ಮಹಿಳಾ ಮೀಸಲಾತಿ ಮಸೂದೆಯ ಸೋಲಿಗೆ ಬೀದಿಗಿಳಿದು ಪ್ರತಿಭಟಿಸಿದ ಜೆಡಿಎಸ್ ಮಹಿಳಾ ಘಟಕ

ಮಹಿಳೆಯರ ಕ್ಷಮೆ ಕೇಳಿ ರಾಜೀನಾಮೆ ನೀಡಿ: ಕಾಂಗ್ರೆಸ್ ಸಂಸದರಿಗೆ ಜೆಡಿಎಸ್ ಅಗ್ರಹ

ಕೊಪ್ಪಳ: ಮಹಿಳೆಯರ ಬಗ್ಗೆ ಕಿಂಚತ್ತಾದರೂ ಕಳಕಳಿಯಿದ್ದರೇ ರಾಜಶೇಖರ್ ಹಿಟ್ನಾಳ್ ಸೇರಿದಂತೆ ರಾಜ್ಯದ ಒಂಬತ್ತೂ ಸಂಸದರು ಈ ಕೂಡಲೇ ರಾಜೀನಾಮೆ ನೀಡಿ ಮಹಿಳೆಯರ ಬೇಷರತ್ ಕ್ಷಮೆ ಕೇಳಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಆಗ್ರಹಿಸಿದರು.
ಲೋಕಸಭೆಯಲ್ಲಿ ನಾರಿಶಕ್ತಿ (ವಂದನ್) ಮಸೂದೆಯ ಸೋಲಿನ ಹಿನ್ನೆಲೆಯಲ್ಲಿ ಇಂಡಿಯಾ ಒಕ್ಕೂಟದ ವಿರುದ್ಧ ಜೆಡಿಎಸ್ ಮಹಿಳಾ ಘಟಕ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
“ಕಾಂಗ್ರೆಸ್ ಸಂಸದರಿಗೆ ಮಹಿಳೆಯರು ಮತ ಹಾಕಿಲ್ಲವೇ?
ಮಹಿಳಾ ಮತದಾರರು ಸಂಸದರಿಗೆ ಏನು ಅನ್ಯಾಯ ಮಾಡಿದ್ದರು? ಮಹಿಳೆಯರ ಗೌರವಕ್ಕಿಂತಲೂ ಹೈಕಮಾಂಡ್ ಗುಲಾಮಗಿರಿತನ ಸಂಸದರಿಗೆ ಹೆಚ್ಚಾಯಿತೆ?” ಎಂಬ ಪ್ರಶ್ನೆಗಳ ಸುರಿಮಳೆ ಗರೆದರು.
ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಅಸಭ್ಯ ಕ್ರಿಯೆಗಳನ್ನು ಪ್ರೋತ್ಸಾಹಿಸಿ ಮುಂದಿನ ಪೀಳಿಗೆಯ ಹೆಣ್ಣು ಮಕ್ಕಳನ್ನು ದಾರಿ ತಪ್ಪಿಸುವಲ್ಲಿ ಇರುವ ಆಸಕ್ತಿ ಕೊಪ್ಪಳದ ಸಂಸದರಿಗೆ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಬೇಕು ಎಂಬ ವಿಷಯದಲ್ಲಿ ಏಕಿಲ್ಲ? ಯಾವ ಕಾರಣಕ್ಕಾಗಿ ಕೊಪ್ಪಳದ ಮಹಿಳೆಯರಿಗೆ ಮೋಸ ಮಾಡಿದಿರಿ? ಮಾಡಿದ ಅನ್ಯಾಯಕ್ಕೆ ಕ್ಷಮೆ ಕೇಳಿ, ರಾಜೀನಾಮೆ ಸಲ್ಲಿಸಿ, ಸಾಮಾನ್ಯ ಕುಟುಂಬದ ಮಹಿಳೆಯನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ ಪಾಶ್ಚಾತಾಪ ಮಾಡಿಕೊಳ್ಳಿ ಎಂದು ಒತ್ತಾಯಿಸಿದರು.
“ಕಾಂಗ್ರೆಸ್ ನಿಂದ ಭಾರತದ ಮಹಿಳಾ ಶಕ್ತಿಗೆ ಅಪಮಾನವಾಗಿದೆ. ಕಾಂಗ್ರೆಸ್ ಸಂಸದರಿಗೆ ಮಹಿಳೆಯರ ಶಾಪ ತಟ್ಟುತ್ತದೆ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು ಎಂಬುದು ನಮ್ಮ ಚಿಂತನೆ. ಆದರೆ ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ. ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷರಾದ ಹೆಚ್ ಡಿ ದೇವೇಗೌಡ ಅವರು ಪ್ರಧಾನಿಗಳಾಗಿದ್ದಾಗ ಈ ಮಸೂದೆಯನ್ನು ಮಂಡಿಸಿದ್ದರು. ಅಂದು ಇದೇ ಕಾಂಗ್ರೆಸ್ ಪಕ್ಷ ಮಸೂದೆಯನ್ನು ಸೋಲಿಸಿತ್ತು. ಕಾಂಗ್ರೆಸ್ ಪಕ್ಷದ ಈ ನೀತಿಗೆ ಮುಂದಿನ ದಿನಗಳಲ್ಲಿ ನಾವು ತಕ್ಕ ಪಾಠ ಕಲಿಸುತ್ತೇವೆ,” ಎಂದು ನಗರ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ ಮೇದಾರ್ ಹೇಳಿದರು.
ಮಹಿಳಾ ಸಬಲೀಕರಣದ ಕುರಿತು ಮಾತನಾಡುವ ನೈತಿಕತೆಯನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಪ್ರಪಂಚದ ವಿವಿಧ ದೇಶಗಳು ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿವೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರನ್ನು ಕತ್ತಲೆ ಕೂಪಕ್ಕೆ ತಳ್ಳುವ ಕೆಲಸ ಮಾಡುತ್ತಿದೆ.
ಎನ್ ಡಿ ಎ ಸರಕಾರ ಮತ್ತೊಮ್ಮೆ ಈ ಮಸೂದೆಯನ್ನು ಶೀಘ್ರದಲ್ಲಿ ಮಂಡಿಸಲಿದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಆ ಮಸೂದೆಗೆ ಬೆಂಬಲ ಸೂಚಿಸಿ ಅನ್ಯಾಯವನ್ನು ಸರಿಪಡಿಸಬೇಕು,” ಎಂದು ನಗರ ಘಟಕ ಮಹಿಳಾ ವಿದ್ಯಾರ್ಥಿ ವಿಭಾಗದ ಅಧ್ಯಕ್ಷೆ ಜಯಶ್ರೀ ಮೇದಾರ್ ಒತ್ತಾಯಿಸಿದರು.
ರಾಜ್ಯದಿಂದ ಆಯ್ಕೆಯಾದ ಸಂಸದರಲ್ಲಿ ಇಬ್ಬರು ಮಹಿಳಾ ಸಂಸದರಿಗೆ ತಾವು ಭಾರತದ ಪ್ರತಿ ಮಹಿಳೆಗೆ ಅನ್ಯಾಯ ಮಾಡುತ್ತಿರುವ ವಿಷಯ ತಿಳಿಯಲಿಲ್ಲವೇ? ಇಂದಿರಾಗಾಂಧಿ ಹಾಗೂ ಸೋನಿಯಾ ಗಾಂಧಿ ಮಹಿಳೆಯರು ಎಂಬುದನ್ನು ಕಾಂಗ್ರೆಸ್ ನಾಯಕರು ಮರೆತರೆ? ಮುಂದೆ ಬರುವ ಎಲ್ಲಾ ಚುನಾವಣೆಗಳಲ್ಲಿ ಮಹಿಳೆಯರು ಕಾಂಗ್ರೆಸ್ ವಿರುದ್ಧ ಮತ ಚಲಾಯಿವುದು ನಿಶ್ಚಿತ ಎಂದು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಶ್ಮಿ ಚಳಗೇರಿ ಹೇಳಿದರು.
ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಶವ ಪೆಟ್ಟಿಗೆಗೆ ತಾನೇ ಕೊನೆಯ ಮಳೆ ಹೊಡೆದುಕೊಂಡಿದೆ. ಅನ್ಯಾಯದ ವಿರುದ್ಧ ಮಹಿಳೆಯರು ಒಗ್ಗಟ್ಟಾಗಿ ಹೋರಾಡುವುದು ನಿಶ್ಚಿತ ಎಂದು ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ ಹೇಳಿದರು.
ಎನ್ ಡಿ ಎ ಸರಕಾರ ಮತ್ತೊಮ್ಮೆ ಈ ಮಸೂದೆಯನ್ನು ಮಂಡಿಸಲಿದೆ. ಈ ಮಸೂದೆ ಅವಿರೋಧವಾಗಿ ಅಂಗೀಕಾರಗೊಂಡು ಶಾಸನವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ವಿರೋಧ ಪಕ್ಷಗಳ ಪ್ರತಿಯೊಬ್ಬ ಸಂಸದರ ಮೇಲಿದೆ ಎಂದು ಜಿಲ್ಲಾ ಉಪಾಧ್ಯಕ್ಷ ಮೂರ್ತಪ್ಪ ಗಿಣಿಗೇರಿ ಹೇಳಿದರು.
ಮುಸೂದೆ ಮುಂದಿನ ಲೋಕಸಭಾ ಚುನಾವಣೆಯ ಒಳಗಾಗಿಯೇ ಶಾಸನವಾಗಬೇಕು ಹಾಗೂ ಅದರ ಲಾಭ ಮಹಿಳೆಯರಿಗೆ ಸಿಗಬೇಕು ಎಂದು ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಕರಿಯಪ್ಪ ಹಾಲವರ್ತಿ ಹೇಳಿದರು.
ರಾಜಕೀಯ ಕ್ಷೇತ್ರದಲ್ಲಿ 33% ಮೀಸಲಾತಿ ಮಹಿಳೆಯರಿಗೆ ಸಿಗಬೇಕೆಂಬುದು ದಶಕಗಳ ಹಳೆಯ ಬೇಡಿಕೆ. ಕೆಲವು ಪಾಶ್ಚಾತ್ಯ ದೇಶಗಳು 1970ರ ದಶಕದ ತನಕ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಿಲ್ಲ. ಅಂತಹ ಹಕ್ಕನ್ನು ಭಾರತ ದೇಶ 1950 ರಿಂದಲೇ ನೀಡಿದ್ದು ಐತಿಹಾಸಿಕ ಸತ್ಯ. ನಂತರದಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ರಾಜಕೀಯದಲ್ಲಿ ಮಹಿಳೆಯರಿಗೆ ಸಮಾನ ಅವಕಾಶವನ್ನು ಕಲ್ಪಿಸಿವೆ. ಆದರೆ ರಾಜಕೀಯ ಸಮಾನತೆ ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕನಸಾಗಿಯೇ ಉಳಿದಿದೆ ಎಂದು ಜಿಲ್ಲಾ ವಕ್ತಾರ ಮಲ್ಲನಗೌಡ ಕೋಣನಗೌಡ್ರು ಹೇಳಿದರು.
“ಭಾರತದ ಸಂವಿಧಾನ ಸಮಾನತೆಯನ್ನು ಎತ್ತಿ ಹಿಡಿಯುತ್ತದೆ. ಆದರೆ ರಾಜಕೀಯದಲ್ಲಿ ಮಹಿಳೆಯರಿಗೆ ಸಮಾನತೆ ಇಲ್ಲದೇ ಇರುವುದು ಸಂವಿಧಾನದ ಆಶಯಗಳ ಉಲ್ಲಂಘನೆ. ಮುಂದಿನ ದಿನಗಳಲ್ಲಿ ಇಂಡಿ ಒಕ್ಕೂಟದ ಸದಸ್ಯರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದರೆ ಈ ದೇಶಾದ್ಯಂತ ರಾಜಕತೆ ಸೃಷ್ಟಿಯಾಗಲಿದೆ,” ಜಿಲ್ಲಾ ಗೌರವಾಧ್ಯಕ್ಷ ಈಶಪ್ಪ ಮಾದಿನೂರು ಹೇಳಿದರು.
ಪ್ರತಿಭಟನಾಕಾರರು ಇಂಡಿಯಾ ಒಕ್ಕೂಟದ ಸಂಸದರ ವಿರುದ್ಧ ಘೋಷಣೆಗಳನ್ನು ಕೂಗಿ ಅವರ ರಾಜೀನಾಮೆಗೆ ಒತ್ತಾಯಿಸಿದರು.
ನಾರಿ ಶಕ್ತಿ (ವಂದನ್) ಅಂಗೀಕಾರ ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿ ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ನಗರ ಮಹಿಳಾ ಘಟಕದ ಗೌರವ ಅಧ್ಯಕ್ಷೆ ರತ್ನಮ್ಮ ಹಿರೇಮಠ, ನಗರ ಮಹಿಳಾ ಘಟಕದ ಉಪಾಧ್ಯಕ್ಷ ಶರಣಮ್ಮ ಸಂಗನಾಳ, ತಾಲೂಕು ಅಧ್ಯಕ್ಷ ವೀರೇಶ್ ಗೌಡ್ರು ದಳಪತಿ, ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ್ ಸೊರಟೂರ್, ಎಸ್ ಟಿ ಘಟಕದ ಅಧ್ಯಕ್ಷ ರಮೇಶ್ ಡಂಬ್ರಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಏಣಗಿ, ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸಿರಾಜ್ ಬಿಜಾಪುರ್, ಕ್ರೀಡಾ ವಿಭಾಗದ ಅಧ್ಯಕ್ಷ ಸೈಯದ್ ಮಹೇಮೂದ್ ಹುಸೇನಿ ಬಲ್ಲೆ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.