ಅಶೋಕ ಓಜಿನಹಳ್ಳಿಯವರ ‘ದೇವರ ಡೇಟ್ ಆಫ್ ಬರ್ತ್’
(ದಿನಾಂಕ ೦೮-೦೯-೨೦೨೩ರಂದು ಕೃತಿ ಲೋಕಾರ್ಪಣೆಗೊಳ್ಳುವ ನಿಮಿತ್ಯ ಕೃತಿ ಪರಿಚಯ ಲೇಖನ)
ನಮ್ಮ ಭಾರತೀಯ ಸಂಪ್ರದಾಯದಲ್ಲಿ ದೇವರೆಂದರೆ ಸರ್ವಸ್ವ. ದೇವರಿಗೆ ಕೊಟ್ಟಷ್ಟು ಬೆಲೆ ಬೇರೆ ಯಾರಿಗೂ ಕೊಡಲಾರರು. ಅವರೇ ನಮ್ಮನ್ನು ನಡೆಸುವ, ಬದುಕಿಸುವ ಸರ್ವಶಕ್ತ. ಅವನ ಅಣತಿಯಂತೆ ಎಲ್ಲವೂ ನಡೆಯುತ್ತಿದೆ. ಅವನ ಅಸ್ತಿತ್ವದ ಹುಡುಕಾಟವಾಗಲಿ, ಇಲ್ಲವೇ ಅಧ್ಯಯನ ಮಾಡುವುದಾಗಲಿ ಅಥವಾ ಅವನ ಹುಟ್ಟಿನ ಮೂಲ ಹುಡುಕುವುದು ಅಷ್ಟು ಸುಲಭವೇ? ಅದು ನಮ್ಮ ಭಾರತೀಯ ಸಂಪ್ರದಾಯದಲ್ಲಿ ಕಷ್ಟವೇ ಸರಿ. ಯಾಕೆಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆ ದೇವರು ಬಂಧು-ಬಳಗದವರು ಅಷ್ಟೇ ಅಲ್ಲ ತಂದೆ-ತಾಯಿಗಿಂತಲೂ ಮಿಗಿಲಾದದ್ದು. ಆದರೂ ಇಂತಹ ದೇವರ ಕುರಿತು ಅನೇಕ ಹಿರಿಯರು, ವಿದ್ವಾಂಸರು ತಮ್ಮದೇ ಆದ ಶೈಲಿಯಲ್ಲಿ ಕಥೆ, ಕಾವ್ಯ, ಕಾದಂಬರಿಗಳನ್ನು ರಚಿಸಿದ್ದಾರೆ. ದೇವರ ಪೂರ್ಣ ಅಥವಾ ಭಾಗಶಃ ಅಧ್ಯಯನಗಳು ನಡೆದಂತೆ, ಜೊತೆಗೆ ಒಂದೊಂದು ಕಥೆ, ಕಾವ್ಯಗಳೂ ಸಹ ರಚನೆಯಾಗಿವೆ. ಅವು ದೇವರನ್ನು ಪರಿಚಯಿಸದಿದ್ದರೂ ಒಂದು ರಚನೆಯಂತೂ ಹೌದು. ಅಂತಹ ಒಂದು ಪ್ರಯತ್ನವಾಗಿ ಶ್ರೀ ಅಶೋಕ ಓಜಿನಹಳ್ಳಿಯವರು ತಮ್ಮ ಕಥಾ ಸಂಕಲನಕ್ಕೆ ‘ದೇವರ ಡೇಟ್ ಆಫ್ ಬರ್ತ್’ ಎಂಬ ಶೀರ್ಷಿಕೆಯನ್ನು ಇಟ್ಟಿರುವುದು ಆಲೋಚಿಸಬೇಕಾದದ್ದೇ. ಆದರೆ ಈ ಕೃತಿಯು ದೇವರ ಕುರಿತು ಕೇಂದ್ರೀತ ಅಧ್ಯಯನವಲ್ಲ. ಅದರಲ್ಲಿ ಕೇವಲ ಒಂದು ಕಥೆಯ ರೂಪದಲ್ಲಿ ಮಾತ್ರ ದೇವರ ಹೆಸರಿನ ಮೇಲೆ ನಡೆದ ಕಲಹ ಮತ್ತು ಗೊಂದಲಗಳ ಮೇಲೆ ಎಣೆಯಲಾಗಿದೆ. ಇಂದು ದೇವರ ಮೇಲೆ ನಡೆಯುತ್ತಿರುವ ಕಲಹಗಳು ಪ್ರಸ್ತುತ ಸಂಗತಿಯೂ ಹೌದು ಎನ್ನಬಹುದು.
