ಬಿಜೆಪಿ ಸಂಸದರು ಕೇಂದ್ರದಿಂದ ಬರಪರಿಹಾರ ಕೊಡಿಸಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ
: ರೈತರ ಬಗ್ಗೆ ಕಾಳಜಿ ಇದ್ದರೆ, ಬಿಜೆಪಿ ಸಂಸದರು ರಾಜ್ಯ ಸರ್ಕಾರವನ್ನು ಟೀಕಿಸುವ ಬದಲು ಕೇಂದ್ರದೊಂದಿಗೆ ಮಾತನಾಡಿ, ರಾಜ್ಯಕ್ಕೆ ಪರಿಹಾರಗಳನ್ನು ಬಿಡುಗಡೆಗೊಳಿಸರೆ ಉತ್ತಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬರಪರಿಹಾರ ಬಿಡುಗಡೆಯಲ್ಲಿ ಕೇಂದ್ರ ಸರ್ಕಾರ ವಿಳಂಬವೇಕೆ ತೋರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಕೇಂದ್ರ ಸರ್ಕಾರಕ್ಕೆ ಬರಪರಿಹಾರ 17,900 ಕೋಟಿ ರೂ.ಗಳನ್ನು ಕೋರಿ ಮನವಿ ಸಲ್ಲಿಸಿದೆ. ರಾಜ್ಯದ ಸಚಿವರ ಭೇಟಿಗೂ ಸಮಯ ನೀಡದೇ , ಪರಿಹಾರ ಮೊತ್ತವನ್ನು ಬಿಡುಗಡೆ ಮಾಡದೇ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದೆ. ಕೇಂದ್ರಸರ್ಕಾರ ನರೇಗಾ ಯೋಜನೆಯಡಿ ದಿನಗೂಲಿ ಕಾರ್ಮಿಕರ ವೇತನ 600 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಲ್ಲ ಎಂದರು.
ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆಗೆ ಚರ್ಚೆ :
ಕೇಂದ್ರ ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೆವಾಲ ಹಾಗೂ ವೇಣುಗೋಪಾಲ್ ಅವರು ರಾಜ್ಯಕ್ಕೆ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ನಾಯಕರು ರಾಜ್ಯಕ್ಕೆ ಆಗಮಿಸಿದ್ದಾರೆ. ಹಾಗೂ ಶಾಸಕರನ್ನು ಕೆಲವು ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಕ ಮಾಡುವ ಪ್ರಕ್ರಿಯೆಯೂ ಇದ್ದು, ಈ ಬಗ್ಗೆಯೂ ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ಜಿಲ್ಲೆಯ ಜನರ ಕಷ್ಟಗಳಿಗೆ ಜಿಲ್ಲಾಮಂತ್ರಿಗಳ ಸ್ಪಂದನೆ :
ಬರನಿರ್ವಹಣೆಗೆ ಸಂಬಂಧಿಸಿದಂತೆ ಯಾವ ಸಚಿವರೂ ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಎಲ್ಲಾ ಜಿಲ್ಲಾ ಮಂತ್ರಿಗಳು ತಮ್ಮ ಜಿಲ್ಲೆಗಳಿಗೆ ಭೇಟಿ ನೀಡಿ, ಜನರ ಅಹವಾಲುಗಳನ್ನು ಕೇಳಿ, ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರದಿಂದ ಕುಡಿಯುವ ನೀರಿಗೆ 900 ಕೋಟಿ ರೂ:
ರಾಜ್ಯಸರ್ಕಾರ ಕುಡಿಯುವ ನೀರಿನ ಬವಣೆ ನೀಗಿಸಲು 900 ಕೋಟಿ ಬಿಡುಗಡೆ ಮಾಡಿದೆ. ಜಿಲ್ಲೆಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಅನುದಾನ ನೀಡಿದ್ದು, ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಸಲ್ಲಿಸಿದ್ದಲ್ಲಿ, ಸರ್ಕಾರ ತಕ್ಷಣ ಅನುದಾನ ಒದಗಿಸಲಿದೆ ಎಂದರು.
