ಜನಸ್ಪಂದನೆ ಪಡೆದ ಜೆಡಿಎಸ್ ‘ನ್ಯಾಯದ ನಡಿಗೆ’ : ಪಾದಯಾತ್ರೆಯ ಮೊದಲ ದಿನ ಹರಿದು ಬಂದ ಜನ ಸಾಗರ
ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಕಾಂಗ್ರೆಸ್ ದುರಾಡಳಿತದ ವಿರುದ್ಧ ಛಾಟಿ ಬೀಸಿದ ಮುಖಂಡರು
ಕೊಪ್ಪಳ: ಕೊಪ್ಪಳವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಎರಡು ದಿನಗಳ ‘ನ್ಯಾಯಕ್ಕಾಗಿ ನಡೆ’ ಪಾದಯಾತ್ರೆ ಮಂಗಳವಾರ ಮುಂಜಾನೆ ಬೆಳಗಟ್ಟಿಯಿಂದ ಪ್ರಾರಂಭವಾಯಿತು.
ಪಾದಯಾತ್ರೆಗೆ ಬೆಳಗಟ್ಟಿಯ ಕನಕರಾಯ ದೇವಸ್ಥಾನ – ಮುಸ್ತಫಾ ಖಾದ್ರಿ
ದರ್ಗಾ ಆವರಣದಲ್ಲಿ ಚಾಲನೆ ನೀಡಲಾಯಿತು.
ಪಕ್ಷದ ಗೌರವಾಧ್ಯಕ್ಷ ಈಶಪ್ಪ ಮಾದಿನೂರು, ಸಿ ವಿ ಚಂದ್ರಶೇಖರ್, ಓಬಿಸಿ ಘಟಕದ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ ಮತ್ತು ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಹಿಟ್ನಾಳ್ ಪಾದಯಾತ್ರೆಯ ಮಹತ್ವ ವಿವರಿಸಿದರು.
ನೂರಾರು ಜನ ಪಾದಯಾತ್ರೆಯಲ್ಲಿ ಹಟ್ಟಿ ಕ್ರಾಸ್ ಮೂಲಕ ರಘುನಾಥನಹಳ್ಳಿಯ ಕಡೆಗೆ ಹೆಜ್ಜೆ ಹಾಕಿದರು. ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಮಾಜಿ ಶಾಸಕ ರಾಜ ವೆಂಕಟಪ್ಪ ನಾಯಕ ಅಲ್ಲಿ ಪಾದಯಾತ್ರೆಯನ್ನು ಕೂಡಿಕೊಂಡರು. ಸಿ ವಿ ಚಂದ್ರಶೇಖರ್ ಹಾಗೂ ಅವರ ಪಾದಯಾತ್ರೆಯ ತಂಡದವರನ್ನು ಸನ್ಮಾನಿಸಿ ಕೊಪ್ಪಳ ತಾಲೂಕಿನ ಜನರಿಗಾಗಿ ಹಮ್ಮಿಕೊಂಡಿರುವ ಈ ಹೋರಾಟ ಯಶಸ್ವಿಯಾಗಲಿ ಎಂದು ಹಾರೈಸಿದರು.
ಅಳವಂಡಿಗೆ ಸಾಗುವ ಮಾರ್ಗದಲ್ಲಿ ಒಣಗಿದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು ನಾಯಕರು ಭೇಟಿಯಾಗಿ ಸಂವಾದಿಸಿದರು. ಬರಗಾಲ ಹಾಗೂ ಸರಕಾರದ ನಿರ್ಲಕ್ಷತೆಯಿಂದ ರೈತರಿಗೆ ಉಂಟಾಗಿರುವ ಸಮಸ್ಯೆಗಳನ್ನು ರೈತರು ಮುಖಂಡರ ಗಮನಕ್ಕೆ ತಂದರು.
ಅಳವಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮರುಳರಾಧ್ಯ ಶಿವಚಾರ್ಯರು ಮಹಾಸ್ವಾಮಿಜಿ ಆಶೀರ್ವಚನ ನೀಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ನಾಡಗೌಡ ಮತ್ತು ನಾಯಕ್ ಅವರು ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಅದಕ್ಷತೆ ಮತ್ತು ಸರಕಾರದ ನಿರಾಸಕ್ತಿಯನ್ನು ಖಂಡಿಸಿದರು. ಪ್ರತಿಯೊಂದು ಸಮಸ್ಯೆಗೂ ಕೇಂದ್ರ ಸರಕಾರದ ಕಡೆಗೆ ಬೆರಳು ತೋರಿಸುವ ರಾಜ್ಯ ಸರ್ಕಾರದ ನಿಲುವನ್ನು ಟೀಕಿಸಿದರು.
