ಇದು ಆತ್ಮಾವಲೋಕನದ ಕಾಲ -ಈಶ್ವರ ಹತ್ತಿ

0

Get real time updates directly on you device, subscribe now.

ಕೊಪ್ಪಳ: ಇದು ವಿದ್ಯಾರ್ಥಿಗಳ ಹಾಗೂ ಕನ್ನಡ ಶಾಲೆಗಳ ಸ್ಥಿತಿಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಎಂದು ಹಿರಿಯ ಸಾಹಿತಿ ಈಶ್ವರ ಹತ್ತಿ ಹೇಳಿದರು.
ನಗರದಲ್ಲಿ ಶನಿವಾರ ಸಿವಿಸಿ ಫೌಂಡೇಶನ್ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಹಾಗೂ ಚಿತ್ರಕಲಾ ನೈಪುಣ್ಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.

“ದಶಕಗಳ ಹಿಂದೆ ಕೇವಲ ಕನ್ನಡ ಮಾಧ್ಯಮ ಶಾಲೆಗಳಿದ್ದವು. ಆಂಗ್ಲ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳ ಜೊತೆ ಸ್ಪರ್ಧೆ ಮಾಡಲು ಕೀಳರಿಮೆ ಇತ್ತು. ಈಗ ಆಂಗ್ಲ ಮಾಧ್ಯಮ ಶಾಲೆಗಳ ಸಂಖ್ಯೆ ಹೆಚ್ಚಾಗಿದೆ. ಕನ್ನಡ ಕಲಿಸುವ ಗುಣಮಟ್ಟ ತೀವ್ರವಾಗಿ ಕುಸಿದಿದೆ. ಗಡಿ ನಾಡಲ್ಲಿರುವ ಕನ್ನಡ ಶಾಲೆಗಳ ಪರಿಸ್ಥಿತಿ ಹೀನಾಯವಾಗಿದೆ. ಈ ಪರಿಸ್ಥಿತಿಯ ಕುರಿತು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು,” ಎಂದು ಹೇಳಿದರು.
ರಾಜ್ಯೋತ್ಸವ ನಿಮಿತ್ಯ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ರಚಿಸಿದ ಚಿತ್ರಕಲೆಗಳನ್ನು ಅವಲೋಕಿಸಿದರೆ ಅವರಲ್ಲಿರುವ ಅದ್ಭುತ ಸಾಮರ್ಥ್ಯ ತಿಳಿಯುತ್ತದೆ. ಅವರಿಗೆ ಸೂಕ್ತ ವೇದಿಕೆ ಸಿಕ್ಕರೆ ಊಹೆಗೂ ನಿಲುಕದಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ ಎಂದರು.
ಮಾತೃ ಭಾಷೆಯಲ್ಲಿ ಓದಿದರೆ ಬುದ್ಧಿ ಬಲಿಯುತ್ತದೆ. ವಿದ್ಯಾರ್ಥಿಗಳು ಓದುವ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಮೊಬೈಲ್ ಫೋನ್ ಗಿಳಿನಿಂದ ದೂರ ಇರಬೇಕು. ಕನ್ನಡ ಮಾತನಾಡಬೇಕು. ಕನ್ನಡ ಅಂಕಿ ಬಳಸಬೇಕು ಎಂದು ಕರೆ ಕೊಟ್ಟರು.
“ಕೇಳುವ ವ್ಯವಧಾನ ಹಾಗೂ ಅಂತಃಕರಣ ಮರೆಯಾಗಿರುವುದು ಅಧಃಪತನದ ಸಂಕೇತ. ವಿದ್ಯಾರ್ಥಿಗಳು ಕೇಳಿಸಿಕೊಳ್ಳಬೇಕು ಹಾಗೂ ಅಂತಃಕರಣ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಅರ್ಥಪೂರ್ಣ ಜೀವನ ಸಾಧ್ಯ. ನಮ್ಮ ಬೇರುಗಳು ಹಾಗೂ ಸಂಸ್ಕೃತಿಯನ್ನು ಸದಾ ಆರಾಧಿಸಬೇಕು ಎಂದು ಸಾಹಿತಿ ಪ್ರೊ. ಶರಣಬಸಪ್ಪ ಬಿಳಿಯಲಿ ಹೇಳಿದರು.
ಮಕ್ಕಳ ಪ್ರತಿಭೆ ಅನಾವರಣಕ್ಕಾಗಿ ಸಿವಿಸಿ ಫೌಂಡೇಶನ್ ಪ್ರೌಢಶಾಲಾ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಿತ್ತು. ಒಟ್ಟು 52 ಕಲಾ ನೈಪುಣ್ಯ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪುಸ್ತಕ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು. ವಿದ್ಯಾರ್ಥಿಗಳು ರಚಿಸಿದ ಚಿತ್ರ ಕಲೆಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು ಎಂದು ಫೌಂಡೇಶನ್ ಸಂಚಾಲಕ ಮೌನೇಶ್ ಕಿನ್ನಾಳ ಹೇಳಿದರು.
“ಮಹಿಳಾ ಸಬಲೀಕರಣ ಸಿವಿಸಿ ಫೌಂಡೇಶನ್ ಆಶಯಗಳಲ್ಲೊಂದು. ಚಿತ್ರಕಲಾ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಿದ್ದು ಗಮನಾರ್ಹ. ಮುಂದಿನ ದಿನಗಳಲ್ಲಿ ಡಿಜಿಟಲ್ ಲಿಟರಸಿ ಮತ್ತು ಕೃತಕ ಬುದ್ಧಿಮತ್ತೆ ವಿಷಯದಲ್ಲಿ ಉಚಿತವಾಗಿ ಪದವಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆ ಇದೆ,” ಎಂದು ಫೌಂಡೇಶನ್ ನಿರ್ದೇಶಕರಾದ ಶ್ರೀಮತಿ ಲಕ್ಷ್ಮೀದೇವಿ ಚಂದ್ರಶೇಖರ್ ಹೇಳಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!