ರೈತರ ಹಕ್ಕೊತ್ತಾಯಗಳ ಈಡೇರಿಕೆಗೆ ತಕ್ಷಣ ಕ್ರಮ ಕೈಗೊಳ್ಳಲು WPI ಆಗ್ರಹ

Get real time updates directly on you device, subscribe now.

ಕೊಪ್ಪಳ :  ರೈತರ ಸಮಸ್ಯೆಗಳು ದ್ವಿಗುಣಗೊಂಡಿರುವ ಕುರಿತು ಹಾಗೂ ರೈತರ ಹಕ್ಕೊತ್ತಾಯಗಳ ಈಡೇರಿಕೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಡಬ್ಲ್ಯೂಪಿಐ ಪಾರ್ಟಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿಯನ್ನು ಸಲ್ಲಿಸಿತು.

ಮನವಿ ಪತ್ರದಲ್ಲಿ

ದೇಶದ ಬೆನ್ನೆಲುಬಾಗಿರುವ ರೈತರು ಇಂದು ಗಂಭೀರ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ರೈತರ ಬದುಕು ಹಸನಾಗಿಸುವ ಬದಲು, ಆಳುವ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ರೈತರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ರೈತರ ಆದಾಯ ದುಪ್ಪಟ್ಟು ಮಾಡುವ ಭರವಸೆ ಕೇವಲ ಘೋಷಣೆಯಾಗಿ ಉಳಿದು, ಅನ್ನದಾತನ ಬದುಕು ಅತೀವ ದುಸ್ಥಿತಿಗೆ ತಲುಪಿದೆ.

ರೈತ ದಿನಾಚರಣೆಯ ಅಂಗವಾಗಿ ವೆಲ್ವೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಈ ಜ್ಞಾಪಕ ಪತ್ರವನ್ನು ಸಲ್ಲಿಸುತ್ತಿದ್ದು, ದೇಶದ ಹಾಗೂ ರಾಜ್ಯದ ರೈತಾಪಿ ವರ್ಗ ಎದುರಿಸುತ್ತಿರುವ ಹತ್ತುಹಲವಾರು ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವುದು ನಮ್ಮ ಉದ್ದೇಶವಾಗಿದೆ. ಆಡಳಿತದಲ್ಲಿರುವ ಸರ್ಕಾರಗಳು ರೈತರ ಬಗ್ಗೆ ಯಾವುದೇ ಪ್ರಾಮಾಣಿಕ ಕಾಳಜಿ ತೋರದೆ, ಸಂಪೂರ್ಣ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಿವೆ ಎಂಬುದು ವಿಷಾದಕರ ಸಂಗತಿ.

ರಾಜ್ಯದ ರೈತರ ಬೆಳೆಗಳಿಗೆ ಉತ್ಪಾದನಾ ವೆಚ್ಚ ಆಧಾರಿತ ಸೂಕ್ತ ಬೆಲೆ ನಿಗದಿಪಡಿಸುವ ಕುರಿತು ಎಂ.ಎಸ್‌. ಸ್ವಾಮಿನಾಥನ್‌ ಆಯೋಗವು ನೀಡಿರುವ ಶಿಫಾರಸುಗಳನ್ನು ಇನ್ನೂ ಜಾರಿಗೊಳಿಸದಿರುವುದರ ಹಿಂದೆ ಕಾರ್ಪೊರೇಟ್ ಬಂಡವಾಳದ ಪ್ರಭಾವವಿರುವುದು ಜಗಜ್ಜಾಹಿರವಾಗಿದೆ. ಕಳೆದ 40-50 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ರೈತರಿಗೆ ಇನ್ನೂ ಪಟ್ಟಾ ಒದಗಿಸಲಾಗದಿರುವುದು ಈ ದೇಶದ ದೊಡ್ಡ ದುರಂತವಾಗಿದೆ.

ಪ್ರತಿ ಟನ್ ಕಬ್ಬಿನಿಂದ ಕನಿಷ್ಠ ರೂ.14,000 ರಿಂದ ರೂ.15,000 ವರೆಗೆ ಆದಾಯ ಗಳಿಸುತ್ತಿರುವ ಸಕ್ಕರೆ ಕಾರ್ಖಾನೆ ಮಾಲೀಕರು, ಕಬ್ಬು ಬೆಳೆಗಾರರನ್ನು ನಿರಂತರವಾಗಿ ಶೋಷಿಸುತ್ತಿದ್ದಾರೆ.

ಗ್ರಾಮೀಣ ಬ್ಯಾಂಕುಗಳಲ್ಲಿ ರೈತರಿಗೆ ಸಮಯಕ್ಕೆ ಸರಿಯಾಗಿ ಸಾಲ ದೊರೆಯುತ್ತಿಲ್ಲ. ಸಾಲ ನವೀಕರಣ ಮಾಡದಿದ್ದರೆ ಶೇ.14 ಬಡ್ಡಿ, ನವೀಕರಿಸಿದ ಸಾಲಕ್ಕೆ ಶೇ.4 ಬಡ್ಡಿ ವಿಧಿಸಲಾಗುತ್ತಿದೆ. ಇದರಿಂದ ರೈತರು ಖಾಸಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೊರೆ ಹೋಗುವಂತಾಗಿ, ಆತ್ಮಹತ್ಯೆಯ ದಾರಿಗೆ ತಳ್ಳಲ್ಪಡುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ಮೂಲ ಕಾರಣಗಳನ್ನು ಪರಿಗಣಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪರ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ.

ಹಕ್ಕೊತ್ತಾಯಗಳು :-

1) ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯನ್ನು ಸಂಪೂರ್ಣವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.

2) ಸಮಗ್ರ ಭೂ ಸುಧಾರಣೆಯ ಮೂಲಕ ಭೂ ಹಂಚಿಕೆ ನೀತಿಯನ್ನು ಜಾರಿಗೊಳಿಸಿ, ಪ್ರತಿ ಕುಟುಂಬಕ್ಕೆ ತಲಾ 5 ಎಕರೆ ಭೂಮಿ ನೀಡಬೇಕು.

3) ಭೂಮಿ ಮತ್ತು ವಸತಿ ವಂಚಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು.

4) 40-50 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಕೂಡಲೇ ಪಟ್ಟಾ ನೀಡಬೇಕು.

5) ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚ ಆಧಾರಿತ ಬೆಲೆ ನಿಗದಿಪಡಿಸಬೇಕು.

6) ನೀರಾವರಿ ವಂಚಿತ ರೈತರ ಸಾಗುವಳಿ ಭೂಮಿಗೆ ನೀರು ಒದಗಿಸಬೇಕು.

7) ರಾಜ್ಯ ಸರ್ಕಾರ ಘೋಷಿಸಿದಂತೆ ಟನ್ ಕಬ್ಬಿಗೆ ರೂ.150 ಪ್ರೋತ್ಸಾಹ ಧನವನ್ನು ತಕ್ಷಣ ಪಾವತಿಸಬೇಕು.

8) ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು.

9) ಕಳಪೆ ಬೀಜಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು.

10) ಗೊಬ್ಬರವನ್ನು ಸಮಯಕ್ಕೆ ಸರಿಯಾಗಿ ಮತ್ತು ಸಮರ್ಪಕ ಪ್ರಮಾಣದಲ್ಲಿ ಪೂರೈಸುವ ವ್ಯವಸ್ಥೆ ಮಾಡಬೇಕು.

ನ್ಯಾಯಸಮ್ಮತ ಬೇಡಿಕೆಗಳ ಕುರಿತು ತಾವು ಕೂಡಲೇ ಹಸ್ತಕ್ಷೇಪ ಮಾಡಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವ ಮೂಲಕ ರೈತರ ಬದುಕಿಗೆ ನ್ಯಾಯ ಒದಗಿಸಬೇಕೆಂದು ಡಬ್ಲ್ಯೂ ಪಿ ಐ ಜಿಲ್ಲಾಧ್ಯಕ್ಷ ಆದಿಲ್ ಪಟೇಲ್ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಮ್ಮದ್ ಅಲಿಮುದ್ದೀನ್,  ನಾಸಿರ್ ಮಾಳೆಕೊಪ್ಪ ಫಝೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!