ಬೇಟೆಗಾರನಿಗೂ ಒಂದು ಕಥೆ ಇರುವಂತೆ ಬೇಟೆಗೂ ಒಂದು ಕಥೆ ಇದೆ : ಕೋರೆಗಾಂವ್ ವಿಜಯೋತ್ಸವದ ದಿನ ನಿಮಿತ್ಯ ಈ ಲೇಖನ

Get real time updates directly on you device, subscribe now.

ಜನವರಿ ಒಂದು ಕೋರೆಗಾಂವ್ ವಿಜಯೋತ್ಸವದ ದಿನ.
ಆ ನಿಮಿತ್ಯ ಈ ಲೇಖನ
ಲೇಖನ:

 

ಚರಿತ್ರೆಯಲ್ಲಿ ನಡೆದ ಒಂದು ಯುದ್ಧ ಎಷ್ಟು ಮಹತ್ವದ್ದು ಎಂದರೆ ಆ ಯುದ್ಧ ಸಾವಿರಾರು ವರ್ಷಗಳ ಹಿಂದಿನ ದಾಖಲೆಗಳನ್ನು ಮುರಿಯುತ್ತದೆ. ಮತ್ತು ಅಷ್ಟೇ ಪ್ರಮುಖವಾಗಿ ಕಾಲಕಾಲದಿಂದಲೂ ನಿರಂತರವಾಗಿ ಜಾತಿಯಿಂದ, ಧರ್ಮದಿಂದ, ಸಂಸ್ಕೃತಿಯಿಂದ, ಶಾಸನಗಳಿಂದ, ಧರ್ಮಶಾಸ್ತ್ರಗಳಿಂದ ಎಂದು, ದೇವರ ವಾಕ್ಯಗಳೆಂದು ಹೇಳುತ್ತಾ ತಮ್ಮ ಜೊತೆಗೆ ಹುಟ್ಟಿದ ಸಹಮಾನವರನ್ನು ಮನುಷ್ಯರಂತೆ ನೋಡದೆ ಪ್ರಾಣಿಗಳಿಗಿಂತಲೂ ಕೀಳಾಗಿ ನಡೆಸಿಕೊಂಡು ಶೋಷಣೆ ಮಾಡಿಕೊಂಡು ಬಂದ ವ್ಯವಸ್ಥೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಅದು ತುಂಬಾ ಮಹತ್ವಪೂರ್ಣವಾಗಿರುವಂತಹದ್ದು. ಅದೇಗೆ ಈ ಯುದ್ಧದ ಚರಿತ್ರೆಯನ್ನು ಯಾಕೆ ಬರೆಯಲಾಗಿಲ್ಲ ಎಂಬುದಕ್ಕೆ ಕಾರಣಗಳು ಇಲ್ಲವೆಂದಲ್ಲ. ಕಾರಣಗಳನ್ನ ಹುಡುಕಿಕೊಳ್ಳಬೇಕಾದವರು ಈ ಚರಿತ್ರೆಯನ್ನು ಓದಲೇಬೇಕು. ಕಾರಣಗಳನ್ನು ಕೊಡಬೇಕಾದವರು ಈ ಕಥೆಯನ್ನ ಮುಚ್ಚಿಟ್ಟಿರಬಹುದಾದ ಸಾಧ್ಯತೆ ಇದೆ. ತಮ್ಮ ಸೋಲಿನ ಕಥೆಯನ್ನು ತಾವೇಕೆ ಬರೆದುಕೊಳ್ಳುತ್ತಾರೆ ಎಂಬುದು ನಮಗೆ ಈಗ ಅರಿಯದ ಸಂಗತಿಯಲ್ಲ. ನಾವೀಗ ಅರಿಯಬೇಕಾದದ್ದು ಈ ಯುದ್ಧದ ಕಾರಣದಿಂದಾಗಿಯೇ ನಾವು ಈಗ ಬದುಕಿನ ಎಲ್ಲ ಸ್ಥಿತಿಗಳನ್ನು ಅನುಭವಿಸುತ್ತಿದ್ದೇವೆ.
ಭೀಮಾ ನದಿ ತಟದಲ್ಲಿ ಆ ಕೋರೆಗಾಂವ್ ಯುದ್ಧವೇ ನಡೆಯದಿದ್ದರೆ, ಯುದ್ಧ ಗೆದ್ದ ಮಹರ್ ವೀರರಿಗೆ ಬ್ರಿಟೀಷರು ಶಿಕ್ಷಣ ನೀಡದಿದ್ದರೆ, ಶಿಕ್ಷಣ ಪಡೆದ ಆ ಮಹಾ ವೀರನ ಮಗ ಮತ್ತೆ ಸೈನ್ಯದಲ್ಲಿ ಸೇರದಿದ್ದರೆ, ಆ ಸೈನ್ಯದಲ್ಲಿ ಸೇರಿದ ಮಹಾವೀರನ ಮಗನೊಬ್ಬ ರಾಮಜಿ ಸಕ್ಪಾಲ್ ಶಿಕ್ಷಣ ಪಡೆಯದಿದ್ದರೆ, ಆ ಶಿಕ್ಷಣ ಪಡೆದ ಮಹಾವೀರನ ಮಗ ರಾಮಜೀ ಸಕ್ಪಾಲ್ ಹೊಟ್ಟೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹುಟ್ಟದಿದ್ದರೆ, ಆ ಮಹಾನಾಯಕ ಮಿಲಿಟರಿ ಶಾಲೆಯಲ್ಲಿ ಓದಿ ಉನ್ನತ ಶಿಕ್ಷಣ ಪಡೆದು ಲಂಡನ್ ನಲ್ಲಿ ಬ್ಯಾರಿಸ್ಟರ್ ಪದವಿ ಪಡೆಯದಿದ್ದರೆ ಸಂವಿಧಾನ ಬರೆಯಲಾಗುತ್ತಿತ್ತೇ?.. ಯೋಚಿಸಬೇಕಾದದ್ದು ಬಹಳ ಮುಖ್ಯ.