ಕೃಷಿ ಪಂಪಸೆಟ್ ಮುಂದುವರೆಸಲಾಗುವುದು :
ಕೃಷಿ ಪಂಪಸೆಟ್ ಗಳಿಗೆ ಪೂರಕ ಸೌಲಭ್ಯಗಳು ರೈತರಿಗೆ ನಿಲ್ಲಿಸಲಾಗಿದೆ ಎಂಬುದಕ್ಕೆ ಉತ್ತರಿಸಿ, ಈ ವಿಚಾರ ಕೃಷಿ ಇಲಾಖೆಗೆ ಸಂಬಂಧಪಟ್ಟಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು. ಈ ಮುಂಚೆ ನೀಡುತ್ತಿದ್ದಂತೆ ಕೃಷಿ ಪಂಪಸೆಟ್ ಗಳಿಗೆ ಪೂರಕ ಸೌಲಭ್ಯಗಳನ್ನು ರೈತರಿಗೆ ಮುಂದುವರೆಸಲಾಗುವುದು ಎಂದು ತಿಳಿಸಿದರು.
ಬಿಜೆಪಿಯವರ ಹಗಲು ಕನಸು :
ತನಿಖಾ ಸಂಸ್ಥೆಗಳಿಂದ ಕಾಂಗ್ರೆಸ್ ನವರ ಭ್ರಷ್ಟಾಚಾರ ಬೆಳಕಿಗೆ ಬರುತ್ತಿರುವುದಾಗಿ ಯಡಿಯೂರಪ್ಪ ತಿಳಿಸಿರುವ ಬಗ್ಗೆ ಉತ್ತರಿಸಿ, ಇವೆಲ್ಲ ಸುಳ್ಳು ಆರೋಪಗಳು ಎಂದರು. ಬಿಜೆಪಿ ಶಾಸಕ ಬಸವರಾಜ ಯತ್ನಾಳ್ ಅವರು ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಹೇಳಿದ್ದರೆ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ ಎಂದರು.
ಸಿದ್ದರಾಮಯ್ಯರವರು ಮುಂಚಿನ ಆಡಳಿತದ ವೈಖರಿ ತೋರುತ್ತಿಲ್ಲ ಎಂಬ ಯಡಿಯೂರಪ್ಪನವರ ಹೇಳಿಕೆಗೆ ಉತ್ತರಿಸಿ, ಯಡಿಯೂರಪ್ಪನವರು ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಬಿಜೆಪಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತು. ವಿಧಾನಸಭೆಯಲ್ಲಿ ಅವರು ಕಣ್ಣೀರಿಟ್ಟಿದ್ದರು. ಅವರ ಪಕ್ಷದವರೇ ಅವರನ್ನು ಮನೆಗೆ ಕಳುಹಿಸಿದ್ದಾರೆ. ಅವರ ಹೇಳಿಕೆಗಳಿಗೆ ಏನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಸರ್ಕಾರದಿಂದ ಯಾರನ್ನೂ ಕಳಿಸೋಲ್ಲ ಕಾಂಗ್ರೆಸ್ ಶಾಸಕರು ದುಬೈಗೆ ಪ್ರವಾಸ ಹೋಗುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರ ಹಣದಲ್ಲಿ ಅವರು ಹೋಗುತ್ತಿದ್ದಾರೆ. ಸರ್ಕಾರದಿಂದ ನಾವು ಯಾರನ್ನೂ ಕಳಿಸೋಲ್ಲ ಎಂದರು.
ಐದು ವರ್ಷ ಆಡಳಿತ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಾವು ಐದು ವರ್ಷ ಆಡಳಿತ ಮಾಡುತ್ತೇವೆ. ಮತ್ತೆ ಚುನಾವಣೆಗೆ ಹೋಗುತ್ತೇವೆ. ಮತ್ತೆ ಜನ ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ರಮೇಶ್ ಜಾರಕಿಹೊಳಿ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅವರು ಸೋತು ಮನೆಯಲ್ಲಿರುವವರು. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅದಕ್ಕೆಲ್ಲಾ ಉತ್ತರಿಸಲಾಗುವುದಿಲ್ಲ ಎಂದರು.
ಬಿಜೆಪಿ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿ ಹೋಗಿದ್ದರೂ ಕೂಡ ಐದು ಗ್ಯಾರಂಟಿ ಅನುಷ್ಠಾನವಾಗಿದೆ
ನಾವು ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದ್ದೆವು. ಅದನ್ನು ಈಡೇರಿಸಿದ್ದೇವೆ. ಬಿಜೆಪಿ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿ ಹೋಗಿದ್ದರೂ ಕೂಡ ಐದು ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ ಎಂದರು
Comments are closed.