ಕಲಾ ಆರಾಧಕ ಬಸ್ ಕಂಡಕ್ಟರ್ : ಸಿದ್ದರಾಮ ಕೊಪ್ಪರ್
ಸಾಹಿತ್ಯ ಮತ್ತು ಕಲೆ ಜನರನ್ನು ಜಾಗೃತಿಗೊಳಿಸುವುದು ಮತ್ತು ಸ್ಥಗಿತಗೊಂಡ ಜನರ ಬದುಕನ್ನು ಚಲನಶೀಲಗೊಳಿಸುವುದಾಗಿದೆ. ಕಲೆ ಕಲೆಗಾಗಿ ಅಲ್ಲ- ಕಲೆ ಪ್ರಜೆಗಳಿಗಾಗಿ ಎಂಬ ಮಾತಿನಂತೆ ಸಮಾಜದಲ್ಲಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳನ್ನು ನಾಟಕಗಳ ಮೂಲಕ ನಿರ್ದೇಶನ ಮತ್ತು ಪ್ರದರ್ಶನ ಮಾಡಿ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವ ಕಲಾವಿದ, ಬರಹಗಾರ, ಕಥೆಗಾರ, ನಾಟಕಕಾರ, ನಟ ಮತ್ತು ನಿರ್ದೇಶಕ ಸಿದ್ದರಾಮ ಕೊಪ್ಪರ್ ಅವರು ಪ್ರಸ್ತುತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿ.ಎಂ.ಟಿ.ಸಿ) ಯ ಘಟಕ-೧೦ ರಲ್ಲಿ ಬಸ್ ಕಂಡಕ್ಟರ್ (ಬಸ್ ನಿರ್ವಾಹಕ) ಆಗಿ ಕರ್ತವ್ಯ ನಿರ್ವವಹಿಸುತ್ತಿದ್ದಾರೆ.
ಬಡತನ ಮತ್ತು ಹಸಿವು ಯಾವ ವಿಶ್ವವಿದ್ಯಾಲಯಗಳು ಕಲಿಸದ ಪಾಠವನ್ನು ಕಲಿಸುತ್ತವೆ. ಶೋಷಿತ ಸಮುದಾಯಗಳು ಅನುಭವಿಸಿದ ನೋವನ್ನು ಹೋಗಲಾಡಿಸಲ ನಮ್ಮಿಂದ ಆಗುವಷ್ಟು ಕೊಡುಗೆ ನೀಡಬೇಕೆಂಬ ಮನೋಭಾವನೆ ಸಿದ್ದರಾಮ ಕೊಪ್ಪರ್ ಅವರಿಗಿದೆ. ಇವರು ತನ್ನ ಕಲೆಯ ಮೂಲಕ ಜನರ ನಡುವೆ ಗುರುತಿಸಿಕೊಂಡವರು. ಇವರು ಬಣ್ಣದ ಬೆಡಗಿನಲ್ಲಿ ಮಿಂದೆದ್ದ ರಂಗಭೂಮಿಯ ಜನಪರ ನಟ. ತಾನು ನಟಿಸುವ ಎಲ್ಲಾ ಪಾತ್ರಕ್ಕೂ ಜೀವ ತುಂಬುವ ಛಲ ಹೊಂದಿರುವ ಪ್ರತಿಭಾವಂತ. ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಮಾನತೆಗಾಗಿ ಕಲೆಯ ಮೂಲಕ ಬೆನ್ನೆಲುಬಾಗಿ ನಿಲ್ಲುವ ಪ್ರಜಾತಂತ್ರವಾದಿ. ಎಲ್ಲರು ಸಮಾನತೆಯಿಂದ ಬಾಳಬೇಕೆಂಬ ಆಶಯ ಹೊಂದಿರುವವರು.