ಇದು ರಾಜ್ಯಕ್ಕಾಗಿ ನಡೆದ ಯುದ್ಧವಲ್ಲ. ಸಂಪತ್ತಿಗಾಗಿ ನಡೆದ ಯುದ್ಧವು ಅಲ್ಲ. ಚಕ್ರವರ್ತಿಯನ್ನು ಇಳಿಸಲು ನಡೆದ ಯುದ್ಧವಂತು ಅಲ್ಲವೇ ಅಲ್ಲ. ಅಥವಾ ಸಾವಿರಾರು ನೂರಾರು ಸೈನಿಕರನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ನಡೆದ ಯುದ್ಧವಂತು ಮೊದಲೇ ಅಲ್ಲ. ಇಷ್ಟೇ ಕಾಲ ಕಾಲದಿಂದ ನಡೆದು ಬಂದ ಈ ನೆಲದ ಅಸ್ಪೃಶ್ಯತೆಯನ್ನು ಹೋಗಲಾಡಿಸಬೇಕು ಎಂಬ ಕಾರಣಕ್ಕಾಗಿ ನಡೆದ ಸ್ವಾಭಿಮಾನ ಯುದ್ಧ ಎಂಬುದು ಸ್ಪಷ್ಟ. ಈ ಯುದ್ಧದ ಕರಾಳತೆ ದೇಶ ಆಳಿದ ಮಹನೀಯರ ನೀಚತನದ ಮುಖವಾಡಗಳನ್ನು ಬಿಚ್ಚಿಡುತ್ತದೆ. ದುರಂತವೆಂದರೆ, ಈ ಯುದ್ಧ ಮತ್ತು ಅದರ ಆಶಯವನ್ನು ಬಚ್ಚಿಟ್ಟು ಚರಿತ್ರೆಯಲ್ಲಿ ಇದನ್ನು ಆಂಗ್ಲೋ-ಮರಾಠ ಯುದ್ಧವೆಂದು ಮಾತ್ರ ಬರೆಯಲಾಗಿದೆ. ಹಾಗೆ ಬರೆದಾಗಲೇ ಅವರು ಸೋತದ್ದು ಬ್ರಿಟಿಷರಿಂದ ಹೊರತು ಮಹರರಿಂದ ಅಲ್ಲ ಎಂದು ಸಾರುತ್ತಾ ಸೋಲನ್ನು ಬಚ್ಚಿಟ್ಟವರು ಸೋತಿದ್ದಾರೆ. ಯಾಕೆಂದರೆ ಅವರು ಮೇಲಿನವರ ಜೊತೆ ಸೋತಿದ್ದರೆ ಮಾನ ಹೋಗುತ್ತಿರಲಿಲ್ಲ, ಅಸ್ಪೃಶ್ಯರ ಜೊತೆ ಸೋತ ಕಾರಣ ಮಾನ ಹೋಗಬಾರದೆಂದು ಮುಚ್ಚಿಟ್ಟಿರುವ ಹುನ್ನಾರ ಇದರ ಹಿಂದಿದೆ. ಒಂದು ಮಾತನ್ನು ಈ ಸಂದರ್ಭದಲ್ಲಿ ನೆನಪಿಸಲೇಬೇಕಾಗುತ್ತದೆ. ಅದೇನೆಂದರೆ ಸೋತವರು ತಮ್ಮ ಸೋತ ಚರಿತ್ರೆಯನ್ನು ಬರೆದುಕೊಳ್ಳಲಿಲ್ಲ, ಗೆದ್ದವರು ಬರೆಯುವವರಾಗಿರಲಿಲ್ಲ. ಬೇಟೆಗಾರನಿಗೂ ಒಂದು ಕಥೆ ಇರುವಂತೆ ಬೇಟೆಗೂ ಕೂಡ ಒಂದು ಚರಿತ್ರೆ ಇರುತ್ತದೆ ಎಂಬುದನ್ನು ಬೇಟೆಯ ಸಂತತಿಯಾದ ನಾವುಗಳು ಯೋಚಿಸದಿದ್ದರೆ ಮತ್ತೆ ಮನುವಾದ ನಮ್ಮ ಬಾಗಿಲಲ್ಲಿ ರಾರಾಜಿಸುತ್ತದೆ ಎಂಬುದನ್ನು ಮರೆಯಬಾರದು.
ಅಂದು ಬರೆಯುವವನ ಪೆನ್ನು ಪೂರ್ವಗ್ರಹ ಪೀಡಿತವಾಗಿತ್ತು. ಆದರೆ ಇಂದು, ಬರೆಯುವವನ ಪೆನ್ನು ಆ ಅಡೆತಡೆಯನ್ನು ಕಿತ್ತಿ ಮುಂದಕ್ಕೆ ಸಾಗಬೇಕಾಗಿದೆ. ಇತಿಹಾಸ ನೋಡುವ ದೃಷ್ಟಿಕೋನ ಬದಲಾಯಿಸಿಕೊಂಡು ಭಾರತದ ಚರಿತ್ರೆಗೆ ಕಟ್ಟಿದ ಸಾಂಪ್ರದಾಯಿಕ ಪಟ್ಟಿಯನ್ನು ಬಿಚ್ಚಿಟ್ಟು ನೋಡಬೇಕಾಗಿದೆ. ಇಂತಹ ಎಷ್ಟೋ ಯುದ್ಧಗಳು, ರಕ್ತದಲ್ಲದ್ದಿದ ನೆಲದ ಪುಟಗಳ ಚರಿತ್ರೆಗಳು, ಶೂದ್ರ ಕುಲದ ಬೆಳಕಿನ ಕಥೆಗಳು, ಆಜಾದಿಗಾಗಿ ನಡೆದ ಬಂಡಾಯಗಳು ಹೊರಗೆ ಬರಲು ಸಾಧ್ಯ. ಕಣ್ಣಿಗೆ ಕಟ್ಟಿದ ಓದಿನ ಬಗೆಗಿನ ಸಾಂಪ್ರದಾಯದ ಕಟ್ಟುಗಳನ್ನು ಬಿಚ್ಚಿ ಹೊಸ ಓದಿಗೆ ತೊಡಗಿಕೊಳ್ಳುವಂತೆ ಮಾಡುತ್ತದೆ. ಈ ಭೀಮ ಕೋರೆಗಾವ್ ವಿಜಯೋತ್ಸವದ ಚರಿತ್ರೆಗೆ ಬಹಳಷ್ಟು ದಾಖಲೆಗಳು ಇರಲಿಲ್ಲ. ಭಾರತದ ಮೊದಲ ಸ್ವಾತಂತ್ರ‍್ಯ ಸಂಗ್ರಾಮವೆAದು ಕರೆದುಕೊಳ್ಳುವ ೧೮೫೭ ರ ದಂಗೆಗಿಂತಲೂ ೪೦ ವರ್ಷಗಳ ಮುಂಚೆ ಇಂತಹ ಒಂದು ಯುದ್ಧವನ್ನು ಕುತಂತ್ರದಿಂದ ದಾಖಲಿಸಲಾಗಿಲ್ಲದ ಕಾರಣವಾಗಿ ಅಷ್ಟೊಂದು ವ್ಯಾಪಕವಾಗಿರತಕ್ಕಂತಹ ಸಂಶೋಧನೆಗಳು ಆ ನಿಟ್ಟಿನಲ್ಲಿ ನಡೆಯದ ಕಾರಣವಾಗಿ ನಮಗೆ ಓದಲು ದಕ್ಕಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಯತ್ನ ಆ ಚರಿತ್ರೆಯನ್ನು ಮತ್ತೆ ಹೊಸದಾಗಿ ನೋಡುವಂತೆ ಮಾಡಿತು. ಬಾಬಾ ಸಾಹೇಬ್ ಅವರ ಬರಹಗಳು ಭಾಷಣಗಳನ್ನು ಅನುವಾದ ಮಾಡಿ ಕನ್ನಡಕ್ಕೆ ತಂದ ನಂತರ ಹಲವಾರು ಮರಾಠಿ ಲೇಖಕರ ಅನುವಾದಗಳನ್ನು ಕನ್ನಡೀಕರಣಗೊಳಿಸಿದ ನಂತರ ಯುದ್ಧದ ಮೇಲೆ ಬೆಳಕು ಚೆಲ್ಲುವ ಕಥನಗಳು, ಚಿತ್ರಗಳು, ಕಥೆಗಳು, ಘಟನೆಗಳು ಮತ್ತು ಸಂಗತಿಗಳು ನಮಗೆ ತಿಳಿಯುತ್ತಾ ಹೋದವು.
ಅಪರಾಧಗಳೇ ಅಧಿಕಾರವಾಗಿ ರಾಜ್ಯ ಆಳುತ್ತಿದ್ದರೆ ಏನಾಗಬಹುದೆಂದು ಊಹಿಸಿಕೊಂಡರೆ ಮುಂದೊಂದು ದಿನ ಬರುವ ಅಪಾಯದ ಮುನ್ಸೂಚನೆ ಭೀಕರವಾಗಿರುತ್ತದೆ. ಭೂಮಿಗಾಗಿ, ಜನರ ಹಕ್ಕುಗಳಿಗಾಗಿ, ಸಮಾನತೆಗಾಗಿ, ಹೋರಾಟ ಮಾಡಿದವರನ್ನು, ಸಮಾನತೆಯ ಮಾತನಾಡುವವರನ್ನು, ಸಮಾನ ಶಿಕ್ಷಣಕ್ಕಾಗಿ ಒತ್ತಾಯಿಸುವವರನ್ನು, ಸಮಸಮಾಜದ ಆಶಯಕ್ಕಾಗಿ ಹಾಡುವವರನ್ನು, ಬರೆಯುವವರನ್ನು, ಬಾಯಿಮುಚ್ಚಿಸಿ ಜೈಲಿಗೆ ಹಾಕುವ, ಅವರ ಧ್ವನಿಗಳನ್ನು ಅಡಗಿಸುವ ಈ ಸಂದರ್ಭದಲ್ಲಿ ನಿಂತು ನೋಡುವುದಾದರೆ ಆ ಕಾಲವು ಎಷ್ಟೊಂದು ಕ್ರೂರವಾಗಿರಬಹುದು. ಎರಡು ನೂರು ವರ್ಷಗಳ ಹಿಂದೆ ನಡೆದ ಯುದ್ಧವೊಂದು ಆ ಕಾಲದ ಸಮಾಜದ ಮತ್ತು ಆಳುವ ವರ್ಗದ ಧೋರಣೆಯನ್ನು ಅವರ ಕ್ರೂರತನವನ್ನು ಬಿಚ್ಚಿಡುತ್ತದೆ ಮತ್ತು ಮುಖವಾಡಗಳನ್ನು ಬಯಲಿಗೆಳೆಯುತ್ತದೆ.
ಮಹರ್ ದಂಡ ನಾಯಕ ಸಿದ್ಧನಾಕ ಪೇಶ್ವೆಯ ಮುಂದೆ ನಿಂತು “ನಮ್ಮನ್ನು ಮನುಷ್ಯರನ್ನಾಗಿ ನೋಡಿ ಅಷ್ಟೇ, ಈ ನೆಲದಿಂದ ಬ್ರಿಟಿಷರನ್ನು ಓಡಿಸುತ್ತೇವೆ” ಎಂದ. ಇದು ಆ ಕಾಲದೊಳಗೆ ನಿಂತು ಮಾತಾಡಿದ ದೇಶಭಕ್ತಿಯ ಗಟ್ಟಿ ಮಾತು. ಬಡವರಿಗೆ, ಅಸ್ಪೃಶ್ಯರಿಗೆ, ಬೀದಿಯಲ್ಲಿ ಇರುವವರಿಗೆ, ಹೊಟ್ಟೆಗೆ ಇಲ್ಲದವರಿಗೆ ದೇಶ ಇರುವುದಿಲ್ಲ ಎಂಬ ಪೇಶ್ವೆಯ ಮಾತು ಮನುಕುಲದ ದೊಡ್ಡಪಹಾಸ್ಯವೇ ಸರಿ. ಅವರಿಗೆ ದಿನದ ಬದುಕೇ ಕಷ್ಟವಾಗಿರುವಾಗ ಇಂಥ ದೇಶಭಕ್ತಿಯ ಬಹಳ ದೊಡ್ಡ ಮಾತುಗಳನ್ನಾಡುವದು ಸಮಂಜಸವಲ್ಲ ಅಷ್ಟಕ್ಕೂ ಅವರಿಗೆ ದೇಶವೇ ಇಲ್ಲ, ದೇಶಭಕ್ತಿ ಯಾಕೆ ಎಂಬ ಪ್ರಶ್ನೆ ಆ ಕಾಲದಿಂದ ಈ ಕಾಲದವರೆಗೂ ಅನುರಣಿಸುತ್ತಿರುವಾಗ ನೀಚ ಪ್ರವೃತ್ತಿಯ ಜನಗಳು ತಾವು ಹಿಡಿದ ಪಕ್ಷದ ಬಾವುಟವೇ ಶ್ರೇಷ್ಟ ತಾನೇ ಬಹುದೊಡ್ಡ ದೇಶಭಕ್ತನೆಂದು ಬಿಂಬಿಸಿಕೊಳ್ಳುವದನ್ನು ನೋಡುತ್ತಿದ್ದರೆ, ಅನುಕರಣೀಯ ಪ್ರಜಾಪ್ರಭುತ್ವದಿಂದ ನಾವಿನ್ನೂ ಮುಂದಕ್ಕೆ ಸಾಗುತ್ತಿರುವ ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಕೆಡಿಸುವ ಆಟ ಆರಂಭವಾಗಿದೆ ಮತ್ತು ಅದಕ್ಕೆ ಸಂಕಟದ ಕಾಲಬಂದಿದೆ ಎಂದು ಅರ್ಥ.
ಇತಿಹಾಸದಲ್ಲಿ ಅಧಿಕಾರಕ್ಕಾಗಿ, ಭೂಮಿಗಾಗಿ, ಸಂಪತ್ತಿಗಾಗಿ ಮತ್ತು ಹೆಣ್ಣಿಗಾಗಿ ನಡೆದ ಯುದ್ಧಗಳೇ ಆಗಿದ್ದವು. ಆದರೆ ಈ ಭೀಮಾಕೋರೆಗಾಂವ ಯುದ್ಧ ಚರಿತ್ರೆಯಲ್ಲಿ ಮೊದಲ ಬಾರಿಗೆ ಮನುಷ್ಯರನ್ನು ಮನುಷ್ಯರಂತೆ ಕಾಣಲು, ಅಸ್ಪಶತೆಯನ್ನು ಅಳಿಸಲು, ಅಸಮಾನತೆಯನ್ನು ಹೋಗಲಾಡಿಸಲು ಮಾಡಿದ ಯುದ್ಧವಾಗಿತ್ತು. ಅಪ್ಘನ್ನರ ಕಾಲದಿಂದ ಶಿವಾಜಿ ಮಹಾರಾಜರವರೆಗೂ ಸೈನ್ಯದಲ್ಲಿ ಸೇವೆ ಸಲ್ಲಿಸಿ ಪೇಶ್ವೆ ೨ ನೇ ಬಾಜಿರಾಯನ ಕಾಲದಲ್ಲಿಯು ಅವರ ಜೊತೆಗಿದ್ದು ಅನೇಕ ಯುದ್ಧಗಳನ್ನು ಗೆದ್ದು ಪ್ರಶಸ್ತಿ, ಬಹುಮಾನ, ರುಮಾಲು ಮತ್ತು ಜಾಗೀರು ಪಡೆದಿದ್ದರು. ಕ್ರಿ.ಶ. ೧೭೯೫ರ ಖರ್ಡೆ ಯುದ್ಧದ ಸಂದರ್ಭದಲ್ಲಿ ರಣರಂಗದ ಆಚೆಗಿನ ವಸತಿ ಪ್ರದೇಶದಲ್ಲಿ ಅಸ್ಪೃಶ್ಯರ ಟೆಂಟು ಮೇಲ್ವರ್ಗದ ಸೈನಿಕರ ಟೆಂಟಿನ ಪಕ್ಕದಲ್ಲಿ ಹಾಕಿದ್ದನ್ನು ಕಂಡ ಮೇಲುವರ್ಣದ ಸೈನಿಕರಿಗೆ ಅವಮಾನವಾಗಿ ಮೇಲ್ವರ್ಗದವರು ಯುದ್ಧರಂಗದಲ್ಲಿಯೇ ಅವರನ್ನು ಅವಮಾನಿಸಿದರು. ಆ ಸಮಯದಲ್ಲಿ ನೊಂದುಕೊಂಡ ಮಹರರು ಯುದ್ಧದ ಸಮಯವೆಂದು ಸುಮ್ಮನಾದರು. ಅಂದಿನ ಮಹಾಯುದ್ಧದಲ್ಲಿ ನಿಜಾಮನನ್ನು ಸೋಲಿಸಿ ಯುದ್ಧ ಗೆದ್ದು ಕೊಟ್ಟರು. ಅಸ್ಪೃಶ್ಯರ ಪರಾಕ್ರಮದ ಕಾರಣದಿಂದಾಗಿ ಯುದ್ಧ ಗೆದ್ದದ್ದು, ಅವರನ್ನು ಸಭೆಯಲ್ಲಿ ಹೊಗಳಿದ್ದು, ಮೇಲುವರ್ಗದವರಿಗೆ ಅವಮಾನವಾಯಿತೆಂದು ಅವರನ್ನು ಬಹಿಷ್ಕರಿಸ್ಕರಿಸುವ ತೀರ್ಮಾನ ಮಾಡಿದರು. ಅಷ್ಪೃಷ್ಯರ ಗೆಲುವು ಅವರಿಗೆ ಅವಮಾನವಾಗಿ ಕಾಡಿತು. ಜಾತಿಯ ಕಾರಣದ ನೆಪವೊಡ್ಡಿ ಮಹರರನ್ನು ಸೈನ್ಯದಿಂದ ತೆಗೆದುಹಾಕಿ ನಿರುದ್ಯೋಗಿಗಳನ್ನಾಗಿಸಿದರು. ಅಂದಿನ ಆ ಅಪಮಾನ ಮತ್ತು ಬಹಿಷ್ಕಾರ ಮಹರರಿಗೆ ದಿಕ್ಕುತೋಚದಂತಾಗಿತ್ತು. ಅಲ್ಲಿಂದ ಹೊರಬಿದ್ದ ಇವರ ಸಾಮರ್ಥ್ಯವನ್ನು ಗುರುತಿಸಿದ ಬ್ರಿಟೀಷರು ಇವರನ್ನು ಸೈನ್ಯದೊಳಕ್ಕೆ ಸೇರಿಸಿಕೊಂಡರು. ಮುಟ್ಟಿಸಿಕೊಂಡರು ತಿನ್ನಲು ಅನ್ನ ನೀಡಿದರು. ನಂತರದಲ್ಲಿ ಆದದ್ದು ಮುಚ್ಚಿಟ್ಟ ಇತಿಹಾಸ. ಮೂರನೇ ಆಂಗ್ಲೋ ಮರಾಠ ಯುದ್ಧದೊಳಗಿನ ಕೋರೆಗಾಂವ್ ಯುದ್ಧ ಬರುವವರೆಗೂ ಮಹರರು ಬ್ರಿಟೀಷರ ಜೊತೆಗಿದ್ದು ಹಲವಾರು ಯುದ್ಧಗಳನ್ನು ಗೆದ್ದು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದರು.
ಕ್ರಿ.ಶ ೧೮೧೮ ಡಿಸೆಂಬರ್ ತಿಂಗಳಲ್ಲಿ ಕೋರೆಗಾಂವ್ ಯುದ್ಧಕ್ಕೆ ಮೊದಲು ಪೇಶ್ವೆಗಳು ಬ್ರಿಟೀಷರ ವಿರುದ್ಧ ರಣರಂಗದಲ್ಲಿ ಮುಖಾಮುಖಿಯಾಗುವರು ಮತ್ತು ಯುದ್ಧ ಮಾಡುವರೆಂದು ಮಹರ್ ಸೈನಿಕರು ತಿಳಿದದರು. ನಾವೂ ಈ ಸಮಯದಲ್ಲಿ ಅನ್ನ ನೀಡಿದ ಪೇಶ್ವೆಗಳ ಪರವಾಗಿ ಇರುವುದು ಸೂಕ್ತ ಎಂದು ಸಮಾಲೋಚಿಸಿ ಅವರ ಅನುಮತಿ ಪಡೆಯೋಣವೆಂದು ಅವರಿದ್ದಲ್ಲಿಗೆ ಹೋಗಿ ಭೇಟಿಯಾಗಿ ಮಾತಾಡಿದಾಗ ಪೇಶ್ವೆಯ ಎರಡನೇ ಬಾಲಾಜಿ ಬಾಜಿರಾಯ ಅವರನ್ನು ಅವಮಾನ ಮಾಡಿ ಕಳಿಸಿದ್ದಲ್ಲದೆ ಅವರು ನಿಂತ ನೆಲವನ್ನು ಗೋಮೂತ್ರ ಹಾಕಿ ತೊಳಿಸಿದರು. ಈ ಚರಿತ್ರೆಯನ್ನು ಯಾರೂ ಬರೆಯಲಿಲ್ಲ.
ವರ್ಣವ್ಯವಸ್ಥೆಯಲ್ಲಿ ಬರೆಯುವವನ ಪೆನ್ನು ಅವನ ವಿಚಾರ ಪೂರ್ವಾಗ್ರಹ ಪೀಡಿತವಾಗಿತ್ತು ಮತ್ತು ತಲೆಯ ತುಂಬಾ ಜಾತಿ ತುಂಬಿಕೊಂಡಿತ್ತು ಎಂದು ಅರ್ಥವಾಗುತ್ತದೆ. ಮಹಾರರು ಪೇಶ್ವೆ ಎರಡನೇ ಬಾಜಿರಾವ್‌ನನ್ನು ಕಂಡು ಮಾತಾಡಿ ಬ್ರಿಟಿಷರನ್ನು ಈ ನೆಲದಿಂದ ಓಡಿಸೋಣ ದೇಶರಕ್ಷಣೆಗೆ ನಾವು ಬದ್ಧ ನಮ್ಮನ್ನು ಮನುಷ್ಯರನ್ನಾಗಿ ನೋಡಿರಿ ಎಂದಾಗ ಅಲ್ಲಿ ಅವರ ದೇಶಭಕ್ತಿ ಕಾಣಲಿಲ್ಲವೇಕೆ? ಬ್ರಿಟಿಷರ ಜೊತೆ ಸೇರಿದ ಸೋತ ರಾಜರ ಸೈನಿಕರು ಯಾವ ದೇಶದಲ್ಲಿದ್ದು ಯಾರಿಗೋಸ್ಕರ ಯುದ್ಧಮಾಡಿದರು ಅವರ ದೇಶಭಕ್ತಿ ಎಂತಹುದು? ಎರಡು ದೇಶಭಕ್ತಿಗಳನ್ನು ವಿಭಿನ್ನವಾಗಿ ಯೋಚಿಸಿದರೆ ಮಹರರು ಮಾಡಿದ ತ್ಯಾಗ ಬಹು ದೊಡ್ಡದೆಂದು ತಿಳಿಯುತ್ತದೆ. ಆದರೆ, ಜಾತಿಯ ಕಾರಣಕ್ಕಾಗಿ ಅಸಮತೆಯನ್ನು ಬಿತ್ತುವ ಮಾತುಗಳಿಗೆ ಉತ್ತರ ನೀಡುವವರಾರು. ಒಪ್ಪಂದ ಮುರಿದು ಬಿತ್ತು. ಅನ್ನ ನೀರಿಲ್ಲದೆ ನಡೆದು ಯುದ್ಧಮಾಡಿ ಭೀಮಾಕೋರೆಗಾಂವ್ ಎಂಬಲ್ಲಿ ಪೇಶ್ವೆಗಳ ೨೮ ಸಾವಿರ ಸೈನ್ಯವನ್ನು ೫೦೦ ಸೈನಿಕರ ಮಹರರ ಸಣ್ಣ ಪಡೆ ಕ್ಯಾ.