ಜನತೆಯ  ಜೀವನದ  ಜೊತೆಗೆ ಚೆಲ್ಲಾಟ ನಿಲ್ಲಿಸಿ: ಸರಕಾರಕ್ಕೆ ಜೆಡಿಎಸ್ ಆಗ್ರಹ

Get real time updates directly on you device, subscribe now.

ಮುನಿರಾಬಾದ್ : ಜನರ ಹಾಗೂ ರೈತರ ಜೀವನದ ಜೊತೆಗೆ ಚೆಲ್ಲಾಟ ಆಡುವುದನ್ನು ಕಾಂಗ್ರೆಸ್ ಪಕ್ಷ ಈ ಕೂಡಲೇ ನಿಲ್ಲಿಸಬೇಕೆಂದು ಜೆಡಿಎಸ್ ಆಗ್ರಹಿಸಿದೆ.
ತುಂಗಭದ್ರಾ ಜಲಾಶಯದ ಇಂದಿನ ಘೋರ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷವೇ ಕಾರಣ. ಒಂದು ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಒಂದು ವರ್ಷವಾದ ನಂತರವೂ ಈ ಸರಕಾರ ಪಾಠ ಕಲಿಯಲಿಲ್ಲ.‌ ತಜ್ಞರು ಪರಿಸ್ಥಿತಿಯ ಗಂಭೀರತೆಯನ್ನು ಸ್ಪಷ್ಟಪಡಿಸಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇಂದು ಜಲಾಶಯದ ಆರು ಕ್ರಸ್ಟ್ ಗೇಟ್ ಗಳು ಕೊಚ್ಚಿ ಹೋಗುವ ಸಂದರ್ಭ ಬಂದಿದೆ. ಇದಕ್ಕೆ ಸರಕಾರವೇ ಕಾರಣ ಎಂದು ಆ ಪಕ್ಷದ ನಾಯಕರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ದೇವದುರ್ಗ ಮತಕ್ಷೇತ್ರದ ಶಾಸಕರಾದ ಶ್ರೀಮತಿ ಕರೆಮ್ಮ ನಾಯಕ್, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ್ ಹಾಗೂ ಪಕ್ಷದ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಅವರ ನಿಯೋಗ ಇಂದು ತುಂಗಭದ್ರಾ ಯೋಜನಾ ವೃತ್ತದ ಅಧಿಕ್ಷಕ ಅಭಿಯಂತರ ಕಚೇರಿಯಲ್ಲಿ ಇಂಜಿನಿಯರ್ ಅವರನ್ನು ಭೇಟಿಯಾಗಿ ಪ್ರಸ್ತುತ ಸ್ಥಿತಿ ಗತಿ ಕುರಿತು ಮಾಹಿತಿ ಪಡೆದರು.
ಎರಡನೇ ಬೆಳೆಗೆ ನೀರಿಲ್ಲ ಎಂದು ಹೇಳುವುದು ಎಷ್ಟು ಸಮಂಜಸ? ಒಂದು ವರ್ಷದಿಂದ ಇಲಾಖೆ ಪರಿಸ್ಥಿತಿ ನಿಭಾಯಿಸಲು ಏನು ಕ್ರಮ ಕೈಗೊಂಡಿದೆ? ಮುಂದಿನ ತಿಂಗಳುಗಳಲ್ಲಿ ಜನತೆಗೆ, ರೈತರಿಗೆ ಹಾಗೂ ಜೀವ ಸಂಕುಲಕ್ಕೆ ನೀರಿಲ್ಲದಿದ್ದರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ಇಲಾಖೆಯ ಅಧಿಕಾರಿಗಳು ತಮ್ಮ ಕೆಲಸ ಮಾಡಿದ್ದಾರೆ. ಸರಕಾರಕ್ಕೆ ಪರಿಸ್ಥಿತಿಯ ಗಂಭೀರತೆ ಕುರಿತು ಹಲವಾರು ಸಲ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ನಮ್ಮ ಭಾಗದ ಬಗ್ಗೆ ದಿವ್ಯ ನಿರ್ಲಕ್ಷ ತಾಳಿರುವ ಈ ಸರಕಾರಕ್ಕೆ ಅಧಿಕಾರಿಗಳ ಮಾತು ಕಿವಿಗೆ ಬಿದ್ದಿಲ್ಲ ಎಂದು ಹಾರಿಹಾಯ್ದಿದ್ದಾರೆ.
ಕಳೆದ ಸಲ ಬದಲಾಯಿಸಿದ ಗೇಟ್ ಕೂಡ ಸೋರತೊಡಗಿದೆ. ವ್ಯಾಪಕ ಪ್ರಮಾಣದ ನೀರು ವ್ಯರ್ಥವಾಗಿ ಹರಿದಿದೆ. ಇದರ ನಡುವೆ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಮೂಲಕ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ. ತಮ್ಮ ಆರೋಪದ ಬಗ್ಗೆ ಏನಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಇದು ರಾಜಕೀಯ ಮಾಡುವ ಸಮಯ ಅಲ್ಲ ಎಂಬ ಪರಿಜ್ಞಾನವೂ ಅವರಲ್ಲಿ ಇಲ್ಲದಾಗಿದೆ. ಅಷ್ಟರಮಟ್ಟಿಗೆ ಈ ಸರಕಾರ ಸಂವೇದನೆಯನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
ಜಲಸಂಪನ್ಮೂಲ ಸಚಿವರಾದ ಡಿ ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ತಮ್ಮ ಒಳ ಜಗಳಗಳನ್ನು ನಿಲ್ಲಿಸಿ, ಈ ಕೂಡಲೇ ಜಲಾಶಯಕ್ಕೆ ಭೇಟಿ ನೀಡಬೇಕು. ದುರಂತ ಸಂಭವಿಸುವ ಮೊದಲೇ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಜಲಾಶಯದ ಒಟ್ಟಾರೆ ಸ್ಥಿತಿ ಗತಿಯನ್ನು ಕೇಂದ್ರದ ಉಕ್ಕು ಮತ್ತು ಬೃಹತ್ ಖಾತೆ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗುವುದು. ಕೇಂದ್ರ ಸರಕಾರದ ಅಗತ್ಯ ನೆರವು ಒದಗಿಸುವಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಉಪಾಧ್ಯಕ್ಷರಾದ   ಮೂರ್ತೆಪ್ಪ ಹಿಟ್ನಾಳ್, ಜಿಲ್ಲಾ ವಕ್ತಾರರಾದ   ಮಲ್ಲನಗೌಡ ಕೋನನಗೌಡ್ರ, ಗ್ರಾಮೀಣ ಅಧ್ಯಕ್ಷರಾದ   ವಿರೇಶಗೌಡ ಚಿಕ್ಕಬಗನಾಳ,  ಶ್ರೀನಿವಾಸ ಗಿಣಗೇರಿ,   ರಮೇಶ ಡಂಬರಳ್ಳಿ,  ಮಾರುತಿ ಹಿರೇಬಗನಾಳ,   ಸೋಮನಗೌಡ ವಗರನಾಳ, ರವಿ ಮೇಧಾರ ಸೇರಿದಂತೆ ನಮ್ಮ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!