ರಾಜ್ಯದ ಸರ್ವರ ಪಾಲಿನ ಕಲ್ಯಾಣದ ಬಜೆಟ್: ಸಚಿವ ಶಿವರಾಜ್ ತಂಗಡಗಿ

Budget for the welfare of all in the state: Minister Shivraj Thangadgi
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ದಾಖಲೆಯ 17ನೇ ಬಜೆಟ್ ನಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಸರ್ವ ಜನರ ಕಲ್ಯಾಣಕ್ಕೆ ಒತ್ತು ನೀಡಿದ್ದು, ಇದು ಹಿಂದುಳಿದ, ದೀನ-ದಲಿತರ ಜನಪರವಾದ ಬಜೆಟ್ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ತಿಳಿಸಿದ್ದಾರೆ.
ಆರ್ಥಿಕ ಶಿಸ್ತಿನನಿಂದ ಕೂಡಿದ ಬಜೆಟ್ ಇದಾಗಿದ್ದು, ತಮ್ಮ ಸುದೀರ್ಘವಾದ 17ನೇ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಪಂಚ ಗ್ಯಾರಂಟಿ ಯೋಜನೆಗಳಿಗೆ ಅನುದಾನವನ್ನು ಒದಗಿಸುವ ಮೂಲಕ ಇತರ ಕ್ಷೇತ್ರಗಳಿಗೂ ಸಮಾನ ಆದ್ಯತೆ ನೀಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಕೃಷಿ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಮೂಲಸೌಕರ್ಯ, ಮಹಿಳಾ ಮತ್ತು ಮಕ್ಕಳು, ಆರೋಗ್ಯ, ಎಐ ಕೌಶಲ್ಯಾಭಿವೃದ್ಧಿ ಹಾಗೂ ಕೆರೆ ತುಂಬಿಸುವ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅನ್ನದಾತನಿಗಾಗಿ ರೂ. 100 ಕೋಟಿ ವೆಚ್ಚದಲ್ಲಿ ‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಯೋಜನೆ, ಸಸ್ಯ ಸಂಜೀವಿನಿ, ಅಥಣಿಯಲ್ಲಿ ಕೃಷಿ ಕಾಲೇಜನ್ನು ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಲಾಗಿದೆ.
16 ವರ್ಷಗಳ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧ, ಪ್ರತಿ ಜಿಲ್ಲೆಯಲ್ಲಿ ಸಹಕಾರ ಕೇಂದ್ರ ಸ್ಥಾಪನೆ, ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಸೇರಿದಂತೆ ಉತ್ತಮ ಬಜೆಟ್ ನ್ನು ಮಂಡಿಸಿದ್ದಾರೆ.
ಇನ್ನು ಎಜುಕೇಷನ್ ಹಬ್ ಆಗಿರುವ 9 ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 150 ಸಂಖ್ಯಾ ಬಲದ 50 ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯ ಸ್ಥಾಪನೆ, ಮಡಿವಾಳ ಸಮಾಜದ ನಿರುದ್ಯೋಗ ಯುವಕ- ಯುವತಿಯರಿಗೆ ಸ್ವಯಂ ಉದ್ಯೋಗಕ್ಕಾಗಿ ಆಧುನಿಕ ಲಾಂಡ್ರಿಗಳನ್ನು ಸ್ಥಾಪಿಸಲು 5 ಲಕ್ಷ ದವರೆಗೆ ಶೇ.4 ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಸವಿತಾ ಸಮಾಜದವರು ಸಲೂನ್ ಶಾಪ್ ತೆರೆಯಲು ಶೇ.4ರಷ್ಟು ಬಡ್ಡಿದರಲ್ಲಿ 10 ಲಕ್ಷ ರೂ.ಗಳವರೆಗೆ ಸಾಲ ಮತ್ತು ಸಹಾಯಧನ ನೀಡುವ ಯೋಜನೆಗೆ ಸಚಿವರು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮಡಿವಾಳ ಸಮುದಾಯದ ಅಭಿವೃದ್ಧಿಗೆ ವಾಷಿಂಗ್ ಮೆಷಿನ್, ಡ್ರೈ ಮತ್ತು ಐರನಿಂಗ್ ಮೆಷಿನ್ ಇತ್ಯಾದಿ ಸಾಮಗ್ರಿಗಳನ್ನು ಒಳಗೊಂಡಂತೆ ತಲಾ 75 ಲಕ್ಷ ರೂ.ಘಟಕ ವೆಚ್ಚದಲ್ಲಿ ಆಧುನಿಕ ಲಾಂಡ್ರಿ ಗಳನ್ನು ಸ್ಥಾಪಿಸುವ ಯೋಜನೆ ಉತ್ತಮವಾಗಿದೆ.