ಸಿದ್ದರಾಮ ಕೊಪ್ಪರ್ ಹುಟ್ಟಿನಿಂದಲೇ ಜಾಣ ಸ್ವಭಾವ, ಮಾತಿನಲ್ಲಿ ಪ್ರೀತಿ, ಕಣ್ಣುಗಳಲ್ಲಿ ಏನೋ ಮಹತ್ತರವಾದದ್ದನ್ನು ಸಾಧಿಸುವ ಅಧಮ್ಯ ವಿಶ್ವಾಸ ಇವರಲ್ಲಿದೆ. ಇವರು ಬಹಳ ಪ್ರಮಾಣಿಕ, ಶ್ರಮಜೀವಿ, ಕ್ರಿಯಾಶಿಲ, ಸೌಮ್ಯ ಸ್ವಾಭವ, ಸರಳ ವ್ಯಕ್ತಿತ್ವ, ಮೃದು ಸ್ವಾಭವ, ಸಹನಭೂತಿ ವ್ಯಕ್ತಿತ್ವ ಮತ್ತು ತಾಳ್ಮೆ ಹೊಂದಿರವವರು. ಎಲ್ಲರೊಂದಿಗೆ ವಿವೇಕಯುತವಾಗಿ ವರ್ತಿಸುತ್ತಾ ಎಲ್ಲರೊಂದಿಗೆ ಅತ್ಮೀಯ ಗೆಳೆಯರಾಗಿರುತ್ತಾರೆ. ಇತರರ ಜೊತೆ ಬಹು ಬೇಗನೆ ಹೊಂದಿಕೊಳ್ಳುವ ಸ್ವಭಾವದವರು. ಇವರು ದೂರದೃಷ್ಠಿ ಹಾಗೂ ನಿರಂತರ ಸೇವಾ ಮನೋಭಾವ ಹೊಂದಿರುವವರು. ದಲಿತರ, ರೈತರ, ಕಾರ್ಮಿಕರ, ಕೆಳವರ್ಗಗಳ ಮತ್ತು ಮಹಿಳೆಯರ ಕುರಿತು ಆಳವಾದ ತಿಳುವಳಿಕೆ ಹೊಂದಿದ್ದಾರೆ.
ಸಿದ್ದುರಾಮ ಕೊಪ್ಪರ್ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೊಪ್ಪರ್‌ನಲ್ಲಿ ೧೯೮೨ ರಲ್ಲಿ ಜನಿಸಿದರು. ತಂದೆ ಹೊಳೆಪ್ಪ, ತಾಯಿ ಹನುಮಂತಿ. ಇವರು ಬಾಲ್ಯದಲ್ಲಿ ಇದ್ದಾಗಲೇ ತಂದೆಯವರು ಮರಣ ಹೊಂದಿದ್ದಾರೆ. ಇರೋ ಅಲ್ಪ ಸ್ವಲ್ಪ ಜಮೀನು ಬದುಕಿಗೆ ಆಧಾರ. ಇವರ ತಂದೆ-ತಾಯಿಗೆ ಎರಡು ಹೆಣ್ಣು ನಾಲ್ಕು ಗಂಡು ಮಕ್ಕಳು. ಇವರು ಮೂರನೆಯವರು. ಹೊಟ್ಟೆಪಾಡಿಗೆ ಕೃಷಿಯೇ ಮೂಲ ಆಧಾರ. ವಿದ್ಯಾಭ್ಯಾಸದ ಹಾದಿಯಲ್ಲಿ ಅವರದು ಮುಳ್ಳಿನ ಹಾದಿ. ಪ್ರತಿ ಹೆಜ್ಜೆಯೂ ಒಂದು ಕಷ್ಟದ ಬದುಕು. ಬಡತನದ ಮಧ್ಯೆಯೇ ತನ್ನ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಊರಿನಲ್ಲಿಯೇ ಮುಗಿಸಿದರು. ನಂತರ ತಮ್ಮ ಊರಿನ ಪಕ್ಕದ ಗಬ್ಬೂರಿನಲ್ಲಿ ಸರ್ಕಾರಿ ಪ್ರಾಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿದರು. ಪಿಯುಸಿ ಮತ್ತು ಪದವಿಯನ್ನು ದೇವದುರ್ಗದಲ್ಲಿ ಪೂರ್ಣಗೊಳಿಸಿದರು.
ಶಾಲಾ-ಕಾಲೇಜು ದಿನಗಳಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಮುಂದೆ ಇರುತ್ತಿದ್ದರು. ಒಂದು ಕಾಲದಲ್ಲಿ ಅಕ್ಷರಗಳಿಗಿಂತ ಚಿತ್ರಗಳನ್ನು ಹೆಚ್ಚು ಪ್ರೀತಿಸಿದವರು. ಈ ಆಕರ್ಷಣೆ ಬಲುಬೇಗ ಕಾರ್ಯರೂಪಕ್ಕೆ ಬಂದಿತು. ಆರಂಭದಲ್ಲಿ ಕಾರ್ಬನ್‌ಶೀಟ್ ಇಟ್ಟು ಚಿತ್ರಗಳನ್ನು ಬರೆಯಲಾರಂಭಿಸಿದರು. ಇದು ಕೈಗೆ ಮುದ ನೀಡುತ್ತಿತ್ತು. ಮನಸ್ಸಿಗೆ ಸಂತೋಷ ಉಂಟಾಗುತ್ತಿತ್ತು. ತಾನು ಬಿಡಿಸುತ್ತಿದ್ದ ಚಿತ್ರಕ್ಕೆ ಜೀವ ತುಂಬುವಲ್ಲಿ ಈತ ಸಫಲನಾಗುತ್ತಿದ್ದ. ಕ್ರಮೇಣ ಚಿತ್ರ ರೂಪಿಸುವಲ್ಲಿ ಹಿಡಿತ ಸಾಧಿಸಿದ. ಈತನ ಕುಂಚದಲ್ಲಿ ಅಂಬೇಡ್ಕರ್‌ರಿAದ ಹಿಡಿದು ಡಾ. ರಾಜ ಕುಮಾರ ಮತ್ತು ಇನ್ನಿತರ ಸಾಂಸ್ಕೃತಿಕ ನಾಯಕರ ಚಿತ್ರದವರೆಗೂ ಅರಳಿದವು.
