ಜಿಲ್ಲೆಯ ಸ್ಕ್ಯಾನಿಂಗ್ ಸೆಂಟರ್‌ಗಳು ಕಡ್ಡಾಯ ನೋಂದಣಿ ಹಾಗೂ ನವೀಕರಣಕ್ಕೆ ಕ್ರಮ ವಹಿಸಬೇಕು: ಡಿಎಚ್‌ಒ ಡಾ.ಲಿಂಗರಾಜು ಟಿ
ಕೊಪ್ಪಳ : ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಅಡಿಯಲ್ಲಿ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳು ಕಡ್ಡಾಯವಾಗಿ ನೋಂದಣಿ ಮತ್ತು ನವೀಕರಣವನ್ನು ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಲಿಂಗರಾಜ ಟಿ ಅವರು ಹೇಳಿದರು.
ಶುಕ್ರವಾರದಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪಿ. ಸಿ & ಪಿ. ಎನ್. ಡಿ. ಟಿ ಕಾಯ್ದೆ ಅಡಿಯಲ್ಲಿ ಬರುವ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಸೆಂಟರ್‌ಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಹಾಗೂ ಕಾಲ ಕಾಲಕ್ಕೆ ಪರವಾನಗಿ ನವೀಕರಣ ಮಾಡಿಸಿಕೊಳ್ಳಬೇಕು. ಪರವಾನಗಿ ನವೀಕರಿಸುವ ಜೊತೆಗೆ ಈ ಹಿಂದೆ ಪಿ. ಸಿ & ಪಿ. ಎನ್.ಡಿ.ಟಿಯ ಬಾಲಿಕಾ ಸಾಫ್ಟ್ವೇರ್‌ನ ಫಾರ್ಮ-ಬಿ ಪತ್ರದಲ್ಲಿರುವ ಆಸ್ಪತ್ರೆಯ ಹೆಸರು ಕೆ.ಪಿ.ಎಂ.ಇ ಪ್ರಮಾಣ ಪತ್ರದಲ್ಲಿಯೂ ಇರುವಂತೆ ಕ್ರಮ ವಹಿಸಬೇಕು. ಜಿಲ್ಲೆಯ ಯಾವುದೇ ಸ್ಕಾ?ಯನಿಂಗ್ ಸೆಂಟರ್‌ಗೆ ಸಮಿತಿ ಸದಸ್ಯರು ಭೇಟಿ ನೀಡಿ, ಕಾಯ್ದೆಯನುಸಾರ ಸ್ಕಾ?ಯನಿಂಗ್ ಸೆಂಟರ್ ನಡೆಸುತ್ತಿರುವ ಬಗ್ಗೆ ಪರಿಶೀಲಿಸಬಹುದು ಎಂದು ತಿಳಿಸಿದರು.
ಸ್ಕ್ಯಾನಿಂಗ್ ಸೆಂಟರ್‌ಗಳು ಸ್ಕ್ಯಾನಿಂಗ್ ಕುರಿತಾದ ಮಾರ್ಗಸೂಚಿಗಳನ್ನು ಪಾಲಿಸಿ ನಿಗದಿತ ನಮೂನೆಗಳನ್ನು ನಿರ್ವಹಿಸಬೇಕು. ಅದರಂತೆ ವೈದ್ಯಕೀಯ ಕಾರಣಗಳಿಂದಾಗುವ ಗರ್ಭಪಾತಗಳ(ಎಂ.ಟಿ.ಪಿ) ಬಗ್ಗೆಯೂ ನಿಗದಿತ ನಮೂನೆ ಹಾಗೂ ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ ಎಂ.ಟಿ.ಪಿ ನಿರ್ವಹಿಸುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳು ಸರ್ಕಾರದ ಇ-ಕಲ್ಯಾಣಿ ಸಾಫ್ಟ್ವೇರ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಪಿ.ಸಿ&ಪಿ.ಎನ್.ಡಿ.ಟಿ ಕಾಯ್ದೆ ಅನುಸಾರ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕುರಿತಂತೆ ಯಾವುದೇ ರೀತಿಯ ಜಾಹೀರಾತು ನೀಡುವಂತಿಲ್ಲ. ಸರ್ಕಾರಿ ಅಥವಾ ಖಾಸಗಿ ಯಾವುದೇ ವೈದ್ಯರು ಇಂತಹ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಅವರಿಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಸಹಿತ ರೂ.೧೦,೦೦೦ ಗಳ ದಂಡವನ್ನು ವಿಧಿಸಲಾಗುವುದು. ಪ್ರಕರಣಗಳಲ್ಲಿ ಆರೋಪ ಸಾಬೀತಾದಲ್ಲಿ ರಾಜ್ಯ ವೈದ್ಯಕೀಯ ಮಂಡಳಿಯಿಂದ ಶಾಶ್ವತವಾಗಿ ಅವರ ಹೆಸರನ್ನು ತೆಗೆದು ಹಾಕಿ, ಆಜೀವ ನಿಷೇಧ ಹೇರಲಾಗುವುದು. ಒಂದು ವೇಳೆ ಸ್ವತಃ ಮಹಿಳೆ, ಆಕೆಯ ಪತಿ ಅಥವಾ ಸಂಬಂಧಿಕರು ಭ್ರೂಣ ಲಿಂಗ ಪತ್ತೆಗೆ ಯತ್ನಿಸಿ, ವೈದ್ಯರಿಗೆ ಒತ್ತಡ ಹೇರಿದಲ್ಲಿ ಅವರಿಗೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ರೂ.೫೦ ಸಾವಿರದಿಂದ ೧ ಲಕ್ಷದವರೆಗೆ ದಂಡವನ್ನು ವಿಧಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ರವೀಂದ್ರನಾಥ್ ಎಮ್. ಹೆಚ್, ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ಸ್ತ್ರೀ ರೋಗ ತಜ್ಞರಾದ ಡಾ. ಈಶ್ವರ ಸವಡಿ, ಮಕ್ಕಳ ತಜ್ಞರ ವಿಭಾಗದ ಮುಖ್ಯಸ್ಥರಾದ ಡಾ. ಗಿರೀಶ್, ವಕೀಲರಾದ ಶಂಕರ ಬಿಸರಳ್ಳಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ಹ್ಯಾಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Comments are closed.