ಅಲ್ಲದೆ, ಡಾ.ಜಿ.ಎಸ್. ಶಿವರುದ್ರಪ್ಪ ಅವರ ಶತಮಾನೋತ್ಸವದ ಅಂಗವಾಗಿ ಕಾರ್ಯಕ್ರಮ ಆಯೋಜನೆ, ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿಕೆ. ಬೆಳವಾಡಿ ಮಲ್ಲಮ್ಮ ಮತ್ತು ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಲುವ ಉದ್ದೇಶಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವರಪಾಲಿನ ಬಜೆಟ್ ಮಂಡಿಸಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಜಿಲ್ಲೆಗೆ ಸಿಕ್ಕಿದ್ದು
* ತುಂಗಭದ್ರಾ ಅಣೆಕಟ್ಟಿನ ಶಿಥಿಲಗೊಂಡಿರುವ 33 ಗೇಟ್ ಗಳನ್ನು ಬದಲಾಯಿಸಿ ಹೊಸ ಗೇಟ್ ಗಳನ್ನು ಅಳವಡಿಸಲಾಗುವುದು. ಜಲಾಶಯದಲ್ಲಿ ಹೂಳಿನ ಶೇಖರಣೆಯಿಂದ ನೀರಿನ, ಸಂಗ್ರಹಣಾ ಸಾಮರ್ಥ್ಯದ ಕೊರತೆಯನ್ನು ನೀಗಿಸಲು ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣ ಸೇರಿದಂತೆ ಇತರೆ ಪರ್ಯಾಯ ಮಾರ್ಗೋಪಾಯಗಳ ಕುರಿತು ಈಗಗಲೇ ಚಿಂತಿಸಲಾಗಿದೆ. ಇವುಗಳಲ್ಲಿ ಸಮಯೋಚಿತ ಪರ್ಯಾಯ ಮಾರ್ಗದ ಕುರಿತು ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚಿಸಿ ತುಂಗಭದ್ರಾ ಮಂಡಳಿಯ ಸಹಮತಿಯೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ತೀವ್ರ ತರವಾಗಿ ಪ್ರಯತ್ನಿಸಲಾಗುವುದು.
* ಕೊಪ್ಪಳ ಜಿಲ್ಲೆಯ ಯಲಬುರ್ಗಾ , ಕುಕನೂರು ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಿಸಲು ಕೆರೆಗಳ ಆಧುನೀಕರಣ, ಅಣೆಕಟ್ಟು ಮತ್ತು ಪಿಕ್- ಅಪ್ ಹಾಗೂ ಚೆಕ್ ಡ್ಯಾಂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
* ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ 75 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 23 ಪಾಲಿಟೆಕ್ನಿಕ್ ಹಾಗೂ ಐದು ಇಂಜಿನಿಯರಿಂಗ್ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು.
* ಕೊಪ್ಪಳ ಜಿಲ್ಲೆಯ ಬೇವೂರು ಗ್ರಾಮಗಳಲ್ಲಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜುಗಳನ್ನು ತಲಾ 18 ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲಾಗುವುದು.
* ಕೊಪ್ಪಳ ಜಿಲ್ಲೆಯಲ್ಲಿ ತೃತೀಯ ಹಂತದ ಕ್ಯಾನ್ಸರ್ ಆರೈಕೆ ಒದಗಿಸಲು ಕ್ಯಾನ್ಸರ್ ಆಸ್ಪತ್ರೆಯನ್ನು ಮುನಿರಾಬಾದ್- ಟಿ.ಬಿ.ಡ್ಯಾಂನಲ್ಲಿ ಸ್ಥಾಪಿಸಲಾಗುವುದು.
* ಜಿಲ್ಲೆಯಲ್ಲಿರುವ ಕಾರ್ಮಿಕ ರಾಜ್ಯ ವಿಮಾ(ESI) ಚಿಕಿತ್ಸಾಲಯಗಳನ್ನು ಉನ್ನತೀಕರಿಸಲಾಗುವುದು.
* ಕೊಪ್ಪಳದ ಜಿಟಿಟಿಸಿ – ಎಂಎಸ್ ಡಿಸಿಯಲ್ಲಿ M/s Aequs Toy Cluster Industryಯ ಕಾರ್ಯತಂತ್ರದ ಸಹಯೋಗದೊಂದಿಗೆ precision Tool Engineering ನಲ್ಲಿ ತಂತ್ರಜ್ಞಾನ ಕೇಂದ್ರವನ್ನು ಕೆಕೆಆರ್ ಡಿಬಿಯ 10 ಕೋಟಿ ಅನುದಾನದೊಂದಿಗೆ ಒಟ್ಟಾರೆ 20 ಕೋಟಿ ವೆಚ್ಚದಲ್ಲಿ ಸ್ಥಾಪನೆ ಮಾಡಲಾಗುವುದು.
* ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ ಹಾಗೂ 23 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು 125 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.
* ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯದ ಜಿಲ್ಲೆಯಲ್ಲಿ ನಾಲ್ಕು ಕೋಟಿ ವೆಚ್ಚದಲ್ಲಿ ತಾರಾಲಯ ನಿರ್ಮಾಣ.
* ಕುಕನೂರಿನಲ್ಲಿ ಎರಡು ಕೋಟಿ ವೆಚ್ಚದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ.
* ಅಂಜನಾದ್ರಿ ಬೆಟ್ಟವನ್ನು ವಿಶ್ವ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು 100 ಕೋಟಿ ವೆಚ್ಚದ ಯೋಜನೆ ರೂಪಿಸಲಾಗುವುದು.
Comments are closed.