ವಚನಕಟ್ಟುಗಳ ಬಸವ ಜಾಥಾ


ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿ ಸದಸ್ಯರು ವಚನಕಟ್ಟುಗಳನ್ನು ಹೊತ್ತು ಬಸವ ಜಾಥಾ ನಡೆಸಿದರು. ನಗರದ ಮಧ್ಯದಲ್ಲಿರುವ ಬಸವಣ್ಣ ದೇವಸ್ಥಾನದಿಂದ ಪ್ರವಚನ ಸ್ಥಳವಾದ ತಾಲೂಕು ಸಾರ್ವಜನಿಕ ಕ್ರೀಡಾಂಗಣದವರೆಗೆ ವಚನಕಟ್ಟುಗಳ ಬಸವ ಜಾಥಾ ಜರುಗಿತು. ನೂರಾರು ಜನ ಶರಣ ಶರಣೆಯರು ಅತ್ಯಂತ ಸಂಭ್ರಮದಿಂದ ಪಾಲ್ಗೊಂಡಿದ್ದರು.

ಭಾವಪೂರ್ಣ ಪ್ರವಚನ ಸಮಾರೋಪ ಸಮಾರಂಭ :
ಬಸವತತ್ವಗಳಲ್ಲಿನ ಸರಳತೆಯೇ ಆಕರ್ಷಣೆ ಎಂದು ಕೊಪ್ಪಳ ವಿಶ್ವವಿದ್ಯಾಲಯ ಉಪಕುಲಪತಿಗಳಾದ ಪ್ರೊ. ಎಸ್.ವಿ. ಡಾಣಿ ನುಡಿದರು. ಅವರು ಕೊಪ್ಪಳದಲ್ಲಿ ಬಸವ ಜಯಂತಿ ಪ್ರಯುಕ್ತ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿಯವರು 15 ದಿನಗಳ ಬಸವ ಭಾಷೆ ಪ್ರವಚನದ ಸಮಾರೋಪ ಸಮಾಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಬಸವಣ್ಣನವರು ಮೊದಲ ಭಾರತೀಯ ಸ್ವತಂತ್ರ ಚಿಂತಕ, ಅವರನ್ನು ಭಾರತದ ಮಾರ್ಟಿನ್ ಲೂಥರ್ ಎಂದು ಕರೆಯಬಹುದು. ಅವರು ಲಿಂಗ ಸಮಾನತೆ, ವರ್ಗ ಸಮಾನತೆ, ಕುಲ-ಜಾತಿ ನಿವಾರಣೆ, ಸಾಮಾಜಿಕ ನ್ಯಾಯವನ್ನು ಸಾಧಿಸಿದ್ದಾರೆ. ಬಾಲ್ಯವಿವಾಹ ತಪ್ಪು ಎಂಬ ಅರಿವು ಮತ್ತು ವಿಧವೆಯರಿಗೆ ಮರುಮದುವೆಯಾಗಲು ಅವಕಾಶ ನೀಡಬೇಕು ಎಂದು ಬೋಧಿಸಿದರು. ವೈಯಕ್ತಿಕ ಸ್ವಾತಂತ್ರ‍್ಯವನ್ನುಅನುಭವಿಸುವಂತೆ ಮಾಡಿದರು. ದೈವಿಕ ಇಷ್ಟಲಿಂಗವನ್ನು ಧರಿಸಿದವರೆಲ್ಲರೂ ಒಂದೇ ಮತ್ತು ಸರ್ವ ಸಮಾನರು ಎಂದು ಸಾರಿದರು. ಎಲ್ಲರೂ ಒಟ್ಟಿಗೆ ಉಣ್ಣಬೇಕು. ಪರಸ್ಪರ ರಕ್ತಸಂಬಂಧ ಬೆಳೆಸಿದಾಗ ಬಸವತತ್ವಗಳು ಸಾಕಾರವಾಗುತ್ತವೆಯೆಂದರು.
ಕೊಪ್ಪಳದ ಮುಖಂಡರಾದ ಸಿ. ವಿ. ಚಂದ್ರಶೇಖರರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ರಕರ್ತೆ ಮತ್ತು ಕರ್ನಾಟಕ ಚಲನಚಿತ್ರ ಮಂಡಳಿ ಸದಸ್ಯೆ ಸಾವಿತ್ರಿ ಮುಜಮದಾರವರು ಉಪಕುಲಪತಿಗಳನ್ನು ಒರಿಚಯಿಸಿದರು. ಪ್ರವಚನಕಾರರಾದ ಶ್ರೀ ಪ್ರಭುದೇವ ಮಹಾಸ್ವಾಮಿಗಳಿಗೆ ಪ್ರವಚನ ಕೇಳಿದ್ದ ಸಾವಿರಾರು ಜನರು ವಿಶೇಷ ಗೌರವ ನೀಡಿ ಗೌರವಿಸಿದರು. ಕಳೆದೆಲ್ಲ ವರ್ಷಗಳಿಗಿಂತ ವಿಭಿನ್ನ ಮತ್ತು ಭಾವಪೂರ್ಣವಾಗಿ ಸ್ವಾಮೀಜಿಗಳನ್ನು ಬಿಳ್ಕೊಟ್ಟರು.
ಪ್ರವಚನ ಚಿಂತನೆಯ ವಿಷಯ :
ಇವೆಲ್ಲಮಂ ತುದಿ ಮುಟ್ಟಿಸುವ ಭಾಷೆ :
ಬದುಕಿನಲ್ಲಿ ಯಾವುದೇ ಕಾರ್ಯ ಹಿಡಿಯುವುದು ಸುಲಭ, ಕೊನೆ ಮುಟ್ಟಿಸುವುದು ಕಷ್ಟ. ಹಿಡಿದುದು ಬಿಡದೆ ಕೊನೆ ಮುಟ್ಟಿಸುವವರೇ ಯಶಸ್ವಿಗಳು. ಮುಟ್ಟಿಸುವುದೆಂದರೆ ಉಸಿರಿರುವವರೆಗೆ ಕೈಕೊಂಡ ಭಾಷೆಯಂತೆ ಬದುಕುವುದು. ಸಮಾಜದಲ್ಲಿ ನಿಂತು ಸಾಧಿಸುವ ಸಾಧಕರ ಧೈರ್ಯ ಮುಖ್ಯ. ಸಾಯುವುದಕ್ಕಿಂತ ಸವೆಸುವುದು ಮಹತ್ವದ್ದು. ತನು-ಮನ-ಧನವನ್ನು ಸತ್ಕಾರಗಳಿಗಾಗಿ ನಿರಂತರ ಸವೆಸುತ್ತಾ ಬದುಕುವುದು ಸಾಮಾನ್ಯವಲ್ಲ. ಸರ್ವರಿಗೂ ಸಾಧ್ಯವಿಲ್ಲ. ಬಸವಣ್ಣನವರು “ಕರುಳು ಕುಪ್ಪಳಿಸಿದರೂ, ಶಿರ ಹರಿದು ನೆಲಕ್ಕೆ ಬಿದ್ದಡೆಯೂ ಮತ್ತೆಯೂ ಲಿಂಗಾರ್ಚನೆ-ಗುರುಸೇವೆ-ಜಂಗಮಾರಾಧನೆ ಮಾಡುವೆನೆಂಬ” ಛಲವಿದ್ದವರು. ಹಿಡಿದ ಕಾರ್ಯವನ್ನು ತುದಿ ಮುಟ್ಟಿಸುವಲ್ಲಿ, ಇವರಿಗೆ ಜಗತ್ತಿನ ಸುಖಗಳೆಲ್ಲ ತೃಣ ಸಮಾನ.
ಯಾವುದನ್ನೆ ಆಗಲಿ ಅರಿವಿನಿಂದ ಹಿಡಿಯುವುದು. ಹಿಡಿದ ಬಳಿಕ ಪ್ರಾಣ ಪ್ರೀತಿಸುವಂತೆ ಪೂರೈಸುವುದು ಶರಣತನ. ಹಿಡಿಯುವ ಮುನ್ನ ಹತ್ತು ಸಲ ಯೋಚಿಸಿ ಹಿಡಿಯಬೇಕು. ಹಸನಾದ ಕಾರ್ಯವನ್ನೆ ಹಿಡಿಯಬೇಕು. ಒಮ್ಮೆ ಹಿಡಿದ ಮೇಲೆ ನಡೆದು ತೋರಬೇಕು. ನಡೆಯೊಳಗೆ ನುಡಿಯ ಪೂರೈಸಬೇಕು. ಕಟ್ಟಿ ಬಿಡುವುದು, ಬಿಟ್ಟು ಹಿಡಿಯುವುದು, ನಡೆದು ತಪ್ಪುವುದು, ನುಡಿದು ಹುಸಿವುದು ಸಜ್ಜನಿಕೆಯಲ್ಲ. ನಿಚ್ಚ, ನಿಚ್ಚ ಪ್ರಾಯಶ್ಚಿತ್ತರನ್ನು ದೇವರು ಮೆಚ್ಚಲಾರ, ಅಡಿಗಡಿಗೆ ದೇವರಾಣೆ, ಅಡಿಗಡಿಗೆ ಗುರುವಿನಾಣೆ ಎಂಬ ವಚನವೆ ಹೊಲ್ಲ. ಇದು ಶಿವಪಥಕ್ಕೆ ಸಲ್ಲ. ಇದು ಘನಮನವಲ್ಲ.
ದೇವ ಭಕ್ತಿ ಪ್ರಿಯ, ಅಚಲವಾದ ಭಕ್ತಿಗೆ ಕಂಪಿಸುವ, ಕರುಣೆ ತೋರುವ. ಆದರೆ ಅವನ ಎಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ, ನೀನೆ ಎಲ್ಲ, ನಿನ್ನ ಹೊರತು ಮತ್ತಾರಿಲ್ಲ, ಕಾಯುವ ಕೊಲ್ಲುವ ಶಕ್ತಿ ನೀನಲ್ಲದೆ ಬೇರೆ ಮತ್ತೊಂದಿಲ್ಲವೆಂದು ಸಂಪೂರ್ಣ ಸಮರ್ಪಣ ಭಾವದಿಂದ ಶರಣಾಗಬೇಕು. ಇಂಥ ಭಕ್ತನನ್ನು ದೇವರು ಕೃಪೆತೋರಿ ಸಲಹುವನು.
ಭ್ರಷ್ಟರಾಗಿ ಮೃಷ್ಟಾನ್ನ ಉಣ್ಣುವುದಕ್ಕಿಂತ, ಭಾಷಾಬದ್ಧರಾಗಿ ಅಂಬಲಿ ಕುಡಿಯುವುದೇ ಲೇಸು. ಹಾಗೆ ಬದುಕಿದವರು ಶರಣರು. ಸತ್ಯವಿರುವಲ್ಲಿ ಸಾಮರ್ಥ್ಯವಿರುವುದು. ಶರಣರ ನುಡಿಯಲ್ಲಿ ಸತ್ಯವಿತ್ತು. ನಡೆಯಲ್ಲಿ ಸಾಮರ್ಥ್ಯವಿತ್ತು.