ಸ್ಟಂಡನ್ ನೇತೃತ್ವದಲ್ಲಿ ಸೋಲಿಸಿ ಗೆಲುವಿನ ಚರಿತ್ರೆ ಬರೆದದ್ದು ರೋಚಕ ಕಥೆ. ಮತ್ತು ಅದೊಂದು ಮಹಾ ಸಂಗ್ರಾಮ. ೧೮೧೮ ರಂದು ಹೊಸವರ್ಷದ ಮೊದಲ ದಿನ. ಕೋರೆಗಾಂವ್ ಯುದ್ಧ ಗೆದ್ದ ದಿನ ಮನುಕುಲದ ಉದ್ಧಾರದ ಕಥೆ ಬರೆದ ದಿನ. ಇಂತಹ ರೋಚಕ ಹೋರಾಟದ ಇತಿಹಾಸದಲ್ಲಿ ಭೀಮಾಕೋರೆಗಾಂವದ ಯುದ್ಧ ಮತ್ತು ಅದರಲ್ಲಿ ಸಾಧಿಸಿದ ವಿಜಯ ಮುಟ್ಟಿಸಿಕೊಳ್ಳದ ಲೋಕದ ಸ್ವಾಭಿಮಾನ ಮತ್ತು ಹೆಮ್ಮೆಯ ಸಂಕೇತ ಎಂದು ಹೇಳಬಹುದು.
ಈ ದಿನವನ್ನು ಮರೆಯದಂತೆ ಮಾಡಿ ವಿಜಯ ಸ್ಥಂಭ ನಿಲ್ಲಿಸಿ ಸ್ಮರಣೀಯವಾಗಿಸಿದವರು ಆಂಗ್ಲರು. ನಾವೇನಾದರೂ ಸಣ್ಣದೊಂದು ಆಟ ಗೆದ್ದರೆ ಏನೇನೋ ಬಹುಮಾನಗಳನ್ನು ಪಡಿತೀವಲ್ಲವೆ. ದೊಡ್ಡ ಆಟ ಗೆದ್ದರೆ ದೊಡ್ಡ ಬಹುಮಾನ ಇರುವಂತೆ ಒಂದು ಮಹಾನ್ ಯುದ್ಧ ಗೆದ್ದುಕೊಟ್ಟವರಿಗೆ ಏನು ಕೊಡಬಹುದು ಎಂದು ನೀವೇ ಯೋಚಿಸಿ. ಆದರೆ ಇಲ್ಲಿ ಗಮನಿಸಬೇಕಾದುದು ಏನೆಂದರೆ, ಯುದ್ಧ ಗೆದ್ದ ಮಹರ್ ವೀರರು ತಮಗಾಗಿ ಏನನ್ನೂ ಬೇಡಲಿಲ್ಲ. ಪರಂಪರೆಯಿಂದಲೂ ಅನೇಕ ಅಪಮಾನಗಳನ್ನು ಎದುರಿಸಿದ್ದರು. ಕಳ್ಳತನದಿ ಅಕ್ಷರ ಕಿವಿಗೆ ಹಾಕಿಕೊಂಡಿರುವ ಕಾರಣ ಕಿವಿಗೆ ಸುಡುವ ಎಣ್ಣೆ ಹಾಕಿಸಿಕೊಂಡಿದ್ದರು. ಕದ್ದು ಮಂತ್ರ ಕೇಳಿ ಅದನ್ನು ನುಡಿದರೆಂದು ನಾಲಿಗೆಯ ಕತ್ತರಿಸಿಕೊಂಡಿದ್ದರು. ಇಂತಹ ಅಮಾನವೀಯ ಜಾತಿ ಪದ್ದತಿ ಮತ್ತು ಅಸ್ಪೃಷ್ಯತೆಯನ್ನು, ಭಾರತದೊಳಗಿನ ಚರಿತ್ರೆಯನ್ನು ಆಂಗ್ಲರು ಓದಿ ಕೇಳಿ ಮರುಗಿದ್ದರು. ಸಮಾನತೆ ಕೇಳಿದ್ದಕ್ಕೆ, ಓದಲು ಅಕ್ಷರವ ಕೇಳಿದ್ದಕ್ಕೆ ಹೀಗಾಯಿತಲ್ಲ ಎಂದು ನೊಂದಿದ್ದರು. ಆ ಅಕ್ಷರದೊಳಗೆ ಏನಿರಬಹುದು ಅದನ್ನು ನಾವೇಕೆ ಪಡೆಯಬಾರದು ಎಂದು ಯೋಚಿಸುತ್ತಿರುವಾಗಲೆ ಅವರು ಬಯಸಿದುದನ್ನು ಆಂಗ್ಲರು ಮಾಡಿದರು. ಏನು ಮಾಡಿದರೆಂದರೆ. ಆ ವಿಜಯದ ಸಂಕೇತವಾಗಿ ಕೋರೆಗಾಂವ್ ನಲ್ಲಿ ವಿಜಯಸ್ಥಂಭವನ್ನು ನಿರ್ಮಿಸಿದರು. ಪ್ರಾಣಾರ್ಪಣೆ ಮಾಡಿದ ವೀರರ ಹೆಸರುಗಳನ್ನು ಸ್ಮಾರಕಕ್ಕೆ ಕೆತ್ತಿಸಿದರು. ಮತ್ತು ಆ ಮಹರ್ ವೀರರ ಮಕ್ಕಳಿಗೆ ಶಿಕ್ಷಣ ನೀಡಿದರು. ಆ ಶಿಕ್ಷಣ ಪಡೆದ ಮಕ್ಕಳು ಮತ್ತೆ ಬ್ರಿಟೀಷರ ಸೈನ್ಯ ಸೇರಿದರು. ಆ ಸೈನ್ಯದ ಸಿಪಾಯಿಯೊಬ್ಬನ ಮಗನೇ ನಮ್ಮ ರಾಮಜೀ ಸಕ್ಪಾಲ್. ಅವರ ಮಗನೇ ಮಹಾನಾಯಕ ನಮ್ಮ ಭೀಮರಾವ್ ಅಂಬೇಡ್ಕರ್. ಬ್ರೀಟೀಷರ ಕಡತಗಳಲ್ಲಿದ್ದ ಈ ಚರಿತ್ರೆಯನ್ನು ಶೋಧನೆ ಮಾಡಿ ಜಗತ್ತಿಗೆ ತೋರಿಸಿಕೊಟ್ಟದ್ದು ನಮ್ಮ ಅಂಬೇಡ್ಕರ್. ಅವರು ಸ್ವಾಭಿಮಾನದ ಯುದ್ಧಗೆದ್ದ ಮಹರ್ ವೀರರ ವಂಶದ ಕುಡಿ ಸ್ವಾಭಿಮಾನಕ್ಕೆ ಮತ್ತೊಂದು ಹೆಸರು.

ಯುದ್ಧಗೆದ್ದ ಮಹರ್‌ವೀರರಿಗಾಗಿ ಉಪಕಾರ ಮೆರೆದಾರೋ
ಆಂಗ್ಲರು ಉಪಕಾರ ಮೆರೆದಾರೋ
ಮಹರ್ ರೆಜಿಮೆಂಟ್ ಸೈನಿಕ ಮಕ್ಕಳ ಶಾಲೆಯ ತೆರೆದಾರೋ
ಆಂಗ್ಲರು ಶಿಕ್ಷಣ ನೀಡ್ಯಾರೋ

ಬರಿಮೈ ಬೆವರಲಿ ತೋಯಿಸಿ ಕೊರಳ ಕುಡಿಕೆ ಒಡೆದವರೊ
ಸಂಭೋಳಿಯ ಹೂತವರೊ
ಅಂಗ್ರೇಜಿಗಳ ಅಕ್ಷರ ಕುಡಿದು ಜೀರ್ಣಿಸಿಕೊಂಡವರೊ
ಭೀಮರಾಯನ ಹಡೆದವರೊ

ಮಿಲಿಟರಿ ಶಾಲೇಲಿ ಶಿಕ್ಷಣ ಪಡೆದ ರಾಮ್‌ಜಿ ಸಕ್ಪಾಲರೋ
ಭೀಮರಾಯನ ಹೆತ್ತಾರೋ
ಕಷ್ಟದಿ ಶಿಕ್ಷಣ ಪಡೆದ ಅಂಬೇಡ್ಕರ್ ಬ್ಯಾರಿಸ್ಟರಾಗ್ಯಾರೋ
ದೇಶಕ ಸಂವಿಧಾನ ಬರೆದರೊ