‘ದೇವರ ಡೇಟ್ ಆಫ್ ಬರ್ತ್’ ಶ್ರೀ ಅಶೋಕ ಓಜಿನಳ್ಳಿಯವರ ಮೊದಲ ಕಥಾ ಸಂಕಲನವಾಗಿದೆ. ಅವರು ಮೊದಲೇ ಬರೆಯುವ ಹವ್ಯಾಸ ಹೊಂದಿದ್ದರೂ ಕೃತಿ ಪ್ರಕಟಿಸಿದ್ದು ಮಾತ್ರ ಇತ್ತೀಚೆಗೆ. ಇದು ಕಿರುಕಥೆಗಳ ಸಂಕಲನವಾಗಿದ್ದರೂ ಇದರಲ್ಲಿರುವ ಕಥೆಗಳು ಓದುಗರನ್ನು ಪ್ರಸ್ತುತ ಸಮಾಜದಲ್ಲಿ ನಡೆಯುವ ಘಟನೆಗಳ ಕುರಿತು ಚಿಂತನೆಗೆ ಹಚ್ಚುತ್ತವೆ. ಇದರಲ್ಲಿ ಕೆಲವು ತೀರಾ ಚಿಕ್ಕದವುಗಳಾಗಿದ್ದರೆ, ಇನ್ನು ಕೆಲವುಗಳು ಮಧ್ಯಮ ಗ್ರಾತ್ರದಲ್ಲಿವೆ. ಆದರೆ ಅವೆಲ್ಲವುಗಳು ಕಿರುಕಥೆಗಳೇ ಎಂದರೂ ನಡೆಯುತ್ತದೆ. ಇದು ಓಜಿನಹಳ್ಳಿಯವರ ಮೊದಲ ಕೃತಿ ಆಗಿರುವುದರಿಂದ ಈ ರೀತಿಯಲ್ಲಿ ಸಣ್ಣ-ಪುಟ್ಟ ಕಥೆಗಳನ್ನು ಒಟ್ಟುಗೂಡಿಸಿ ಪ್ರಕಟಿಸುವ ಪ್ರಯತ್ನ ಮಾಡಿರಬಹುದೇನೋ ಎಂದೆನಿಸುತ್ತದೆ.
ಶ್ರೀ ಅಶೋಕ ಓಜಿನಹಳ್ಳಿಯವರು ಹುಟ್ಟಿ ಬೆಳೆದದ್ದು ಪಟ್ಟಣದಲ್ಲೇಯಾದರೂ ಅವರು ಹಳ್ಳಿ ಸಂಸ್ಕೃತಿಯ ಬಗ್ಗೆ ಅಪಾರವಾಗಿ ತಿಳಿದವರು. ಯಾಕೆಂದರೆ ಅವರ ವೃತ್ತಿ ಉಪನ್ಯಾಸಕ ಆಗಿರುವುದರಿಂದ ಎಲ್ಲವನ್ನೂ ಬಲ್ಲವರಾಗಿದ್ದಾರೆ. ಸಮಾಜದಲ್ಲಿ ನಡೆಯುವ ಚಟುವಟಿಕೆಗಳನ್ನು ನಿತ್ಯ ಗಮನಿಸುವವರು. ಅಂತಹವುಗಳನ್ನು ಕಣ್ಣಾರೆ ಕಂಡವರು ಮತ್ತು ಅನುಭವಿಸಿದವರೂ ಕೂಡ. ಬಹಳ ಪ್ರಮುಖವಾಗಿ ಅಂತಹ ಜೀವನಾನುಭವಗಳನ್ನು ತಮ್ಮ ಕಥೆಗಳಲ್ಲಿ ಚಿತ್ರಿಸಿದ್ದಾರೆ. ಒಬ್ಬ ಸಾಹಿತಿ ಏನನ್ನು ಕಾಣುತ್ತಾನೆಯೋ ಅದನ್ನೂ ಕೂಡ ತಮ್ಮ ಬರವಣಿಗೆಯಲ್ಲಿ ತೋರಿಸುತ್ತಾನೆ. ಇಲ್ಲಿ ಓಜಿನಳ್ಳಿಯವರೂ ಸಹ ಅದನ್ನೇ ಮಾಡಿದ್ದಾರೆ. ತಾವು ಕಂಡ ಮತ್ತು ವಿಶೇಷವಾಗಿ ತಮ್ಮ ಮನದಲ್ಲಿ ಹರಿಬಿಟ್ಟ ಮಾತುಗಳೂ ಸಹ ಈ ‘ದೇವರ ಡೇಟ್ ಆಫ್ ಬರ್ತ್’ ಕೃತಿಯಲ್ಲಿವೆ.
