ಎಐ ಆಧಾರಿತ ಡಿಜಿಟಲ್ ಆಪ್ ಮೂಲಕ ಶಿಕ್ಷಣದಲ್ಲಿ ಕ್ರಾಂತಿ: ಶ್ರೀ ವಿದ್ಯಾನಿಕೇತನ ಸಂಸ್ಥೆಯ ಮಹತ್ವಾಕಾಂಕ್ಷಿ ಹೆಜ್ಜೆ

ಗಂಗಾವತಿ: ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳನ್ನು ತರಲು ಶ್ರೀ ವಿದ್ಯಾನಿಕೇತನ ವಿದ್ಯಾ ಸಂಸ್ಥೆ ಮಹತ್ವದ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಉಪನ್ಯಾಸಕರು ಸೇರಿ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಡಿಜಿಟಲ್ ಆಪ್ ಅನ್ನು ಅಭಿವೃದ್ಧಿಪಡಿಸಿದ್ದು, ಇದು ಶಿಕ್ಷಣದಲ್ಲಿ ಕ್ರಾಂತಿ ಮೂಡಿಸುವ ದಿಶೆಯಲ್ಲಿ ಮುಂದಾಗಿದೆ.
ಸಂಸ್ಥೆಯ ಐಟಿ ಸಿಇಒ ಶಾಂತಿ ಅವರು ಮಾಹಿತಿ ನೀಡಿದ್ದು, ಈ ಆಪ್ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ನಡುವಿನ ಅಂತರವನ್ನು ಕಡಿಮೆ ಮಾಡಿ, ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ ಎಂದರು. ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಗುರುತಿಸಿ, ಅವರಿಗೆ ತಕ್ಷಣ ಪೂರಕವಾದ ಮಾಹಿತಿಯನ್ನು ಒದಗಿಸುವಲ್ಲಿ ಈ ಆಪ್ ಸಹಾಯಕವಾಗಲಿದೆ ಎಂದು ತಿಳಿಸಿದರು.
ಇದೆ ಶೈಕ್ಷಣಿಕ ವರ್ಷದಿಂದಲೇ ಈ ಆಪ್ ಜಾರಿಗೆ ಬರಲಿದ್ದು, ಶಿಕ್ಷಕರ ಕ್ಲೆರಿಕಲ್ ಕೆಲಸದ ಒತ್ತಡವನ್ನು ಕಡಿಮೆ ಮಾಡುವುದರ ಮೂಲಕ ಅವರು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಸಮಯ ನೀಡಲು ಅವಕಾಶ ಕಲ್ಪಿಸುತ್ತದೆ. ಇದರೊಂದಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಕೌಶಲ್ಯಗಳನ್ನು ವೃದ್ಧಿಸುವುದಕ್ಕೂ ಇದು ನೆರವಾಗಲಿದೆ.
ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಈ ಆಪ್ ಉಚಿತವಾಗಿ ನೀಡಲಾಗುತ್ತಿದ್ದು, ಅವರ ಶೈಕ್ಷಣಿಕ ಅಭಿವೃದ್ಧಿಗೆ ಇದು ಪ್ರಮುಖ ಸಾಧನವಾಗಲಿದೆ. ಸಂಸ್ಥೆಯ ತಾಂತ್ರಿಕ ತಂಡವೇ ಈ ಆಪ್ ಅನ್ನು ಅಭಿವೃದ್ಧಿಪಡಿಸಿದ್ದು, ಮುಂದಿನ ದಿನಗಳಲ್ಲಿ ಇದರ ಮಾರ್ಕೆಟಿಂಗ್ ಮಾಡುವ ಯೋಜನೆಯೂ ಇದೆ.
ಜಿಲ್ಲೆ ಈಗಾಗಲೇ ಕರ್ನಾಟಕ ರಾಜ್ಯದ ಟಾಪ್ 20 ಶಿಕ್ಷಣ ಮಟ್ಟದಲ್ಲಿ ಸ್ಥಾನ ಪಡೆದಿದ್ದು, ಈ ಆಪ್ ಸಹಾಯದಿಂದ ಟಾಪ್ 10ರಲ್ಲಿ ಸ್ಥಾನ ಪಡೆಯುವ ವಿಶ್ವಾಸವನ್ನು ಶಾಂತಿ ಅವರು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಭವಿಷ್ಯವನ್ನು ಭದ್ರಗೊಳಿಸುವ ಕೈಪಿಡಿಯಂತೆ ಈ ಆಪ್ ಕಾರ್ಯನಿರ್ವಹಿಸಲಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಿನ್ಸಿಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.