ಕೊಪ್ಪಳ ಜಿಲ್ಲೆಯ ಜನತಾ ದರ್ಶನ ಮಾದರಿಯಾಗಲಿ: ಶಿವರಾಜ ತಂಗಡಗಿ
*ಕೊಪ್ಪಳ ಜಿಲ್ಲೆಯ ಜನತಾ ದರ್ಶನ ಮಾದರಿಯಾಗಲಿ: ಶಿವರಾಜ ತಂಗಡಗಿ*
—-
ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿನ ಜನತಾ ದರ್ಶನ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗುವ ಹಾಗೆ ನಡೆಯಬೇಕು. ಜನತಾ ದರ್ಶನದಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ಕಾಲಮಿತಿಯೊಳಗಡೆ ಇತ್ಯರ್ಥಪಡಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ನಿಂದ ಸೆಪ್ಟೆಂಬರ್ 25ರಂದು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲನಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ತಡೆಗಟ್ಟಲು ಹಾಗೂ ವಿವಿಧ ಗ್ರಾಮಗಳಿಂದ ಜಿಲ್ಲಾ ಕೇಂದ್ರಕ್ಕೆ ಬರುವ ಸಾರ್ವಜನಿಕರು ಅನುಭವಿಸುವ ತೊಂದರೆಗಳನ್ನು ನಿವಾರಿಸಲು ತಾಲೂಕು ಜನತಾ ದರ್ಶನ ಸಹ ಹಮ್ಮಿಕೊಳ್ಳಲು ಸರ್ಕಾರವು ಆದೇಶಿಸಿದೆ. ಈ ದಿಶೆಯಲ್ಲಿ ಜಿಲ್ಲೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ತಾಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಸಿ ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ತಾಲೂಕು ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡು ಜನರ ಅಹವಾಲುಗಳನ್ನು ಆಲಿಸಬೇಕು. ಜನತಾ ದರ್ಶನದಲ್ಲಿ ಸ್ವೀಕೃತವಾಗುವ ಅರ್ಜಿಗಳು 15 ದಿನದೊಳಗೆ ಇತ್ಯರ್ಥವಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ನಮ್ಮ ಮಧ್ಯೆ ಇನ್ನು ಬಹಳಷ್ಟು ಜನರು ಮುಗ್ಧರಿದ್ದಾರೆ. ಅಂತವರಿಗೆ ಸರ್ಕಾರದ ಯೋಜನೆಗಳು ನೆರವಿಗೆ ಬರಬೇಕು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಅರ್ಹ ಫಲಾನುಭವಿಗಳಿಗೆ ಸುಲಭ ಮತ್ತು ತ್ವರಿತವಾಗಿ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು. ಏನಾದರು ಸಮಸ್ಯೆಗಳಿದ್ದರೆ ಜನರಿಗೆ ಮನವರಿಕೆ ಮಾಡಿ ಅವರಿಗೆ ಸಹಾಯ ಕಲ್ಪಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಜನತಾದರ್ಶನ ಕಾರ್ಯಕ್ರಮದ ಬಗ್ಗೆ ವಿಶೇಷ ಒತ್ತು ನೀಡಿದ್ದಾರೆ. ಸಮಸ್ಯೆಗಳನ್ನು ಹೊತ್ತು ಬರುವ ನಾಗರಿಕರಿಗೆ ಸಕಾಲಕ್ಕೆ ಅನುಕೂಲತೆ ಸಿಗಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರದಲ್ಲಿ ಸಹ ನಡೆಸಲಾಗುತ್ತದೆ.