ಈ ‘ದೇವರ ಡೇಟ್ ಆಫ್ ಬರ್ತ್’ ಇಪ್ಪತ್ತಾರು ಕಥೆಗಳನ್ನೊಳಗೊಂಡ ಗುಚ್ಛ. ಈ ಕೃತಿ ‘ಮೃಗ’ದೊಂದಿಗೆ ಪ್ರಾರಂಭಗೊಂಡು ‘ಒಡಲಿನ ಕಿಚ್ಚು’ವಿನೊಂದಿಗೆ ಮುಕ್ತಾಯವಾಗುತ್ತದೆ. ಮಧ್ಯದಲ್ಲಿ ಅನೇಕ ಸಂಗತಿಗಳ ಕುರಿತು ತಮ್ಮ ಮಾತುಗಳನ್ನು ಕಥೆಗಳಲ್ಲಿ ಪೋಣಿಸಿದ್ದಾರೆ. ಕಥೆಗಾರಿಗೆ ಸಮಾಜದ ಮೇಲೆ ಬಹಳಷ್ಟು ಅಸಮಧಾನವಿದ್ದಂತೆ ಕಾಣುತ್ತಿದೆ. ಮೃಗ, ಧರೆಹತ್ತಿ ಉರಿದೊಡೆ, ಕುದುರೆ, ವಿಷ, ತಂತ್ರ, ಬಿಸಿಲು ಕುದುರೆ, ಹತ್ಯೆ, ನಿರೀಕ್ಷೆ, ಅಮಾನುಷ, ಕರಿಯ, ಕಾಮ, ಸೋತವಳು, ನಾಯಹಾಲು, ಒಡಲಿನ ಕಿಚ್ಚು ಇಂತಹ ಕಥೆಗಳ ಶೀರ್ಷಿಕೆಗಳನ್ನು ಗಮನಿಸಿದಾಗ ಮತ್ತು ಆ ಕಥೆಗಳನ್ನೊಮ್ಮೆ ಓದಿದಾಗ ಬಹುಶಃ ಅದು ನಿಜವಿರಬೇಕೆನಿಸುತ್ತದೆ. ಕವಿಯಾದವನು ನೂರು ಕಥೆ-ವ್ಯಥೆಗಳನ್ನು ತನ್ನ ಒಡಳೊಳಗೆ ಇಟ್ಟುಕೊಂಡು ಬದುಕುತ್ತಿರುತ್ತಾನೆ. ಅವುಗಳನ್ನು ಕಾವ್ಯ, ಕಥೆ ಅಥವಾ ಇನ್ಯಾವುದೋ ಮಾಧ್ಯಮದ ಮೂಲಕ ಹೊರ ಹಾಕುವ ಪ್ರಯತ್ನ ಮಾಡುತ್ತಾನೆ. ಇಲ್ಲಿ ಶ್ರೀ ಅಶೋಕ ಓಜಿನಹಳ್ಳಿಯವರು ಅದನ್ನೇ ಮಾಡಿದ್ದಾರೆ. ತಮ್ಮ ಒಡಲೊಳಗಿರುವ ವೇದನೆ, ನೋವು, ಆಕ್ರೋಶಗಳನ್ನು ಕಥೆಗಳಲ್ಲಿ ಬಿಂಬಿಸಿದ್ದಾರೆ. ಅವುಗಳನ್ನು ‘ದೇವರ ಡೇಟ್ ಆಫ್ ಬರ್ತ್’ ಈ ಕೃತಿಯ ಮೂಲಕ ಹೊರಹಾಕಿದ್ದಾರೆ.
ಒಬ್ಬ ಕವಿಗೆ ಇಂತಹದ್ದೇ ವಿಷಯದ ಮೇಲೆ ಕಥೆ ಅಥವಾ ಕಾವ್ಯ ಬರೆಯಬೇಕೆಂಬ ನಿಯಮಗಳೇನೂ ಇಲ್ಲ. ಆದರೂ ಒಂದು ಪ್ರಯತ್ನ ಎಂಬಂತೆ ‘ಕಥೆ ಹುಡುಕುತ್ತಾ…’ ಹೊರಟ ಲೇಖಕರಿಗೆ ಎದುರಾದ ಸಂಗತಿಗಳು ಅನೇಕ. ಹೊಲಕ್ಕೆ ಎಮ್ಮೆ ಮೇಯಿಸಲು ಹೊರಟವ, ರೈತ, ಗೇಟ್ ಕಾಯುವ ವಾಚ್‌ಮ್ಯಾನ್, ಶಾಸಕ, ಶಾಲೆಗೆ ಹೊರಟ ಬಾಲಕ ಹೀಗೆ ದಾರಿಯಲ್ಲಿ ಎದುರಿಗೆ ಬಂದ ಅನೇಕರಿಗೆ; ‘ನಾನು ಕಥೆಗಾರ, ಕಥೆ ಬರೆಯುವವನು ತಮ್ಮ ಬಳಿ ಕಥೆ ಇದ್ದರೆೆ ಹೇಳಿ’ ಎಂದಾಗ ಅವರು ತಮ್ಮ ಬ್ಯೂಜಿ ಸೆಡ್ಯೂಲ್‌ದಲ್ಲಿ ತಮ್ಮ-ತಮ್ಮ ನೋವನ್ನು ತೋಡಿಕೊಳ್ಳುತ್ತಾ ಹೊರಟು ಹೋಗುತ್ತಾರೆ. ಅವೇ ಕಥೆಗಾರನಿಗೆ ವಸ್ತುವೇ ಆಗಿವೆ ಎಂಬುದು ವಾಸ್ತವ. ಒಂದು ರೀತಿಯಲ್ಲಿ ಎಲ್ಲರ ಬದುಕೂ ಒಂದೊಂದು ಕಥೆಗಳೇ ಆಗಿವೆ. ಕಥೆ ಹೇಳುವ ಪುರುಸೊತ್ತು ಯಾರಿಗೂ ಇಲ್ಲ. ಜೊತೆಗೆ ಕೇಳುವ ವ್ಯವದಾನವೂ ಇಲ್ಲದಿರುವುದು ವಿಷಾದನೀಯ. ಆದರೆ ಕವಿ-ಕಥೆಗಾರ ಮಾತ್ರ ಕೇಳುತ್ತಾನೆ, ಬರೆಯುತ್ತಾನೆ, ಓದುಗರ ಮುಂದಿಡುತ್ತಾನೆ. ಮುಂದಿನದು ಸಮಾಜಕ್ಕೆ ಬಿಟ್ಟದ್ದು.