‘ನನ್ನ ಶಿಕ್ಷಣ ಜೀವನಕ್ಕೆ ತಿರುವು ಕೊಟ್ಟವರು ರಾಯಚೂರಿನ ಮಲ್ಲಮ್ಮ ಟೀಚರ್. ಇವರು ನನ್ನನ್ನು ಚಿತ್ರಕಲೆ ಡಿಪ್ಲೊಮಾಗೆ ಸೇರಿಸಿ ಮತ್ತು ಸಹಕಾರ ನೀಡಿ ಬೆಳವಣಿಗೆಗೆ ಕಾರಣಿಕರ್ತರಾದವರು. ಇವರನ್ನು ನಾನು ನೆನೆಯಲೇಯಬೇಕು’ ಎಂದು ಹೇಳುತ್ತಾರೆ. ಚಿತ್ರಕಲೆಯನ್ನು ಶಾಸ್ರೊö್ತÃಕ್ತವಾಗಿ ಕಲಿಯಲು ಕಾಲೇಜಿಗೆ ಸೇರ್ಪಡೆಯಾದರು. ಈ ಕೋರ್ಸ್ ಮುಗಿದ ನಂತರ ಭಿತ್ತಿ ಚಿತ್ರ ಮತ್ತು ನಾಮಫಲಕ ಬರೆಯುವದರ ಮೂಲಕ ಜೀವನ ಆರಂಭಿಸಿದರು. ಬಡತನ ಬದುಕಿನ ಹೋರಾಟದಲ್ಲಿ ಬಳಲಿದ್ದ ಅವರಿಗೆ ಇಂತಹ ಸಂದರ್ಭದಲ್ಲಿ ಉದ್ಯೋಗ ಅನಿವರ‍್ಯವಾದಾಗ ದೊರಕಿದ್ದು ಬೆಂಗಳೂರಿನ ಬಿ.ಎಂ.ಟಿ.ಸಿ ಯಲ್ಲಿ ಬಸ್ ಕಂಡಕ್ಟರ್ ಹುದ್ದೆ.
ಬಿ.ಎಂ.ಟಿ.ಸಿ ಯಲ್ಲಿ ಬಸ್ ಕಂಡಕ್ಟರ್ ವೃತ್ತಿ ಜೀವನ ಆರಂಭ
ಅವರು ೨೦೦೧ ರಲ್ಲಿ ಬಿ.ಎಂ.ಟಿ.ಸಿ ಯಲ್ಲಿ ಬಸ್ ಕಂಡಕ್ಟರ್ ಆಗಿ ಆಯ್ಕೆಯಾದರು. ಇವರು ಬಸ್ ಕಂಡಕ್ಟರ್ ಕರ್ತವ್ಯಕ್ಕೆ ಬೆಂಗಳೂರಿಗೆ ಬಂದರು. ಇವರು ಬಸ್ ಕಂಡಕ್ಟರ್ ಹುದ್ದೆಗೆ ಸೇರಿದ ಆರು ತಿಂಗಳ ನಂತರ ಇವರ ತಾಯಿ ಮರಣ ಹೊಂದಿದರು. ಕಂಡಕ್ಟರ್ ಉದ್ಯೋಗದ ಜೊತೆಯಲ್ಲಿಯೇ ದೂರ ಶಿಕ್ಷಣದ ಮೂಲಕ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತçದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿಕೊಂಡರು. ಹಾಗೇಯೇ ಡ್ರಾಮಾ ಡಿಪ್ಲೋಮಾವನ್ನು ಮುಗಿಸಿದ್ದಾರೆ.
ಅವರಿಗೆ ಹಾಡಿನಲ್ಲೂ ಆಸಕ್ತಿ ಇದೆ. ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಮತ್ತು ಜನಪದ ಚಟುವಟಿಕೆಗಳಲ್ಲಿ ಸಕ್ರೀಯವಾಗಿದ್ದರು. ಇವರಿಗೆ ದಿಗ್ಗಜರ ಸಂಗೀತ ಕಛೇರಿಗಳಲ್ಲಿ ಕಲಿತ ನೂರಾರು ಅನುಭವದ ಪಾಠವಿದೆ. ಇವರು ಸಂಗೀತದ ಆಸಕ್ತಿಯಿಂದಲೇ ಶಾಸ್ತಿçÃಯವಾಗಿ ಸಂಗೀತ ಕಲಿತರು. ಹರ‍್ಮೋನಿಯಂ ನುಡಿಸುತ್ತಾರೆ. ಹಿಂದೂಸ್ಥಾನಿ ಸಂಗೀತದಲ್ಲಿ ಸೀನಿಯರ್ ಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಇಂದಿಗೂ ಸಾರಿಗೆ ಸಂಸ್ಥೆಯ ಬಸ್ ಡಿಪೋಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಾರ್ಮಿಕರನ್ನು ರಂಜಿಸುತ್ತಿದ್ದಾರೆ.
ಇವರು ವ್ಯಂಗ್ಯ ಚಿತ್ರ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ಹಲವಾರು ಕಡೆ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ‘ಇಂದು ಚಿತ್ರಕಲೆಯಲ್ಲಿ ಅಲ್ಪ ಸ್ವಲ್ಪ ಸಾಧನೆ ಮಾಡಿದ್ದೇನೆ ಅಂದರೆ ಅದಕ್ಕೆ ಕಾರಣಕರ್ತರಾದವರು ನನ್ನ ಗುರುಗಳಾದ ತಿರುಪತಿ ಸುಗೂರು ಮತ್ತು ಪ್ರಾಣೇಶ್’ ಎಂದು ನೆನೆಯುತ್ತಾರೆ. ಅಂತರಾಷ್ಟಿçÃಯ ಚಿತ್ರಕಲಾವಿದ ಡಾ. ಎಂ.ಎಸ್ ಮೂರ್ತಿ ಇವರ ಮಾರ್ಗದರ್ಶನದಲ್ಲಿ ಬೆಂಗಳೂರು ಚಿತ್ರ ಸಂತೆ ಸೇರಿದಂತೆ ಅನೇಕ ಕಡೆ ಚಿತ್ರ ಪ್ರದರ್ಶನವನ್ನು ಮಾಡಿದ್ದಾರೆ. ನಾಡಿನ ಹೆಸರಾಂತ ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಚಿತ್ರಕಲಾವಿದರೊಂದಿಗೆ ಚಿತ್ರ ಪ್ರದರ್ಶನಗಳಲ್ಲಿ ಇವರು ಬಿಡಿಸಿದ ಪೇಂಟಿAಗ್‌ಗಳು ಪ್ರದರ್ಶನಗೊಂಡಿವೆ.
ಅವರು ಅಭಿನಯಿಸಿದ ಮೊದಲ ನಾಟಕ ತನ್ನ ಹುಟ್ಟೂರಿನ ಕೊಪ್ಪರ್‌ನಲ್ಲಿ. ಹಬ್ಬದ ಪ್ರಯುಕ್ತ ‘ಮಹಿಷಾಸುರ ಮರ್ದಿನಿ’ ಎಂಬ ಬಯಲಾಟಕದಲ್ಲಿ ಊರ್ವಶಿ ಎಂಬ ಹೆಣ್ಣು ಪಾತ್ರ ಮಾಡಿದ್ದು. ಮುಖಕ್ಕೆ ಬಣ್ಣ ಹಚ್ಚಿದ್ದು ಅದೇ ಮೊದಲು. ಈ ನಾಟಕದ ನಿರ್ದೇಶಕರು ‘ಮಸರಕಲ್ ಅನುಕಪ್ಪ ಮಾಸ್ತರ್. ಇವರದು ಅದ್ಭುತವಾದ ಕಂಠವಾಗಿತ್ತು ಇವರೇ ನನ್ನ ನೆಚ್ಚಿನ ಮೊದಲು ರಂಗ ಗುರು’ ಎಂದು ಅವರು ನೆನೆಯುತ್ತಾರೆ.
ಸಿದ್ದರಾಮ ಕೊಪ್ಪರ್ ಅವರು ಮತ್ತೆ ಬಣ್ಣ ಹಚ್ಚಿ ಬೆಳಕು ಚೆಲ್ಲಿದ್ದು ಬೆಂಗಳೂರಿನ ಬಿ.ಎಂ.ಟಿ.ಸಿ ವತಿಯಿಂದ ೨೦೦೧ ರಲ್ಲಿ ಏರ್ಪಡಿಸಿದ್ದ ಟಿ.ಎಂ. ಬಾಲಕೃಷ್ಣ ಅವರ ನಿರ್ದೇಶನದ ನೃಪತುಂಗ ನಾಟಕದಲ್ಲಿ. ಇವರು ಕಲೆಯ ಮೂಲಕ ಇಲ್ಲಿ ಮತ್ತೆ ಜೀವ ಪಡೆದರು. ನಾಟಕಗಳಲ್ಲಿ ಪಾತ್ರಗಳÀ ಮೂಲಕ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿ ನಟರಾದರು. ಬಿ.ಎಂ.ಟಿ.ಸಿ ಕಲಾವಿದರ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಂಡರು.
ಅವರು ಕಂಡಕ್ಟರ್ ಉದ್ಯೋಗ ಮಾಡುತ್ತಲೇ ನಿರಂತರವಾಗಿ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬೆಂಗಳೂರಿನ ಹೆಸರಾಂತ ಹವ್ಯಾಸಿ “ರಂಗ ನಿರಂತರ” ತಂಡ ಸೇರಿಕೊಂಡರು. ಹೆಸರಾಂತ ರಂಗ ನಿರ್ದೇಶಕ ಮತ್ತು ರಂಗ ನಿರಂತರ ತಂಡದ ನಿರ್ದೇಶಕ ಪ್ರೊ.ಸಿ.ಜಿ.ಕೃಷ್ಣಸ್ವಾಮಿ(ಸಿ.ಜಿ.ಕೆ) ನಿರ್ದೇಶನದ ದೇವನೂರು ಮಹಾದೇವ ಅವರ ಕುಸುಮ ಬಾಲೆ ನಾಟಕದಲ್ಲಿ ಪಾತ್ರವನ್ನು ಮಾಡಿ ಮೆಚ್ಚುಗೆ ಪಡೆದರು.
ಸಿದ್ದರಾಮ ಕೊಪ್ಪರ್ ಅವರು ರೂಪಾಂತರ ಕಲಾ ತಂಡದ ಹೆಸರಾಂತ ಚಲನಚಿತ್ರ ನಟ ಕರಿಬಸವಯ್ಯನವರೊಂದಿಗೆ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವರ ಕಲೆಗೆ ನೀರೆರೆದು ಪೋಷಿಸಿದ್ದು ರೂಪಾಂತರ ಕಲಾ ತಂಡದ ನಿರ್ದೇಶಕ ಕೆ.ಎಸ್.ಡಿ.ಎಲ್ ಚಂದ್ರು. ಅವರ ಕಣ್ಣಿಗೆ ಬಿದ್ದದ್ದÀಷ್ಟೇ ತಡ ರೂಪಂತಾರ ತಂಡದ ನಾಟಕದಲ್ಲಿ ಪ್ರತಿ ನಾಟಕದಲ್ಲಿ ಅವರಿಗೆ ಖಾಯಂ ಸ್ಥಾನ ಇರುತ್ತಿತ್ತು. ರೂಪಾಂತರ ತಂಡದಲ್ಲಿ ೧೩ ವರ್ಷಗಳ ಕಾಲ ರಂಗ ನಟನಾಗಿ, ಸಹ ನಿರ್ದೇಶಕನಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
‘ರಂಗ ಜಂಗಮ ಪ್ರೊ. ಸಿ.ಜಿ.ಕೆ, ಕೆ.ಎಸ್.ಡಿ.ಎಲ್ ಚಂದ್ರು ಗೋಪಾಲಕೃಷ್ಣ ನಾಯರಿ, ಪ್ರಮೋದ್ ಶಿಗ್ಗಾಂವ್, ಸುರೇಶ್ ಅನಗಳ್ಳಿ, ಡಾ.ರಾಮಕೃಷ್ಣಯ್ಯ ಇವರೆಲ್ಲರು ನನ್ನ ರಂಗ ಗುರುಗಳು. ಇವರೆಲ್ಲರು ನನ್ನ ರಂಗ ಭೂಮಿ ಬೆಳವಣಿಗೆಗೆ ಸಹಕರಿಸಿದವರು’ ಎಂದು ಹೇಳುತ್ತಾರೆ.
