಯವನ್ನು ಸಾಧನವಾಗಿ ಬಳಸಿಕೊಂಡರು. ಅವರ ಕವನಗಳು ಸರಳವಾದರೂ ಶಕ್ತಿಯುತವಾಗಿದ್ದವು, ಓದುಗರ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತವೆ. ಅವರು ಮಹಿಳೆಯರ ಹಕ್ಕುಗಳ ಬಗ್ಗೆ, ಜಾತಿ ತಾರತಮ್ಯದ ವಿರುದ್ಧ ಬರೆದರು ಮತ್ತು ಸಾಮಾಜಿಕ ಸಮಾನತೆಯ ಕಾರಣವನ್ನು ಪ್ರತಿಪಾದಿಸಿದರು. ಸಾವಿತ್ರಿಬಾಯಿ ಅವರ ಮಾತುಗಳು ತುಳಿತಕ್ಕೊಳಗಾದವರ, ಅಂಚಿನಲ್ಲಿರುವವರ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ಹಿಂದುಳಿದವರ ಧ್ವನಿಯಾಗಿದ್ದಾರೆ. ಅವರು ಅಂದಿನ ದಿನದಲ್ಲಿ ನೋವು ನಲಿವುಗಳ ಮಧ್ಯ ಶಿಕ್ಷಣಕ್ಕಾಗಿ ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡಿದಂತಹ ನಾಯಕಿ ಸಾವಿತ್ರಿಬಾಯಿ ಫುಲೆ ಅವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಹುಲುಗಪ್ಪ ಮಾಸ್ತರ್ ಮತ್ತು ಮಹಿಳಾ ಘಟಕ ಅಧ್ಯಕ್ಷ ಸರಸ್ವತಿ, ವೀರೇಶ ಆರತಿ ಮತ್ತು ಕರವೇ ತಾಲೂಕಾ ಅಧ್ಯಕ್ಷ ಯಮನೂರ್ ಭಟ್, ದೇವಣ್ಣ ಐಹೊಳೆ, ರಾಮಣ್ಣ ಚಲವಾದಿ, ದುರ್ಗಪ್ಪ, ಹೆಚ್.ಸಿ. ಹಂಚಿನಾಳ, ಚನ್ನಬಸವ, ಯಂಕಪ್ಪ ಸೇರಿದಂತೆ ಮಹಿಳೆಯರು ಉಪಸ್ಥಿತರಿದ್ದರು.
Comments are closed.