ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಕಟ್ಟಡ ಕಾರ್ಮಿಕರನ್ನು ಸಂಘಟಿಸುವಲ್ಲಿ ಯಶಸ್ವಿಯಾದ ಕಾಮ್ರೇಡ್ ರಮೇಶ ಚಿಕೇನಕೊಪ್ಪ
ಕೊಪ್ಪಳ : ನಮ್ಮ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆಯನ್ನು ಹುಟ್ಟು ಹಾಕುವಾಗ ಎದುರಾದ ಸಮಸ್ಯೆಗಳು ಅಷ್ಟಿಷ್ಟಲ್ಲ. ಹೀಗೆ ಎದುರಾದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಕಟ್ಟಡ ಕಾರ್ಮಿಕರನ್ನು ಸಂಘಟಿಸುವಲ್ಲಿ ಯಶಸ್ವಿಯಾದವರು ಕಾಮ್ರೇಡ್ ರಮೇಶ ಚಿಕೇನಕೊಪ್ಪ ಎಂದು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ(ಎಐಟಿಯುಸಿ)ದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್ ಹೇಳಿದರು.
ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷರಾಗಿದ್ದ ರಮೇಶ್ ಪಿ. ಚಿಕೇನಕೊಪ್ಪ ನಿಧನ ಹೊಂದಿದ್ದರಿಂದ ಶ್ರದ್ಧಾಂಜಲಿ ಸಭೆಯಲ್ಲಿ ಒಂದು ನಿಮಿಷ ಮೌನ ಆಚರಣೆಗೆ ಸೂಚಿಸಿ ನಂತರ ಮಾತನಾಡಿದ ಬಸವರಾಜ್ ಶೀಲವಂತರ್ ಮುಂದುವರೆದು ರಮೇಶ ಇವರು ಯಾವತ್ತೂ ಬಡವರ. ದಲಿತರ. ಮಹಿಳೆಯರ. ಕಾರ್ಮಿಕ. ಸೌಹಾರ್ದತೆಯ ಪರವಾಗಿ ಬೀದಿಗಿಳಿದು ಹೋರಾಡಿದವರು. ಬಡ ಕುಟುಂಬಕ್ಕೆ ಸೇರಿದ ಇವರು ಕಮ್ಯೂನಿಸ್ಟ್ ಸಿದ್ದಾಂತದಲ್ಲಿ ನಂಬಿಕೆ ಇಟ್ಟವರು. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ)ದ ಜಿಲ್ಲಾ ಕಮಿಟಿಯ ಅಧ್ಯಕ್ಷರಾಗಿ ಕಾರ್ಮಿಕರ ನೇತೃತ್ವವನ್ನು ವಹಿಸಿ ನಿರಂತರವಾಗಿ ಹೋರಾಟಗಳನ್ನು ರೂಪಿಸಿ. ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ದಿಟ್ಟ ನಾಯಕ ರಮೇಶ ಚಿಕೇನಕೊಪ್ಪ ಅವರ ಅಗಲಿಕೆಯು ಕಾರ್ಮಿಕ ಚಳುವಳಿಗೆ ಹಿನ್ನಡೆಯಾದಂತಾಗಿದೆ ಎಂದು ಶೋಕ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ)ದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ:ಕೆ.ಎಸ್. ಜನಾರ್ಧನ್ ಮಾತನಾಡಿ ರಮೇಶ್ ಪಿ.ಚಿಕೇನಕೊಪ್ಪ ಸಂಘಟನೆಯ ಕಟ್ಟಡ ಕಾರ್ಮಿಕರಿಗೆ ಹಗಲು ರಾತ್ರಿ ಎನ್ನದೆ ಶ್ರಮಿಸಿದ್ದಾರೆ. ಅವರ ಹೆಸರು ಉಳಿವಿಗಾಗಿ ಪ್ರತಿ ವರ್ಷ ಎಸ್.ಎಸ್.ಎಲ್.ಸಿ. ಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ನಮ್ಮ ಕಟ್ಟಡ ಕಾರ್ಮಿಕರ ಸಂಘದಲ್ಲಿಯ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಾ: ರಮೇಶ್ ಪಿ.ಚಿಕೇನಕೊಪ್ಪ ಹೆಸರಿನಲ್ಲಿ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸುವ ಯೋಜನೆ ಸಂಘಟನೆಯಿಂದ ಹಮ್ಮಿಕೊಳ್ಳಲು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ತುಕಾರಾಮ ಬಿ. ಪಾತ್ರೋಟಿ ಮಾತನಾಡಿ ಕಟ್ಟಡ ಕಾರ್ಮಿಕರಿಗೆ ಬಹಳ ಕಾಳಜಿಯಿಂದ ಸಾಕಷ್ಟು ಕೆಲಸಗಳನ್ನು ಮಾಡಿರುವ ರಮೇಶ್ ಚಿಕೇನಕೊಪ್ಪ ಅವರ ಕುಟುಂಬಕ್ಕೆ ದೇವರು ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಆಶಿಸುತ್ತೇನೆ ಎಂದರು.