ಮನುವಾದಿಗಳು ಯಾರೂ ಬರೆಯಲಿಲ್ಲ ಸೋತಾ ಈ ಕಥೆಯ
ತಾವು ಸೋತಾ ಈ ಕಥೆಯ
ಮಹಾಜ್ಞಾನಿ ಭೀಮರಾವ್ ಬರೆದರು ಚರಿತ್ರೆಯಾ ಕಥೆಯಾ
ಸುವರ್ಣ ಪುಟದಲೀ ಕಥೆಯಾ

ಕೋರೆಗಾಂವದ ವಿಜಯ ಸ್ಥಂಭವದು ಬರೀ ಕಂಬವಲ್ಲ
ಜನಗಳೇ ಕಲ್ಲು ಕಂಬವಲ್ಲ
ಶೋಷಿತ ಜನಗಳ ಸ್ವಾಭಿಮಾನದ ಕನಸದು ಮರೆತಿಲ್ಲ
ಭೀಮನ ಕನಸು ನಮಗೆಲ್ಲ

ಅಭಿಮಾನದಿಂದ ಹಾಡಿ ಹೊಗಳುವ ಬರೀ ಸ್ಥಂಬವಲ್ಲ
ಸ್ವಾಭಿಮಾನ ನಿಲಿಸ್ಯಾರಲ್ಲ
ಹುತಾತ್ಮರಾದ ವೀರರ ಚರಿತೆ ನಾವು ಮರೆಯೋದಿಲ್ಲ
ವೀರರು ಸ್ಪೂರ್ತಿ ನಮಗೆಲ್ಲ

ಲೇಖಕರು
ರಮೇಶ ಗಬ್ಬೂರ್

ವಿಳಾಸ
ಗ್ರಂಥಪಾಲಕರು
ಬಾಲಕರ ಸರಕಾರಿ
ಪೂರ್ವ ಕಾಲೇಜು ಗಂಗಾವತಿ
ಕೊಪ್ಪಳ ಜಿಲ್ಲೆ,
ಮೊ.9844433128

Get real time updates directly on you device, subscribe now.

Comments are closed.

error: Content is protected !!
%d bloggers like this: