ಹಾಡು ಬಿತ್ತಿ ಹೊರಟ ಹೋರಾಟದ ಜೀವ : ಬಿ.ಬಾಬು
( ಮುಂಡರಗಿಯ ಹಿರಿಯ ರಂಗಕಲಾವಿದ, ಕವಿ-ಹೋರಾಟಗಾರ, ಛಾಯಾಗ್ರಾಹಕ ಬಿ.ಬಾಬು ಅವರಿಗೆ ನುಡಿನಮನ)
– ಕಳಕೇಶ ಡಿ ಗುಡ್ಲಾನೂರ
ನಾಡಿನ ರಂಗಭೂಮಿ ತನ್ನೊಬ್ಬ ಅಪರೂಪದ ಕಣ್ಮಣಿಯನ್ನು ಕಳೆದುಕೊಂಡು ಕಳವಳಗೊಂಡಿದೆ. ರಂಗಭೂಮಿ, ಕಿರುತೆರೆ, ಸಾಹಿತ್ಯ, ಸಂಘಟನೆ, ಹೋರಾಟ – ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ಗುರುತು ಮೂಡಿಸಿದ್ದ ರಂಗನಟ ಬಿ. ಬಾಬು ಅವರು 15/12/2025 ರಂದು ಸಂಜೆ 6 ಗಂಟೆಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. 74 ವರ್ಷಗಳ ಬದುಕಿನಲ್ಲಿ ಅವರು ಕಟ್ಟಿಕೊಟ್ಟ ಕಲೆಯ ನೆನಪುಗಳು ಎಂದಿಗೂ ಮಸುಕಾಗುವುದಿಲ್ಲ.




ಕಚೇರಿ ಬಿಟ್ಟು ಕಲೆಯ ಕಡೆಗೆ ಪಯಣ : ಸರ್ಕಾರಿ ನೌಕರಿ ಬಿಟ್ಟು ನಟನೆಯಕಡೆಗೆ ನೆಡೆದದ್ದು ಅವರ ಬದುಕಿನ ಮಹತ್ವದ ಮೈಲುಗಲ್ಲು! ಈ ಎದೆಗಾರಿಕೆ ಎಲ್ಲರಲ್ಲೂ ಕಾಣಸಿಗುವುದಿಲ್ಲ.
ಮೂಲತಃ ಗದಗ–ಬೆಟಗೇರಿಯವರಾದ ಬಿ. ಬಾಬು ಅವರು ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿದ್ದರು. ಭದ್ರ ಉದ್ಯೋಗ, ನೆಮ್ಮದಿಯ ಜೀವನವಿದ್ದರೂ, ಅವರ ಮನಸ್ಸು ಸದಾ ಕಲೆ–ಸಾಹಿತ್ಯ–ರಂಗಭೂಮಿಯ ಕಡೆಗೆ ಎಳೆಯುತ್ತಿತ್ತು. ಸರ್ಕಾರಿ ನೌಕರಿಗೆ ಗುಡ್‌ಬೈ ಹೇಳಿ, ನಾಟಕವನ್ನೇ ತಮ್ಮ ಜೀವಾಳವನ್ನಾಗಿ ಮಾಡಿಕೊಂಡರು. ಸುಮಾರು ಹತ್ತು ವರ್ಷಗಳ ಕಾಲ ವೃತ್ತಿರಂಗಭೂಮಿಯಲ್ಲಿ ಸೇವೆ ಸಲ್ಲಿಸಿದರು.

ಕಚೇರಿ ಬಿಟ್ಟು ಕಲೆಯ ಕಡೆಗೆ ಪಯಣ : ಸರ್ಕಾರಿ ನೌಕರಿ ಬಿಟ್ಟು ನಟನೆಯಕಡೆಗೆ ನೆಡೆದದ್ದು ಅವರ ಬದುಕಿನ ಮಹತ್ವದ ಮೈಲುಗಲ್ಲು! ಈ ಎದೆಗಾರಿಕೆ ಎಲ್ಲರಲ್ಲೂ ಕಾಣಸಿಗುವುದಿಲ್ಲ.
ಮೂಲತಃ ಗದಗ–ಬೆಟಗೇರಿಯವರಾದ ಬಿ. ಬಾಬು ಅವರು ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿದ್ದರು. ಭದ್ರ ಉದ್ಯೋಗ, ನೆಮ್ಮದಿಯ ಜೀವನವಿದ್ದರೂ, ಅವರ ಮನಸ್ಸು ಸದಾ ಕಲೆ–ಸಾಹಿತ್ಯ–ರಂಗಭೂಮಿಯ ಕಡೆಗೆ ಎಳೆಯುತ್ತಿತ್ತು. ಸರ್ಕಾರಿ ನೌಕರಿಗೆ ಗುಡ್‌ಬೈ ಹೇಳಿ, ನಾಟಕವನ್ನೇ ತಮ್ಮ ಜೀವಾಳವನ್ನಾಗಿ ಮಾಡಿಕೊಂಡರು. ಸುಮಾರು ಹತ್ತು ವರ್ಷಗಳ ಕಾಲ ವೃತ್ತಿರಂಗಭೂಮಿಯಲ್ಲಿ ಸೇವೆ ಸಲ್ಲಿಸಿದರು.
ನಟ ನಿಪುಣತೆ : ನಟನೆ ಇವರಿಗೆ ಒಲಿದ ಕಲಾತ್ಮಕ ಜೀವತಂತು!
ಚಿತ್ತರಗಿ ವಿಜಯ ಮಹಾಂತೇಶ್ವರ ನಾಟ್ಯಸಂಘ, ಸುಳ್ಳದ ದೇಸಾಯಿ ಕಂಪನಿ, ಗುಡಗೇರಿ ಎನ್. ಬಸವರಾಜ ಕಂಪನಿ, ಶಿರೂರಿನ ವಿಶ್ವ ರಮ್ಯಭಾರತಿ ನಾಟ್ಯ ಸಂಘ ಸೇರಿದಂತೆ ನಾಡಿನ ವಿವಿಧ ನಾಟಕ ಕಂಪನಿಗಳಲ್ಲಿ ಅಭಿನಯಿಸಿದ ಬಾಬಣ್ಣ, ರಂಗಮಂಚದ ಮೇಲೆ ಪಾತ್ರವನ್ನಲ್ಲ, ಬದುಕನ್ನೇ ಬದುಕಿದ ನಟ! ತಾಯಿ ಕರಳು, ಬಂಜೆ ತೊಟ್ಟಿಲು, ಬಸ್ ಹಮಾಲ, ಬಸ್ ಕಂಡಕ್ಟರ್, ಕಣ್ಣಿದ್ದರೂ ಬುದ್ಧಿ ಬೇಕು, ಬದುಕು ಬಂಗಾರವಾಯ್ತು, ಮಲಮಗಳು, ಎಚ್ಚರ ತಂಗಿ ಎಚ್ಚರ ಮುಂತಾದ ಸಾಮಾಜಿಕ ನಾಟಕಗಳಲ್ಲಿ ಅವರು ಸಾಮಾನ್ಯ ಜನರ ನೋವು–ನಲಿವುಗಳ ಪ್ರತಿರೂಪವಾದರು.ಅದೇ ರೀತಿ ರೇಣುಕಾ ಯಲ್ಲಮ್ಮ, ರಕ್ತರಾತ್ರಿ, ಸತ್ಯ ಹರಿಶ್ಚಂದ್ರ, ಛತ್ರಪತಿ ಶಿವಾಜಿ, ವೀರ ಸಿಂಧೂರ ಲಕ್ಷ್ಮಣ ಮುಂತಾದ ಪೌರಾಣಿಕ ನಾಟಕಗಳಲ್ಲಿ ಅವರ ಅಭಿನಯ ಗೌರವ ಮತ್ತು ಭಕ್ತಿಭಾವ ಮೂಡಿಸಿತು. ವಯಸ್ಸು ಇಳಿದರೂ ಬಾಬು ಅವರ ಕಲಾಭಿರುಚಿ ಎಂದಿಗೂ ಕುಗ್ಗಲಿಲ್ಲ. ಶಿರೂರಿನ ವಿಶ್ವ ರಮ್ಯಭಾರತಿ ನಾಟ್ಯ ಸಂಘದ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಹರಳಯ್ಯ, ಮಧುವರಸ, ಕೊಂಡಿಮಂಚನ್ನನ ಪಾತ್ರಗಳಲ್ಲಿ ಅವರು ನೀಡಿದ ಅಭಿನಯ, ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನ, ಲಕ್ಕುಂಡಿ ಉತ್ಸವ ಸೇರಿದಂತೆ ರಾಜ್ಯದ ಹಲವೆಡೆ ಪ್ರೇಕ್ಷಕರ ಮೆಚ್ಚುಗೆ ಪಡೆದರು
ಎಲ್ಲರನ್ನು ಗೌರವಿಸುವ ದೊಡ್ಡತನ : ‘ಎನಗಿಂತ ಕಿರಿಯರಿಲ್ಲ’ ಎಂಬುದನ್ನು ದಿನಬದುಕಿನಲ್ಲಿ ಅಳವಡಿಸಿಕೊಂಡು ಮಕ್ಕಳಿಂದ ಮುದಕರವರೆಗೆ ಎಲ್ಲರನ್ನು ಗೌರವದಿಂದ ಕಂಡು ಆಕರ್ಷಿಸುವ ಕಲೆ ಇವರಿಗೆ ಕರಗತವಾಗಿತ್ತು.ಅದಕ್ಕೊಂದು ದೊಡ್ಡ ಸಲಾಂ ಹೇಳಬೇಕು.
ಕಿರುತೆರೆಯಲ್ಲಿ ಜನಮನಗೆದ್ದರು : ರಂಗಮಂಚದ ಅನುಭವ ಕಿರುತೆರೆಯಲ್ಲೂ ಅವರ ಅಭಿನಯಕ್ಕೆ ಗಾಢತೆ ನೀಡಿತು. ಈಟಿವಿ ಕನ್ನಡ ವಾಹಿನಿಯ ‘ಮಹಾನವಮಿ’ ಧಾರಾವಾಹಿಯಲ್ಲಿ ಚಂದಪ್ಪನ ಪಾತ್ರ ಹಾಗೂ ಕಸ್ತೂರಿ ಕನ್ನಡ ವಾಹಿನಿಯ ‘ಕಾವ್ಯಕಸ್ತೂರಿ’ ಧಾರಾವಾಹಿಯಲ್ಲಿ ಉತ್ತಪ್ಪನ ಖಳನಾಯಕನ ಪಾತ್ರಗಳ ಅಭಿನಯದ ಮೂಲಕ ಕಲಾಸಕ್ತರ ಜನಮನಗೆದ್ದರು.
ಕಲೆಗೂ ಮೀರಿದ ಹೋರಾಟದ ಬದುಕು: ವೃತ್ತಿರಂಗಭೂಮಿಯಿಂದ ಹೊರಬಂದ ನಂತರ ಮುಂಡರಗಿಯಲ್ಲಿ ನೆಲೆಸಿದ ಅವರು ಫೋಟೋಗ್ರಫಿಯನ್ನು ವೃತ್ತಿಯಾಗಿಸಿಕೊಂಡು ಬಿ. ಬಾಬು ಎಂಬ ಹೆಸರಿನಿಂದ ಪ್ರಸಿದ್ಧರಾದರು. ಮುಂಡರಗಿಗೆ ಬಂದ ಪ್ರತಿಯೊಂದು ನಾಟಕ ಕಂಪನಿಗೂ ಬಾಬಣ್ಣ ಮೊದಲ ಪರಿಚಯ. ಕಲಾವಿದರಿಗೆ ಆಶ್ರಯ, ಸಹಕಾರ, ಮಾರ್ಗದರ್ಶನ ನೀಡುವಲ್ಲಿ ಅವರು ಸದಾ ಮುಂದಿದ್ದರು.
