ರಕ್ತದಲ್ಲಿ ಪತ್ರ ಬರೆದ ಅತಿಥಿ ಉಪನ್ಯಾಸಕರು–ಸರಕಾರದ ಗಮನ ಸೆಳೆಯಲು ವಿಭಿನ್ನ ಹೋರಾಟ‌

Get real time updates directly on you device, subscribe now.

ಕೊಪ್ಪಳ: ಸುಮಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಹೋರಾಟ 28ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆ ಆರಂಭಗೊಂಡು ಇಷ್ಟು ದಿನಗಳಾದರೂ ಸರಕಾರದಿಂದ ಸ್ಪಂದನೆ ದೊರಕದ ಹಿನ್ನಲೆಯಲ್ಲಿ ಕೊಪ್ಪಳದ ಅತಿಥಿ ಉಪನ್ಯಾಸಕರು ವಿಭಿನ್ನ ಹೋರಾಟಕ್ಕೆ ಬುಧವಾರ ಸಾಕ್ಷಿಯಾದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ ರಾಜ್ಯದ್ಯಂತ ಮಾದರಿಯಾಗಿದೆ. ಬುಧವಾರ ತಮ್ಮ ರಕ್ತದಲ್ಲಿ ಪತ್ರ ಬರೆದು ಸರಕಾರಕ್ಕೆ ನಿವೇದಿಸಿಕೊಳ್ಳುವ ಮೂಲಕ ಕ್ರಾಂತಿ ಸೃಷ್ಟಿಸಿದರು.
ಈಗಾಗಲೇ ಪಾದಯಾತ್ರೆ ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಪತ್ರ ಚಳವಳಿ ನಡೆಸಲಾಗಿದೆ. ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದಾಗಿದೆ. ಇಷ್ಟಾದರೂ ಸರಕಾರದ ಮೌನ ಅತಿಥಿ ಉಪನ್ಯಾಸಕರ ಹೋರಾಟವನ್ನು ತೀವ್ರಗೊಳ್ಳುವಂತೆ ಮಾಡಿದ್ದು, ಇದೀಗ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರು ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ತಮ್ಮ ರಕ್ತದಲ್ಲಿ ಸರಕಾರಕ್ಕೆ ಪತ್ರ ಬರೆದು ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿದರು.
ಹೋರಾಟದಲ್ಲಿ ವಿಜಯಕುಮಾರ್‌ ಕುಲಕರ್ಣಿ, ಲತಾ, ಡಾ.ವೀರಣ್ಣ ಸಜ್ಜನರ್‌, ಬಸವರಾಜ ಕರುಗಲ್‌ ರಕ್ತದಲ್ಲಿ ಪತ್ರ ಬರೆದರು. ಈ ವೇಳೆ ಡಾ.ಸಣ್ಣದೇವೇಂದ್ರಸ್ವಾಮಿ, ಡಾ.ಪ್ರಕಾಶ ಬಳ್ಳಾರಿ, ಡಾ.ತುಕಾರಾಂ ನಾಯಕ, ಶಿವಮೂರ್ತಿಸ್ವಾಮಿ, ಕಲ್ಲಯ್ಯ, ಗೀತಾ ಬನ್ನಿಕೊಪ್ಪ, ಅಕ್ಕಮಹಾದೇವಿ, ಸಾವಿತ್ರಿ, ಗಿರಿಜಾ ತುರಮುರಿ, ಎಂ.ಶಿವಣ್ಣ, ಮಹಾಂತೇಶ ನೆಲಾಗಣಿ, ಶಿವಬಸಪ್ಪ‌ ಮಸ್ಕಿ, ರಾಮಪ್ರಸಾದ, ಸಿ.ಬಸವರಾಜ, ವಿಜಯಕುಮಾರ ತೋಟದ, ಬಸವರಾಜ ಹುಳಕಣ್ಣವರ್‌, ಪ್ರಕಾಶ ಜಡಿಯವರ್‌, ಈಶಪ್ಪ ಮೇಟಿ ಸೇರಿದಂತೆ ಹಲವರಿದ್ದರು.