ಜೆಡಿಎಸ್ ನಾಯಕರಿಗೆ ಸಾಮಾನ್ಯ ಜ್ಞಾನ ಇಲ್ಲ ಎಂದು ಪಾದಯಾತ್ರೆಯ ಕುರಿತು ಶಾಸಕರು ವ್ಯಂಗ್ಯವಾಡಿದ್ದು ಖಂಡನಾರ್ಹ ಎಂದು ಸಿ ವಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಅಳವಂಡಿಯಿಂದ ಕಂಪ್ಲಿ ಮಾರ್ಗವಾಗಿ ಸಾಗಿದ ಮುಖಂಡರು ಮೊರನಾಳ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಿದರು. ಗುಣಮಟ್ಟದ ವಿದ್ಯುತ್ ಪೂರೈಕೆಯ ಕೊರತೆಯಿಂದ ರೈತರು ಮತ್ತು ಜನಸಾಮಾನ್ಯರ ಮೇಲೆ ಆಗಿರುವ ಪರಿಣಾಮವನ್ನು ಈಶಪ್ಪ ಮಾದಿನೂರು ವಿವರಿಸಿದರು. ವಿದ್ಯುತ್ ಮತ್ತು ನೀರು ಪೂರೈಕೆ ಸರಕಾರದ ಆದ್ಯ ಕರ್ತವ್ಯವಾಗಿದ್ದು ಇವುಗಳನ್ನು ಪೂರೈಸುವಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಮೊರನಾಳ ಗ್ರಾಮದ ರೈತ ಲಕ್ಷ್ಮಪ್ಪ ಮಗಳದ ಅವರ ಆಹ್ವಾನದ ಮೇರೆಗೆ ಅವರ ಮೂರುವರೆ ಎಕರೆ ಜಮೀನಿನಲ್ಲಿ ಒಣಗಿದ ಬೆಳೆಯನ್ನು ವೀಕ್ಷಿಸಿದರು. ತಮಗೆ ಆಗಿರುವ ನಷ್ಟದ ಕುರಿತು ಮಗಳದ ವಿವರಿಸಿದರು.
ಮೊರನಾಳ ಹೊರ ವಲಯದ ಜಮೀನುಗಳಲ್ಲಿ ರೈತ ಮಹಿಳೆಯರು ಹಾಗೂ ಯುವಕರೊಂದಿಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಹ ಭೋಜನ ನಡೆಸಿದರು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ತಮಗೆ ಆಗುತ್ತಿರುವ ಅನ್ಯಾಯವನ್ನು ಆ ಯುವಕರು ಮತ್ತು ಮಹಿಳೆಯರು ಎಳೆ ಎಳೆಯಾಗಿ ಬಿಡಿಸಿ ಇಟ್ಟರು. ಕಳೆದ 13 ವರ್ಷಗಳಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಒಮ್ಮೆಯೂ ಇತ್ತ ಕಡೆ ತಲೆ ಹಾಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರಕಾರದ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ತಮಗೆ ಸಿಗುವ ಕೂಲಿಯಲ್ಲಿ ವ್ಯತ್ಯಾಸವಾಗುತ್ತಿದೆ. ತಮಗೆ ನ್ಯಾಯ ಕೊಡಿಸಿ ಎಂದು ವಿನಂತಿಸಿದರು.
ಮೂರನಾಳ ಗ್ರಾಮದಿಂದ ಬೆಟಗೇರಿಗೆ ತೆರಳಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿನ ಸಂಗೊಳ್ಳಿ ರಾಯಣ್ಣ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ ಸಾರ್ವಜನಿಕ ಸಭೆ ನಡೆಸಿದರು.

ಗಂಗಾವತಿಯ ಮೈತ್ರಿ ಪಕ್ಷದ ಯುವ ಮುಖಂಡರಾದ ಸಂಗಮೇಶ್ ಸುಗ್ರೀವ ಮಾತನಾಡಿ ರೈತರನ್ನು ನಿರ್ಲಕ್ಷಿಸಿದ ಕಾಂಗ್ರೆಸ್ ಸರಕಾರ ಮುಂದಿನ ಚುನಾವಣೆಗಳಲ್ಲಿ ನೆಲಕಚ್ಚುವುದು ಖಚಿತ, ಮೈತ್ರಿ ಪಕ್ಷ ಗೆಲುವು ನಿಶ್ಚಿತ ಎಂದು ಹೇಳಿದರು. ಕರಿಯಪ್ಪ ಹಾಲವರ್ತಿ, ಮೂರ್ತೆಪ್ಪ ಹಿಟ್ನಾಳ ಹಾಗೂ ಸಿ ವಿ ಚಂದ್ರಶೇಖರ್ ನ್ಯಾಯ ಸಿಗುವ ತನಕ ಜೆಡಿಎಸ್ ಹೋರಾಟ ಮಾಡಲಿದೆ. ಅಗತ್ಯವೆನಿಸಿದರೆ ಬೆಂಗಳೂರಿನ ತನಕ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು.
ಮಳೆ ಕೊರತೆಯಿಂದಾಗಿ ಸಂಪೂರ್ಣವಾಗಿ ಒಣಗಿರುವ ಬೆಟಗೇರಿ ಕೆರೆಯನ್ನು ವೀಕ್ಷಿಸಿ ಸ್ಥಳೀಯ ಜನರೊಂದಿಗೆ ಸಂವಾದ ನಡೆಸಿದರು.
ಬೆಟಗೇರಿಯಿಂದ ಬಿಸರಳ್ಳಿ ಗ್ರಾಮಕ್ಕೆ ತೆರಳಿ ಸಂಜೆ ಸಾರ್ವಜನಿಕ ಸಭೆ ನಡೆಸಿದರು. ರೈತರ ಬದುಕಿಗಾಗಿ ಹಮ್ಮಿಕೊಂಡ ಈ ಹೋರಾಟದಲ್ಲಿ ಸಾರ್ವಜನಿಕರ ಬೆಂಬಲ ಕೋರಿದರು.
ಮೊದಲನೇ ದಿನ ನಡೆದ ಪಾದಯಾತ್ರೆಗೆ ಜನರಿಂದ ಅದ್ಭುತ ಪೂರ್ವ ಸ್ಪಂದನೆ ದೊರೆಯಿತು. ಯುವಕರು ಮಹಿಳೆಯರು ಹಾಗೂ ರೈತರು ಭಾರಿ ಸಂಖ್ಯೆಯಲ್ಲಿ ಮುಖಂಡರೊಡನೆ ಹೆಜ್ಜೆ ಹಾಕಿದರು.
ಎರಡನೇ ದಿನದ ವಿವರ:
ಬುಧವಾರ ಮುಂಜಾನೆ ಎಂಟು ಗಂಟೆಗೆ ಬಿಸರಹಳ್ಳಿ ಗ್ರಾಮದಿಂದ ಆರಂಭವಾಗುವ ಪಾದಯಾತ್ರೆ ಹಿರೆ ಸಿಂದೋಗಿ, ಕಾಟ್ರಳ್ಳಿ, ಕೋಳೂರು ದದೇಗಲ್ ಗ್ರಾಮಗಳ ಮೂಲಕ ಸಾಗಿ ಕೊಪ್ಪಳ ಪ್ರವೇಶಿಸಲಿದೆ. ನೂರಾರು ಜನ ಪಾದಯಾತ್ರೆಯನ್ನು ಸೇರಿಕೊಳ್ಳಲಿದ್ದಾರೆ. ಬನ್ನಿಕಟ್ಟಿ, ಲೇಬರ್ ವೃತ್ತ, ಅಶೋಕ ವೃತ್ತ ಶ್ರೀ ಬಸವೇಶ್ವರ ವೃತ್ತದ ಮೂಲಕ ಜಿಲ್ಲಾಡಳಿತ ಕಚೇರಿಯ ಆವರಣವನ್ನು ತಲುಪಲಿದೆ.
ಸಂಜೆ ನಡೆಯುವ ಸಮಾರೋಪ ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸಿ ಬಿ ಸುರೇಶ್ ಬಾಬು, ಶಾಸಕರಾದ ಕರೆಮ್ಮ ನಾಯಕ್, ಶರಣಗೌಡ ಕಂದುಕೂರ ಹಾಗೂ ಪಕ್ಷದ ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ್ ಮಾತನಾಡಲಿದ್ದಾರೆ.
ಈ ಮುಖಂಡರ ನಿಯೋಗದ ನಾಯಕತ್ವ ವಹಿಸಿ ಸಿ ವಿ ಚಂದ್ರಶೇಖರ್ ಜಿಲ್ಲಾಧಿಕಾರಿ ಗಳಿಗೆ ಈ ಕೂಡಲೇ ಕೊಪ್ಪಳವನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಮತ್ತು ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಿದ್ದಾರೆ.b
Comments are closed.