ವಿದ್ಯಾರ್ಥಿಗಳಿಂದ ರಾಜ್ಯ ಬಜೆಟ್ ನೇರ ಪ್ರಸಾರ ವೀಕ್ಷಣೆ

– ವಿದ್ಯಾರ್ಥಿಗಳಿಗೆ ಮುಂಗಡ ಪತ್ರಗಳ ಜ್ಞಾನ ಅಗತ್ಯ: ಪ್ರೊ.ಮಾರಪ್ಪ
ಗಂಗಾವತಿ: ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಳ ವಿದ್ಯಾರ್ಥಿಗಳಿಗೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಮಾರ್ಚ್ 6ರಂದು ನಡೆದ ರಾಜ್ಯ ಬಜೆಟ್‌ನ ನೇರ ಪ್ರಸಾರ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಜೆ ಕೃಷ್ಣ ಮತ್ತು ಡಾ.ಕೆ ಎನ್ ರವಿ ಅವರು ರಾಜ್ಯದ ಮುಂಗಡ ಪತ್ರದ ಮುಖ್ಯಾಂಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು. ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಈ ಸಾಲಿನ ಬಜೆಟ್‌ನಲ್ಲಿ ದೊರೆತಿರುವ ಸೌಲಭ್ಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪಾವಗಡದ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಮಾರಪ್ಪ. ಕೆ. ಓ ಮಾತನಾಡಿ, ವಿದ್ಯಾರ್ಥಿಗಳಿಗೆ ಮುಂಗಡ ಪತ್ರದ ತಿಳುವಳಿಕೆ ಆತ್ಯಗತ್ಯವಾಗಿದ್ದು, ಪ್ರಚಲಿತ ಆರ್ಥಿಕ ಸಂಗತಿಗಳ ಕುರಿತಂತೆ ಚರ್ಚೆ ಮತ್ತು ಸಂವಾದಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ್ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ಪ್ರಚಲಿತ ವಿದ್ಯಮಾನ ಎನಿಸಿರುವ ದೇಶ ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಮುಂಗಡ ಪತ್ರಗಳ ಬಗ್ಗೆ ಅರಿಯುವುದು ಸಮಯೋಚಿತ ಮತ್ತು ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಬಾರಿಕಾರ ಫಣಿರಾಜ್, ಉಪನ್ಯಾಸಕರಾದ ಡಾ.ಮಂಜುಳಾ ಪಾಟೀಲ್, ಡಾ. ಹನುಮಂತ, ಶ್ರೀಮತಿ ಸುನಂದ ಸತೀಶ್ ಹಾಗೂ ಮಹಾವಿದ್ಯಾಲಯದ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
Comments are closed.