ಸಿದ್ದರಾಮ ಕೊಪ್ಪರ್ ಅಭಿನಯಿಸಿರುವ ನಾಟಕಗಳು :
ಕಿರಗೂರಿನ ಗಯ್ಯಾಳಿಗಳು. ಮುಸ್ಸಂಜೆಯ ಕಥಾ ಪ್ರಸಂಗ, ಕರ್ವಾಲೋ, ಬಡೇಸಾಬ ಪುರಾಣ (ರಾಯಚೂರಿನ ಶಾಂತರಸ ಅವರು ಬರೆದಿರುವ ಕಾದಂಬರಿ ಆಧಾರಿತ ನಾಟಕ) ಮೈ ಮನಗಳ ಸುಳಿಯಲ್ಲಿ, ಟ್ರೆöÊನ್ ಟು ಪಾಕಿಸ್ತಾನ್, ಮಾದಾರ ಚೆನ್ನಯ್ಯ, ಮೈಸೂರು ಮರ್ದಿನಿ, ಅಮೋಘವರ್ಷ ನೃಪತುಂಗ, ಟಿಪ್ಪು ಸುಲ್ತಾನ್, ರಕ್ತಾಕ್ಷಿ, ಸಿಂಗಾರಿ ಹಿತ್ತಲು, ಅಲ್ಲೇ ಇದ್ದವರು, ಕುರುಮಯ್ಯ ಮತ್ತು ಅಂಕುಶದೊಡ್ಡಿ, ರಾಮಧಾನ್ಯ ಚರಿತೆ, ಹದ್ದು ಮೀರಿದ ಹಾದಿ, ತಾರಕ್ಕ ಬಿಂದಿಗೆ ಇನ್ನೂ ಅನೇಕ ನಾಟಕಗಳಲ್ಲಿ ಅಭಿನಯಿಸಿ ಎಲ್ಲ ನಾಟಕಗಳÀಲ್ಲಿ ದಕ್ಕಿದ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ಸಿದ್ದರಾಮ ಕೊಪ್ಪರ್ ನಿರ್ದೇಸಿದ ನಾಟಕಗಳು :

೧.ಬಂಧಿಖಾನೆಯಲ್ಲಿ ಬಾಪು (ಮಹಾತ್ಮ ಗಾಂಧಿಜಿ ಕುರಿತು), ೨.ಕುರುಮಯ್ಯ ಮತ್ತು ಅಂಕುಶದೊಡ್ಡಿ (ರಾಯಚೂರಿನ ಜಂಬಣ್ಣ ಅಮರಚಿಂತ ಬರೆದಿರುವ ಕಾದಂಬರಿ), ೩.ಬೂಟುಗಾಲಿನ ಸದ್ದು, ೪.ಮಹಾ ಪ್ರಸ್ಥಾನ, ೫.ಅಲಾಯಿ ದೇವರು, ೬.ಅಲ್ಲೇ ಇದ್ದವರು, ೭.ನಿಗಿಕೊಂಡ ಸಂಸ, ೮.ಕೊಂದವರು ಯಾರು? (ಧರ್ಮಸ್ಥಳ ಸೌಜನ್ಯ ಹತ್ಯೆ ಕುರಿತು), ೯.ರಾಷ್ಟç ಮಾತೆ ಅಹಲ್ಯಾ ಬಾಯಿ ಹೋಳ್ಕರ್, ೧೦.ಬೆಕ್ಕುವ, ೧೧.ಅವಿವೇಕ ರಾಜ (ಚನ್ನಣ್ಣ ವಾಲಿಕಾರ ಅವರದು) ಹಾಗೂ ಇತ್ಯಾದಿ.
ಅಭಿನಯಿಸಿರುವ ಚಲನಚಿತ್ರಗಳು :
ಪಂಗ ಸ್ತಿçÃ, ನೈಮ್ ಡೈರಿ, ಜಮಾಲಿ ಗುಡ್ಡ, ವಿರಾಟಪುರದ ವಿರಾಗಿ, ಟಗರು ಪಲ್ಯ, ಲಕ್ಷಿö್ಮ ಪುತ್ರ ಇತ್ಯಾದಿ.
ಕಿರುತೆರೆಗೆ ಹೆಜ್ಜೆ :
ರಂಗಭೂಮಿ ನಂತರದಲ್ಲಿ ಕಿರುತೆರೆಯಲ್ಲಿ ನಟಿಸಿದ್ದಾರೆ. ಸಿಲ್ಲಿ ಲಲ್ಲಿ, ಸಾತು ಪಾತು, ವೆಂಕಟೇಶ್ವರ ಮಹಿಮೆ, ಅರುಂಧತಿ, ಸಾಯಿಬಾಬ ಮತ್ತು ದೇವಿ ಇತ್ಯಾದಿ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.
ಪ್ರಶಸ್ತಿಗಳು :
ಡಾ. ರಾಜಕುಮಾರ ರಂಗ ಪ್ರಶಸ್ತಿ, ಅನೇಕ ರಂಗ ಗೌರವಗಳು, ಸಂಘ ಸಂಸ್ಥೆಗಳು ರಂಗ ಗೌರವ ನೀಡಿ ಸನ್ಮಾನಿಸಿವೆ.
ಸಿದ್ದರಾಮ ಕೊಪ್ಪರ ಅವರು ರಂಗಭೂಮಿಯಲ್ಲಿ ನಟಿಸಿದ ನಾಟಕಗಳ ಸಂಖ್ಯೆ ಬಹಳ ದೊಡ್ಡದಿದೆ. ಅವುಗಳ ಪ್ರದರ್ಶನ ಸಂಖ್ಯೆ ೩೦೦ ಕ್ಕೂ ಹೆಚ್ಚಿವೆ. ಇವರಿಗೆ ಯಾವ ಪಾತ್ರ ನೀಡಿದರೂ ಜೀವ ತುಂಬ ಬಲ್ಲ ಚಾಣಕ್ಯ. ಇವರು ಅಪ್ಪಟ್ಟ ಸಮಾಜಮುಖಿ ಮತ್ತು ಬಹುಮಖ ಪ್ರತಿಭೆ. ಬಡತನದ ಬೇಗೆಯಲ್ಲಿ ಬೆಳೆದು ಬಂದ ಗ್ರಾಮೀಣ ಪ್ರತಿಭೆ. ಇವರು ನಿರ್ದೇಶಿಸಿರುವ ನಾಟಕಗಳು ಬಾಂಬೆ, ಕಲ್ಕತ್ತ, ದೆಹಲಿ, ಗೋವಾ, ಹೈದರಾಬಾದ್, ಫರಿದಬಾದ್, ಮತ್ತು ಚೆನೈ ನಗರಗಳಲ್ಲಿ ಪ್ರದರ್ಶನಗೊಂಡಿವೆ.
ರಾಯಚೂರಿನ ಬಂಡಾಯ ಸಾಹಿತಿ ಜಂಬಣ್ಣ ಅಮರಚಿಂತ ಅವರು ಬರೆದಿರುವ ಕುರುಮಯ್ಯ ಮತ್ತು ಅಂಕುಶ ದೊಡ್ಡಿ ಕಾದಂಬರಿಯನ್ನು ರಂಗ ರೂಪಗೊಳಿಸಿ ಇವರು ನಿರ್ದೇಶನ ಮಾಡಿರುವ ವರಾಹ ಪುರಾಣ ಎಂಬ ನಾಟಕವನ್ನು ೨೦೧೭ ರಲ್ಲಿ ರಾಯಚೂರಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನಗೊಂಡಿದೆ. ಈ ನಾಟಕವು ವಿವಿಧ ಕಡೆ ೩೦ ಪ್ರದರ್ಶನಗೊಂಡಿದೆ. ಈ ನಾಟಕವು ಮುಂಬೈಯಲ್ಲಿ ನಡೆದ ರಾಷ್ಟಿçÃಯ ನಾಟಕೋತ್ಸವದಲ್ಲಿ ಮೊದಲನೇಯ ಬಹುಮಾನ ಪಡೆದಿರುತ್ತದೆ. ಈ ನಾಟಕವು ವಿವಿಧ ಕಡೆಗಳಲ್ಲಿ ಪ್ರದರ್ಶನಗೊಂಡು ನಾಲ್ಕು ಕಡೆ ಬಹುಮಾನಗಳನ್ನು ಪಡೆದುಕೊಂಡಿದೆ. ಇದಲ್ಲದೇ ಜಂಬಣ್ಣ ಅಮರಚಿಂತ ಅವರ ಕಾಬಂಬರಿಯ ಬೂಟುಗಾಲಿನ ಸದ್ದು ಎಂಬ ನಾಟಕವನ್ನು ರಂಗ ರೂಪ ಮಾಡಿ ನಿರ್ದೇಶನ ಮಾಡಿದ್ದಾರೆ. ಈ ನಾಟಕ ಕೂಡ ಅನೇಕ ಕಡೆ ಬಹುಮಾನಗಳನ್ನು ಪಡೆದುಕೊಂಡಿದೆ.
ಸಿದ್ದರಾಮ ಕೊಪ್ಪರ್ ನಿರ್ದೇಶನ ಮಾಡಿರುವ ನಾಟಕಗಳು ವರ್ತಮಾನದ ಸಮಸ್ಯೆಗಳಿಗೆ ಮುಖಾಮುಖಿಯಾಗುವ ನಾಟಕಗಳಾಗಿವೆ. ಇವರ ನಾಟಕಗಳನ್ನು ತುಂಬ ಬರಹಗಾರರು ವಿಮರ್ಶೆ ಮಾಡಿದ್ದಾರೆ. ‘ನಾನು ನಿರ್ದೇಶನ ಮಾಡಿರುವ ಅಲಾಯಿ ದೇವರು ನಾಟಕವನ್ನು ಬಲಪಂಥಿಯರು ಪ್ರತಿರೊಧಿಸಿದ್ದಕ್ಕೆ ರಂಗಾಸಕ್ತರು ಪೋಲಿಸ್ ರಕ್ಷಣೆಯಲ್ಲಿ ನಾಟಕವನ್ನು ಪ್ರದರ್ಶನ ಮಾಡಿದ್ದೇವೆ ಎನ್ನುತಾರೆ’.
