ವಿದ್ಯಾನಿಕೇತನ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತಿದೊಡ್ಡ ಸಾಧನೆ – ರಾಜ್ಯ ಮಟ್ಟದಲ್ಲಿ ಮೆರಗು
ಗಂಗಾವತಿ: ಜಿಲ್ಲೆಯ ಖ್ಯಾತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಶ್ರೀ ವಿದ್ಯಾನಿಕೇತನ ವಿದ್ಯಾ ಸಂಸ್ಥೆಗಳು ಪಿಯುಸಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ದಾಖಲಿಸಿ ರಾಜ್ಯ ಮಟ್ಟದಲ್ಲಿ ಮೆರಗು ಮೂಡಿಸಿವೆ.
ಈ ಬಾರಿ ನಡೆದ ಪಿಯುಸಿ ಪರೀಕ್ಷೆಯಲ್ಲಿ 600 ಅಂಕೆಗಳಿಗೆ 598 ಅಂಕಗಳನ್ನು ಗಳಿಸಿ ವಿದ್ಯಾರ್ಥಿನಿ ಯು. ಶ್ರಾವಣಿ ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಅದೇ ರೀತಿ ಅರ್ಜುನ್ ತೃತೀಯ ರ್ಯಾಂಕ್‌ನ್ನು ತನ್ನದಾಗಿಸಿಕೊಂಡಿದ್ದು, ವೈಷ್ಣವಿ ಸೇರಿದಂತೆ ಒಟ್ಟು 36 ವಿದ್ಯಾರ್ಥಿಗಳು 590ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಗಳ ಅಧ್ಯಕ್ಷರು ನೆಕ್ಕಂಟಿ ಸೂರಿ ಬಾಬು ಸಂತೋಷ ವ್ಯಕ್ತಪಡಿಸಿದರು.
ಈ ಅಪೂರ್ವ ಸಾಧನೆಯಿಂದ ಶ್ರೀ ವಿದ್ಯಾನಿಕೇತನ ವಿದ್ಯಾ ಸಂಸ್ಥೆಗಳ ಹೆಸರು ರಾಜ್ಯದಾದ್ಯಂತ ಪ್ರಖ್ಯಾತಿ ಪಡೆದುಕೊಂಡಿದ್ದು, ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಪೋಷಕರಿಗೆ ಹೆಮ್ಮೆ ತಂದಿದೆ.“ಈ ವರ್ಷ ನಮ್ಮ ಸಂಸ್ಥೆ ರಾಜ್ಯ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆಯುವ ಅವಕಾಶ ಇದ್ದರೂ ಸ್ವಲ್ಪ ಅಂತರದಿಂದ ತಪ್ಪಿಹೋಯಿತು. ಆದರೂ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ರಾಜ್ಯದ ಪ್ರಥಮ ರ್ಯಾಂಕ್ ನಮ್ಮ ಸಂಸ್ಥೆಗೆ ಬರಲೆಂದು ಪ್ರಯತ್ನಿಸುತ್ತೇವೆ” ಎಂದು ಸಂಸ್ಥೆಗಳ ಅಧ್ಯಕ್ಷರಾದ ನೆಕ್ಕಂಟಿ ಸೂರಿಬಾಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ, ವಿದ್ಯಾರ್ಥಿಗಳ ಪರಿಶ್ರಮ, ಉಪನ್ಯಾಸಕರ ಮಾರ್ಗದರ್ಶನ ಹಾಗೂ ಪೋಷಕರ ಸಹಕಾರದಿಂದ ಈ ಯಶಸ್ಸು ಸಾಧ್ಯವಾಗಿದೆ ಎಂದು ಹೇಳಿದರು. ನಂತರ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಬೇಕೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾಗಿ ಮಲ್ಲಿಕಾರ್ಜುನ್, ಜಗನ್, ಉಮಾಮಹೇಶ್ವರ, ಅಭಿಷೇಕ್ ಹಾಗೂ ಸಂಸ್ಥೆಯ ವೈಸ್ ಚೇರ್ಮನ್ ನೆಕ್ಕಂಟಿ ಆದರ್ಶ್ ಉಪಸ್ಥಿತರಿದ್ದರು. ಜೊತೆಗೆ ಅಕಾಡೆಮಿಕ್ ಸದಸ್ಯರಾದ ನಲಿನಿ, ಶಾಂತಿ ಐಟಿ ಸಿಇಒ ಫೌಂಡೇಶನ್‌ನ ಪ್ರತಿನಿಧಿಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಂಸ್ಥೆಯ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಮತ್ತು ಪೋಷಕರು ಈ ಸಾಧನೆಗೆ ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
