ಕೊಪ್ಫಳ ಜಿಲ್ಲೆಯಲ್ಲಿ ಬೆಳೆ ಹಾನಿ ಖುದ್ದು ಪರಿಶೀಲಿಸಿದ ಸಚಿವರಾದ ಶಿವರಾಜ ತಂಗಡಗಿ
ಬರ ವೀಕ್ಷಣೆಯೊಂದಿಗೆ ಜಿಲ್ಲೆಯಲ್ಲಿ ಪುನಃ ಕಾರ್ಯಾರಂಭಿಸಿದ ಸಚಿವರು
* ಮತ್ತೊಮ್ಮೆ ಸಚಿವರಾಗಿ ತವರು ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ಸಚಿವರಿಗೆ ಅದ್ದೂರಿ ಸ್ವಾಗತ


—-
ಕೊಪ್ಪಳ ಆಗಸ್ಟ್ .): ಕರ್ನಾಟಕ ಸರ್ಕಾರದ ಸಂಪುಟ ದರ್ಜೆ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಪೂರ್ವ ನಿಗದಿಯಂತೆ ಆಗಸ್ಟ್ 5ರಂದು ಕೊಪ್ಪಳ ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡು ಬರ ಪರಿಸ್ಥಿತಿಯ ಅವಲೋಕನ ನಡೆಸಿದರು.
ಮೊದಲಿಗೆ ಗಂಗಾವತಿ ತಾಲ್ಲೂಕಿನ ವೆಂಕಟಗಿರಿ ಹೋಬಳಿಯ ವ್ಯಾಪ್ತಿಯ ಬಂಡ್ರಾಳ ಗ್ರಾಮಕ್ಕೆ ತೆರಳಿ ಬೆಳೆ ಹಾನಿ ಹಾಗೂ ಬರ ವೀಕ್ಷಣೆ ನಡೆಸಿದರು. ಬಂಡ್ರಾಳ ಗ್ರಾಮದ ಹನುಮಮ್ಮ ಗಂಡ ಮಲಿಯಪ್ಪ ನಾಯಕ ಅವರ ಒಂದು ಎಕರೆ 36 ಗುಂಟೆಯಲ್ಲಿ ಬೆಳೆದ ಸಜ್ಜಿ ಬೆಳೆ ವೀಕ್ಷಣೆ ನಡೆಸಿದರು. ಮಳೆಯಿಲ್ಲದೇ ಬೆಳೆ ಹಾಳಾಗಿದೆ ಎಂದು ಹನುಮಮ್ಮ ಮತ್ತು ಅವರ ಮಕ್ಕಳು ಸಚಿವರ ಎದುರು ತಮ್ಮ ಅಳಲು ತೋಡಿಕೊಂಡರು.
ಗಡ್ಡಿ ಗ್ರಾಮದ ಮದ್ದಾನಪ್ಪ ತಂದೆ ನಾಗಪ್ಪ ಭಜಂತ್ರಿ ಅವರ ಹೊಲದಲ್ಲಿನ ಮೆಕ್ಕೆ ಜೋಳ ಬೆಳೆಯು ಸಹ ಮಳೆಯಿಲ್ಲದೆ ಹಾಳಾಗಿದೆ ಎಂದು ಗಡ್ಡಿ ಗ್ರಾಮಸ್ಥರು ಸಚಿವರಿಗೆ ತಿಳಿಸಿದರು.