ಪ್ರಸ್ತುತ ಸಿದ್ದರಾಮ ಕೊಪ್ಪರ್ ಮತ್ತು ಅವರ ಸಮಾನ ಮನಸ್ಕರು ಸೇರಿ “ಏಷಿಯನ್ ಥಿಯೇಟರ್” ಎಂಬ ಹೊಸ ರಂಗ ತಂಡ ಕಟ್ಟಿದ್ದಾರೆ. ಈ ತಂಡದ ಅಧ್ಯಕ್ಷರು ಸೂರ್ಯಕಾಂತ್ ಗುಣಕಿ ಮಠ, ಗೌರವಾಧ್ಯಕ್ಷರು ಅರ್. ನರೇಂದ್ರ ಬಾಬು ಈ ತಂಡದ ಮೂಲಕ ರಾಜ್ಯ ಮತ್ತು ದೇಶದ ವಿವಿದ ಕಡೆಗಳಲ್ಲಿ ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ.
ಇವರು ನಿರ್ದೇಶನ ಮತ್ತು ಅಭಿನಯಿಸಿರುವ ರಾಷ್ಟç ಮಾತೆ ಅಹಲ್ಯಾ ಬಾಯಿ ಹೋಳ್ಕರ್ ನಾಟಕ ಸೇರಿದಂತೆ ಇನ್ನಿತರ ನಾಟಕಗಳು ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗಿವೆ. ಕೆಲವು ನಾಟಕಗಳು ಚಂದನ ವಾಹಿನಿಯಲ್ಲಿ ಚಿತ್ರಿಕರಣವಾಗಿವೆ. ವರ್ತಮಾನದ ಸಮಸ್ಯೆಗಳು, ನಾಟಕಗಳು ಮತ್ತು ಕಲೆ ಕುರಿತು ಆಕಾಶವಾಣಿಯಲ್ಲಿ ಇವರ ಸಂದರ್ಶನಗಳು ಪ್ರಸಾರವಾಗಿವೆ.
ಪ್ರಸ್ತುತ ಸಿದ್ದರಾಮ ಕೊಪ್ಪರ್ ಅವರು ಸಾಮಾಜಿಕ ಚಳುವಳಿಗಳಲ್ಲಿ, ಪ್ರಗತಿ ಪರ ಚಳುವಳಿಗಳಲ್ಲಿ ಮತ್ತು ಕಾರ್ಮಿಕ ಚಳುವಳಿಗಳಲ್ಲಿ ಸಕ್ರಿಯವಾಗಿದ್ದಾರೆ. ಇವರು ಹಲವಾರು ಬೀದಿ ನಾಟಕಗಳ ಮೂಲಕ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇವರ ಹಲವಾರು ಕಥೆ, ಕವನ, ಲೇಖನ, ಚಿತ್ರ ಕೃತಿಗಳು ಮತ್ತು ವ್ಯಂಗ್ಯ ಚಿತ್ರಗಳು ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
ದಕ್ಷಿಣ ಭಾರತದ ಪ್ರಸಿದ್ದ ನಟ ರಜನಿಕಾಂತ್ ಕೂಡ ಒಂದು ಕಾಲದಲ್ಲಿ ಇದೇ ಬಿಎಂಟಿಸಿಯಲ್ಲಿ ಕಂಡಕ್ಟರ್ ಆಗಿದ್ದುಕೊಂಡು ಕಲಾವಿದರಾಗಿ ಇಂದು ಪ್ರಸಿದ್ದ ನಟರಾಗಿರುವುದು ನಮಗೆಲ್ಲರಿಗೂ ಗೊತ್ತೆ ಇದೆ. ಆ ಸಾಲಿನಲ್ಲಿ ಸಿದ್ದರಾಮ ಕೊಪ್ಪರ್ ಅವರ ಪ್ರಯಾಣ ಸಾಗಲಿ ಎಂದು ಹಾರೈಸೋಣ.
ಸಿದ್ದರಾಮ ಕೊಪ್ಪರ್ ಅವರ ಮೋಬೈಲ್ ನಂಬರ್ : ೯೬೬೩೬೩೮೭೫೪.
ಡಾ. ನರಸಿಂಹ ಗುಂಜಹಳ್ಳಿ
ಸಹಾಯಕ ಪ್ರಾಧ್ಯಾಪಕರು, ಪತ್ರಿಕೊದ್ಯಮ ವಿಭಾಗ
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೊಪ್ಪಳ
ಮೋಬೈಲ್ : ೯೯೦೨೯೨೭೯೪೫.
Art lover Bus Conductor : Siddarama Kopper
Comments are closed.