ಸಮಾಜದಲ್ಲಿ ಅನೇಕ ಆತ್ಮಹತ್ಯೆಗಳು ನಡೆಯುತ್ತಿವೆ. ಅದರ ಜೊತೆಗೆ ರೈತರ ಆತ್ಮಹತ್ಯೆಗಳೂ ನಡೆಯುತ್ತಿರುವುದು ಶೋಚನೀಯ ಸಂಗತಿ. ಅವನ ಆತ್ಮಹತ್ಯೆ ತಡೆಯುವುದಿರಲಿ ಪ್ರೇರೇಪಿಸುವ ಅಮಾನವೀಯ ಘಟನೆಗಳೂ ಸಹ ಈ ಸಮಾಜದಲ್ಲಿ ನಡೆಯುವುದನ್ನು ಈ ಕೃತಿ ಅನಾವರಣ ಮಾಡುತ್ತದೆ. ಸಾಲ ಪಡೆದು ತೀರಿಸಲಾಗದ ರೈತ ಪರುಸಪ್ಪನನ್ನು ನಾಟಕೀಯವಾಗಿ ಆತ್ಮಹತ್ಯೆಗೆ ಬಡ್ಡಿನಾಗಪ್ಪ ಪ್ರೇರೇಪಿಸುತ್ತಾನೆ. ಆದರೆ ದುರ್ವಿಧಿ ಅವನ ಸಾವಿನೊಂದಿಗೆ ಕಥೆ ಮುಗಿದುಹೋಗುತ್ತದೆ. ಆದರೆ ಇದನ್ನು ಆತ್ಮಹತ್ಯೆ ಅಲ್ಲ ಇದು ‘ಹತ್ಯೆ’ ಎಂದೇ ಕರೆಯಬಹುದೇನೋ ಎಂದೆನಿಸುತ್ತದೆ. ಅದಕ್ಕಾಗಿ ಕಥೆಗಾರರು ಇದಕ್ಕೆ ಆತ್ಮಹತ್ಯೆ ಎನ್ನದೇ ‘ಹತ್ಯೆ’ ಎಂಬ ಶೀರ್ಷಿಕೆ ಇಟ್ಟಂತೆ ಕಾಣುತ್ತಿದೆ. ರೈತರ ಇಂತಹ ಆತ್ಮಹತ್ಯೆಗಳು ಮಾನವ ಸಮಾಜವನ್ನು ತಲೆತಗ್ಗಿಸುವಂತೆ ಮಾಡುತ್ತಿವೆ. ರೈತರ ಕಾಳಜಿ ಯಾರಿಗೂ ಇಲ್ಲದಿರುವುದು ವಿಷಾದನೀಯ.
ಈ ‘ಕಾಮ’ ಸದ್ದಿಲ್ಲದೆ ಮಠ-ಮಾನ್ಯಗಳಲ್ಲಿ ಹೇಗೆ ನಡೆಯುತ್ತಿದೆ ಎಂಬುದು ಅಂಧಭಕ್ತರಿಗೆ ತಿಳಿಯುವುದೇ ಇಲ್ಲ. ತನ್ನ ಕಾಮದಾಟದಲ್ಲಿ ಸರೋಜಾಳಿಗೆ ಜನಿಸಿ ಗೊತ್ತಿಲ್ಲದೇ ಬೆಳೆಯುತ್ತಿರುವ ಚಂದ್ರವೇಧ ಸ್ವಾಮಿಯನ್ನೇ ಗುರುತಿಸಲಾಗದ ಮಠಾದೀಶ ದಿನ್ನೇಶ್ವರಸ್ವಾಮಿ. ಸರೋಜಾ ತನ್ನ ಮಗನನ್ನೇ ಮಠಾಧ್ಯಕ್ಷರನ್ನಾಗಿ ಮಾಡಬೇಕೆಂದು ಹಠ ಹಿಡಿಯುವ ಕಾಮದಾಟದ ಜಗಳಗಳು ತೆರೆಮರೆಯಲ್ಲೇ ನಡೆಯುತ್ತಿರುತ್ತವೆ. ಇಂತಹ ಅನಾಚಾರಗಳನ್ನು ಮಾಡುವವರು ಸಮಸಮಾಜಕ್ಕೆ ಏನನ್ನು ಬೋಧಿಸಲು ಸಾಧ್ಯ ಎಂಬ ಪ್ರಶ್ನೆ ಈ ಕೃತಿಯ ಮೂಲಕ ಓದುಗರಲ್ಲಿ ಉದ್ಭವಿಸುತ್ತದೆ.
ಒಂದು ಹೆಣ್ಣಿನ ವ್ಯಾಮೋಹಕ್ಕೆ ಬಿದ್ದಾಗ ಇಡೀ ‘ಅಂತಃಪುರ’ವೇ ಹೇಗೆ ನಾಶವಾಗುತ್ತದೆ ಎಂಬ ಸಂಗತಿಗಳು ಚರಿತ್ರೆ ಮತ್ತು ಅನೇಕ ಪುರಾಣಗಳಗಲ್ಲಿವೆ. ಹೆಣ್ಣಿನ ಹಿಂದೆ ಬಿದ್ದವನು ರಾಜ್ಯವನ್ನೇ ಹೇಗೆ ಹಾಳುಮಾಡಿಕೊಂಡು ತನ್ನ ಅವನತಿಯ ಜೊತೆಗೆ ಪ್ರಜೆಗಳು ಮತ್ತು ತನ್ನ ಸ್ವತಃ ಹೆಂಡತಿಯನ್ನೂ ಬಲಿಕೊಟ್ಟು ಅಧೋಗತಿಗೆ ಇಳಿಯುವ ದುರಂತ ಇಲ್ಲಿದೆ. ಚಂದ್ರನಾಯಕ ತನ್ನ ವೈರಿ ಸೂರಪ್ಪನಾಯಕನನ್ನು ಎರಡುಸಲ ಯುದ್ಧದಲ್ಲಿ ಸೋಲಿಸಿ ಹಣಿದಿದ್ದ. ಸೂರಪ್ಪನಾಯಕ ಅದೇ ಸೇಡಿನಿಂದ ಸುಂದರ ಯುವತಿ ಚಂದ್ರಲೆ ಎಂಬ ಗುಪ್ತಚಾರಿಣಿಯನ್ನು ಚಂದ್ರನಾಯಕನ ರಾಜ್ಯದಲ್ಲಿ ಕಳುಹಿಸುತ್ತಾನೆ. ಅವಳ ಮೋಹಕ್ಕೆ ಬಿದ್ದ ಸೂರಪ್ಪನಾಯಕನು ಸೆರೆ ಸಿಕ್ಕು ನರಳಾಡುವ ಪ್ರಸಂಗದೊಂದಿಗೆ ಕಥೆ ಮುಕ್ತಾಯವಾಗುತ್ತದೆ.
ದೇವನೆಂದರೆ ಅಭವ. ಹುಟ್ಟು, ಸಾವು ಇಲ್ಲದವ. ಅವನ ‘ಡೇಟ್ ಆಫ್ ಬರ್ತ್’ ಕೊಡಲು ಸಾಧ್ಯವೇ? ಈ ಕಥೆ ಆಧಾರ ಕಾರ್ಡ್ ಕೇಂದ್ರದಲ್ಲಿ ನಡೆಯುವ ಸನ್ನಿವೇಶ. ದೇವರಿಗೆ ಬ್ಯಾಂಕ್ ಖಾತೆ ತೆರೆಯಲು ಆಧಾರ ಕಾರ್ಡ್ನ ಅವಶ್ಯಕಥೆ ಇತ್ತು. ಅದನ್ನು ಮಾಡಿಸಲು ಹೋದ ದೇವರಿಗೆ ಎದುರಾದ ಸಮಸ್ಯೆಗಳು ಅನೇಕ. ಅವನನ್ನು ಕೆಲವರು ದೇವರೆಂದು ಒಪ್ಪಿಕೊಂಡರೆ, ಇನ್ನು ಕೆಲವರು ಒಪ್ಪಿಕೊಳ್ಳದೇ ಜಗಳ ಶುರುವಾಗುತ್ತದೆ. ಇದು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ದುರಂತಗಳೂ ಹೌದು. ನಮ್ಮ ಭಾರತೀಯ ಸಂಪ್ರದಾಯದಲ್ಲಿ ಜಾತಿ, ಧರ್ಮ, ದೇವರುಗಳ ಹೆಸರಿನ ಮೇಲೆ ನಡೆಯುವ ಕಲಹಗಳು ನಿತ್ಯನೂತನ. ಅದನ್ನು ಕಥೆಗಾರರು ಈ ರೀತಿಯಾಗಿ ಬಳಸಿಕೊಂಡಂತೆ ಕಾಣುತ್ತದೆ. ಇಂತಹ ಕಲಹಗಳನ್ನು ತಡೆಯಲು ಸ್ವತಃ ಆ ದೇವನೇ ಬಂದರೂ ನಿಲ್ಲಲಾರವು.
