ಪರಿಸರ ಇಲಾಖೆಯಿಂದ ಜನತೆಗೆ ಮತ್ತೊಂದು ದ್ರೋಹ – ಸಿವಿಸಿ ಆರೋಪ

Get real time updates directly on you device, subscribe now.

ಕನ್ನಡನೆಟ್ ನ್ಯೂಸ್

ಕೊಪ್ಪಳ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಪ್ಪಳದ ಪ್ರಾದೇಶಿಕ ಕಚೇರಿಯ ಉನ್ನತ ಅಧಿಕಾರಿಗಳು ಖಾಸಗಿ ಕೈಗಾರಿಕಾ ಘಟಕದೊಂದಿಗೆ ಶಾಮೀಲಾಗಿ ಆ ಘಟಕದ ವಿಸ್ತರಣೆಗೆ ಸಹಾಯ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ ಆರೋಪಿಸಿದ್ದಾರೆ.

“ಕನಕಾಪುರ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಕಂಪನಿಯು ಹೆಚ್ಚುವರಿ 66.2 ಹೆಕ್ಟೆರ್ ಭೂಮಿಯಲ್ಲಿ ಘಟಕವನ್ನು ವಿಸ್ತರಿಸಿ ಉತ್ಪಾದನಾ ಸಾಮರ್ಥ್ಯವನ್ನು 0.7 ಟನ್ ನಿಂದ 0.9 ಟನ್ ಗೆ ಏರಿಸುವ ಉದ್ದೇಶ ಹೊಂದಿದೆ. ಕೊಪ್ಪಳದಲ್ಲಿ ಕೈಗಾರಿಕಾ ಘಟಕಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದರೂ ಅವುಗಳನ್ನು ನಿರ್ಲಕ್ಷಿಸಿ, ನಿಯಮಾವಳಿಗಳನ್ನು ಗಾಳಿಗೆ ತೂರಿ ಮಂಡಳಿಯ ಅಧಿಕಾರಿಗಳು ಸದರಿ ಕೈಗಾರಿಕಾ ಘಟಕಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ,” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ನಿಯಮಾವಳಿಗಳ ಪ್ರಕಾರ ರಾಜ್ಯಮಟ್ಟದ ಪರಿಸರ ಆಘಾತ ಅಧ್ಯಯನ ಪ್ರಾಧಿಕಾರದಿಂದ ಪರಿಸರ ವಿಮೋಚನಾ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ಇದಕ್ಕಾಗಿ ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು. ಸಭೆ ಕಡ್ಡಾಯವಾಗಿ ಘಟಕ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳದಲ್ಲಿ ನಡೆಯಬೇಕು. ಇದನ್ನು ಅಧಿಕಾರಿಗಳು ಉಲ್ಲಂಘಿಸಿರುವ ದಾಖಲೆಗಳು
ಲಭ್ಯವಾಗಿವೆ,” ಎಂದು ಹೇಳಿದ್ದಾರೆ.

