ಮರು ಪರಿಶೀಲನಾ ಕಾರ್ಯದಲ್ಲಿ ಅಧಿಕಾರಿಗಳು, ಸಮಿತಿ ಸದಸ್ಯರು ಜಂಟಿಯಾಗಿ ಮನೆ ಮನೆಗೆ ಭೇಟಿ ನೀಡಿ: ರೆಡ್ಡಿ ಶ್ರೀನಿವಾಸ್
: ಗೃಹಲಕ್ಷ್ಮಿ ಯೋಜನೆಯ ಮರುಪರುಶೀಲನಾ ಕಾರ್ಯ ಆರಂಭವಾಗುತ್ತಿದ್ದು, ಈ ಕಾರ್ಯದಲ್ಲಿ ಅಧಿಕಾರಿಗಳು ಸಂಬಂಧಿಸಿದ ತಾಲೂಕಿನ ಸಮಿತಿ ಸದಸ್ಯರೊಂದಿಗೆ ಜಂಟಿಯಾಗಿ ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ಕಾರ್ಯ ಪೂರೈಸಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್ ಅವರು ಹೇಳಿದರು.ಸೋಮವಾರದಂದು ಜಿಲ್ಲಾ ಪಂಚಾಯತಿಯ ಜೆ .ಎಚ್ ಪಟೇಲ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆಯ ಮರು ಪರಿಶೀಲನಾ ಕಾರ್ಯದ ಕುರಿತು ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರು, ಸಿಡಿಪಿಓ ಗಳು ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಿಗೆ ತರಬೇತಿಯನ್ನು ನೀಡಲಾಗಿದೆ. ಅದರಂತೆ ಮರು ಪರಿಶೀಲನೆ ಕಾರ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಫಲಾನುಭವಿಗಳ ಮರು ಪರಿಶೀಲನೆ ನಡೆಸುವರು. ಈ ಕಾರ್ಯದಲ್ಲಿ ಸಂಬಂಧಿಸಿದ ತಾಲ್ಲೂಕಿನ ಸಮಿತಿ ಸದಸ್ಯರು ಜಂಟಿಯಾಗಿ ಪರಿಶೀಲನಾ ಕಾರ್ಯದಲ್ಲಿ ಪಾಲ್ಗೊಂಡು ಅರ್ಹ ಫಲಾನುಭವಿಗೆ ಯೋಜನೆಯ ಸೌಲಭ್ಯ ಒದಗಿಸಬೇಕು. ನಿಗದಿತ ನಮೂನೆಯಲ್ಲಿ ಅರ್ಹ ಫಲಾನುಭವಿಯ ವಿವರಗಳನ್ನು ಭರ್ತಿ ಮಾಡಿ, ಗುರು ಲಕ್ಷ್ಮಿ ಆ್ಯಪ್ ನಲ್ಲಿ ಫಲಾನುಭವಿಯ ವಿವರಗಳನ್ನು ದಾಖಲಿಸಬೇಕು. ವಿವರಗಳನ್ನು ದಾಖಲಿಸುವಾಗ ಎಚ್ಚರಿಕೆ ವಹಿಸಬೇಕು. ಈ ಮರು ಪರಿಶೀಲನ ಕಾರ್ಯವು ಕಡ್ಡಾಯವಾಗಿ ಈಗಾಗಲೇ ಯೋಜನೆಯ ಫಲಾನುಭವಿಗಳು ಆಗಿರುವ ಮಹಿಳೆಯರಿಗೆ ಮಾತ್ರ. ಇದರಲ್ಲಿ ಯಾವುದೇ ಹೊಸ ಅರ್ಜಿಯನ್ನು ಸಲ್ಲಿಸಲು ಅವಕಾಶವಿಲ್ಲ. ಮರು ಪರಿಶೀಲನ ಕಾರ್ಯದ ನಂತರ ಹೊಸ ಅರ್ಜಿಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.
