ಕೊಪ್ಪಳ, ಕುಷ್ಟಗಿ, ಯಲಬುರ್ಗಾ ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಲು ಕಂದಾಯ ಸಚಿವರಿಗೆ ಡಾ. ಬಸವರಾಜ್ ಕ್ಯಾವಟರ್ ಪತ್ರ

0

Get real time updates directly on you device, subscribe now.

ಕೊಪ್ಪಳ: ಕೊಪ್ಪಳ, ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಡಾ. ಬಸವರಾಜ್ ಎಸ್. ಕ್ಯಾವಟರ್ ಅವರು ಪತ್ರ ಬರೆದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಯ ಪ್ರಮುಖ ತಾಲ್ಲೂಕುಗಳನ್ನು ಕೈಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಶುಕ್ರವಾರ ಬಿಜೆಪಿ ಡಾ. ಬಸವರಾಜ್ ಕ್ಯಾವಟರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತ್ತು, ಮುಂದುವರೆದಂತೆ ಕಂದಾಯ ಸಚಿವರಿಗೆ ಪತ್ರ ಬರೆದಿರುವ ಡಾ. ಬಸವರಾಜ್ ಕ್ಯಾವಟರ್ ಅವರು ನಮ್ಮ ಭಾಗದ ರೈತರಿಗೆ ಬಗೆದ ಬಹುದೊಡ್ಡ ಅನ್ಯಾಯವಾಗಿದೆ. ಮಲೆನಾಡು ಭಾಗದಲ್ಲಿ ಕೇವಲ ಶೇ. 25ರಷ್ಟು ಮಳೆ ಕೊರತೆಯಿರುವ ತಾಲ್ಲೂಕುಗಳನ್ನು ಬರಪಟ್ಟಿಗೆ ಸೇರಿಸಲಾಗಿದೆ. ಆದರೆ, ನಮ್ಮ ತಾಲ್ಲೂಕುಗಳಲ್ಲಿ ಶೇ. 40ರಷ್ಟು ಭಾರಿ ಮಳೆ ಕೊರತೆಯಿದ್ದರೂ ಪಟ್ಟಿಯಿಂದ ಕೈಬಿಟ್ಟಿರುವುದು ಆಶ್ಚರ್ಯ ಹಾಗೂ ತೀವ್ರ ಬೇಸರದ ಸಂಗತಿಯಾಗಿದೆ ಎಂದು ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೈಫಲ್ಯಕ್ಕೆ ಪ್ರಮುಖ ಕಾರಣ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ. ಅವರು ಖುದ್ದಾಗಿ ರೈತರ ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಹಾನಿಯ ನೈಜ ಪರಿಸ್ಥಿತಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡದಿರುವುದರಿಂದಲೇ ಈ ಅನ್ಯಾಯವಾಗಿದೆ. ನಮ್ಮ ಭಾಗದ ರೈತರು ಸಂಪೂರ್ಣವಾಗಿ ಒಣಬೇಸಾಯವನ್ನೇ ನಂಬಿ ಬದುಕುತ್ತಿದ್ದಾರೆ. ಮಳೆ ಕೊರತೆಯಿಂದಾಗಿ ಕೃಷಿ ಬಿತ್ತನೆ ಪ್ರಮಾಣ ತೀವ್ರವಾಗಿ ಕುಸಿದು, ಬಿತ್ತನೆಯಾದ ಮುಸುಕಿನ ಜೋಳ, ತೊಗರಿ, ಹೆಸರು, ಸೂರ್ಯಕಾಂತಿ, ಮತ್ತು ಹತ್ತಿ ಬೆಳೆಗಳೂ ಸಂಪೂರ್ಣವಾಗಿ ಒಣಗಿ ನಾಶವಾಗಿವೆ, ಜೊತೆಗೆ ಅಂತರ್ಜಲ ಕುಸಿತದಿಂದ ತೋಟಗಾರಿಕಾ ಬೆಳೆಗಳಿಗೂ ಹಾನಿಯಾಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಗುಳೆ ಹೋಗುವಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.

ರೈತರು ಎರಡೆರಡು ಬಾರಿ ಬಿತ್ತನೆ ಮಾಡಿದ್ದರಿಂದ ರೈತರ ಮೇಲಿನ ಸಾಲದ ಹೊರೆ ದುಪ್ಪಟ್ಟಾಗಿದೆ. ಮಾನ್ಯ ಕಂದಾಯ ಸಚಿವರು ಕೂಡ ಒಣಬೇಸಾಯದ ಭೂಮಿಯಿಂದಲೇ ಆರಿಸಿ ಬಂದವರಾಗಿದ್ದು, ಮಳೆಯನ್ನೇ ನಂಬಿ ಬದುಕುವ ನಮ್ಮ ಭಾಗದ ರೈತರ ಕಷ್ಟ, ಸಾಲದ ಬಾದೆ ಹಾಗೂ ನೋವು ಅವರಿಗೆ ಚೆನ್ನಾಗಿ ಅರ್ಥವಾಗುತ್ತದೆ ಎಂಬ ದೃಢವಾದ ನಂಬಿಕೆಯಿದೆ. ಹೀಗಾಗಿ ಸರ್ಕಾರವು ದಯಮಾಡಿ ಈ ಕೂಡಲೇ ರೈತರ ಕಷ್ಟಕ್ಕೆ ಸ್ಪಂದಿಸಿ, ಬೆಳೆಯ ಖರ್ಚಿನ ಹಣವನ್ನು ಸರಿದೂಗಿಸಲು ಎಕರೆಗೆ ಕನಿಷ್ಠ 30,000 ರೂ.ಗಳ ಬರಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರವು ಎಚ್ಚೆತ್ತುಕೊಂಡು ರೈತರ ಸಂಕಷ್ಟವನ್ನು ಅರ್ಥೈಸಿಕೊಳ್ಳಬೇಕು ಹಾಗೂ ತಕ್ಷಣವೇ ಕೊಪ್ಪಳ, ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳನ್ನು ‘ತೀವ್ರ ಬರಪೀಡಿತ ಪ್ರದೇಶ’ಗಳೆಂದು ಘೋಷಿಸಬೇಕು ಎಂದು ಡಾ. ಬಸವರಾಜ್ ಕ್ಯಾವಟರ್ ಅವರು ಸಮಸ್ತ ರೈತರ ಪರವಾಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!