ಮುನ್ನುಡಿ ಬರೆದ ನಾಡಿನ ಖ್ಯಾತ ಕಥೆಗಾರರಾದ ಡಾ.ಅಮರೇಶ ನುಗುಡೋಣಿಯವರು ‘ಸಮಾಜದಲ್ಲಿ ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಅನೈತಿಕ ಕ್ರಿಯೆಗಳಿಗೆ ಕಥಾ ರೂಪವನ್ನು ಕಥೆಗಾರರು ನೀಡಿದ್ದಾರೆ. ಅತ್ಯಂತ ವಾಸ್ತವಗಳ ಚಿತ್ರಣಗಳು ಈ ಕತೆಗಳಲ್ಲಿ ನಿರೂಪಣೆಗೊಂಡಿವೆ. ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ಅನೈತಿಕ ನೆಲೆಗಟ್ಟಿನ ಮೇಲೆ ನಿಂತಿವೆಯೋ ಎಂಬಂತೆ ಇಲ್ಲಿ ಕಾಣುತ್ತವೆ. ಕತೆ ಎಂದರೆ ಒಂದು ಘಟನೆಯನ್ನು ಓದುಗರಿಗೆ ತಲುಪಿಸುವುದು ಗುರಿ ಕತೆಗಾರರಿಗಿದೆ. ಕಥೆ ಬರೆಯುವ ತಾಳ್ಮೆ ಬೇಕು. ಕಥೆ ಎಂದರೆ ಮನುಷ್ಯ ಬದುಕಿನ ಲೋಕ. ಒಳಿತು-ಕೆಡುಕಿನ ಎದುರು ಬದುರು ನಿಲ್ಲಿಸುವುದು. ಒಳಿತಿನ ಮುಖಗಳ ನಿರೂಪಣೆಗೊಂಡರೆ ಓದುಗನ ಮನಃಪರಿವರ್ತನೆಯಾಗುತ್ತದೆ. ಆ ಮೂಲಕ ಸಮಾಜದ ಪರಿವರ್ತನೆಯಾದೀತು ಎಂಬ ನಂಬುಗೆ ಕಥೆಗಾರರಲ್ಲಿರಬೇಕು. ಅವಸರ ಬಿಟ್ಟು ತಾಳ್ಮೆಯಿಂದ ಬದುಕನ್ನು ನೋಡುವ ಕಲೆ ಅರಿತರೆ ಅಶೋಕ ಓಜಿನಹಳ್ಳಿಯವರು ಸಾಮಾಜಿಕ ಜವಾಬ್ದಾರಿಯ ಕತೆಗಳನ್ನು ಬರೆಯಬಲ್ಲರು. ಆ ಶಕ್ತಿ ಅವರಿದೆ’ ಎಂದು ಕಥೆ ಮತ್ತು ಕತೆಗಾರ ಹೇಗಿರಬೇಕು ಎಂಬ ಸಲಹೆ ಮಾತುಗಳನ್ನು ಬರೆದಿದ್ದಾರೆ. ಅವರ ಆಶಯದಂತೆ ಈ ಕೃತಿ ರಚನೆಯಾದಂತೆ ನನಗೆ ತೋರುತ್ತಿದೆ.
ಒಟ್ಟಾರೆ ಅಶೋಕ ಓಜನಹಳ್ಳಿಯವರ ‘ದೇವರ ಡೇಟ್ ಆಫ್ ಬರ್ತ್’ ಈ ಕಥಾ ಸಂಕಲನದಲ್ಲಿ ಹಲವು ನೋವು, ಹತಾಶೆ, ಕ್ರೋಧಗಳೂ ಇದರಲ್ಲಿವೆ. ಈ ಕಥೆಗಳನ್ನು ಓದುತ್ತಾ ಹೋದಾಗ ತಿಳಿದುಬರುತ್ತದೆ. ಇದು ಕಿರುಕಥಾ ಸಂಕಲನವಾದರೂ ಹಿರಿದಾದ ಸಂದೇಶಗಳನ್ನು ನೀಡುತ್ತದೆ. ಈ ಕೃತಿಯನ್ನು ನಾಡಕವಿ ಗವಿಸಿದ್ಧ ಬಳ್ಳಾರಿಯವರ ತಳಮಳ ಪ್ರಕಾಶನದಿಂದ ಪ್ರಕಟಿಸಿರುವುದು ಸೂಕ್ತವೇ ಆಗಿದೆ.
ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊ ಸಂ:-೯೪೪೮೫೭೦೩೪೦
E-mail:[email protected]
Comments are closed.