ಹೃದಯ ಆರೋಗ್ಯ ಜಾಗೃತಿಗಾಗಿ ಕೊಪ್ಪಳದಲ್ಲಿ ಸಾವಿರಾರು ಜನರ ಹೆಜ್ಜೆ

0

Get real time updates directly on you device, subscribe now.

Kannadanet News

ಕೊಪ್ಪಳ, ಅಕ್ಟೋಬರ್ 03, 2026: ವಿಶ್ವ ಹೃದಯ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಹೃದಯದ ಆರೋಗ್ಯ ಹಾಗೂ ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಸಿಪಿಆರ್ (CPR) ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕೆ.ಎಸ್. ಆಸ್ಪತ್ರೆ, ಕೊಪ್ಪಳ ವತಿಯಿಂದ ಶನಿವಾರ ಬೆಳಿಗ್ಗೆ “ವಾಕಥಾನ್–2026” ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನದಂತಹ ತುರ್ತು ಸಂದರ್ಭಗಳಲ್ಲಿ ಸಿಪಿಆರ್ (CPR)ನ ಮಹತ್ವದ ಕುರಿತು ಜಾಗೃತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕೆ.ಎಸ್. ಆಸ್ಪತ್ರೆಯ ಕನ್ಸಲ್ಟೆಂಟ್ ಅನಸ್ತೇಶಿಯಾಲಜಿಸ್ಟ್ ಡಾ. ರವಿಕುಮಾರ್ ಎಂ. (Dr. Ravikumar M., Consultant Anaesthesiologist) ಅವರು ಸಿಪಿಆರ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟು, ತುರ್ತು ಸಂದರ್ಭದಲ್ಲಿ ವ್ಯಕ್ತಿಯ ಜೀವ ಉಳಿಸಲು ಸಿಪಿಆರ್ ಅನ್ನು ಹೇಗೆ ಮತ್ತು ಯಾವ ಸಂದರ್ಭದಲ್ಲಿ ನೀಡಬೇಕು ಎಂಬುದರ ಕುರಿತು ಸಾರ್ವಜನಿಕರಿಗೆ ಪ್ರಾಯೋಗಿಕವಾಗಿ ವಿವರಿಸಿದರು.

ಬಳಿಕ ಗಣ್ಯರು ಧ್ವಜ ಬೀಸುವ (Flag-off) ಮೂಲಕ ವಾಕಥಾನ್‌ಗೆ ಅಧಿಕೃತ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಬಲೂನ್‌ಗಳನ್ನು ಆಕಾಶಕ್ಕೆ ಹಾರಿಸುವ ಮೂಲಕ ಹೃದಯ ಆರೋಗ್ಯ ಜಾಗೃತಿಯ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕೆ.ಎಸ್. ಆಸ್ಪತ್ರೆಯ ಮುಖ್ಯಸ್ಥರು , ಕೀಲು ಮತ್ತು ಮೂಳೆ ತಜ್ಞರಾದ ಡಾ. ಬಸವರಾಜ್ ಎಸ್. ಕ್ಯಾವಟರ್ ಮಾತನಾಡಿ, “ಹೃದಯವು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇಂದಿನ ಒತ್ತಡದ ಜೀವನಶೈಲಿ, ದೈಹಿಕ ಚಟುವಟಿಕೆಯ ಕೊರತೆ, ಅನಾರೋಗ್ಯಕರ ಆಹಾರ ಪದ್ಧತಿ ಸೇರಿದಂತೆ ಹಲವು ಅಂಶಗಳು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಪ್ರತಿಯೊಬ್ಬರೂ ಪ್ರತಿದಿನ ನಡೆಯುವುದು, ನಿಯಮಿತ ವ್ಯಾಯಾಮ ಮಾಡುವುದು, ಸಮತೋಲಿತ ಆಹಾರ ಸೇವಿಸುವುದು ಹಾಗೂ ನಿಯಮಿತ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಬೇಕು.

ಹೃದಯಾಘಾತದಂತಹ ತುರ್ತು ಸಂದರ್ಭದಲ್ಲಿ ಸರಿಯಾದ ಸಮಯದಲ್ಲಿ ನೀಡುವ ಸಿಪಿಆರ್ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಆದ್ದರಿಂದ ವೈದ್ಯಕೀಯ ಸಿಬ್ಬಂದಿಯಷ್ಟೇ ಅಲ್ಲದೆ ಸಾಮಾನ್ಯ ಸಾರ್ವಜನಿಕರೂ ಮೂಲಭೂತ ಸಿಪಿಆರ್ ಕುರಿತು ಅರಿವು ಹೊಂದುವುದು ಅಗತ್ಯ. ‘ಹೃದಯದ ಆರೋಗ್ಯಕ್ಕಾಗಿ ಹೆಜ್ಜೆ ಹಾಕೋಣ’ ಎಂಬ ಸಂದೇಶ ಕೇವಲ ಇಂದಿನ ವಾಕಥಾನ್‌ಗೆ ಸೀಮಿತವಾಗದೆ ಪ್ರತಿಯೊಬ್ಬರ ದೈನಂದಿನ ಜೀವನದ ಭಾಗವಾಗಬೇಕು.”ಎಂದು ತಿಳಿಸಿದರು.

