ಬಾಬಣ್ಣರಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ ಪ್ರದಾನ ಮಾಡಲು ಜ್ಯೋತಿ ಮನವಿ
ಕೊಪ್ಪಳ: ೨೦೨೧-೨೨ ನೇ ಸಾಲಿನ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಂಗಭೂಮಿಯ ಶ್ರೇಷ್ಠ, ಹಿರಿಯ ಕಲಾವಿದರಾದ ಕುಕನೂರಿನ ಬಾಬಣ್ಣ ಕಲ್ಮನಿ ರವರಿಗೆ “ಗುಬ್ಬಿ ವೀರಣ್ಣ” ಪ್ರಶಸ್ತಿ ಘೋಷಣೆ ಮಾಡಿದರೂ ಇಲ್ಲಿಯವರಿಗೂ ಪ್ರಶಸ್ತಿ ಪ್ರದಾನ ಮಾಡದಿರುವದು ನೋವಿನ ಸಂಗತಿ ಎಂದು ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಪತ್ರ ಬರೆದು ಕೂಡಲೇ ಪ್ರಶಸ್ತಿ ಪ್ರದಾನ ಮಾಡುವಂತೆ ಒತ್ತಾಯಿಸಿದ್ದಾರೆ.
ಇಳಿವಯಸ್ಸಿನಲ್ಲಿ ಸಿಕ್ಕ ಪ್ರಶಸ್ತಿಯ ಖುಷಿಯನ್ನು ಆನಂದಿಸದೇ ಮರಣ ಹೊಂದಿದರು, ಪ್ರಶಸ್ತಿ ಮೊತ್ತ ೫ ಲಕ್ಷ ರೂ.ಗಳು ಬಾಬಣ್ಣನವರು ಬದುಕಿನ ಅವಧಿಯಲ್ಲಿ ಸಿಕ್ಕಿದ್ದರೆ ಅವರ ಆರೋಗ್ಯಕ್ಕೆ ಸಹಕಾರಿ ಆಗುತ್ತಿತ್ತು, ಆಗಿರುವ ತಪ್ಪು ಸರಿಪಡಿಸಲು ತುರ್ತಾಗಿ ಪ್ರಶಸ್ತಿ ಕೊಡುವ ಜೊತೆಗೆ ಬಾಬಣ್ಣ ಕಲ್ಮನಿ ಅವರ ಹೆಸರಲ್ಲಿ ಅಲ್ಪಸಂಖ್ಯಾತ ರಂಗಕರ್ಮಿಗೆ ಮೀಸಲಾದ ವಿಶೇಷ ಪ್ರಶಸ್ತಿ ಒಂದನ್ನು ಆರಂಭಿಸಿ ಬಾಬಣ್ಣರ ಕುಟುಂಬಕ್ಕಾದರೂ ಶೀಘ್ರ ಗೌರವ ಸಿಗಲಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಕೊಪ್ಪಳ ಜಿಲ್ಲೆಯವರೆ ಆಗಿರುವದರಿಂದ ಇಲಾಖೆಯ ಬಗ್ಗೆ ಹೆಚ್ಚು ಮುತುವರ್ಜಿ ಇರುವದರಿಂದ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು, ಶಾಸಕ ಬಸವರಾಜ ರಾಯರಡ್ಡಿ ಅವರೂ ಸಹ ಸರಕಾರದ ಹಿರಿಯ ಶಾಸಕರು, ಮಾಜಿ ಸಚಿವರೂ ಆಗಿರುವದರಿಂದ ಇದನ್ನೊಂದು ಬೃಹತ್ ಕಾರ್ಯಕ್ರಮವನ್ನಾಗಿ ಮಾಡಿ ಬಾಬಣ್ಣ ಅವರಿಗೆ ಮರಣೋತ್ತರವಾದರೂ ಪ್ರಶಸ್ತಿ ಪ್ರದಾನ ಮತ್ತು ನುಡಿನಮನ ಕಾರ್ಯಕ್ರಮವನ್ನು ಸರಕಾರ ಕುಕನೂರಿನಲ್ಲಿಯೇ ಮಾಡಿ ಗೌರವಿಸಬೇಕು ಎಂದು ಕೋರಿದ್ದಾರೆ.
Comments are closed.