ಜನತಾ ದರ್ಶನ ವೇದಿಕೆಯಡಿ ಸ್ವೀಕೃತವಾಗುವ ಅರ್ಜಿಗಳು ಸಹ ಕಾಲಮಿತಿಯಲ್ಲಿ ಇತ್ಯರ್ಥವಾಗಬೇಕು. ಕಾನೂನಿನಲ್ಲಿ ಅವಕಾಶವಿಲ್ಲದಿದ್ದ ಪಕ್ಷದಲ್ಲಿ ಅಂತಹ ಅರ್ಜಿಗಳಿಗೆ ಸ್ಟಷ್ಟವಾದ ಹಿಂಬರೆಹ ನೀಡಬೇಕು. ಅರ್ಜಿಗಳ ವಿಲೇಯ ವಿಷಯದಲ್ಲಿ ಅನಗತ್ಯ ವಿಳಂಬ ಮಾಡಿದಲ್ಲಿ ಅಂತಹ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಸಿದರು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಸ್ವೀಕೃತವಾಗುವ ಅಹವಾಲುಗಳನ್ನು ಸ್ವೀಕರಿಸಿದರೆ ಸಾಲದು, ಜನರ ಮನೆ ಬಾಗಿಲಿಗೆ ಹೋಗಿ ನೇರವಾಗಿ ಸೇವೆ ನೀಡಬೇಕು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಸಿಗಬೇಕು. ಜನರು ನೆಮ್ಮದಿಯ ವಾತಾವರಣ ಅನುಭವಿಸಬೇಕು. ಸರ್ಕಾರವೇ ಜನರ ಬಳಿಗೆ ಹೋಗಿ ಪರಿಹಾರ ನೀಡುವುದೇ ಜನತಾ ದರ್ಶನ. ಈ ಕಾರ್ಯಕ್ರಮವು ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತವಾಗಲು ಅಧಿಕಾರಿಗಳು ಶ್ರಮಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಪ್ರತಿ ತಿಂಗಳು ಎರಡು ಜನತಾ ದರ್ಶನ ಕಾರ್ಯಕ್ರಮಗಳು ಆಗಬೇಕು. ಈ ಕಾರ್ಯಕ್ರಮದ ಮೂಲಕ ಸರ್ಕಾರದ ಯೋಜನೆಗಳ ಲಾಭವನ್ನು ಜನರಿಗೆ ತಲುಪಿಸಬೇಕು. ಜನರು ಕೆಲಸವಿದ್ದರೆ ಮಾತ್ರ ಕಚೇರಿಯತ್ತ ಬರುತ್ತಾರೆ ಎಂಬುದನ್ನು ಅಧಿಕಾರಿಗಳು ಅರಿಯಬೇಕು. ಏನಾದರು ತೊಂದರೆ ಇದ್ದರೆ ಅರ್ಜಿದಾರರನ್ನು ಕರೆಯಿಸಿ ಅವರೊಂದಿಗೆ ಮಾತನಾಡಿ ಅರ್ಜಿದಾರರಿಗೆ ಅನುಕೂಲ ಕಲ್ಪಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಮತ್ತು ತಾಲೂಕಿನಲ್ಲಿರುವ ಅಧಿಕಾರಿಗಳು, ವಿಶೇಷವಾಗಿ ತಹಸೀಲ್ದಾರರು ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಜನರ ಸಮೀಪ ಹೋಗಿ ಕೆಲಸ ಮಾಡಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಹ ಜನತೆಗೆ ಸ್ಪಂದನೆ ಮಾಡಬೇಕು. ನೀರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಅಹವಾಲುಗಳಿಗೆ ವಿಶೇಷವಾಗಿ ಸ್ಪಂದಿಸಬೇಕು ಎಂದು ಸಲಹೆ ಮಾಡಿದರು.
ಗ್ರಾಮೀಣ ಭಾಗಗಳ ಸಮಸ್ಯೆಗಳನ್ನು ಆಲಿಸಲು ಕೊಪ್ಪಳ ಜಿಲ್ಲಾ ಪಂಚಾಯತ್ ವತಿಯಿಂದ ದೂರವಾಣಿ ಸಂಖ್ಯೆ 08539-221207 ಹಾಗೂ ಸಹಾಯವಾಣಿ ಸಂಖ್ಯೆ: 7259423379 ಸೇವೆಯನ್ನು ಆರಂಭಿಸಿದ್ದು ಜಿಲ್ಲೆಯ ಗ್ರಾಮೀಣ ಭಾಗಗಳ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವರು ಹೇಳಿದರು.
ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಜನತಾ ದರ್ಶನವು ಜನರ ಸಮಸ್ಯೆಗಳನ್ನು ಆಲಿಸುವಂತಹ ಕಾರ್ಯಕ್ರಮವಾಗಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ದೂರದೃಷ್ಟಿಯ ಕಾರ್ಯಕ್ರಮ ಇದಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಇತರ ಸೌಲಭ್ಯಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುವ ನಿಟ್ಟಿನಲ್ಲಿ ಜನತಾ ದರ್ಶನ ಕಾರ್ಯಕ್ರಮವು ಪೂರಕವಾಗಲಿದೆ. ಜೊತೆಗೆ ಜನ ಸಾಮಾನ್ಯರ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಲು ಈ ಕಾರ್ಯಕ್ರಮವು ಅನುಕೂಲವಾಗಲಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಂದು ಬಂಡಿಯ ಎರಡು ಚಕ್ರಗಳಿದ್ದಂತೆ. ಸರ್ಕಾರದ ಕಾರ್ಯಕ್ರಮಗಳಿಗೆ, ಹೊಸ ಪ್ರಯತ್ನಗಳಿಗೆ ನಾವು ಜೊತೆಗೂಡಿ ಶ್ರಮಿಸಬೇಕು. ಜನರೊಂದಿಗೆ ಸ್ನೇಹಪರ ಸಂಬಂಧ ಬೆಳಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ಜಿಪಂ ಉಪಕಾರ್ಯದರ್ಶಿಗಳು, ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಇನ್ನೀತರ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.