ಲಿಂಗನಬಂಡಿಯಲ್ಲಿ ಐತಿಹಾಸಿಕ ಶ್ರೀ ಹುಲಿಗೆಮ್ಮದೇವಿ ಜಾತ್ರೆ ಸಂಭ್ರಮ

0

Get real time updates directly on you device, subscribe now.

  • ಮೇ 11ರಿಂದ ಮೂರು ದಿನಗಳ ಕಾಲ ನಡೆಯುವ ಜಾತ್ರೆ

ಯಲಬುರ್ಗಾ: ತಾಲೂಕಿನ ಲಿಂಗನಬಂಡಿ ಗ್ರಾಮದ ಗುಡ್ಡದ ಮೇಲಿರುವ ಐತಿಹಾಸಿಕ ಹಾಗೂ ಅಪಾರ ಮಹಿಮೆ ಹೊಂದಿರುವ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ನಡೆಯುವ ಜಾತ್ರಾ ಮಹೋತ್ಸವವು ಇದೇ ಮೇ 11ರಿಂದ 13 ರವರೆಗೆ ಮೂರು ದಿನಗಳ ಕಾಲ ಭಕ್ತಿ, ಸಂಭ್ರಮ ಹಾಗೂ ಧಾರ್ಮಿಕ ವೈಭವದೊಂದಿಗೆ ಜರುಗಲಿದ್ದು, ಗ್ರಾಮದಲ್ಲಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಶತಮಾನಗಳ ಇತಿಹಾಸ ಹೊಂದಿರುವ ಈ ದೇವಸ್ಥಾನವು ಪ್ರಸಿದ್ಧ ಶಕ್ತಿದೇವಿ ಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಗ್ರಾಮಸ್ಥರು ಅಪಾರ ಭಕ್ತಿ, ನಂಬಿಕೆ ಹಾಗೂ ಶ್ರದ್ಧೆಯಿಂದ ಆರಾಧಿಸುವ ಶ್ರೀ ಹುಲಿಗೆಮ್ಮದೇವಿಯ ದರ್ಶನಕ್ಕಾಗಿ ಪ್ರತಿವರ್ಷ ಸಾವಿರಾರು ಭಕ್ತರು ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಾರೆ. ಈ ಬಾರಿ ಕೂಡ ಹುಬ್ಬಳ್ಳಿ, ಗದಗ, ಬೆಟಗೇರಿ ಸೇರಿದಂತೆ ಅನೇಕ ಭಾಗಗಳಿಂದ ಭಕ್ತರು ಹರಿದು ಬರುವ ನಿರೀಕ್ಷೆಯಿದೆ.
ಜಾತ್ರೆಯ ಅಂಗವಾಗಿ ಮೇ 11ರಂದು ಬಾಳೆದಂಡಿಗೆ ಕಾರ್ಯಕ್ರಮ ಜರುಗಲಿದ್ದು, ಮೇ 12ರಂದು ಅಗ್ನಿಕೊಂಡ, ಅಕ್ಕಿ ಪಾಯಸ ಸೇರಿದಂತೆ ವಿಶೇಷ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಮೇ 13ರಂದು ಸಮಾರೋಪ ಸಮಾರಂಭ, ಮಹಾಮಂಗಳಾರತಿ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನಡೆಯಲಿವೆ.
ಜಾತ್ರೆಯ ಅವಧಿಯಲ್ಲಿ ದೇವಸ್ಥಾನದಲ್ಲಿ ನಿರಂತರ ಪೂಜೆ, ಅಭಿಷೇಕ, ಹರಕೆ ಸಲ್ಲಿಕೆ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಇಡೀ ಗ್ರಾಮ ಭಕ್ತಿಮಯ ವಾತಾವರಣದಲ್ಲಿ ತೇಲುತ್ತಿದೆ. ಕೊಪ್ಪಳ ಜಿಲ್ಲೆಯ ಹುಲಗಿಯಲ್ಲಿ ನಡೆಯುವ ಪ್ರಸಿದ್ಧ ಹುಲಿಗೆಮ್ಮದೇವಿ ಜಾತ್ರೆಯ ಮಾದರಿಯಲ್ಲಿಯೇ ಇಲ್ಲಿ ಜಾತ್ರೆ ನಡೆಯುವುದು ವಿಶೇಷವಾಗಿದ್ದು, ಈ ಕ್ಷೇತ್ರದ ಮಹಿಮೆ ಕುರಿತು ಭಕ್ತರಲ್ಲಿ ಅಪಾರ ನಂಬಿಕೆ ಇದೆ. ದೇವಿಯ ಕೃಪೆಯಿಂದ ಸಂಕಷ್ಟಗಳು ದೂರವಾಗಿ, ಮನೋಭಿಲಾಷೆಗಳು ಈಡೇರುತ್ತವೆ ಎಂಬ ವಿಶ್ವಾಸ ಭಕ್ತರಲ್ಲಿದೆ.