ಪತ್ರದ ಸಾರ:
ನಂಬಿಕೆಯ ಸರಕಾರಕ್ಕೆ ರಕ್ತದ ಪ್ರೀತಿ ಪತ್ರ:
ಮಾನ್ಯ ಮುಖ್ಯಮಂತ್ರಿಗಳೇ/ಉನ್ನತ ಶಿಕ್ಷಣ ಸಚಿವರೇ,
ಅತಿಥಿ ಉಪನ್ಯಾಸಕರಾಗಿರುವ ನಮ್ಮ ಸೇವೆಯನ್ನು ಕಾಯಂಗೊಳಿಸಿ ಎಂದು 28 ದಿನಗಳಿಂದ ಗೋಗರೆಯುತ್ತಿದ್ದೇವೆ. ಸರಕಾರ ಸಹ ಸ್ಪಂದಿಸುತ್ತಿದೆ ಎಂಬ ಆಶಾವಾದ ಇನ್ನೂ ಇದೆ. ಆದರೆ ಅಧಿಕೃತ ಮಾಹಿತಿಯನ್ನು ಈವರೆಗೂ ನೀವು ಹೇಳಿಲ್ಲ, ನಾವು ಕೇಳಿಲ್ಲ. ಹಾಗಾಗಿ ಪ್ರೀತಿಪಾತ್ರರಿಗೆ ಬರೆಯುವಂತೆ ನಾವು ಸಹ ಸರಕಾರಕ್ಕೆ ರಕ್ತದಿಂದ ಈ ಪತ್ರ ಬರೆಯುತ್ತಿದ್ದೇವೆ.
ಇಚ್ಛಾಶಕ್ತಿ ಇದ್ದರೆ ಸರಕಾರಕ್ಕೆ ಯಾವುದೂ ಸಮಸ್ಯೆಯಲ್ಲ, ಹೊರೆಯೂ ಅಲ್ಲ, ವಯೋಮಿತಿಯ ಅಂತ್ಯದಲ್ಲಿದ್ದೇವೆ. ಅಭದ್ರತೆಯಿಂದ ಎಷ್ಟೋ ಜೀವಗಳು ಕೊನೆಯುಸಿರೆಳೆದಿವೆ. ಇಂಥ ಹಲವು ಸಮಸ್ಯೆಗಳನ್ನು ಎದುರಿಸುತ್ತಲೇ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದೇವೆ.
ನಮ್ಮ ಬೇಡಿಕೆಯೊಂದೇ; ಸೇವೆ ಕಾಯಂ ಮಾಡಿ-ನ್ಯಾಯ ಕೊಡಿ, ರಕ್ತ ಕೊಟ್ಟೇವು- ಕಾಯಂ ಬಿಡೇವು…
ಜನಮನ್ನಣೆಯ ಸರಕಾರ ಅತಿಥಿ ಉಪನ್ಯಾಸಕರ ಸಮಸ್ಯೆ ನಿವಾರಣೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂಬ ಅದಮ್ಯ ವಿಶ್ವಾಸದೊಂದಿಗೆ,
– ಅತಿಥಿ ಉಪನ್ಯಾಸಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳ.
 
“ಹಲವು ವರ್ಷಗಳಿಂದ ನಾವು ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಇದುವರೆಗೂ ನಮಗೆ ಯಾವುದೇ ಭದ್ರತೆ ಇಲ್ಲ. ವರ್ಷದಲ್ಲಿ ಹತ್ತು ತಿಂಗಳು ಮಾತ್ರ ಸಂಬಳ ನೀಡುತ್ತಿರುವ ಸರಕಾರ, ಅದನ್ನು ಸರಿಯಾಗಿ ನೀಡುತ್ತಿಲ್ಲ. ವಯೋಮಿತಿ ಮೀರುತ್ತಿದೆ. ಸರಕಾರ ಕೂಡಲೇ ನಮ್ಮ ಸೇವೆ ಕಾಯಂಗೊಳಿಸಬೇಕು.”
-ಲತಾ, ಅತಿಥಿ ಉಪನ್ಯಾಸಕಿ, ಇಂಗ್ಲಿಷ್ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳ.

Get real time updates directly on you device, subscribe now.

Comments are closed.

error: Content is protected !!
%d bloggers like this: