
ಕುಷ್ಟಗಿ: ಸಮಾಜದ ಕೆಲಸ ದೇವರಿಗೆ ಸಲ್ಲುವ ಸೇವೆಯಾಗಿದೆ. ಇದನ್ನು ಅರಿತು ನಿಸ್ವಾರ್ಥದಿಂದ ಮಾಡುವ ಮನಸ್ಸುಗಳಿಗೆ ಭವಿಷ್ಯದಲ್ಲಿ ಜೀವನಕ್ಕೆ ಒಳ್ಳೆಯದಾಗಲಿದೆ ಎಂದು ಕಾನೂನು ಅಭಿಯೋಜನಾ ಇಲಾಖೆಯ ಬಳ್ಳಾರಿ ವಿಭಾಗದ ಹಿರಿಯ ಮುಖ್ಯ ಅಧಿಕಾರಿ ಬಿ.ಎಸ್. ಪಾಟೀಲ್ ಅವರು ಹೇಳಿದರು.
ಕುಷ್ಟಗಿ ಪಟ್ಟಣದ ವಿದ್ಯಾನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕುಷ್ಟಗಿ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಕೊಪ್ಪಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕುಷ್ಟಗಿ ನಾಗರಿಕರ ಹಿತರಕ್ಷಣಾ ಕಾರ್ಯಗಳ ಉದ್ದೇಶವಿಟ್ಟು ಕಟ್ಟಿಕೊಂಡ ಸಂಘಟನೆಯ ಊರಿನ ಹಿರಿಯರು ಸೇವಾ ಸಂಕಲ್ಪ ಶ್ಲಾಘನೀಯ. ಭ್ರಷ್ಟಾಚಾರ ಮುಕ್ತ ಸರ್ಕಾರಿ ಕಚೇರಿಗಳ ಸಾರ್ವಜನಿಕ ಸೇವೆ, ಉತ್ತಮ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯ ಸಂಘಟನೆಯ ಧ್ಯೇಯಗಳು ಬಹಳ ಅರ್ಥಪೂರ್ಣವಾಗಿವೆ. ಈ ಸಂಘಟನೆಯ ನಡೆ ಹಾಗೂ ಕಾರ್ಯಕ್ರಮಗಳು ಇತರೆ ಯುವಕ ಸಂಘ-ಸಂಸ್ಥೆಗಳಿಗೆ ಮಾದರಿಯಾಗಬೇಕಿದೆ ಎಂದರು.
ನಾಗರಿಕ ಹಿತಾರಕ್ಷಣಾ ವೇದಿಕೆಯ ಉಪಾಧ್ಯಕ್ಷ ಪರಸಪ್ಪ ಅಮರಾವತಿ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಸಂಘಟನೆಯ ದ್ಯೇಯುದ್ದೇಶಗಳ ಕುರಿತು ವಿವರಿಸಿದರು.
ವೇದಿಕೆ ಅಧ್ಯಕ್ಷ ದೇವೇಂದ್ರಪ್ಪ ಕಟ್ಟೀಮನಿ, ತಜ್ಞ ವೈದ್ಯರಾದ ಡಾ.ಅಯ್ಯನಗೌಡ ಎ.ಜಿ., ಡಾ.ರಾಘವೇಂದ್ರ ಚವ್ಹಾಣ, ಡಾ.ರವಿಕುಮಾರ್ ಪಾಟೀಲ್, ಡಾ.ವಿಜಯಲಕ್ಷ್ಮೀ, ವಿನಾಯಕ ಕಣ್ಣಿನ ಪರೀಕ್ಷಾ ಕೇಂದ್ರದ ನೇತ್ರ ತಂತ್ರಜ್ಞರಾದ ಮನೋಹರ ಬಡಿಗೇರ, ನಿವೇದಿತಾ, ಪ್ರಭು ಜಹಾಗೀರದಾರ ಇತರರು ಉಪಸ್ಥಿತರಿದ್ದರು. ಕೇದಾರನಾಥ ತುರಕಾಣಿ ಕಾರ್ಯಕ್ರಮ ನಿರೂಪಿಸಿದರು.
Comments are closed.