ವಿಧಾನಸಭಾ ಕ್ಷೇತ್ರವಾರು ಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ನಲಿನ್ ಅತುಲ್

Get real time updates directly on you device, subscribe now.

ಮತದಾರರ ಪಟ್ಟಿ ಪರಿಷ್ಕರಣೆ 2023 ಹಾಗೂ ಕರ್ನಾಟಕ ಈಶಾನ್ಯ ಪದವೀಧರರ ಮತದಾರರ ಪಟ್ಟಿ ಸಿದ್ಧತೆ

 ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯನ್ವಯ ಅಕ್ಟೋಬರ್ 27 ರ ಶುಕ್ರವಾರದಂದು ಜಿಲ್ಲೆಯ 05 ವಿಧಾನಸಭಾ ಕ್ಷೇತ್ರಗಳಾದ 60-ಕುಷ್ಟಗಿ, 61-ಕನಕಗಿರಿ, 62-ಗಂಗಾವತಿ, 63-ಯಲಬುರ್ಗಾ ಮತ್ತು 64-ಕೊಪ್ಪಳ ಇವುಗಳ ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಮತದಾರರ ಪಟ್ಟಿಗಳನ್ನು ಸಂಬAಧಪಟ್ಟ ಮತಗಟ್ಟೆಗಳಲ್ಲಿ ಮತ್ತು ತಹಶೀಲ್ದಾರ ಕಛೇರಿಗಳಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಹೇಳಿದರು.
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ 2023 ಹಾಗೂ ಕರ್ನಾಟಕ ಈಶಾನ್ಯ ಪದವೀಧರರ ಮತದಾರರ ಪಟ್ಟಿ ಸಿದ್ಧತೆ ಕುರಿತು ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ 1314 ಮತಗಟ್ಟೆಗಳಿದ್ದು, 570651 ಪುರುಷ ಮತದಾರರು, 576652 ಮಹಿಳಾ ಮತದಾರರು ಹಾಗೂ ಇತರೆ 49 ಸೇರಿದಂತೆ ಒಟ್ಟು 1147352 ಮತದಾರರು, 531 ಸೇವಾ ಮತದಾರರಿದ್ದಾರೆ. ಈಗ ಸಿದ್ದಪಡಿಸಲಾದ ಕರಡು ಮತದಾರರ ಪಟ್ಟಿಯನ್ವಯ 18-19 ವಯೋಮಾನದ ನೋಂದಣಿ ಮಾಡಿಕೊಂಡ ಮತದಾರರಲ್ಲಿ 21362 ಯುವಕರು ಹಾಗೂ 15671 ಯುವತಿಯರು, ಇತರೆ 03 ಸೇರಿದಂತೆ ಒಟ್ಟು 37036 ಯುವ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಯುವ ಮತದಾರರ ನೋಂದಣಿಗೆ ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವುದರ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ.  ಅದರಂತೆ ಒಟ್ಟು 05 ವಿಧಾನಸಭಾ ಮತಕ್ಷೇತ್ರಗಳಲ್ಲಿ 8237 ಪುರುಷ ಹಾಗೂ 5634 ಮಹಿಳೆಯರು ಸೇರಿದಂತೆ ಒಟ್ಟು 13871 ವಿಕಲಚೇತನ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಅ.27 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಪಟ್ಟಿ ಕುರಿತಂತೆ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 09 ರವರೆಗೆ ಕಾಲಾವಕಾಶ ನೀಡಲಾಗಿದೆ. ಹೆಚ್ಚಿನ ಪ್ರಮಾಣದ ಮತದಾರರ ನೋಂದಣಿಗಾಗಿ ಹಾಗೂ ಮತದಾನ ಮಾಡುವ ಕುರಿತಂತೆ ಜಾಗೃತಿ ಮೂಡಿಸಲು ನವೆಂಬರ್ 18, 19 ಹಾಗೂ ಡಿಸೆಂಬರ್ 02, 03 ರಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು. 2024ರ ಜನವರಿ 05 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ಚುನಾವಣಾ ಆಯೋಗದ ವೇಳಾಪಟ್ಟಿಯನ್ನು ತಿಳಿಸಿದರು.
ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಂಬAಧಪಟ್ಟ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿ.ಎಲ್.ಓ), ತಹಶೀಲ್ದಾರರು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಅಥವಾ ಸಹಾಯಕ ಆಯುಕ್ತರು ಹಾಗೂ ಮತದಾರರ ನೋಂದಣಾಧಿಕಾರಿಗಳು, ಕೊಪ್ಪಳ ಇವರಿಗೆ ನಿಗದಿತ ನಮೂನೆ-6 (ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ), ನಮೂನೆ-7 (ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು) ಮತ್ತು ನಮೂನೆ-8ರಲ್ಲಿ (ಮತದಾರರ ಪಟ್ಟಿಯಲ್ಲಿ ವಿವರಗಳನ್ನು ತಿದ್ದುಪಡಿಗಾಗಿ ಅಥವಾ ಸ್ಥಳಾಂತರಕ್ಕಾಗಿ) ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನವೆಂಬರ್ 18 ಮತ್ತು 19 ಹಾಗೂ ಡಿಸೆಂಬರ್ 02 ಮತ್ತು 03 ರಂದು ಹಮ್ಮಿಕೊಳ್ಳುವ ವಿಶೇಷ ಅಭಿಯಾನದ ದಿನದಂದು ಬೂತ್ ಮಟ್ಟದ ಅಧಿಕಾರಿಗಳು ತಮ್ಮ ಮತಗಟ್ಟೆಗಳಲ್ಲಿ ಹಾಜರಿದ್ದು, ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ನಿಗದಿತ ದಿನಗಳಂದು ಸಹ ಸಾರ್ವಜನಿಕರು ಬೂತ್ ಮಟ್ಟದ ಅಧಿಕಾರಿಗಳಿಗೆ ಅಥವಾ ಸಂಬAಧಪಟ್ಟ ತಹಶೀಲ್ದಾರ ಕಛೇರಿಗಳಲ್ಲಿ ಅರ್ಜಿಗಳನ್ನು (ನಮೂನೆ-6, 7 ಮತ್ತು 8) ಸಲ್ಲಿಸಬಹುದು. ಭಾರತ ಚುನಾವಣಾ ಆಯೋಗದ ಅಪ್ಲಿಕೇಶನ್- Voter helpline App     ಅಥವಾ  https://voters.eci.gov.in/     ವೆಬ್ ಪೋರ್ಟಲ್ ಮೂಲಕವೂ ಮತದಾರರ ನೋಂದಣಿಗೆ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಪ್ರಸ್ತುತ ಜಿಲ್ಲೆಯಲ್ಲಿ ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಗಳ ಸಿದ್ಧತೆ ಕಾರ್ಯ ಆರಂಭಗೊAಡಿದ್ದು, ಚುನಾವಣಾ ಆಯೋಗ ನಿಗದಿಪಡಿಸಿದ ದಿನಾಂಕದೊಳಗೆ ಪದವಿ ಪೂರ್ಣಗೊಳಿಸಿದ ಪದವೀಧರರು ನವೆಂಬರ್ 06 ರೊಳಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಬೇಕು. ನ.23 ರಂದು ಪದವೀಧರ ಮತದಾರರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನ.23 ರಿಂದ ಡಿಸೆಂಬರ್ 09 ರವರೆಗೆ ಅವಕಾಶ ನೀಡಲಾಗಿದೆ. ಅ.30 ರಂದು ಈ ಕುರಿತು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಡಿಸೆಂಬರ್ 30 ರಂದು ಪದವೀಧರರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ ಕೊಪ್ಪಳ 719, ಕುಷ್ಟಗಿ 420, ಗಂಗಾವತಿ 751, ಕಾರಟಗಿ 203, ಕನಕಗಿರಿ 92, ಯಲಬುರ್ಗಾ 281 ಹಾಗೂ ಕುಕನೂರು 125 ಸೇರಿದಂತೆ ಒಟ್ಟು 2591 ಪದವೀಧರರ ಮತದಾರರು ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಲು ಇನ್ನೂ ಕಾಲಾವಕಾಶ ಇರುವುದರಿಂದ ಜಿಲ್ಲೆಯ ಪದವೀಧರರು ಸ್ವಯಂ ಪ್ರೇರಿತರಾಗಿ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಈ ಮೂಲಕ ಮನವಿ ಮಾಡಿದರು.
ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅರ್ಜಿದಾರರು ಅರ್ಹತಾ ದಿನಾಂಕ 01.11.2023 ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 01.11.2020 ಕ್ಕಿಂತ ಮುಂಚೆ ಭಾರತದ ಯಾವುದೇ ವಿಶ್ವವಿದ್ಯಾಲಯದಿಂದ ಪದವೀಧರರಾಗಿರತಕ್ಕದ್ದು ಅಥವಾ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1950ರ ಪ್ರಕರಣ 27 ಉಪಪ್ರಕರಣ 3(ಎ)ರನ್ವಯ ಭಾರತ ಚುನಾವಣಾ ಆಯೋಗದ ಸಹಮತದೊಂದಿಗೆ ರಾಜ್ಯ ಸರ್ಕಾರವು ವಿಶ್ವವಿದ್ಯಾಲಯದ ಪದವಿಗೆ ತತ್ಸಮಾನವೆಂದು ನಿರ್ದಿಷ್ಟ ಪಡಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು. ದಿನಾಂಕ 01.11.2020 ಕ್ಕಿಂತಲೂ ಮೊದಲು ಪದವಿ ಪಡೆದಿರುವಂತಹ ಪದವೀಧರರು ನಿಗದಿಪಡಿಸಿದ ನಮೂನೆ 18 ರಲ್ಲಿ (ಭಾವಚಿತ್ರದೊಂದಿಗೆ) ಭರ್ತಿ ಮಾಡಿದ ಅರ್ಜಿಯೊಂದಿಗೆ ಕಡ್ಡಾಯವಾಗಿ ತಾವು ಉತ್ತೀರ್ಣರಾಗಿರುವ ಅಂಕಪಟ್ಟಿಯನ್ನು ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಮತ್ತು ಆಧಾರ್‌ಕಾರ್ಡ್, ಚುನಾವಣಾ ಗುರುತಿನ ಚೀಟಿಯನ್ನು ಹಾಗೂ ತಾವು ವಾಸಿಸುತ್ತಿರುವ ವಾಸಸ್ಥಳದ ದಾಖಲೆಗಳನ್ನು ಸ್ವಯಂ ಧೃಡೀಕರಿಸಿ ಅರ್ಜಿಯೊಂದಿಗೆ ದಿನಾಂಕ: 06.11.2023ರ ಒಳಗಾಗಿ ತಹಶೀಲ ಕಾರ್ಯಾಲಯದಲ್ಲಿ ಸಲ್ಲಿಸಬಹುದು. ಫಾರಂ-18ರ ಅರ್ಜಿಗಳನ್ನು ತಹಶೀಲ್ದಾರ ಕಾರ್ಯಾಲಯದಿಂದ ಪಡೆಯಬಹುದು ಅಥವಾ  https://ceo.karnataka.gov.in/342/forms/kn    ರ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅರ್ಹ ಪದವೀಧರರು ಹೆಚ್ಚಿನ ಆಸಕ್ತಿ ವಹಿಸಿ ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ನೋಂದಾಯಿಸಿಕೊAಡು, ಸುಭದ್ರ ಹಾಗೂ ಜನ ಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಎಲ್ಲಾ ಅರ್ಹ ಮತದಾರರಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೇಯ ಅವರು ಮಾತನಾಡಿ, ಮತದಾರರ ಪಟ್ಟಿಗೆ ಅರ್ಹ ಮತದಾರು ಹೆಸರು ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯ ಕಾಲೇಜುಗಳಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಮತದಾನದ ಮಹತ್ವದ ಕುರಿತು ವಿವಿಧ ಪ್ರಬಂಧ, ರಸಪ್ರಶ್ನೆ, ಪೇಂಟಿAಗ್, ಭಾಷಣ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ಯುವ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.  ಮತದಾರರ ನೋಂದಣಿ ಮಾತ್ರವಲ್ಲದೆ ನೋಂದಣಿಯಾದ ಮತದಾರರೆಲ್ಲರೂ ಶೇ.100 ರಷ್ಟು ಮತದಾನ ಮಾಡುವ ಕುರಿತು, ಆ ಮೂಲಕ ತಮ್ಮ ಹಕ್ಕು ಚಲಾಯಿಸುವ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಲಾಗುತ್ತದೆ. ಈ ಮೂಲಕ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾರರು ಮತದಾನದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಮಾಧ್ಯಮ ಪ್ರತಿನಿಧಿಗಳು, ಚುನಾವಣಾ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!