ಸದೃಢ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ: ಹೇಮಲತಾ ನಾಯಕ

Get real time updates directly on you device, subscribe now.


ಕೊಪ್ಪಳ  : ಸದೃಢ ಆರೋಗ್ಯ ಕಾಯ್ದುಕೊಳ್ಳಲು ಕ್ರೀಡೆಗಳು ಸಹಕಾರಿಯಾಗಿವೆ ಎಂದು ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ಮೇಜರ್ ಧ್ಯಾನಚಂದ್ ರವರ ಜನ್ಮದಿನಾಚರಣೆ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 29ರಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಕೂಟ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು.
ಖೇಲ್ ರತ್ನ ಮೇಜರ್ ಧ್ಯಾನಚಂದ್ ರವರ ಸವಿನೆಪಿಗಾಗಿ ದೇಶಾದ್ಯಂತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಿಸಲಾಗುತ್ತಿದೆ. ಧ್ಯಾನಚಂದ್ ರವರು ಸರ್ವಶ್ರೇಷ್ಠ ಹಾಕಿ ಪಟುವಾಗಿದ್ದು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಹೆಸರು ಅಜರಾಮರವಾಗಿದೆ. ಧ್ಯಾನಚಂದ್ ಅವರು ತಮ್ಮ 17ನೇ ವಯಸ್ಸಿನಲ್ಲಿ ಆರ್ಮಿಯಿಂದ ವೃತ್ತಿ ಜೀವನ ಆರಂಭಿಸಿ ಹಾಕಿ ಪಂದ್ಯದಲ್ಲಿ ಸಾಧನೆ ತೋರಿದರು. ಇವರ ಆಟದ ಶೈಲಿ ಕಂಡು ಜನರು ಧ್ಯಾನಚಂದ್ ರವರಿಗೆ “ದಿ ಮೆಜಿಶಿಯನ್ ಆಫ್ ಹಾಕಿ” ಎಂದು ಕರೆಯುತ್ತಾರೆ. ಇಂದು ನಮ್ಮ ದೇಶದಲ್ಲಿ ಧ್ಯಾನಚಂದ್ ಅವರ ಹೆಸರಿನಲ್ಲಿ ಕ್ರೀಡಾಂಗಣಗಳು, ಹಲವಾರು ಪ್ರಶಸ್ತಿಗಳಿವೆ. ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ನಮ್ಮ ದೇಶದ ಕ್ರೀಡಾಪಟುಗಳು ಉತ್ತಮ ಅನೇಕ ಪದಕಗಳನ್ನು ಪಡೆದಿರುವುದು ನಮ್ಮೆಲ್ಲರ ಹೆಮ್ಮೆ. ಈ ದಿಶೆಯಲ್ಲಿ ನಮ್ಮ ಭಾಗದ ಮಕ್ಕಳು ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೀರ್ತಿ ತರಬೇಕು ಎಂದರು. ಆರೋಗ್ಯಪೂರ್ಣ ಜೀವನ ನಡೆಸಲು ಕ್ರೀಡೆಗಳು ಪೂರಕವಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿ ಸ್ಪರ್ಧಾ ಮನೋಭಾವದಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.
ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಅವರು ಮಾತನಾಡಿ, ದೈಹಿಕ ಹಾಗೂ ಮಾನಸಿಕ ಸದೃಢತೆಗಾಗಿ ಕ್ರೀಡೆಗಳು ಅತ್ಯವಶ್ಯಕವಾಗಿವೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಓದುವ ಪಾಠಕ್ಕೆ ನೀಡುವಷ್ಟೇ ಮಹತ್ವವನ್ನು ಕ್ರೀಡೆಗಳಿಗೆ ನೀಡಬೇಕು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ ಜಾಬಗೌಡರ ಅವರು ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎ.ಬಸವರಾಜ, ಕ್ರೀಡಾ ವಸತಿ ನಿಲಯದ ಅಧೀಕ್ಷಕರಾದ ನಾಗರಾಜ್, ತಾಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿರುಪಾಕ್ಷಪ್ಪ ಬಾಗೊಡಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಪುಂಡಲಿಕಪ್ಪ, ಗಣ್ಯರಾದ ಶಿವರೆಡ್ಡಿ ಭೂಮಕ್ಕನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತ ಪ್ರಾಚಾರ್ಯರಾದ ಸಿ.ಜಡಿಯವರ ನಿರೂಪಿಸಿದರು.
ಕ್ರೀಡೆಗಳಿಗೆ ಚಾಲನೆ: ಮೇಜರ್ ಧ್ಯಾನಚಂದ್‌ ಅವರ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ವಿಧಾನ ಪರಿಷತ್ ಸದಸ್ಯರು ಹಾಗೂ ನಗರಸಭೆ ಅಧ್ಯಕ್ಷರು ಚಾಲನೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: