ಅಧಿಕಾರಿಗಳು ಬದಲಾಗಬಹುದು, ಆದರೆ ಗ್ರಾಮಸ್ಥರ ಪ್ರೀತಿ–ವಿಶ್ವಾಸ ಎಂದಿಗೂ ಬದಲಾಗದು

ಕೊಪ್ಪಳ: ಗ್ರಾಮಕ್ಕೆ ಆಗಮಿಸುವ ಪ್ರತಿಯೊಬ್ಬ ಅಧಿಕಾರಿ, ಶಿಕ್ಷಕರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ಗ್ರಾಮಸ್ಥರು ತಮ್ಮ ಕುಟುಂಬದ ಸದಸ್ಯರಂತೆ ಕಂಡು ಗೌರವದಿಂದ ನಡೆದುಕೊಂಡಿದ್ದಾರೆ. ತಮ್ಮ ಕರ್ತವ್ಯದ ಅವಧಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳ ಕೊಡುಗೆ ಶ್ಲಾಘನೀಯವಾಗಿದೆ. ವಿಶೇಷವಾಗಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ಗ್ರಾಮಸ್ಥರಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ವರ್ಗಾವಣೆಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀಮತಿ ಡಾ.ವಿದ್ಯಾ ಹೇಳಿದರು.
ಅವರು ತಾಲೂಕಿನ ಹಳೇ ಗೊಂಡಬಾಳ ಗ್ರಾಮದಲ್ಲಿ ಕಾಮನ ಬಿಲ್ಲು ಶಿಕ್ಷಣ ಪ್ರೇಮಿಗಳ ಬಳಗದ ವತಿಯಿಂದ ವರ್ಗಾವಣೆಗೊಂಡ ಶಿಕ್ಷಕರು, ವೈದ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಆತ್ಮೀಯ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವರ್ಗಾವಣೆ ಸರ್ಕಾರಿ ನೌಕರರ ಸೇವೆಯ ಸಹಜ ಪ್ರಕ್ರಿಯೆಯಾಗಿದ್ದು, ಅವರು ಎಲ್ಲಿಗೆ ಹೋದರೂ ಹಳೇ ಗೊಂಡಬಾಳ ಗ್ರಾಮದ ಜನರ ಪ್ರೀತಿ ಮತ್ತು ವಿಶ್ವಾಸವನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು. ಮುಂದಿನ ದಿನಗಳಲ್ಲಿಯೂ ಗ್ರಾಮದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ನೂತನವಾಗಿ ಆಗಮಿಸಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ್ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆಗೆ ಗ್ರಾಮಸ್ಥರ ಸಹಕಾರವೂ ಅತ್ಯಂತ ಮುಖ್ಯ. ಅಧಿಕಾರಿಗಳು ಬದಲಾಗಬಹುದು, ಆದರೆ ಗ್ರಾಮಸ್ಥರೊಂದಿಗೆ ಬೆಳೆದ ಆತ್ಮೀಯ ಸಂಬಂಧ ಎಂದಿಗೂ ಬದಲಾಗುವುದಿಲ್ಲ. ಉತ್ತಮ ಸೇವೆ ಸಲ್ಲಿಸಿದವರನ್ನು ಗೌರವಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು, ಗ್ರಾಮಸ್ಥರ ಉತ್ತಮ ಸಹಕಾರದಿಂದ ತೃಪ್ತಿಕರವಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಗ್ರಾಮಸ್ಥರು ನೀಡಿದ ಪ್ರೀತಿ, ಸಹಕಾರವನ್ನು ಎಂದಿಗೂ ಮರೆಯಲಾಗದು ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮದ ಪ್ರಮುಖರಾದ ಹೊನ್ನಪ್ಪ ಮೆತಗಲ್ ನೆರವೇರಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್ ಬನ್ನಿಗೊಳ ಮಾತನಾಡಿ, ಅಧಿಕಾರಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ನಿಸ್ವಾರ್ಥವಾಗಿ ಸಲ್ಲಿಸಿದ ಸೇವೆಯಿಂದ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.
ಮುಖ್ಯ ಶಿಕ್ಷಕ ವೆಂಕಟೇಶ ಚಿತ್ರಗಾರ ಮಾತನಾಡಿ, ಗ್ರಾಮಸ್ಥರ ಪ್ರೀತಿ, ಗೌರವ ಹಾಗೂ ಸಹಕಾರದಿಂದ ಗುಣಾತ್ಮಕ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಶಂಕ್ರಪ್ಪ ಚಳಿಗೇರಿ, ಮಹೇಶ ಜಹಾಗೀರದಾರ, ಭೀಮಜ್ಜ ಇರಬಿ, ಸಿದ್ಧಯ್ಯ ವಸ್ತ್ರದ, ವಿರೂಪಾಕ್ಷಯ್ಯ ಬನ್ನಿಮಠ, ರಾಜಾಸಾಬ ಹಳ್ಳಿಗುಡಿ, ಶಂಕ್ರಪ್ಪ ಪ್ರಧಾನಿ, ಶಿಕ್ಷಕರಾದ ದೀಪಾ, ಬಸಲಿಂಗಮ್ಮ, ವಿಶಾಲಾಕ್ಷಿ, ಗವಿ ಹಡಪದ, ಬಸನಗೌಡ, ಪೊಲೀಸ್ ಪಾಟೀಲ್, ನೇತ್ರಾ, ನೀಲಮ್ಮ, ಭಾರತಿ, ಉಮಾಶ್ರೀ, ಶಿಲ್ಪಾ, ಮಲ್ಲಪ್ಪ ಬಳ್ಳಾರಿ ಸೇರಿದಂತೆ ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Comments are closed.