ನಟ ಇಂಗಳಗಿಗೆ ಸಿಜಿಕೆ ಪ್ರಶಸ್ತಿ : ಪ್ರತಿಭೆಗೆ ಸಂದಗೌರವ : ವೀರಾಪುರ ಕೃಷ್ಣ

Get real time updates directly on you device, subscribe now.

ಗಂಗಾವತಿ: ಕಳೆದ ೪೦ ವರ್ಷಗಳಿಂದಲೂ ನಿರಂತರ ರಂಗಚಟುವಟಿಕೆಯ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ತೊಡಗಿಸಿಕೊಂಡಿರುವ ರಂಗಕರ್ಮಿ ಹಾಗು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಅಧ್ಯಕ್ಷ ನಾಗರಾಜ್ ಇಂಗಳಗಿಯವರಿಗೆ ಸಿಜಿಕೆ ರಂಗ ಪುರಸ್ಕಾರ ನೀಡುತ್ತಿರುವುದು ಅರ್ಹತೆಗೆ ಸಂದಗೌರವ ಎಂದು ಹಿರಿಯ ಪತ್ರಕರ್ತ ವೀರಾಪುರ ಕೃಷ್ಣ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಕೊಪ್ಪಳ ವಿವಿ, ಕರ್ನಾಟಕ ಬೀದಿ ನಾಟಕ ಅಕಾಡೆಮಿ ಬೆಂಗಳೂರು, ಕವಿಸಮೋಹ, ಸೇವಾ ಮತ್ತು ಸೇವ್ಸ್ ಸಂಸ್ಥೆ ಕೊಪ್ಪಳ ಹಾಗು ಬಹುತ್ವ ಬಳಗ ಕೊಪ್ಪಳ ಇವುಗಳ ಸಹಯೋಗದೊಂದಿಗೆ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ಸಿಜಿಕೆ ರಂಗ ಪುರಸ್ಕಾರ ಸ್ವೀಕರಿಸಲಿರುವ ಇಂಗಳಗಿಯವರನ್ನು ಸನ್ಮಾನಿಸಿ ಮಾತನಾಡಿದರು, ಯಾವುದೇ ಪಾತ್ರಗಳನ್ನು ರಂಗದ ಮೇಲೆ ಕಣ್ಣಿಗೆ ಕಟ್ಟುವಂತೆ ಲೀಲಾಜಾಲವಾಗಿ ಅಭಿನಯಿಸಿ ರಾಜ್ಯದಾದ್ಯಂತ ಸೈ ಎನಿಸಿರುವ ನಾಗರಾಜ್ ಇಂಗಳಗಿಯವರಿಗೆ ಅತ್ಯುನ್ನತ ಪ್ರಶಸ್ತಿ ದೊರಕಿರುವುದು ಅವರು ಕಲಾ ರಂಗಕ್ಕೆ ದುಡಿಯಲು ಸ್ಪೂರ್ತಿ ತುಂಬಲಿದೆ, ಬಹುತೇಕ ರಂಗ ಪ್ರಕಾರಗಳಲ್ಲಿ ಅಭಿನಯಿಸಿರುವ ನಾಗರಾಜ್ ಇಂಗಳಗಿ ಪರಿಣಾಮಕಾರಿ ಸಂಭಾಷಣೆಯ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿ ಹೊಂದಿದ್ದಾರೆ ಈ ಪ್ರಶಸ್ತಿ ಮೂಲಕ ಅವರ ರಂಗಸೇವೆ ದ್ವಿಗುಣಗೊಳ್ಳಲಿ ಎಂದು ಹಾರೈಸಿದರು.
ಇನ್ನೋರ್ವ ಹಿರಿಯ ಪತ್ರಕರ್ತ ಚಂದ್ರಶೇಖರ್ ಮುಕ್ಕುಂದಿ ಮಾತನಾಡಿ, ಪತ್ರಿಕಾ ಸೇವೆಯ ಜೊತೆಗೆ ಕಲಾ ರಂಗದಲ್ಲೂ ಹವ್ಯಾಸಿ ಕಲಾವಿದರಾಗಿ ಬಹು ವರ್ಷಗಳ ಸೇವೆಯ ಮೂಲಕ ಮೇಲೆದ್ದು ಬಂದಿರುವ ಇಂಗಳಗಿಯವರು, ರಕ್ತರಾತ್ರಿಯಲ್ಲಿ ಅಶ್ವತ್ಥಾಮನಾಗಿ ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಆನೆಗೊಂದಿ ಉತ್ಸವ, ಕನಕಗಿರಿ ಉತ್ಸವ, ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನಾ ಸೇರಿದಂತೆ ರಾಜ್ಯದ ಬಹುತೇಕ ಪ್ರಮುಖ ನಗರಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಪ್ರದರ್ಶನ ನೀಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ, ಹವ್ಯಾಸಿ ನಾಟಕ, ಬಯಲಾಟ, ಸಾಮಾಜಿಕ ನಾಟಕ, ವೃತ್ತಿ ನಾಟಕಗಳಲ್ಲೂ ಅಭಿನಯಿಸಿದ್ದಾರೆ. ಇಂಥ ಬಹುಮುಖ ಪ್ರತಿಭೆಗೆ ಇನ್ನೂ ಹೆಚ್ಚು ಮನ್ನಣೆ ದೊರೆಯಲಿ ಎಂದು ಅಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ವೃಷಭೇದ್ರಸ್ವಾಮಿ, ಪಿ.ದಶರಥ, ಹನುಮೇಶ್ ಬಟಾರಿ, ಸುದರ್ಶನ ವೈದ್ಯ ಹಾಗು ಮಲ್ಲಿಕಾರ್ಜುನ ಗೋಟೂರ್ ಇದ್ದರು.

Get real time updates directly on you device, subscribe now.

Comments are closed.

error: Content is protected !!