ಭೋವಿ ನಿಗಮದ ಅಧ್ಯಕ್ಷ ರಾಮಪ್ಪ ಎಂ ಕ್ಷೇತ್ರ ಭೇಟಿ; ಸಮುದಾಯದ ಜನರ ಪರಿಸ್ಥಿತಿ ಖುದ್ದು ಅವಲೋಕನ

Get real time updates directly on you device, subscribe now.

ಕೊಪ್ಪಳ ಜಿಲ್ಲೆಯ ಪ್ರವಾಸದಲ್ಲಿದ್ದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪ ಎಂ ಅವರು ಪೂರ್ವ ನಿಗದಿಯಂತೆ ಸೆ.9ರಂದು ಸಂಜೆ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮಕ್ಕೆ ಭೇಟಿ ನೀಡಿ ಸಮುದಾಯದ ಜನರು ವಾಸಿಸುವ ಪ್ರದೇಶವನ್ನು ಖುದ್ದು ಅವಲೋಕಿಸಿದರು.
ಹುಲಿಗಿ ಗ್ರಾಮದ ಐದನೇ ವಾರ್ಡ್‌ಗೆ ಭೇಟಿ ನೀಡಿದ ವೇಳೆ ನಿರ್ಮಾಣ ಹಂತದಲ್ಲಿರುವ ಭೋವಿ ಸಮಾಜದ ಸಮುದಾಯ ಭವನ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅಧ್ಯಕ್ಷರು, ಭೋವಿ ಸಮಾಜದ ಪ್ರತಿಯೊಬ್ಬರೂ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗಲು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
ನಮ್ಮ ಸಮಾಜದ ಜನರೇ ನನಗೆ ದೇವರು. ಸಮಾಜದ ಮಕ್ಕಳು ಉತ್ತಮ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯ ಉಜ್ವಲಗೊಳಿಸಬೇಕು. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ದೊರೆಯುವ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಭೋವಿ ಸಮಾಜದ ಪ್ರತಿಯೊಬ್ಬರೂ ಸಬಲರಾಗಬೇಕು ಎಂದು ಹೇಳಿದರು.
ಯುವಕರು ಸಮಾಜದ ಅಭಿವೃದ್ಧಿಯ ಜೊತೆಗೆ ತಮ್ಮ ಕುಟುಂಬದ ಅಭಿವೃದ್ಧಿಗೂ ಶ್ರಮಿಸಬೇಕು. ಮಹಿಳೆಯರು ಸ್ವಾವಲಂಬಿಗಳಾಗುವ ಉದ್ದೇಶದಿಂದ ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರ ತರಬೇತಿ ಸೇರಿದಂತೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ನಾನು ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಪ್ರವಾಸ ಕೈಗೊಂಡು ಸಮಾಜದ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದು, ಭೋವಿ ಅಭಿವೃದ್ಧಿ ನಿಗಮದ ಮೂಲಕ ಸಮಾಜದ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ನಿಗಮದಿಂದ ಆರು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ನಿಗದಿತ ಸಮಯದಲ್ಲಿ ಅರ್ಜಿಗಳನ್ನು ಆಹ್ವಾನಿಸಿದಾಗ ಅರ್ಹರು ಅರ್ಜಿ ಸಲ್ಲಿಸಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾಧ್ಯಕ್ಷ ರವಿ ಪೂಜಾರ, ತಾಲೂಕಾಧ್ಯಕ್ಷ ಗಾಳೆಪ್ಪ ಗಂಗಾವತಿ, ಭೋವಿ ನಿಗಮದ ಅಧಿಕಾರಿ  ಪುಷ್ಪಲತಾ, ಭೋವಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿ ಪರಶಪ್ಪ ಹೆಚ್., ಬಸವರಾಜ, ವೆಂಕಟೇಶ ಅಗಳಕೇರಿ, ರಮೇಶ ಡ್ಯಾಂ, ಪಂಪಾಪತಿ ಕಾರಟಗಿ, ದುರುಗಪ್ಪ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!