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ ಸಂಘಟನೆ ಪ್ರಾರಂಭಿಸಲು ಅನೇಕ ತೊಂದರೆಗಳು ಎದುರಾದರೂ ಅದನ್ನೆಲ್ಲಾ ಮೀರಿ ರಮೇಶ್ ಚಿಕೇನಕೊಪ್ಪ. ಬಸವರಾಜ್ ಶೀಲವಂತರ್ ಮತ್ತು ನಾನು 2006ರಲ್ಲಿ ಪೊಲೀಸ್ ಠಾಣೆ ವರೆಗೂ ಹೋಗಿ ಸಂಘಟನೆ ಕಟ್ಟಿದ್ದೇವೆ. ರಮೇಶ್ ಚಿಕೇನಕೊಪ್ಪ ಅವರು 8ನೇ ತರಗತಿಯಿಂದ ಕಟ್ಟಡ ನಿರ್ಮಾಣದಲ್ಲಿ ಸಹಾಯಕರಾಗಿ ದುಡಿಯುತ್ತ ಪಿಯುಸಿ ವರೆಗೂ ಬರುವ ಹೊತ್ತಿಗೆ ಸಮರ್ಥ ಮೇಸ್ತ್ರಿಯಾಗಿ ರೂಪಗೊಂಡಿದ್ದರು. ನಮ್ಮ ಸಂಘದ ಮೇಸ್ತ್ರಿಗಳು ಮತ್ತು ಕಟ್ಟಡ ಮಾಲೀಕರ ನಡುವೆ ವ್ಯಾಜ್ಯಗಳ ಬಂದಾಗ ಕಟ್ಟಡದ ಅಳತೆ ಮಾಡಿ ಮಾಲೀಕರಿಂದಲೇ ಲೆಕ್ಕ ಮಾಡಿಸಿದಾಗ ಇಬ್ಬರ ಮಧ್ಯದಲ್ಲಿ ಆದ ಒಪ್ಪಂದಕಿಂತ ಹೆಚ್ಚು ಮೊತ್ತದ ಹಣದ ಲೆಕ್ಕ ನೋಡಿ ಮೊದಲು ಮಾಡಿಕೊಂಡ ಒಪ್ಪಂದದಂತೆ ಪೂರ್ಣ ಪ್ರಮಾಣದ ಹಣ ಮಾಲೀಕರಿಂದ ಕೊಡಿಸುವಂತಹ ಅನೇಕ ಪ್ರಕರಣಗಳನ್ನು ಬಗೆಹರಿಸುವಲ್ಲಿ ನಾನೂ ಭಾಗಿಯಾಗಿದ್ದೆ. ಬೆಳಿಗ್ಗೆ ಮತ್ತು ರಾತ್ರಿ ವೇಳೆ ಅನೇಕ ಹಳ್ಳಿಗಳಿಗೆ ಸುತ್ತಾಡಿ ಅವರ ಜೊತೆ ಗ್ರಾಮ ಘಟಕಗಳನ್ನು ರಚಿಸಿದ್ದೇವೆ ಪ್ರಮಾಣಿಕ ಮತ್ತು ನಿಷ್ಠಾವಂತ ನಾಯಕನನ್ನು ಕಳೆದುಕೊಂಡಿದ್ದೇವೆ ಎಂದು ನೋವಿನಿಂದ ನುಡಿದರು.
