ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ ಸಚಿವರ ಸಂಚಾರ: ನಾನಾ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಅಕ್ಟೋಬರ್ 21ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಯಲಬುರ್ಗಾ ಮತ್ತು ಕುಕನೂರ ತಾಲೂಕುಗಳಲ್ಲಿ ಸಂಚಾರ ನಡೆಸಿದರು.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರೊಂದಿಗೆ ಯಲಬುರ್ಗಾ ತಾಲೂಕಿನ ಮಸಬಿಹಂಚಿನಾಳ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾರಂಭೋತ್ಸವಕ್ಕೆ, ಮುಧೋಳದಲ್ಲಿ ಬಾಲಕೀಯರ ಸರ್ಕಾರಿ ಪ್ರೌಢಶಾಲೆ ಪ್ರಾರಂಭೋತ್ಸವಕ್ಕೆ ಹಾಗೂ ಕುಕನೂರ ತಾಲೂಕಿನ ಮಂಗಳೂರ ಗ್ರಾಮದಲ್ಲಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಪ್ರಾರಂಭೋತ್ಸವಕ್ಕೆ ವಿದ್ಯಕ್ತವಾಗಿ ಚಾಲನೆ ನೀಡಿದರು.
*ಸಾರ್ವಜನಿಕರಿಂದ ಮೆಚ್ಚುಗೆ:* ಕೊಪ್ಪಳ ಜಿಲ್ಲೆಯ ಕೌಶಲ್ಯಾಭಿವೃದ್ಧಿ ಕೇಂದ್ರದ
ಬಲವರ್ಧನೆಗೆ ಒತ್ತು ಕೊಡಲು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಆಗಿರುವ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಆರ್ ಪಾಟೀಲ ಅವರನ್ನು ಮತ್ತು
ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ ಅವರನ್ನು
ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಕಳೆದ ಸೆಪ್ಟೆಂಬರ್ ಮಾಹೆಯಲ್ಲಿ ಕೊಪ್ಪಳ ಜಿಲ್ಲೆಗೆ ಕರೆಯಿಸಿ ವಿಶೇಷ ಸಭೆ ಆಯೋಜಿಸಿದ್ದರು. ಇದರ ಬೆನ್ನಲ್ಲೇ ಶಿಕ್ಷಣ ಸಚಿವರಿಗೆ ಸಹ ಜಿಲ್ಲೆಗೆ ಆಹ್ವಾನಿಸಿ ನಾನಾ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ಕೊಡಿಸಿದ್ದು ಶ್ಲಾಘನೀಯ ಕಾರ್ಯ ಎಂದು ಸಾರ್ವಜನಿಕರು ಇದೆ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.
*ಕರ್ನಾಟಕ ರಾಜ್ಯ ಮಾದರಿ:*
ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮಸಬಹಂಚಿನಾಳ ಇವರಿಂದ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಸಮಾರಂಭವನ್ನು ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕರ್ನಾಟಕ ರಾಜ್ಯವು ಶಿಕ್ಷಣ ಕ್ಷೇತ್ರದಲ್ಲಿ ಇತರರಿಗೆ ಮಾದರಿಯಾಗುವಂತಹ ಕಾರ್ಯ ಮಾಡುತ್ತಿದೆ. ಮುಖ್ಯಮಂತ್ರಿಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಸಹ ವಿಶೇಷ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ತಿಳಿಸಿದರು.
ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ದೇವರ ಕೆಲಸ ಎಂದೇ ಭಾವಿಸಬೇಕು. ಈ ದಿಶೆಯಲ್ಲಿ ರಾಜ್ಯ ಸರ್ಕಾರವು ಕೆಲವು ವಿನೂತನ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದರು.
ಸಮಾಜದ ಸರ್ವಾಂಗೀಣ ಪ್ರಗತಿಯಲ್ಲಿ ಶಿಕ್ಷಣದ ಪಾತ್ರ ಸಹ ಅಷ್ಟೆ ಪ್ರಮುಖವಾಗಿದೆ ಎಂಬುದನ್ನರಿತು, ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಜಿಲ್ಲೆಯಲ್ಲಿ ವಿನೂತನವಾದ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ನಡೆಸುವುದು ಶ್ಲಾಘನೀಯ ಕಾರ್ಯ ಎಂದರು.
ಮಕ್ಕಳ ಕಲಿಕೆಗೆ ಯಾವುದೇ ರೀತಿಯಿಂದ ತೊಂದರೆಯಾಗದಂತೆ ಶಿಕ್ಷಕರ ನೇಮಕಾತಿಗೆ ಒತ್ತು ಕೊಡಲಾಗುವುದು ಎಂದು ಸಚಿವರು ತಿಳಿಸಿದರು.
ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಮಾತನಾಡಿ, ಸರ್ವರಿಗು ಸಮಬಾಳು ಸರ್ವರಿಗು ಸಮಪಾಲು ಎನ್ನುವ ತತ್ತ್ವದಡಿ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಹಲವಾರು ವಿನೂತನ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದರು. ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಇನ್ನು ಸಹ ಪ್ರೌಢಶಾಲೆಗಳು, ಕಾಲೇಜುಗಳಾಗಲು ಶಾಲಾ ಶಿಕ್ಷಣ ಇಲಾಖೆಯ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಶ್ರೀಶೈಲ ಎಸ್ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
Comments are closed.