ಚರಿತ್ರೆ ರಕ್ಷಿಸಿದರೆ ಮಾನವ ಸಂಸ್ಕೃತಿ ಉಳಿಯುತ್ತದೆ: ಪ್ರೊ. ಅಲ್ಲಮಪ್ರಭು ಬೆಟ್ಟದೂರು

Get real time updates directly on you device, subscribe now.

*ಕೊಪ್ಪಳ :* ಚರಿತ್ರೆ ರಕ್ಷಿಸಿದರೆ ಮಾನವ ಸಂಸ್ಕೃತಿ ಉಳಿಯುತ್ತದೆ, ಚರಿತ್ರೆಯನ್ನು ಉಳಿಸುವ ಮನಸ್ಸುಗಳು ಎಚ್ಚರಗೊಳ್ಳಬೇಕಿದೆ ಎಂದು ಬಂಡಾಯ ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರ ಅವರು ನುಡಿದರು. ಇಲ್ಲಿನ ಶಾಸನಗಳು ಸ್ಮಾರಕಗಳು ಚರಿತ್ರೆಯನ್ನು ರೂಪಿಸುವಲ್ಲಿ ಬಹಳ ಸಹಕಾರಿಯಾಗಲಿವೆ. ಅವುಗಳನ್ನು ಉಳಿಸಿ ಮುಂದಿನ ಜನಾಂಗಕ್ಕೆ ತಲುಪಿಸಬೇಕಾಗಿರುವುದು ತೀರಾ ಅಗತ್ಯ ಎಂದರು. ಅವರು ಮೇಘನಾ ಪ್ರಕಾಶನ, ಕೊಪ್ಪಳ ಮತ್ತು ಕಾರಾಗೃಹ ಹಾಗೂ ಸುಧಾರಣಾ ಸೇವಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್ ಅವರ *‘ಕೊಪ್ಪಳ ಚರಿತ್ರೆ ಮತ್ತು ಸಂಸ್ಕೃತಿಯ ಹುಡುಕಾಟ’* ಎಂಬ ಸಂಶೋಧನಾ ಕೃತಿಯ ಕುರಿತು ಮಾತನಾಡಿದರು. ಈ ಕೃತಿಯನ್ನು ಸ್ವಾತಂತ್ರö್ಯ ಹೋರಾಟಗಾರರಾದ ನಾರಾಯಣಾಚಾರ ಎಸ್. ಮಾದಿನೂರ ಅವರು ಬಿಡುಗಡೆ ಮಾಡಿದರು.
ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಶರಣಬಸಪ್ಪ ಬಿಳಿಎಲಿ ಅವರು ‘ಭವಿಷ್ಯದ ಬದುಕಿಗೆ ಪರಿವರ್ತನೆ ಹಾದಿ’ ಎಂಬ ವಿಷಯದ ಕುರಿತು ಕಾರಾಗೃಹದ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಮನುಷ್ಯನ ಮೇಲೆ ಅನೇಕ ಒತ್ತಡಗಳಿವೆ. ಅವುಗಳನ್ನು ನಿಯಂತ್ರಣ ಮಾಡಿಕೊಳ್ಳುವ ಶಕ್ತಿ ಅವನಲ್ಲಿಯೇ ಇರುತ್ತದೆ. ತಮ್ಮ ತಪ್ಪುಗಳನ್ನು ಬೇರೆಯವರ ಮೇಲೆ ಹಾಕುವ ಬದಲು ತಮ್ಮನ್ನು ತಾವು ಅರಿತುಕೊಂಡಾಗ ಯಾವುದೇ ಅನಾಹುತಗಳು ಸಂಭವಿಸುವುದಿಲ್ಲ ಅಲ್ಲದೇ ಮನುಷ್ಯನ ಎಲ್ಲಾ ಚಟುವಟಿಕೆಗಳಿಗೆ ಮನಸ್ಸೇ ಕಾರಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಅಧೀಕ್ಷಕರಾದ ವಿಜಯಕುಮಾರ ಚೌವ್ಹಾಣ ಅವರು ಮಾತನಾಡುತ್ತಾ, ನಿವಾಸಿಗಳಿಗೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಬಂಧಿ ಎನ್ನುವ ಭಾವನೆಗಳು ತರದೇ ನಿರಂತರವಾಗಿ ಅವರನ್ನು ಮಾನಸಿಕವಾಗಿ ಸದೃಢವಾಗಿಸಲು ನಮ್ಮ ಸಿಬ್ಬಂದಿ ನಿರಂತರವಾಗಿ ಪ್ರಯತ್ನ ಮಾಡುತ್ತಿರುವರು ಎಂದರು. ಅಲ್ಲದೇ ನಿವಾಸಿ ಬಂಧಿಗಳ ಸಂಖ್ಯೆ ಸಮಾಜದಲ್ಲಿ ಕಡಿಮೆಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕಾರಾಗೃಹದ ಸಿಬ್ಬಂದಿಗಳಾದ ರಾಮುಲು, ಪಿ.ಕೆ. ಕೋಮ್ಸಿಕರ ಮುಂತಾದವರ ಜೊತೆಗೆ ಖ್ಯಾತ ಲಲಿತ ಪ್ರಬಂಧಕಾರರಾದ ಈರಪ್ಪ ಕಂಬಳಿ, ಹಿರಿಯ ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡರ, ಡಾ. ಬಸವರಾಜ ಪೂಜಾರ, ನಗರಸಭೆ ಮಾಜಿ ಸದಸ್ಯರಾದ ಪ್ರಾಣೇಶ ಮಾದಿನೂರ, ಆದೇಶ ಎ.ಜಿ., ಗುರುರಾಜ, ಪ್ರತಾಪ, ಸುಂದರ ಮೇಟಿ, ಪ್ರದೀಪ ಬಳ್ಳೊಳ್ಳಿ, ಮಂಜುನಾಥ, ರವಿ ಸುಣಗಾರ ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಬಸಮ್ಮ ಹಾಗೂ ನೇತ್ರಾವತಿ ನೆರವೇರಿಸಿದರು. ಡಾ. ಮಂಜುನಾಥ ಬಡಿಗೇರ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಕೃತಿ ಲೇಖಕರಾದ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಅಶೋಕ ಓಜಿನಹಳ್ಳಿ ನಿರೂಪಿಸಿದರು. ಕೊನೆಯಲ್ಲಿ ಶ್ರೀಧರ ವಾಣಿ ಅವರು ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!