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ತಾಲೂಕಾ ಸಂಚಾಲಕ ನೂರ್ ಸಾಬ್ ಹೊಸಮನಿ ಮಾತನಾಡಿ ನಾವು ಅನೇಕ ಬಾರಿ ನಮ್ಮ ಹಳ್ಳಿಯಿಂದ ದೂರವಾಣಿ ಮೂಲಕ ಮಾತನಾಡಿ ಕೊಪ್ಪಳಕ್ಕೆ ಬರುತ್ತಿದ್ದೇವೆ ಕೆಲಸವಿದೆ ಎಂದಾಗ ಬರಲಿಕ್ಕೆ ಹೇಳಿ. ಎಸ್.ಎ. ಗಫಾರರೊಂದಿಗೆ ಬಂದು ಭೇಟಿಯಾಗಿ ಕಾರ್ಮಿಕ ಇಲಾಖೆಯಲ್ಲಿ ಸರಳವಾಗಿ ಕೆಲಸ ಮಾಡಿಸಿ ಕೊಡುತ್ತಿದ್ದರು. ನಮ್ಮ ಸಂಘಟನೆ ಜೊತೆಗೆ ಇನ್ನೂ ಅನೇಕ ವರ್ಷ ಇರಬೇಕಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ಗಾಳೆಪ್ಪ ಮುಂಗೋಲಿ ಮಾತನಾಡಿ ಶೋಷಿತ ದಲಿತ ಕುಟುಂಬದಿಂದ ಬಂದ ರಮೇಶ್ ಚಿಕೇನಕೊಪ್ಪ ಅವರು ಪ್ರತಿಯೊಂದು ಸಭೆ. ಹೋರಾಟಗಳಲ್ಲಿ ಭಾಗವಹಿಸುತ್ತಿದ್ದರು. ಪ್ರಮಾಣಿಕ ನಾಯಕನನ್ನು ಕಳೆದುಕೊಂಡಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಂಘಟನೆಯ ನಾಯಕ ಈರಪ್ಪ ಚಾಕ್ರಿ. ಕವಲೂರ ಗ್ರಾಮ ಘಟಕದ ಶಮಶುದ್ದೀನ್ ಮಕಾಂದಾರ್. ಜಿಲ್ಲಾ ಉಪಾಧ್ಯಕ್ಷ ನಿಂಗಜ್ಜ ನಾಯಕ್ ಟಣಕನಕಲ್ ಮುಂತಾದವರು ಮಾತನಾಡಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಕವಲೂರು ಗ್ರಾಮ ಘಟಕದ ಅಧ್ಯಕ್ಷ ಶರಣಯ್ಯ ಅಬ್ಬಿಗೇರಿ ಮಠ. ಮಾಜಿ ಅಧ್ಯಕ್ಷ ಹುಸೇನ್ ಮೌಲಾ ಸಾಬ್ ತಹಶೀಲ್ದಾರ್. ದಿಡ್ಡಿಕೇರಾ ಬಡಾವಣೆ ಘಟಕದ ಅಧ್ಯಕ್ಷ ಸಾಧಿಕ್ ಅಲಿ ದಫೇದಾರ್ ಪೈಲ್ವಾನ್. ಉಪಾಧ್ಯಕ್ಷ ವಸಂತ ಬಿಜಿಕಲ್. ಮಿಟ್ಟಿಕೇರಾ ಬಡಾವಣೆ ಘಟಕದ ಅಧ್ಯಕ್ಷ ಶಿವಪ್ಪ ದನಕಾರ್.ತಾಲೂಕಾ ಸಂಚಾಲಕ ಮೌಲಾ ಹುಸೇನ್ ಹಣಗಿ. ನಗರ ಸಂಚಾಲಕ ಜಾಫರ್ ಕುರಿ. ಶ್ರೀ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಹಿತರಕ್ಷಣಾ ಸಂಫ (ಎಐಟಿಯುಸಿ ಸಂಯೋಜಿತ)ದ ಮುಖಂಡ ಅಶೋಕ್ ಭಾವಿಮನಿ. ಗೈಬು ಸಾಬ್ ಮಾಳೆಕೊಪ್ಪ. ಶಿವಪ್ಪ ಹಡಪದ್. ಮಖಬೂಲ್ ರಾಯಚೂರು. ಗವಿಸಿದ್ದಪ್ಪ ಚಿಕೇನಕೊಪ್ಪ ಮುಂತಾದವರು ಭಾಗವಹಿಸಿದ್ದರು.
Comments are closed.