*ಕಂದಾಯ ಇಲಾಖೆಗೆ ವರದಿ:* ನಾಳೆ ಆಗಸ್ಟ್ 06ರಂದು ಕೊಪ್ಪಳದಲ್ಲಿ ಅಧಿಕಾರಿಗಳೊಂದಿಗೆ
ಸಭೆ ಮಾಡುತ್ತೇನೆ. ಸಿಎಂ ಅವರು ಎಲ್ಲ ಸಚಿವರಿಗೆ ಸೂಚನೆ ನೀಡಿ ಬರ ವೀಕ್ಷಣೆ ನಡೆಸಲು ಹೇಳಿದ್ದಾರೆ. ಜಿಲ್ಲೆಯಲ್ಲಿ ಇಂದು, ನಾಳೆ, ನಾಡಿದ್ದು ವಿವಿಧೆಡೆ ಸಂಚರಿಸಿ ಮುಂಗಾರು ಋತುವಿನ ಎಲ್ಲ ಬೆಳೆಗಳ ಪರಿಸ್ಥಿತಿ ಅವಲೋಕಿಸುತ್ತೇನೆ. ಬೆಳೆ ಹಾನಿಗೆ ಏನು ಪರಿಹಾರ ಕೊಡಬೇಕು. ಇದಕ್ಕಾಗಿ ಅಧಿಕಾರಿಗಳು ಏನು ಮಾಡಿದ್ದಾರೆ ಎಂದು ಪರಿಶೀಳಿಸುತ್ತೇನೆ. ಬರ ಘೋಷಣೆಗೆ ಸಂಬಂಧಿಸಿದಂತೆ ಯಾವ ರೈತರಿಗೂ, ಯಾವ ತಾಲೂಕಿನ ರೈತರಿಗೂ ಅನ್ಯಾಯವಾಗದಂತೆ ಕ್ರಮವಹಿಸಲಾಗುವುದು. ಈ ಬಗ್ಗೆ ಕಂದಾಯ ಇಲಾಖೆಗೆ ವರದಿ ಒಪ್ಪಿಸಲಾಗುವುದು ಎಂದು ಸಚಿವರು ಇದೆ ವೇಳೆ ಸುದ್ದಿಗಾರರಿಗೆ ತಿಳಿಸಿದರು.
*ಗ್ರಾಮಸ್ಥರಿಂದ ಸ್ವಾಗತ:* ಸಂಪುಟ ದರ್ಜೆ ಸಚಿವರಾದ ಮೇಲೆ ಮೊದಲ ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ ಸಚಿವರಾದ ಶಿವರಾಜ ತಂಗಡಗಿ ಅವರಿಗೆ ಬಂಡ್ರಾಳ ಹಾಗೂ ಗಡ್ಡಿ ಗ್ರಾಮಸ್ಥರು ಆತ್ಮೀಯ ಸ್ವಾಗತ ಕೋರಿದರು. ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ ಸಂಭ್ರಮಿಸಿದರು.
ಈ ವೇಳೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ,
ಕೊಪ್ಪಳ ಸಹಾಯಕ ಆಯುಕ್ತರಾದ ಮೆಹಬೂಬ ಜಿಲಾನಿ, ಜಿಪಂ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಗಂಗಾವತಿ ಡಿವೈಎಸ್ಪಿ ಜೆ ಎಸ್ ನ್ಯಾಮಗೌಡರ,
ಜಂಟಿ ಕೃಷಿ ನಿರ್ದೇಶಕರಾದ ಕೃಷ್ಣಮೂರ್ತಿ, ಜಂಟಿ ತೋಟಗಾರಿಕಾ ನಿರ್ದೇಶಕರಾದ ಕೃಷ್ಣ ಉಕ್ಕುಂದ, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಶ್ರೀನಿವಾಸ ಕುಲಕರ್ಣಿ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಯ್ಯ, ಕೆವಿಕೆಯ ರಾಘವೇಂದ್ರ ಯಲಿಗಾರ, ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಡಾ.ಬದ್ರಿ ಪ್ರಸಾದ, ಗಂಗಾವತಿಯ ಸಹಾಯಕ ಕೃಷಿ ನಿರ್ದೇಶಕರಾದ ಡಾ.ಅಭಿಲಾಷ ಸಿ ಸೇರಿದಂತೆ ಇತರರು ಇದ್ದರು.