ತನ್ನ ಕಚೇರಿಯ ಆವರಣದಲ್ಲಿ ಸಭೆ ಜರುಗಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಸಭೆ ನಡೆಸುವ ಜವಾಬ್ದಾರಿ ಹೊತ್ತ ಮಂಡಳಿಯು ಸಭೆಯನ್ನು ಕಾರಟಗಿ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದೆ. ಕನಕಪುರಕ್ಕೂ ನಂದಿಹಳ್ಳಿ ಗ್ರಾಮಕ್ಕೂ ಏನು ಸಂಬಂಧ? ಕೊಪ್ಪಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆ ಹಾಗೂ ಇಲ್ಲಿನ ಜನ ಸಭೆಗೆ ಬಾರದೇ ಇರಲಿ ಎಂಬ ಕಾರಣಕ್ಕೆ ನಿಯಮಾವಳಿಯನ್ನು ಉಲ್ಲಂಘಿಸಲಾಗಿದೆ. ಕಾಟಾಚಾರಕ್ಕೆ ಸಭೆ ನಡೆಸಿ ಹಾಗೂ ಯಾರಿಂದಲೂ ವಿರೋಧ ವ್ಯಕ್ತವಾಗದಂತೆ ನೋಡಿಕೊಂಡು ಕಂಪನಿಗೆ ಅಗತ್ಯ ಇರುವ ಪರಿಸರ ವಿಮೋಚನಾ ಪತ್ರವನ್ನು ನೀಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಎರಡು ದಶಕಗಳಿಂದಲೂ ವಿವಿಧ ಕಂಪನಿಗಳ ಜೊತೆ ಶಾಮೀಲಾಗಿ ಅಧಿಕಾರಿಗಳು ಕಾನೂನುಗಳನ್ನು ಉಲ್ಲಂಘಿಸಿದ್ದರಿಂದಲೇ
ಸಾವಿರಾರು ಎಕರೆ ಪ್ರದೇಶದಲ್ಲಿ ಉತ್ಪಾದನಾ ಘಟಕಗಳು ತಲೆಯೆತ್ತಿವೆ. ಈಗಾಗಲೇ ಕನಕಪುರ ಮತ್ತು ಸುತ್ತಮುತ್ತಲಿನ ಭಾಗಗಳು ನರಕ ಸದೃಶವಾಗಿವೆ. ಕಂಪನಿಯು ಅನೈತಿಕ ಮಾರ್ಗದ ಮೂಲಕ ಪರವಾನಿಗೆ ಪಡೆದು
ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಂಡರೆ ಕೊಪ್ಪಳದಲ್ಲಿ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ಎರಡು ವರ್ಷಗಳ ಹಿಂದೆ ನಾವು ಕೇಂದ್ರ ಸರಕಾರದ ಇಲಾಖೆಗಳ ಜೊತೆಗೆ ಸಂಪರ್ಕ ಸಾಧಿಸಿದ ಪರಿಣಾಮವಾಗಿ ಕೇಂದ್ರದ ತಂಡ ಕೊಪ್ಪಳಕ್ಕೆ ಆಗಮಿಸಿ ಉತ್ಪಾದನಾ ಘಟಕಗಳಿಂದ ಉಲ್ಲಂಘನೆಯಾಗಿರುವ ಕಾನೂನುಗಳು ಹಾಗೂ ಪರಿಸರದ ಮೇಲೆ ಉಂಟಾಗಿರುವ ಭೀಕರತೆಯ ಕುರಿತು ಕೆಲವೊಂದು ಆದೇಶಗಳನ್ನು ಹೊರಡಿಸಿತು. ಪ್ರಸ್ತುತ ಮಂಡಳಿಯ ಅನೈತಿಕ ಕೆಲಸವನ್ನು ಕೇಂದ್ರದ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗುವುದು. ಒಂದು ವೇಳೆ ವಿಸ್ತರಣೆಗೆ ಅವಕಾಶ ಸಿಕ್ಕರೆ ಗಿಣಿಗೇರಾ, ಕನಕಾಪುರ ಮತ್ತು ಸುತ್ತಲಿನ ರಸ್ತೆಗಳು ಸಂಪೂರ್ಣವಾಗಿ ಹದೆಗೆಡಲಿವೆ. ಕೃಷಿ ಚಟುವಟಿಕೆಗಳು ಸ್ಥಗಿತಗೊಂಡು
ಜನರು ಜೀವಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ವಿಸ್ತರಣೆಗೆ ಬೇಕಾದ ವರದಿಯಲ್ಲಿ ಕಂಪನಿ ಅನೇಕ ವಾಸ್ತವಂಶಗಳನ್ನು ಮುಚ್ಚಿಟ್ಟು ಕೊಪ್ಪಳದ ಜನತೆಗೆ ಭಾರಿ ವಂಚನೆ ಎಸಗಿದೆ.
ಭವಿಷ್ಯದಲ್ಲಿ ಸಮಸ್ಯೆ ಉಲ್ಬಣವಾಗುವ ಮೊದಲೇ ಜನ ಬೀದಿಗಿಳಿಯ ಬೇಕು,” ಎಂದು ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!