ಇಂದಿಂಗೆ ನಾಳಿಂಗೆ ಬೇಕೆಂದಡೆ ನಿಮ್ಮಾಣೆ ಎಂಬುದನ್ನು ಕೊನೆಯವರೆಗೂ ಪೂರೈಸಿದ ಭಾಷಾವಂತರು ಬಸವಣ್ಣನವರು. ಒಂದಲ್ಲ ಎರಡಲ್ಲ, ಅವರು ನುಡಿದ ಮಾತೆಲ್ಲ ಭಾಷೆಯೇ, ಬದುಕೆಲ್ಲ ಭಾಷೆ ಪೂರೈಸಿದ ನಡೆಯೇ. ಜಂಗಮವೇ ಲಿಂಗವೆಂಬ ಭಾಷೆ. ಬಾಯಿಸವಿಗೆ ಉಣ್ಣದ ಭಾಷೆ. ನೀನಲದನ್ಯರ ಸಾರೆನೆಂಬ ಭಾಷೆ. ಎತ್ತೆತ್ತಲೂ ನಿಮ್ಮ ತೇಜವನೇ ಕಾಂಬೆನೆಂಬ ಭಾಷೆ. ಔಷಧಿಯಿಂದ ಒಡಲ ಹೊರೆಯೆನೆಂಬ ಭಾಷೆ. ಅಪವಿತ್ರವ ಕೊಡಲೊಲ್ಲೆನೆಂಬ ಭಾಷೆ. ಮನ ವಚನದಲ್ಲಿ ನಿಮ್ಮನೆ ನೆನೆವೆನೆಂಬ ಭಾಷೆ. ನಿಮ್ಮಿಂದಧಿಕರನಾರನೂ ಕಾಣೆನೆಂಬ ಭಾಷೆ. ಹೀಗೆ ಬಸವಣ್ಣನವರ ಮಾತುಗಳೆಲ್ಲ ಭಾಷೆಯೆನಿಸಿದವು. ಅದಕ್ಕಾಗಿಯೇ ಅವರ ಮಾತುಗಳೆಲ್ಲ ಮಂತ್ರವಾದುವು. ಅವರ ನಡೆ ನುಡಿ ಬದುಕೆಲ್ಲ ಪರುಷಮಯ. ಉಸಿರೆಲ್ಲ ದೇವಮಯ.
ನಮ್ಮ ಹಿರಿಯರು ಸಹಜವಾಗಿಯೇ ಕೊಟ್ಟ ಮಾತನ್ನು ಪ್ರಾಣವಿತ್ತು ಪೂರೈಸುತ್ತಿದ್ದರು. ಇಂದು ಆಣೆ, ಪ್ರತಿಜ್ಞೆ ಮಾಡಿದ ಮಾತಿಗೂ ಅಣುವಿನಷ್ಟು ಬೆಲೆ ಕೊಡದ ಜನಾಂಗ ನಿರ್ಮಾಣವಾಗುತ್ತಿದೆ. ಮಾತು ಮಾತಿಗೂ ಒಪ್ಪಂದ ಪತ್ರ ಬರೆದು, ದಾಖಲಿಸಬೇಕಾದ ಅವಿಶ್ವಾಸದ ವಾತಾವರಣ ನಿರ್ಮಾಣವಾಗುತ್ತಿದೆ. ನಂತರ ಒಪ್ಪಂದ ಪತ್ರಕ್ಕೂ ಒಪ್ಪದೆ ಕಿರಿಕಿರಿ ಮಾಡಿ ಸ್ವಾರ್ಥ ಸಾಧಿಸುವವರೆ ಎಲ್ಲೆಲ್ಲೂ ತುಂಬಿದ್ದಾರೆ.
ಇಂಥ ಸಂದರ್ಭದಲ್ಲಿ ಬಸವಣ್ಣನವರ ಭಾಷೆ ನಿರ್ವಹಣೆಯ ಆದರ್ಶ ಮನನೀಯ. ವ್ಯಷ್ಟಿ ಸಮಷ್ಟಿಗಳ ಹಿತದೃಷ್ಟಿಯಿಂದ ಮುಂದಿನ ಜನಾಂಗ ನಡೆದು ಬರಲು ಬಸವಾದಿ ಶರಣರ ಉನ್ನತ ಮಾರ್ಗ ನಿರ್ಮಿಸೋಣ. ಆ ಮಾರ್ಗವೇ ಶರಣರ ನುಡಿಯಂತೆ ನಡೆವುದು. ಸತ್ಯವಚನವ ನುಡಿವುದು, ಸದಾಚಾರದಿ ನಡೆವುದು. ಶರಣರಾಗಿ ಬಾಳುವುದು. ಇದೇ ದೇವಮಾರ್ಗ. ವಿಶ್ವಕಲ್ಯಾಣದ ಸನ್ಮಾರ್ಗ !