ಗುಡ್ಡದ ಮೇಲಿರುವ ದೇವಸ್ಥಾನ ಈ ಕ್ಷೇತ್ರದ ಪ್ರಮುಖ ಆಕರ್ಷಣೆಯಾಗಿದ್ದು, ದೇವಸ್ಥಾನದ ಮುಂಭಾಗದಲ್ಲಿರುವ ಪವಿತ್ರ ಭಾವಿ ಭಕ್ತರ ಭಕ್ತಿಭಾವವನ್ನು ಇನ್ನಷ್ಟು ಹೆಚ್ಚಿಸಿದೆ. ದೇವಸ್ಥಾನದ ಅರ್ಚಕರು ಇದೇ ಭಾವಿಯ ನೀರಿನಲ್ಲಿ ಸ್ನಾನ ಮಾಡಿ ದೇವಿಯ ಪೂಜೆಗೆ ಗಂಗಾಜಲವನ್ನು ತೆಗೆದುಕೊಂಡು ಹೋಗುವ ಸಂಪ್ರದಾಯವನ್ನು ಇಂದಿಗೂ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ.
ಗ್ರಾಮದ ಜನತೆಗೆ ಶ್ರೀ ಹುಲಿಗೆಮ್ಮದೇವಿ ಕೇವಲ ದೇವತೆ ಮಾತ್ರವಲ್ಲ, ಕುಟುಂಬದ ಆರಾಧ್ಯ ಶಕ್ತಿಯೂ ಆಗಿದ್ದಾಳೆ. ಮಕ್ಕಳಾಗದ ದಂಪತಿಗಳು ಹರಕೆ ಹೊತ್ತು ದೇವಿಯ ಕೃಪೆಯಿಂದ ಸಂತಾನ ಭಾಗ್ಯ ದೊರೆತ ಬಳಿಕ ತಮ್ಮ ಮಕ್ಕಳಿಗೆ “ಹುಲಿಗೆವ್ವ” ಎಂದು ನಾಮಕರಣ ಮಾಡುವಷ್ಟು ದೇವಿಯ ಮೇಲಿನ ಭಕ್ತಿ ಗಾಢವಾಗಿದೆ. ಅನೇಕ ಭಕ್ತರು ತಮ್ಮ ಜೀವನದಲ್ಲಿ ನಡೆದ ಅದ್ಭುತ ಅನುಭವಗಳನ್ನು ದೇವಿಯ ಮಹಿಮೆಯೆಂದು ನಂಬಿ ವರ್ಷಂಪ್ರತಿ ಜಾತ್ರೆಗೆ ಆಗಮಿಸುತ್ತಾರೆ.
ಜಾತ್ರಾ ಸಿದ್ಧತೆಯಲ್ಲಿ ಗ್ರಾಮಸ್ಥರ ಒಗ್ಗಟ್ಟು ಮತ್ತು ಸೇವಾಭಾವ ಶ್ಲಾಘನೀಯವಾಗಿದೆ. ಗ್ರಾಮದಲ್ಲಿ ಜಾತಿ-ಭೇದ ಮರೆತು ಎಲ್ಲರೂ ಒಂದೇ ಮನಸ್ಸಿನಿಂದ ಜಾತ್ರೆ ಯಶಸ್ವಿಗೆ ಶ್ರಮಿಸುತ್ತಿರುವುದು ವಿಶೇಷವಾಗಿದೆ.
ಇದೇ ವೇಳೆ ಗದಗ-ವಾಡಿ ರೈಲ್ವೆ ಯೋಜನೆಯ ಮಾರ್ಗ ಲಿಂಗನಬAಡಿ ಭಾಗದ ಮೂಲಕ ಸಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಇನ್ನಷ್ಟು ಪ್ರಸಿದ್ಧಿ ಹಾಗೂ ಅಭಿವೃದ್ಧಿ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.


ಶ್ರೀ ಹುಲಿಗೆಮ್ಮದೇವಿ ನಮ್ಮ ಗ್ರಾಮದ ಶಕ್ತಿದೇವಿ. ಜಾತ್ರೆ ನಮ್ಮೆಲ್ಲರ ಧಾರ್ಮಿಕ ನಂಬಿಕೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿದೆ. ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಜಾತ್ರೆ ಯಶಸ್ವಿಗೆ ಶ್ರಮಿಸುತ್ತಿರುವುದು ಸಂತಸದ ಸಂಗತಿ.
ರಾಮಣ್ಣ ಸಾಲಭಾವಿ, ಜಿಪಂ ಮಾಜಿ ಸದಸ್ಯ

Get real time updates directly on you device, subscribe now.

Leave A Reply

Your email address will not be published.

error: Content is protected !!