ಇಲಾಖಾ ನಿಯಮಗಳನುಸಾರ ಎಲ್ಲ ಕಾಮಗಾರಿಗಳನ್ನು, ಯೋಜನೆಗಳನ್ನು ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ ನಲಿನ್ ಅತುಲ್
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇಲಾಖೆಯಿಂದ ಅನುಮೋದನೆಗೊಂಡಿರುವ ಎಲ್ಲ ಕಾಮಗಾರಿ ಹಾಗೂ ಯೋಜನೆಗಳನ್ನು ಇಲಾಖೆಯ ನಿಯಮಗಳನುಸಾರ ಅನುಷ್ಠಾನಗೊಳಿಸಿ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
ಇಲಾಖೆಯಿಂದ ಎಸ್‌ಸಿ-ಎಸ್‌ಟಿ ಸಮುದಾಯದವರಿಗೆ ನೀಡಲಾಗುವ ಪ್ರವಾಸಿ ಟ್ಯಾಕ್ಸಿ ಯೋಜನೆಯು ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ಯೋಜನೆಯ ಲಾಭವನ್ನು ಒದಗಿಸಬೇಕು. ನಿರ್ದಿಷ್ಟ ಸಮುದಾಯದ ಫಲಾನುಭವಿಗಳ ಪಟ್ಟಿಯು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಲಭ್ಯವಿರುತ್ತದೆ. ಅವರೊಂದಿಗೆ ಸಮನ್ವಯ ಸಾಧಿಸಿ ಅರ್ಹ ಫಲಾನುಭವಿಗಳಿಗೆ ಟ್ಯಾಕ್ಸಿ ಯೋಜನೆಯ ಲಾಭ ಒದಗಿಸಿ ಎಂದು ಅವರು ಇಲಾಖೆಯ ಸಹಾಯಕ ನಿರ್ದೇಶಕರಿಗೆ ತಿಳಿಸಿದರು.
ಅದರಂತೆ ಇಲಾಖೆಯಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜಿಲ್ಲೆಯ ವಿವಿಧ ಪ್ರಮುಖ ದೇವಸ್ಥಾನ, ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಕಾಮಗಾರಿಗಳನ್ನು ಹಂಚಿಕೆ ಮಾಡಲಾಗಿದೆ. ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಅನುಷ್ಠಾನ ಏಜೆನ್ಸಿಗಳನ್ನು ನಿಗದಿಪಡಿಸಲಾಗಿದೆ. ಅನುಷ್ಠಾನ ಏಜೆನ್ಸಿಗಳು ಇಲಾಖೆಯ ನಿಯಮದಂತೆ ನಿಗದಿತ ಕಾಲಮಿತಿಯೊಳಗೆ, ಕ್ರಿಯಾಯೋಜನೆಯಂತೆ ಕಾಮಗಾರಿ ಪೂರ್ಣಗೊಳಿಸಬೇಕು. ಅನಗತ್ಯ ವಿಳಂಬ ಅಥವಾ ಕ್ರಿಯಾಯೋಜನೆಯಲ್ಲಿ ಬದಲಾವಣೆ ಅಥವಾ ಮರು ಆಡಳಿತಾತ್ಮಕ ಅನುಮೋದನೆಗೆ ಅವಕಾಶವಿಲ್ಲ. ಇದರಿಂದ ಸರ್ಕಾರದ ಹಣ ಪೋಲಾಗುವುದರ ಜೊತೆಗೆ ಅಭಿವೃದ್ಧಿ ಕಾರ್ಯವು ಕುಂಠಿತಗೊಳ್ಳುತ್ತದೆ ಎಂದು ಜಿಲ್ಲಾಧಿಕಾರಿಗಳು ಸಂಬAಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಬಾಕಿ ಇರುವ ಇಲಾಖಾ ಕಾಮಗಾರಿಗಳನ್ನು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಅನುಷ್ಠಾನ ಏಜೆನ್ಸಿಯ ಅಧಿಕಾರಿ ಜಂಟಿಯಾಗಿ ಪರಿಶೀಲನೆ ನಡೆಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಆರಂಭವಾಗದೇ ಇರುವ ಕಾಮಗಾರಿಗಳನ್ನು ಒಂದು ತಿಂಗಳ ಅವಧಿಯೊಳಗೆ ಆರಂಭಗೊಳಿಸಬೇಕು. ಇಲಾಖಾ ಹಂತದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿಕೊಂಡು, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಅದರಂತೆ ಬ್ರಾö್ಯಂಡ್ ಕೊಪ್ಪಳ ನಿರ್ಮಿಸುವ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ಸರ್ಕಾರದ ನಿಯಮಾವಳಿ ಪ್ರಕಾರ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಸಹಾಯಕ ಆಯುಕ್ತರಾದ ಕ್ಯಾ.ಮಹೇಶ ಮಾಲಗಿತ್ತಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ನಾಗರಾಜ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜು ತಳವಾರ, ಸೇರಿದಂತೆ ಲೀಡ್ ಬ್ಯಾಂಕ್ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಅನುಷ್ಠಾನ ಏಜೆನ್ಸಿಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
Comments are closed.