ದಸರಾ ಕವಿಗೋಷ್ಠಿ : ರಸವತ್ತಾಗಿ ಹೇಳುವುದೇ ಕಾವ್ಯ : ಮೆಣಸಗಿ

Get real time updates directly on you device, subscribe now.


ಗಂಗಾವತಿ : ರಸವತ್ತಾಗಿ ಹೇಳುವುದೇ ಕಾವ್ಯ ಎಂದು ಹಿರಿಯ ಸಾಹಿತಿ ನಿಜಲಿಂಗಪ್ಪ ಮೆಣಸಗಿ ಹೇಳಿದರು.
ನಗರದ ಲಯನ್ಸ್ ಕ್ಲಬ್‌ನಲ್ಲಿ ಕಾವ್ಯಲೋಕ ಸಂಘಟನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಸಂಯುಕ್ತವಾಗಿ ಆಯೋಜಿಸಿದ್ದ ೧೦೨ನೇ ದಸರಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾವ್ಯ ಹೃದಯ ಅರಳಿಸುತ್ತದೆ. ಕಾವ್ಯ ಶ್ರೀಮಂತವಾಗಿದೆ. ಕವಿ ಹೃದಯ ವೈಶಾಲ್ಯತೆಗೆ ಮಿತಿ ಇಲ್ಲ. ತಾಲೂಕಿನಲ್ಲಿ ಸಾಹಿತ್ಯ ಕೃಷಿ ಬಗ್ಗೆ ತಮಗೆ ಖುಷಿ ಇದೆ ಎಂದು ತಿಳಿಸಿದರು.
ಅಲ್ಲದೇ ಓಲೈಸಿ ಕಾವ್ಯ ರಚನೆ ಬೇಡ, ಕಾವ್ಯದಲ್ಲಿ ವಾಸ್ತವ ಸಂಗತಿ ಇರಲಿ. ಜ್ಞಾನ ಭಂಡಾರವಿದ್ದರೆ ಕಾವ್ಯ, ಕಥೆ ಹುಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಕಾವ್ಯ ರಚನೆ ಮಾಡುವ ಮೊದಲು ಸಾಹಿತಿಗಳ ಕೃತಿಗಳನ್ನು ಓದಬೇಕು ಎಂದು ಸಲಹೆ ನೀಡಿದರು.
ಕಥೆಗಾರ ರಾಘವೇಂದ್ರ ಮಂಗಳೂರು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಹಿರಿಯ ಸಾಹಿತಿಗಳ ಮಾರ್ಗದರ್ಶನ ಇಲ್ಲದೇ ಸಾಹಿತ್ಯ ರಚನೆ ಬೇಡ. ಕಾವ್ಯವೆಂದರೆ ಏನು ಎಂಬ ತಿಳುವಳಿಕೆ ಇಲ್ಲದೇ ಸಾಹಿತ್ಯ ರಚನೆ ಆಗುತ್ತಿರುವುದು ದುರಂತ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಇಂಗಳಗಿ ಮಾತನಾಡಿ, ಸಾಹಿತಿಗಳು ಶಿಕ್ಷಕರು ಇದ್ದಂತೆ. ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಿದರೆ, ಸಾಹಿತಿಗಳು ಸಾಹಿತ್ಯದ ಮೂಲಕ ಸಮಾಜ ತಿದ್ದುತ್ತಾರೆ ಎಂದರು.
ವಕೀಲ ಶರಣಪ್ಪ ಸಜ್ಜಿಹೊಲ ಮಾತನಾಡಿ, ರಸಾನುಭವ ಮೂಡಿಸಿ ಹೃದಯ ತಲುಪಿದರೆ ಕಾವ್ಯ ಸಫಲತೆ ಪಡೆಯುತ್ತದೆ. ಕೆಲವೇ ಶಬ್ಧಗಳಲ್ಲಿ ವಿಷಯ ಮಂಡಿಸುವುದೇ ಕಾವ್ಯ. ಭಾವನೆಗಳಿಂದ ಸಮಾಜಕ್ಕೆ ಅಭಿವ್ಯಕ್ತಿಗೊಳಿಸುವ ಶಕ್ತಿ ಕಾವ್ಯಕ್ಕಿದೆ ಎಂದರು.
ನರ್ಮದಾಭಾಯಿ ಕುಲ್ಕರ್ಣಿ, ಶಕುಂತಲಾ ನಾಯಕ, ಯು.ಆರ್.ಶಿವರುದ್ರಪ್ಪ, ಶಿವನಗೌಡ ವಡ್ಡರಟ್ಟಿ, ಮಹ್ಮದ್‌ಮಿಯಾ, ಮೈಲಾರಪ್ಪ ಬೂದಿಹಾಳ, ಶರಣಪ್ಪ ವಿದ್ಯಾನಗರ, ಭೀಮನಗೌಡ ಕೇಸರಟ್ಟಿ, ಶರಣಪ್ಪ ಮೆಟ್ರಿ, ನೀಲಮ್ಮ, ಶ್ಯಾಮಿದ್ ಲಾಠಿ, ಜಿ.ಎಸ್.ಸುರೇಶ, ರಗಡಪ್ಪ ಹೊಸಳ್ಳಿ, ಬಸವರಾಜ ಹೇರೂರು, ಸೋಮಶೇಖರ್ ಹೆಬ್ಬಾಳ, ಗೋಪಿನಾಥ ದಿನ್ನಿ ಕವನ ವಾಚಿಸಿದರು.
ಶಿಕ್ಷಕ ಸುಂಕಪ್ಪ, ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ಕಾವ್ಯಲೋಕ ಗೌರವ ಅಧ್ಯಕ್ಷ ಡಾ.ಶಿವಕುಮಾರ ಪಾಲ್ಗೊಂಡಿದ್ದರು. ಕಾವ್ಯಲೋಕ ಅಧ್ಯಕ್ಷ ಎಂ.ಪರಶುರಾಮ ಪ್ರಿಯ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ ಬೂದಿಹಾಳ ಸ್ವಾಗತಿಸಿ ನಿರೂಪಿಸಿದರು.

Get real time updates directly on you device, subscribe now.

Comments are closed.

error: Content is protected !!