ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಆದ್ಯತೆ: ಶಾಸಕ ಕೆ. ರಾಘವೇಂದ್ರ ಹಿಟ್ನಾಳ

7 ಕೋಟಿ ವೆಚ್ಚದಲ್ಲಿ ಬಾಲಕರ ವಸತಿ ನಿಲಯ ನಿರ್ಮಾಣಕ್ಕೆ ಅಡಿಗಲ್ಲು
ಕೊಪ್ಪಳ, ಸೆ.18: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಕೊಪ್ಪಳ ನಗರದ ಪಾನಸ್ಕರ ನಗರದಲ್ಲಿ 7 ಕೋಟಿ ವೆಚ್ಚದಲ್ಲಿ ಬಾಲಕರ ವಸತಿ ನಿಲಯದ ನೂತನ ಕಟ್ಟಡಕ್ಕೆ ಸನ್ಮಾನ್ಯ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಅಡಿಗಲ್ಲು ನೆರವೇರಿಸಿದರು.
ನಂತರ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು, ಸಮಾಜದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಗುಣಮಟ್ಟದ ವಸತಿ ಸೌಲಭ್ಯ ಒದಗಿಸುವುದು ಅತ್ಯಂತ ಮುಖ್ಯವಾಗಿದೆ. ವಿದ್ಯಾರ್ಥಿಗಳು ವಾಸ್ತವ್ಯದ ಸಮಸ್ಯೆಗಳಿಂದಾಗಿ ತಮ್ಮ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಸರ್ಕಾರದ ವತಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
₹7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ನೂತನ ವಸತಿ ನಿಲಯವು ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಸುರಕ್ಷಿತ ವಾತಾವರಣವನ್ನು ಒದಗಿಸುವ ಉದ್ದೇಶ ಹೊಂದಿದೆ. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಅಗತ್ಯತೆಗಳಿಗೆ ಅನುಗುಣವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇದರಿಂದ ದೂರದ ಗ್ರಾಮೀಣ ಪ್ರದೇಶಗಳಿಂದ ಬಂದು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದರು.
ಶಿಕ್ಷಣಕ್ಕೆ ಮೂಲಸೌಕರ್ಯವೇ ಬಲ :
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತಮ ವಾತಾವರಣ ಹಾಗೂ ಅಗತ್ಯ ಮೂಲಸೌಕರ್ಯಗಳು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಶಾಲಾ-ಕಾಲೇಜುಗಳು ಹಾಗೂ ವಸತಿ ನಿಲಯಗಳ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸುವ ಕಾರ್ಯ ಮುಂದುವರಿದಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ಕಳೆದ 13 ವರ್ಷಗಳಲ್ಲಿ ವಿವಿಧ ಇಲಾಖೆಯಡಿಯಲ್ಲಿ ಸುಮಾರು 25ಕ್ಕೂ ಅಧಿಕ ಹಾಸ್ಟೆಲ್ ಗಳನ್ನು ತರುವ ಕೆಲಸ ಮಾಡಿದ್ದೇವೆ ಎಂದರು.
ಈ ವೇಳೆ ಕೊಪ್ಪಳ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್, ಗವಿಸಿದ್ದಪ್ಪ ಕರಡಿ, ಖತೀಬ್ ಬಾಷು ಸಾಬ್, ಶಿವಕುಮಾರ್ ಶೆಟ್ಟರ್, ಶಿವರೆಡ್ಡಿ ಭೂಮಕ್ಕನವರ್, ಅಜ್ಜಪ್ಪ ಕೊಪ್ಪಳ, ಕಿಶೋರಿ ಬೂದನೂರು, ಮಲ್ಲು ಪೂಜಾರ್,ಸುರೇಶ ದಾಸರೆಡ್ಡಿ, ರಾಘು ನರಗುಂದ,ಚೆನ್ನಪ್ಪ ವಾಲ್ಮೀಕಿ, ವೆಂಕಟೇಶ್ ಈಳಿಗೇರ್, ಅಕ್ಬರ್ ಪಲ್ಟಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಶನ್ : ಶಾಸಕ ಕೆ. ರಾಘವೇಂದ್ರ ಹಿಟ್ನಾಳ 7 ಕೋಟಿ ವೆಚ್ಚದಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದರು.