ಹೆರಿಗೆ ಸಮಯದಲ್ಲಿ ತಾಯಂದಿರ ಮರಣ ತಪ್ಪಿಸಲು ಅಗತ್ಯ ಕ್ರಮ ವಹಿಸಿ: ಜಿಲ್ಲಾಧಿಕಾರಿ ನಲಿನ್ ಅತುಲ್
ಹೆರಿಗೆ ಸಮಯದಲ್ಲಿ ಅಧಿಕ ರಕ್ತಸ್ರಾವ, ರಕ್ತದೊತ್ತಡದ ಏರಿಳಿತ ಮುಂತಾದ ಸಮಸ್ಯೆಗಳಿಂದ ಮಹಿಳೆಯರು ಮರಣ ಹೊಂದುತ್ತಾರೆ. ಇದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯ ಅಗತ್ಯ ವೈದ್ಯಕೀಯ ವ್ಯವಸ್ಥೆಗಳನ್ನು ಸಿದ್ದಪಡಿಸಿಕೊಳ್ಳಬೇಕು. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಸುಸಜ್ಜಿತ ಸೌಲಭ್ಯ ಹೊಂದಿರುವ ಆಸ್ಪತ್ರೆಗೆ ಶಿಫಾರಸ್ಸು ಮಾಡಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ವೈದ್ಯಕೀಯ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಆಧುನಿಕ ವೈದ್ಯಕೀಯ ಸವಲತ್ತುಗಳು ಲಭ್ಯವಿದ್ದು, ತುರ್ತು ಸಂದರ್ಭದಲ್ಲಿ ಮಹಿಳೆಯರನ್ನು ಕಿಮ್ಸ್ಗೆ ಹೋಗುವಂತೆ ಅಥವಾ ಹತ್ತಿರದ ಉತ್ತಮ ವೈದ್ಯಕೀಯ ಸೌಲಭ್ಯ ಹೊಂದಿರುವ ಆಸ್ಪತ್ರೆಗೆ ತೆರಳುವಂತೆ ಕುಟುಂಬಸ್ಥರಿಗೆ ಶಿಫಾರಸ್ಸು ಮಾಡಬೇಕು. ತುರ್ತು ಸಂದರ್ಭದಲ್ಲಿ ದೊರೆಯುವ ಚಿಕಿತ್ಸೆಯಿಂದ ಹೆರಿಗೆ ಸಮಯದಲ್ಲಿ ಮಹಿಳೆಯ ಪ್ರಾಣವನ್ನು ಉಳಿಸಬಹುದು. ಹೆರಿಗೆಗೆ ದಾಖಲಾದ ಪ್ರತಿ ಮಹಿಳೆಯ ಆರೋಗ್ಯವನ್ನು ಫಿಜಿಶಿಯನ್‌ಗಳಿಂದ ತಪಾಸಣೆ ಮಾಡಿಸಬೇಕು. ಗರ್ಭಿಣಿ ಮಹಿಳೆಯ ಹಿಂದಿನ ಹೆರಿಗೆಗಳು ಹಾಗೂ ಪ್ರಸ್ತುತ ಗರ್ಭ ಧರಿಸಿದ ಸಂದರ್ಭದಲ್ಲಿನ ವೈದ್ಯಕೀಯ ಇತಿಹಾಸದ ದಾಖಲೆಗಳನ್ನು ಪರಿಶೀಲಿಸಿ ಅದಕ್ಕೆ ತಕ್ಕಂತೆ ಮಹಿಳೆಯ ಹೆರಿಗೆಗೆ ಬೇಕಾದ ಅಗತ್ಯ ವೈದ್ಯಕೀಯ ಸಿದ್ದತೆ ಮಾಡಿಕೊಳ್ಳಬೇಕು. ಮಹಿಳೆಯರಲ್ಲಿ ಸಾಮಾನ್ಯವಾಗಿ ರಕ್ತ ಹೀನತೆ ಪ್ರಮುಖ ಸಮಸ್ಯೆಯಾಗಿರುತ್ತದೆ. ಅದಕ್ಕಾಗಿ ಗರ್ಭಿಣಿ ಮಹಿಳೆಯರು ಪೌಷ್ಠಿಕ ಆಹಾರ, ಅಗತ್ಯ ವೈದ್ಯಕೀಯ ನೆರವು ಪಡೆಯುವಂತೆ ಗರ್ಭಿಣಿ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರಿಗೆ ಆಶಾ ಅವರಿಂದ ಸೂಕ್ತ ತಿಳುವಳಿಕೆ ನೀಡಬೇಕು. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಲಹೆ ನೀಡಬೇಕು. ಇದರಿಂದ ಹೆರಿಗೆ ಸಂದರ್ಭದಲ್ಲಿ ಉಂಟಾಗುವ ತಾಯಂದಿರ ಮರಣವನ್ನು ತಪ್ಪಿಸಬಹುದು. ಪಕ್ಕದ ಅಥವಾ ಬೇರೆ ಜಿಲ್ಲೆಗಳಿಂದ ಕೊನೆಯ ಹಂತದಲ್ಲಿರುವ ರೋಗಿಗಳನ್ನು, ಹೆರಿಗೆಗೆ ಗರ್ಭಿಣಿಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಶಿಫಾರಸ್ಸು ಮಾಡಿ ಕಳುಹಿಸುತ್ತಾರೆ. ಹೀಗೆ ಕಳುಹಿಸುವಾಗ ಗರ್ಭಿಣಿಯ ಜೊತೆ ಸಂಬAಧಿಸಿದ ಆಶಾ ಅವರು ಇರುವುದು ಕಡ್ಡಾಯ. ಈ ಬಗ್ಗೆ ಪಕ್ಕದ ಜಿಲ್ಲೆಯ ಆರೋಗ್ಯ ಇಲಾಖೆಗೆ ಸೂಕ್ತ ಮಾಹಿತಿ ನೀಡಿ ಎಂದು ಅವರು ಹೇಳಿದರು.
ತುರ್ತು ಸಂದರ್ಭದಲ್ಲಿ ಆರೋಗ್ಯ ಇಲಾಖೆಯ 108 ಅಂಬ್ಯುಲೆನ್ಸ್ಗಳನ್ನು ರೋಗಿಗಳು ಬಳಸಿಕೊಳ್ಳಬಹುದು. ಈ ಸಮಯದಲ್ಲಿ ಹತ್ತಿರದ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯಬೇಕು ಎಂಬ ನಿಯಮವಿದೆ. ಆದರೆ ರೋಗಿ ಅಥವಾ ರೋಗಿಯ ಕುಟುಂಬಸ್ಥರು ಬಯಸಿದಲ್ಲಿ ಅವರು ಸೂಚಿಸುವ ಯಾವುದೇ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯಬೇಕು. ಈ ಕುರಿತು ರೋಗಿಯ ಕುಟುಂಬಸ್ಥರ ಲಿಖಿತ ಹೇಳಿಕೆಯನ್ನು ಪಡೆಯಬೇಕು. ಆದರೆ ಯಾವುದೇ ಕಾರಣಕ್ಕೂ ಅಂಬ್ಯುಲೆನ್ಸ್ ಚಾಲಕರು ತಮ್ಮ ಕರ್ತವ್ಯದಲ್ಲಿ ಬೇಜವಾಬ್ದಾರಿ ಹೊಂದಿರಬಾರದು. ಈ ಕುರಿತು ಅಗತ್ಯ ನಿರ್ದೇಶನಗಳನ್ನು ಆದೇಶ ರೂಪದಲ್ಲಿ ಜಿಲ್ಲೆಯ 108 ಅಂಬ್ಯುಲೆನ್ಸ್ ಚಾಲಕರಿಗೆ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ರೇಬಿಸ್ ನಿಯಂತ್ರಣ ಕಾರ್ಯಕ್ರಮದ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಬೀದಿನಾಯಿಗಳಿಂದ ಕಡಿತಕ್ಕೆ ಒಳಗಾಗಿ ಅದರಿಂದ ರೇಬಿಸ್ ರೋಗಕ್ಕೆ ತುತ್ತಾದವರಿಗೆ ಸರ್ಕಾರ ನಿಗದಿಪಡಿಸಿದ ಪರಿಹಾರವನ್ನು ನೀಡಬೇಕು. ನಾಯಿ ಕಡಿದರೂ ಕೂಡ ಅವರಿಗೆ ಪರಿಹಾರ ನೀಡಬೇಕು. ಪಶು ಸೇವಾ ಮತ್ತು ಪಶು ವೈದ್ಯಕೀಯ ಇಲಾಖೆ, ರೇಬಿಸ್ ನಿಯಂತ್ರಣ ಘಟಕ ಹಾಗೂ ಸ್ಥಳೀಯ ಸಂಸ್ಥೆಗಳು ಒಟ್ಟಾಗಿ ಜಿಲ್ಲೆಯಲ್ಲಿರುವ ಬೀದಿನಾಯಿಗಳ ಸಮೀಕ್ಷೆಯನ್ನು ಕೈಗೊಂಡು, ಅವುಗಳಿಗೆ ಸೂಕ್ತ ಚುಚ್ಚು ಮದ್ದು, ಸಂತಾನ ಹರಣ ಚಿಕಿತ್ಸೆಯನ್ನು ಮಾಡಿಸಲು ಕ್ರಮ ಕೈಗೊಳ್ಳಬೇಕು. ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದAತೆ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ ನೇತೃತ್ವದಲ್ಲಿ ಸಭೆಯನ್ನು ನಡೆಸಬೇಕು. ಸೆಕ್ಷನ್6(ಬಿ) ಪ್ರಕಾರ ಶಿಕ್ಷಣ ಸಂಸ್ಥೆಯ 100 ಗಜ ಅಂತರದೊಳಗೆ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಡದಂತೆ ನಿಗಾವಹಿಸಲು ಕ್ರಮ ಕೈಗೊಳ್ಳಬೇಕು. ಕೋಟ್ಪಾ-2003 ರ ಕಾಯ್ದೆಯ ಸೆಕ್ಷನ್ 5 ಮತ್ತು ಸೆಕ್ಷನ್ 7ರ ಉಲ್ಲಂಘನೆ ಕಂಡುಬAದಲ್ಲಿ ಪೊಲೀಸ್ ಇಲಾಖೆಯಿಂದ ಮೊಕದ್ದಮೆ ದಾಖಲಿಸಬೇಕು. ಪುರಸಭೆ, ಪಟ್ಟಣ ಪಂಚಾಯತಿ ಅಡಿಯಲ್ಲಿ ಬರುವ ಕಿರಾಣಿ ಅಂಗಡಿ, ಪಾನ್‌ಶಾಪ್, ಹೋಟೆಲ್ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕೋಟ್ಪಾ-2003 ಕಾಯ್ದೆಯ ಸೆಕ್ಷನ್-4 ರಂತೆ ಧೂಮಪಾನ ನಿಷೇಧಿತ ಪ್ರದೇಶ ಎಂಬ ನಾಮಫಲಕ ಹಾಕಿಕೊಳ್ಳುವಂತೆ ನೋಡಿಕೊಳ್ಳಬೇಕು. ಸ್ವಚ್ಛತಾ ಸಿಬ್ಬಂದಿಗಖ ಮೂಲಕ ಪ್ರಚಾರ ಕೈಗೊಳ್ಳಬೇಕು. ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ ಅಡಿಯಲ್ಲಿ ಬರುವ ಕಿರಾಣಿ ಅಂಗಡಿಗಳು, ಪಾನ್‌ಶಾಪ್, ಹೋಟೆಲ್ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಸೆಕ್ಷನ್ 6ಎ ಅಡಿಯಲ್ಲಿ ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಈ ಕುರಿತು ಅಂಗಡಿ ಮಾಲೀಕರಿಗೆ ಸೂಕ್ತ ಸೂಚನೆ ನೀಡಿ, ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮದ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು ಕುಷ್ಠರೋಗದ ಕುರಿತು ಸಾರ್ವಜನಿಕರಲ್ಲಿ ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಚರ್ಮದಲ್ಲಾಗುವ ಬದಲಾವಣೆಗಳನ್ನು ಗಮನಿಸಿ ತಜ್ಞ ವೈದ್ಯರ ಬಳಿ ತಪಾಸಣೆ ಮಾಡಿಸಬೇಕು. ಕುಷ್ಠರೋಗ ವಾಸಿ ಮಡಬಹುದಾದ ಖಾಯಿಲೆಯಾಗಿದ್ದು ಇದಕ್ಕೆ ನಿರಂತರ ಹಾಗೂ ಸೂಕ್ತ ಚಿಕಿತ್ಸೆಯನ್ನು ಪಡೆಯುವಂತೆ ರೋಗಿಗಳಲ್ಲಿ ಹಾಗೂ ರೋಗಿಯ ಬಾಧಿತರಿಗೆ ಸೂಕ್ತ ತಿಳುವಳಿಕೆ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಿಂಗರಾಜು, ಆರ್‌ಸಿಎಚ್ ಅಧಿಕಾರಿ ಡಾ.ಪ್ರಕಾಶ, ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್., ಡಿಟಿಒ ಡಾ.ಶಶಿಧರ, ಡಿಎಲ್‌ಒ ಡಾ.ಪ್ರಕಾಶ ಕೆ., ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ಡಾ.ಈಶ್ವರ ಸವಡಿ ಸೇರಿದಂತೆ ತಾಲ್ಲೂಕು ಆರೋಗ್ಯಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.