ಬಣ್ಣ ಕೇವಲ ನಟರಲ್ಲ. ಅವರು ಜನಪರ ಹೋರಾಟಗಾರ. ಭಾರತ ಜ್ಞಾನ ವಿಜ್ಞಾನ ಸಮಿತಿ, ಐಪಿಟಿಎ, ಬಂಡಾಯ ಸಾಹಿತ್ಯ ಸಂಘಟನೆ, ಸೃಷ್ಟಿ–ಪ್ರತಿಸೃಷ್ಟಿ ಸಾಹಿತ್ಯ ವೇದಿಕೆ, ಎಐಟಿಯುಸಿ, ದಲಿತ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಅನೇಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದರು. ಕೆಲಕಾಲ ಪತ್ರಕರ್ತರಾಗಿಯೂ ಕೆಲಸ ಮಾಡಿದ ಅವರು, ಸಾಕ್ಷರತಾ ಆಂದೋಲನದಲ್ಲಿ ಜಿಲ್ಲಾ ಸಂಯೋಜಕರಾಗಿ ಬೀದಿ ನಾಟಕ, ಜಾಗೃತಿ ಗೀತೆ, ಕ್ರಾಂತಿಗೀತೆಗಳನ್ನು ರಚಿಸಿ ತಮ್ಮ ಕಂಚಿನ ಕಂಠದಿಂದ ಹಾಡಿ ಜನಮನದಲ್ಲಿ ಉಳಿದರು. ಇವರ ಮನೆ ಹೋರಾಟದ ಸಂಗಾತಿಗಳಿಗೆ ಎಲ್ಲವೂ ಆಗಿತ್ತು !
ಬಹು ಭಾಷೆಗೆ ತರ್ಜಮೆಯಾದ ಹಾಡು :
ಬನ್ನಿರೋ ಬನ್ನಿರೋ ಬನ್ನಿರೋ
ಹೊಸನಾಡ ಕಟ್ಟೋಣ ಬನ್ನಿರೋ
ಈ ನೆಲದ ಋಣವ ತೀರಿಸೋಣ ಬನ್ನಿರೋ
ಎಂಬ ಹೋರಾಟ ಹಾಡು ತೆಲಗು ಹಿಂದಿ ಮರಾಠಿ ಸೇರಿದಂತೆ ವಿವಿಧ ಭಾಷೆಗಳಿಗೆ ತರ್ಜಮೆಯಾಗಿದದ್ದು ಅವರ ಹೋರಾಟದ ಹಾಡಿಗಿದ್ದ ಗಟ್ಟಿತನ ಹಾಗೂ ಹೆಚ್ಚುಗಾರಿಕೆಗೆ ಸಾಕ್ಷಿ ನೀಡುತ್ತದೆ
ಮುಗಿಯದ ನಾಟಕಕ್ಕೆ ಕಣ್ಣೀರ ತೆರೆ ! ಬಹುಮುಖ ವ್ಯಕ್ತಿತ್ವದಲ್ಲಿ ಬಗೆಬಗೆಯ ಪಾತ್ರನಿರ್ವಸಿದ ಈ ಬದುಕಿನ ಮಗಿಯದ ನಾಟಕಕ್ಕೆ ಇಂದು ಕಣ್ಣೀರಿನ ತೆರೆ ಬಿದ್ದಿದೆ ಸದ್ಯ ದೇಹರೂಪದಲ್ಲಿ ನಮ್ಮ ನಡುವೆ ಬಿ ಬಾಬು ಇನ್ನಿಲ್ಲ ಆದರೆ ಅವರ ರಂಗಬದುಕು, ಹೋರಾಟದ ಬದುಕು, ಜನಪರ ಚಿಂತನೆ ಮತ್ತು ಕಲೆಯ ಮೇಲಿನ ಅಪಾರ ಪ್ರೀತಿ ನಮ್ಮ ನಡುವೆಯೇ ಇದೆ.ಬಣ್ಣದ ಬದುಕನ್ನು ಬದುಕಿ, ಬಣ್ಣದ ಲೋಕವನ್ನೇ ಶ್ರೀಮಂತಗೊಳಿಸಿ ಮರೆಯಲಾರದ ಮಾಣಿಕ್ಯವಾಗಿ ಎಂದೆದಿಗೂ ನಳನಳಿಸುತ್ತಾರೆ.
Comments are closed.