ಮನೆಯಲ್ಲಿ ದೇವರ ಮನೆಗಳಿಗಿಂತ ಪುಸ್ತಕಮನೆ ನಿರ್ಮಿಸಿ; ಡಾ.ಮಾನಸ
Koppal : ಮನೆಯಲ್ಲಿ ದೇವರ ಮನೆಗಳಿಗಿಂತ ಪುಸ್ತಕಾಲಯ ನಿರ್ಮಿಸಿ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸರವರು ನುಡಿದರು. ಅವರು ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್‌ರವರ ಮನೆಯಲ್ಲಿ ಖಾಸಗಿಯಾಗಿ ನಿರ್ಮಿಸಿಕೊಂಡಿರುವ ‘ಶಶಾಂಕ ಮನೆ ಗ್ರಂಥಾಲಯ’ವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಇಂದು ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಮನೆಯನ್ನು ವೈಭವ ಪೂರ್ಣವಾಗಿ ಕೋಟಿ ರೂಪಾಯಿಗಳ ಲೆಕ್ಕದಲ್ಲಿ ನಿರ್ಮಿಸಿಕೊಳ್ಳುತ್ತಾರೆ ಆದರೆ ಅದೇ ಮನೆಯಲ್ಲಿ ಹತ್ತು ಪುಸ್ತಕಗಳನ್ನು ಇಟ್ಟುಕೊಳ್ಳುವುದಿಲ್ಲ. ಹೀಗಾಗಿ ಓದುವ ವಾತವರಣ ಕಡಿಮೆಯಾಗುತ್ತಿದೆ. ಮೋಬೈಲ್ ಗೀಳು ಮನೆಯ ವಾತವರಣವನ್ನೇ ಹಾಳು ಮಾಡುತ್ತಿದೆ, ಆದರೂ ಅದರ ದಾಸರಾಗುತ್ತಿರುವುದು ದುರಂತದ ಸಂಗತಿ. ಆದ್ದರಿಂದ ನಮ್ಮ ಪ್ರಾಧಿಕಾರವು ಮನೆಗೊಂದು ಗ್ರಂಥಾಲಯ ಎಂಬ ಧ್ಯೇಯದೊಂದಿಗೆ ರಾಜ್ಯದ ತುಂಬೆಲ್ಲಾ ಸಂಚರಿಸಿ ಒಂದು ಲಕ್ಷ ಮನೆ ಗ್ರಂಥಾಲಯ ಸ್ಥಾಪನೆಯ ಉದ್ಧೇಶ ಹೊಂದಿದ್ದೇವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಡಾಯ ಸಾಹಿತಿ ಪ್ರೊ.ಅಲ್ಲಮಪ್ರಭು ಬೆಟ್ಟದೂರುರವರು ಮಾತನಾಡಿ ಹಿಂದೆ ಹೆಣ್ಣುಮಕ್ಕಳು ಕಥೆ. ಕಾದಂಬರಿ ಓದುವ ಹವ್ಯಾಸ ಇಟ್ಟುಕೊಂಡಿದ್ದರು, ಹಿಂದಿನ ಧಾರವಾಹಿಗಳ ಹಾವಳಿಯ ಕಾಲಘಟ್ಟದಲ್ಲಿ ಅವರೂ ಓದುವ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಮನೆಯಲ್ಲಿಯೇ 10-20 ಪುಸ್ತಕಗಳ ಸಂಗ್ರಹ ಇಟ್ಟುಕೊಂಡು ಮತ್ತೆ ಓದು ಹವ್ಯಾಸ ರೂಢಿಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ.ಶರಣಬಸಪ್ಪ ಕೋಲ್ಕರ್, ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕರಾದ ಜಿ.ಎಸ್.ಗೋನಾಳ ಮತ್ತು ಸದಸ್ಯರಾದ ಕರಿಸಿದ್ದನಗೌಡ ಮತ್ತು ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್‌ರವರು ಉಪಸ್ಥಿತರಿದ್ದರು, ಅಶೋಕ ಓಜಿನಹಳ್ಳಿಯವರು ಕಾರ್ಯಕ್ರಮ ನಿರೂಪಿಸಿದರು. ನಂತರ ಮೊದಲ ಹಂತದಲ್ಲಿ ಕೊಪ್ಪಳ ನಗರದ ಸಾಹಿತಿಗಳಾದ ಮಂಜುನಾಥ ಚಿತ್ರಗಾರ, ಶಾರದಾ ರಜಪೂತ, ಜಿ.ಎಸ್.ಗೋನಾಳ ಮತ್ತು ಸಾವಿತ್ರಿ ಮುಜಮದಾರ ಮನೆಗ್ತಂಥಾಲಯಗಳನ್ನು ಉದ್ಘಾಟಿಸಿ ಪ್ರಮಾಣಪತ್ರ ವಿತರಿಸಲಾಯಿತು.