ಮರುಪರಿಶೀಲನೆ ಸಂದರ್ಭದಲ್ಲಿ ಸದಸ್ಯರು ಹಾಗೂ ಅಧಿಕಾರಿಗಳು ತೆರಿಗೆ ಪಾವತಿಸುವ, ಜಿಎಸ್ಟಿ ಭರ್ತಿ ಮಾಡುವ ಮಹಿಳೆಯರನ್ನು (ಅಥವಾ ಮಹಿಳೆಯ ಪತಿ) ಹೊರತುಪಡಿಸಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಮಹಿಳೆಯರಿಗೆ ಸೂಕ್ತ ಮಾಹಿತಿಯನ್ನು ಹಾಗೂ ತಿಳುವಳಿಕೆಯನ್ನು ನೀಡಿ ವಿವರಗಳನ್ನು ಪಡೆಯಬೇಕು. ಯೋಜನೆಯನ್ನು ಬಿಟ್ಟುಕೊಡಲು ಆಸಕ್ತಿ ಹೊಂದಿರುವ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಆ್ಯಪ್ ನಲ್ಲಿ ಸಂಬಂಧಿಸಿದ ಆಯ್ಕೆಯನ್ನು ಬಳಸುವಂತೆ ತಿಳುವಳಿಕೆ ನೀಡಬೇಕು. ಈ ಆಯ್ಕೆಯನ್ನು ದಾಖಲಿಸುವಾಗ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಮರುಪರುಶೀಲನ ಕಾರ್ಯದಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಫಲಾನುಭವಿಗಳು ಕಡ್ಡಾಯವಾಗಿ ನಮ್ಮ ರಾಜ್ಯದವರಾಗಿರಬೇಕು ಹಾಗೂ ಅವರ ಬ್ಯಾಂಕ್ ಖಾತೆ ಕಡ್ಡಾಯವಾಗಿ ನಮ್ಮ ರಾಜ್ಯದಲ್ಲಿಯೇ ಇರಬೇಕು. ನಮ್ಮ ರಾಜ್ಯದ ಫಲಾನುಭವಿಯಾಗಿದ್ದು ಬೇರೆ ರಾಜ್ಯದಲ್ಲಿ ಬ್ಯಾಂಕ್ ಖಾತೆ ಹೊಂದಿದ್ದಲ್ಲಿ ಅಂತಹ ಫಲಾನುಭವಿಗೆ ಕಂತಿನ ಹಣ ಜಮೆ ಆಗುವುದಿಲ್ಲ. ಜಂಟಿ ಖಾತೆ ಹೊಂದಿರುವ ಹಾಗೂ ಸಾಲದ ಖಾತೆ ಹೊಂದಿರುವ ಫಲಾನುಭವಿಯ ಖಾತೆಗಳಿಗೆ ಯೋಜನೆಯ ಹಣ ಜಮೆ ಆಗುವುದಿಲ್ಲ. ಆದ್ದರಿಂದ ಇಂತಹ ಖಾತೆ ಹೊಂದಿರುವ ಮಹಿಳೆಯರಿಗೆ ಪ್ರತ್ಯೇಕ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವಂತೆ ಸೂಕ್ತ ತಿಳುವಳಿಕೆ ನೀಡಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಗೃಹಲಕ್ಷ್ಮಿ ಯೋಜನೆಯಲ್ಲಿ ಜೂನ್ ವರೆಗೂ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗಿದೆ. ಜುಲೈ ತಿಂಗಳ ಹಣ ಈ ವಾರದಲ್ಲಿ ಜಮೆಯಾಗುತ್ತದೆ. ಆಗಸ್ಟ್ ಹಾಗೂ ಸೆಪ್ಟೆಂಬರ್ ಕಂತು ಗಳ ಡಿಬಿಟಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ಸದ್ಯ ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಇ- ಕೆ ವೈ ಸಿ ಮಾಡಿಸಲು ಅಕ್ಟೋಬರ್ 20ರವರೆಗೆ ಕಾಲವಕಾಶ ನೀಡಲಾಗಿದೆ. ನಮ್ಮ ಭಾಗದ ಬಹುತೇಕ ಜನ ದುಡಿಮೆ ಉದ್ದೇಶದಿಂದ ಬೆಂಗಳೂರು ಅಥವಾ ಬೇರೆ ರಾಜ್ಯಗಳಿಗೆ ಗುಳೇ ಹೋಗಿರುವುದರಿಂದ ಅವರು ತಮ್ಮ ಗ್ರಾಮಗಳಿಗೆ ಬಂದು ಖುದ್ದಾಗಿ ಈ ಕೆವೈಸಿ ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ಆನ್ಲೈನ್ ಮೂಲಕ ಇ-ಕೆ ವೈ ಸಿ ಮಾಡಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಇದರೊಂದಿಗೆ ಸರ್ವಸಮಸ್ಯೆಯು ಹೆಚ್ಚಾಗಿರುವುದರಿಂದ ಇವೆರಡು ಸಮಸ್ಯೆಗಳನ್ನು ಪರಿಹರಿಸಿ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಅನ್ನಭಾಗ್ಯ ಯೋಜನೆಯಡಿ ಅಕ್ಟೋಬರ್ 20 ರೊಳಗೆ ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರ ಇಕೆವೈಸಿ ಮಾಡಿಸಬೇಕು. ಈ ಬಗ್ಗೆ ಆಹಾರ ಇಲಾಖೆಯ ತಾಲೂಕು ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಅಗತ್ಯ ಕ್ರಮ ವಹಿಸಬೇಕು. ಇಕೆವೈಸಿ ಕುರಿತಂತೆ ಸಾರ್ವಜನಿಕರಿಗೆ ಅನಗತ್ಯವಾಗಿ ಸತಾಯಿಸುವ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯಾದ್ಯಂತ ಗೃಹಲಕ್ಷ್ಮಿ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಅದರಂತೆ ನಮ್ಮ ಜಿಲ್ಲೆಯಲ್ಲಿ 7,086 ಫಲಾನುಭವಿಗಳು ಮೃತಪಟ್ಟಿದ್ದು, ಅದರಲ್ಲಿ 2,664 ಫಲಾನುಭವಿಗಳ ಖಾತೆಗೆ ಮರಣ ಹೊಂದಿದ ನಂತರ 13,709 ಕಂತುಗಳಲ್ಲಿ ಒಟ್ಟು ರೂ.2,74,18,000/- ಮೊತ್ತವು ಮರಣ ಹೊಂದಿದ ನಂತರ ಜಮೆಯಾದ ಧನಸಹಾಯವಾಗಿರುತ್ತದೆ. ಇದರಲ್ಲಿ ರೂ.89,88,608/- ಗಳನ್ನು ಸರ್ಕಾರಕ್ಕೆ ಮರುಪಾವತಿಸಲಾಗಿದೆ. ಮರಣ ಹೊಂದಿದ ಫಲಾನುಭವಿಗಳ ಕುಟುಂಬದ ಸದಸ್ಯರು ಮೃತರ ಖಾತೆಯಿಂದ ಡ್ರಾ ಮಾಡಿಕೊಂಡಿರುವ ಮೊತ್ತ ರೂ.1,84,29,392/- ಆಗಿದ್ದು, ಸರ್ಕಾರಕ್ಕೆ ಮರುಪಾವತಿಸುವಂತೆ ಕುಟುಂಬ ಸದಸ್ಯರಿಗೆ ಸೂಕ್ತ ತಿಳುವಳಿಕೆ ನೀಡಿ, ಚಲನ್‌ಗಳನ್ನು ಸೃಜಿಸಿ ವಿತರಿಸಲಾಗಿದೆ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಶಕ್ತಿ ಯೋಜನೆಯಡಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದಲ್ಲಿ ಜೂನ್ 2023 ರಿಂದ ಆಗಸ್ಟ್ 2026 ರವರೆಗೆ 12,61,56,715 ವಯಸ್ಕರು ಹಾಗೂ 49,91,128 ಮಕ್ಕಳು ಸೇರಿದಂತೆ ಒಟ್ಟು 13,11,47,843 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದಕ್ಕಾಗಿ ವಿಭಾಗದಿಂದ ರೂ.4,91,47,96,990/- ಗಳನ್ನು ವೆಚ್ಚ ಮಾಡಲಾಗಿದೆ ಎಂದು ಅಧ್ಯಕ್ಷರು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಜೆಸ್ಕಾಂ ಕೊಪ್ಪಳ ವಿಭಾಗದಲ್ಲಿ 1,39,966 ಹಾಗೂ ಗಂಗಾವತಿ ವಿಭಾಗದಲ್ಲಿ 1,46,764 ಫಲಾನುಭವಿಗಳು ಸೇರಿದಂತೆ ಒಟ್ಟು 2,86,730 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಶೇ.98.92 ರಷ್ಟು ಫಲಾನುಭವಿಗಳ ನೋಂದಣಿ ಪೂರ್ಣಗೊಂಡಿದ್ದು, ಆಗಸ್ಟ್ 2023 ರಿಂದ ಆಗಸ್ಟ್ 2026 ರವರೆಗೆ ಒಟ್ಟು ರೂ.455.3 ಕೋಟಿ ಗಳ ಸಬ್ಸಿಡಿಯನ್ನು ಬಿಡುಗಡೆ ಮಾಡಲಾಗಿದೆ. ಬಾಕಿ ಇರುವ ಫಲಾನುಭವಿಗಳ ಸರ್ವೇ ಕಾರ್ಯವನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಯುವನಿಧಿ ಯೋಜನೆಯಡಿ ಡಿಸೆಂಬರ್ 2023 ರಿಂದ ಸೆಪ್ಟೆಂಬರ್ 18, 2026 ರವರೆಗೆ 16,054 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಒಟ್ಟು ರೂ.45,49,90,500/- ಗಳ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಜಮೆ ಮಾಡಲಾಗಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸೆಪ್ಟೆಂಬರ್ 2026 ರವರೆಗೆ ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ಅನ್ನಭಾಗ್ಯ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ನಿಯಮಾನುಸಾರ ಪಡಿತರ ವಿತರಣೆಗೆ ಕ್ರಮ ವಹಿಸಿ.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ ಮಾತನಾಡಿ, ಸದ್ಯದಲ್ಲಿಯೇ ಗೃಹ ಲಕ್ಷ್ಮಿ ಆ ಆ್ಯಪ್ ಅನ್ನು ಜಾರಿಗೊಳಿಸಲಾಗುವುದು. ಫಲಾನುಭವಿಗಳು ಇದರ ಮೂಲಕ ಮರುಪರಿಶೀಲನ ಕಾರ್ಯದಲ್ಲಿ ಪಾಲ್ಗೊಳ್ಳಬಹುದು. ಈಗಾಗಲೇ ಇ-ಕೆ ವೈಸಿಗಾಗಿ ಇರುವ ಸರ್ವ ಸಮಸ್ಯೆಯನ್ನು ಬಗೆಹರಿಸಲು ಸಂಬಂಧಿಸಿದ ತಾಂತ್ರಿಕ ತಂಡಕ್ಕೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಎಸ್ .ಬಿ ಖಾದ್ರಿ, ಮಂಜುನಾಥ್ ಗೊಂಡಬಾಳ, ಅಮರೇಶಪ್ಪ ಶರಣಪ್ಪ ಗಾಂಜಿ, ನಾಗರಾಜ್ ಅರಳಿ, ಸದಸ್ಯರಾದ ಬಾಲಚಂದ್ರ ಎಸ್, ಸೋಮನಾಥ ದೊಡ್ಡಮನಿ, ಫಾರೂಕ್ ದಲಾಯತ್, ಶಕುಂತಲಾ ಬಿಎಂ, ಹಜರತ್ ಹುಸೇನ್, ಆನಂದ್ ಹಾಸಲಕರ್, ದೇವಪ್ಪ ಬಾವಿಕಟ್ಟಿ, ವೆಂಕಟೇಶ್ ಬಾಬು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.