*ನಗರದ ಪ್ರಮುಖ ಮಾರ್ಗಗಳಲ್ಲಿ ಜಾಗೃತಿ ನಡಿಗೆ*
ವಾಕಥಾನ್ ಅಶೋಕ ಸರ್ಕಲ್‌ನಿಂದ ಆರಂಭಗೊಂಡು ಮಾರ್ಕೆಟ್ ರಸ್ತೆ – ಗಡಿಯಾರ ಕಂಬ – ಸಿದ್ದೇಶ್ವರ ಸರ್ಕಲ್ (ಶಾರದಾ ಟಾಕೀಸ್) – ಸಾಲಾರ್ ಜಂಗ್ ರಸ್ತೆ – ಮುಂಡರಗಿ ಭೀಮರಾಯ ವೃತ್ತ – ಗಂಜ್ ಸರ್ಕಲ್ ಮೂಲಕ ಕೆ.ಎಸ್. ಆಸ್ಪತ್ರೆ, ಕೊಪ್ಪಳ ತಲುಪಿತು.

ವಾಕಥಾನ್‌ನಲ್ಲಿ ಹಿರಿಯರು, ಕಿರಿಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಭಾಗವಹಿಸಿ, ಹೃದಯ ಆರೋಗ್ಯಕ್ಕೆ ಸಂಬಂಧಿಸಿದ ಜಾಗೃತಿ ಫಲಕಗಳು ಮತ್ತು ಘೋಷಣೆಗಳೊಂದಿಗೆ ಸಾರ್ವಜನಿಕರಿಗೆ ಆರೋಗ್ಯಕರ ಜೀವನಶೈಲಿಯ ಸಂದೇಶ ಸಾರಿದರು.

ಕಾರ್ಯಕ್ರಮದಲ್ಲಿ ಹಿರಿಯ ವಯಸ್ಸಿನ ಭಾಗವಹಿಸುವವರು, ಕಿರಿಯ ವಯಸ್ಸಿನ ಭಾಗವಹಿಸುವವರು, ಅತ್ಯುತ್ತಮ ಫಲಕ (Best Placard), ಅತ್ಯುತ್ತಮ ಘೋಷಣೆ (Best Slogan) ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಶೇಷ ಗೌರವ ನೀಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಸಂಸ್ಥೆಗಳನ್ನೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಭಾಗವಹಿಸಿದವರಿಗೆ ಕೆ.ಎಸ್. ಆಸ್ಪತ್ರೆ ವತಿಯಿಂದ ಟಿ-ಶರ್ಟ್ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಹೇಮಲತಾ ನಾಯಕ, ಶ್ರೀ ಈಶ್ವರ ಸವಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ, ಕೊಪ್ಪಳ; ಡಾ. ರುದ್ರೇಶ್ ಮೆಳ್ಳಿಕೇರಿ, ಹೃದಯ ರೋಗ ತಜ್ಞರು, ಕೆ.ಎಸ್. ಆಸ್ಪತ್ರೆ, ಕೊಪ್ಪಳ; ಡಾ. ಧಾನರೆಡ್ಡಿ, ನಿವೃತ್ತ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ; ಶ್ರೀ ವೆಂಕಟೇಶ್ ರಾಥೋಡ್, ಸಹಾಯಕ ಔಷಧ ನಿಯಂತ್ರಕರು, ಕೊಪ್ಪಳ; ಶ್ರೀ ಮೌನೇಶ್ ಪತ್ತಾರ, ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜೆಸ್ಕಾಂ, ಕೊಪ್ಪಳ; ಶ್ರೀಮತಿ ಮಂಜುಳಾ ವಿಶ್ವನಾಥ, ಕಾರ್ಮಿಕ ನಿರೀಕ್ಷಕರು, ಕೊಪ್ಪಳ; ಶ್ರೀ ಶಿವಯ್ಯ ಬಿ. ಸ್ವಾಮಿ ಹಾಗೂ ಶ್ರೀ ಉದಯ್ ಕುಲಕರ್ಣಿ ಸೇರಿದಂತೆ ವಿವಿಧ ಗಣ್ಯರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಾಂಶುಪಾಲರು ಮತ್ತು ಉಪನ್ಯಾಸಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ವೈದ್ಯರು, ಆರೋಗ್ಯ ಸಿಬ್ಬಂದಿ, ಕೆ.ಎಸ್. ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಾಕಥಾನ್‌ಗೆ ಬೆಂಬಲ ನೀಡಿದರು.

*“ಬನ್ನಿ… ಹೃದಯದ ಆರೋಗ್ಯಕ್ಕಾಗಿ ಹೆಜ್ಜೆ ಹಾಕೋಣ – ಆರೋಗ್ಯಕರ ಕೊಪ್ಪಳಕ್ಕಾಗಿ ಒಂದಾಗಿ ನಡೆಯೋಣ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಹೃದಯದ ಆರೋಗ್ಯದ ಮಹತ್ವದ ಕುರಿತು ಜಾಗೃತಿ ಮೂಡಿಸಿತು.*

Get real time updates directly on you device, subscribe now.

Leave A Reply

Your email address will not be published.

error: Content is protected !!