ಅನಧಿಕೃತ ಗುತ್ತಿಗೆದಾರಿಕೆಗೆ ಹಿಟ್ನಾಳ್ ಕುಟುಂಬದ ಆಶೀರ್ವಾದ-  ಸಿ ವಿ ಚಂದ್ರಶೇಖರ್

Get real time updates directly on you device, subscribe now.

ಕೊಪ್ಪಳ: ಇಡೀ ಕೊಪ್ಪಳ ತಾಲೂಕಿನಲ್ಲಿ ಅನಧಿಕೃತ ಗುತ್ತಿಗೆದಾರರು ಯಾರಾದರೂ ಇದ್ದರೆ ಅದು ಹಿಟ್ನಾಳ್ ಕುಟುಂಬ ಎಂದು ಜನ ಮಾತನಾಡಿಕೊಳ್ಳುವಷ್ಟು ಪರಸ್ಥಿತಿ ಕ್ಷೇತ್ರದಲ್ಲಿ ಹದಗೆಟ್ಟಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ತೀವ್ರ ವಾಗ್ದಾಳಿ ನಡೆಸಿದರು.
ಅಶೋಕ ವೃತ್ತದಲ್ಲಿ ಸೋಮವಾರ ಜೆಡಿಎಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಅವರು ಮಾತನಾಡಿದರು.
“ರಾಜ್ಯದಲ್ಲಿ ಅಷ್ಟೇ ಅಲ್ಲ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ಮಿತಿಮೀರಿದೆ. ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಅಧಿಕಾರಿಗಳನ್ನು ಬೆದರಿಸುವುದು ಸಾಮಾನ್ಯವಾಗಿದೆ. ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಮರಳು ಸಾಗಾಣಿಕೆ ದಂದೆ ಅವ್ವ್ಯಾಹತ ವಾಗಿದೆ. ಸರಕಾರಿ ಕಾಮಗಾರಿಗಳ ಗುತ್ತಿಗೆಗಳು ಹಿಟ್ನಾಳ್ ಕುಟುಂಬದವರ ಕಪಿಮುಷ್ಠಿಯಲ್ಲಿವೆ. ಹೀಗಾಗಿ ಜನ ಕೊಪ್ಪಳದಲ್ಲಿ ಹಿಟ್ನಾಳ್ ಕುಟುಂಬ ಅನಧಿಕೃತ ಗುತ್ತಿಗೆದಾರರು ಎಂದು ಹಾದಿ ಬೀದಿಯಲ್ಲಿ ಮಾತನಾಡುವಂತೆ ಆಗಿದೆ,” ಎಂದು ಆರೋಪಿಸಿದರು.
ನ್ಯಾಯ ಸಮ್ಮತವಾಗಿ ಕೆಲಸ ಮಾಡುವವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಆರೋಪ ಮಾಡುತ್ತಿವೆ ಎಂದು ಮಾನ್ಯ ಸಂಸದರು ಆರೋಪಿಸಿದ್ದಾರೆ. ಹಿರೇ ಹಳ್ಳ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನ್ಯಾಯ ಸಮ್ಮತ ಕೆಲಸವೇ? ಸುಮಾರು 40 ಕ್ಕಿಂತಲೂ ಹೆಚ್ಚು ಹಳ್ಳಿಗಳಿಗೆ ಉಪಯೋಗವಾಗುವ ದೃಷ್ಟಿಯಿಂದ ಗವಿಸಿದ್ದೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ಹಿರೇಹಳ್ಳವನ್ನು ಸ್ವಚ್ಛಗೊಳಿಸಲಾಯಿತು.‌ ಅಲ್ಲಿ ನೀರು ನಿಂತರೆ ಜನರ ಬದುಕು ಹಸನಾಗುತ್ತಿತ್ತು.‌ ಆದರೆ ಅಕ್ರಮ ಗಣಿಗಾರಿಕೆಯಿಂದ ಈ ಭಾಗದ ಪರಿಸರ ಅಸಮತೋಲನಗೊಂಡಿದೆ. ಇದು ಸಂಸದರಿಗೆ ಕಾಣುತ್ತಿಲ್ಲವೇ? ಅಕ್ರಮ ಮರಳು ಸಾಗಾಣಿಕೆ ದಂಧೆಯನ್ನು ಸಮರ್ಥಿಸಿಕೊಳ್ಳುವುದು ಸಹ ನ್ಯಾಯ ಸಮ್ಮತವೇ ಎಂದು ಪ್ರಶ್ನಿಸಿದರು.
ಒಳ್ಳೆಯ ಕೆಲಸಗಳಿಗೆ ಜೆಡಿಎಸ್ ಪಕ್ಷ ಸದಾ ಬೆಂಬಲ ನೀಡುತ್ತದೆ. ಆದರೆ ಜನ ವಿರೋಧಿ ಕಾರ್ಯಗಳ ಕುರಿತು ಪ್ರತಿಭಟನೆಯನ್ನು ಮಾಡುತ್ತಲೇ ಇರುತ್ತದೆ ಎಂದು ಒತ್ತಿ ಹೇಳಿದರು.
“ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಹಾಗೂ ಆರ್ಥಿಕ ಅಶಿಸ್ತಿನಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ನೆಲ ಕಚ್ಚಿದೆ.‌ ಕಾಂಗ್ರೆಸ್ ಪಕ್ಷದ ನಾಯಕರು ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಟೀಕಿಸುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರನ್ನು ಭೇಟಿಯಾಗಿ ರಾಜ್ಯಕ್ಕೆ ಯೋಜನೆಗಳನ್ನು ತರಲು ಇವರಿಗೇನು ಧಾಡಿ ಎಂದು ಕೆಂಡಕಾರಿದರು.
“ಎಚ್ ಡಿ ಕುಮಾರಸ್ವಾಮಿ ಈ ರಾಜ್ಯ ಕಂಡ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಗಳು. ಆಂಧ್ರಪ್ರದೇಶದ ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಗೆ ಮರುಜೀವ ತುಂಬಿದ್ದಾರೆ. ಅಲ್ಲಿಯ ಜನ ಅವರನ್ನು ದೇವರೆಂದೇ ಪೂಜಿಸುತ್ತಾರೆ. ಬೆಂಗಳೂರು ನಗರಕ್ಕೆ ಕೇಂದ್ರ ಸರಕಾರದಿಂದ 4,500 ವಿದ್ಯುತ್ ಚಾಲಿತ ಬಸ್ ಗಳನ್ನು ಮಂಜೂರು ಮಾಡಿಸಿದ್ದಾರೆ. ಸರಕಾರದ ಒಡೆತನದ ನಷ್ಟದಲ್ಲಿರುವ ಕಾರ್ಖಾನೆಗಳಿಗೆ ಮರುಜಿವ ತುಂಬಿದ್ದಾರೆ. ಇಂತಹ ಕೆಲಸಗಳಿಗೆ ಕನಿಷ್ಠ ಪಕ್ಷ ಅವರನ್ನು ಅಭಿನಂದಿಸುವುದು ಕಾಂಗ್ರೆಸ್ ಸರಕಾರದ ನಾಯಕರ ನೈತಿಕ ಜವಾಬ್ದಾರಿಯಲ್ಲವೇ? ಅದನ್ನು ಬಿಟ್ಟು ಪ್ರತಿನಿತ್ಯ ಕುಮಾರಸ್ವಾಮಿಯವರನ್ನು ಟೀಕಿಸುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಕಿಡಿ ಕಾರಿದರು.
ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿದೆ. ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿಯನ್ನು ಮರೆತಿದ್ದಾರೆ. ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಹಾಗೂ ಲಂಚಾವತಾರ ನಿತ್ಯ ಸತ್ಯಗಳಾಗಿವೆ. ಹಗರಣಗಳ ಸರಮಾಲೆಯ ಸರ್ಕಾರ ಇದಾಗಿದೆ ಎಂದು ಆರೋಪಿಸಿದರು.
ಕುಸಿದು ಹೋಗಿರುವ ಆಡಳಿತ ಯಂತ್ರವನ್ನು ಗಮನದಲ್ಲಿಟ್ಟುಕೊಂಡು ಈ ಕೂಡಲೇ ಕಾಂಗ್ರೆಸ್ ಸರಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ವೀರೇಶ ಮಾಂತಯ್ಯನ ಮಠ, ರಾಜ್ಯ ಕಾರ್ಯಕಾರಣಿ ಕಾರ್ಯದರ್ಶಿ ಶರಣಪ್ಪ ಕುಂಬಾರ, ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಹಿಟ್ನಾಳ್, ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರು, ತಾಲೂಕ ಅಧ್ಯಕ್ಷ ಯಮನಪ್ಪ ಕಟ್ಟಿಗಿ ನಗರಾಧ್ಯಕ್ಷ ಸೋಮನಗೌಡ ಹಾಗೂ ಜೆಡಿಎಸ್ ಮುಖಂಡರಾದ ಈಶಪ್ಪ ಮಾದನೂರ, ದೇವಪ್ಪ ಕಟ್ಟಿಮನಿ, ಸಂಗಮೇಶ ಡಂಬಳ, ವಿಜಯಕುಮಾರ ಪೂಜಾರ, ಶರಣಪ್ಪ ಜಡಿ, ಕಳಕನಗೌಡ ಹಲಗೇರಿ, ರವಿ ಮಾಗಳ, ವೀರೇಶಗೌಡ ಚಿಕ್ಕಬಗನಾಳ, ರಮೇಶ ಡಂಬ್ರಹಳ್ಳಿ, ಮಾರುತಿ ಪೇರ್ಮಿ, ಪ್ರವೀಣ ಇಟಗಿ, ಭೀಮಣ್ಣ ಕವಲೂರ, ಸೈಯದ್ ಮಹಮ್ಮದ್ ಹುಸೇನ್, ಶರಣಪ್ಪ ಮತ್ತೂರ, ಶೇಖರಗೌಡ ಪಾಟೀಲ್, ಬಸವರಾಜ ಗುಳಗುಳಿ, ಭೀಮರೆಡ್ಡಿ, ವಸಂತ ಹಟ್ಟಿ, ದೇವರಾಜ ಅಗಳಕೇರಾ, ದ್ಯಾಮಣ್ಣ ಕಲಕೇರಿ, ಮಹೇಶ ಆಗಳಕೇರಿ, ಪ್ರಕಾಶ ಬಸರಿಗಿಡ, ಸಿದ್ದರೆಡ್ಡಿ ಮೈನಳ್ಳಿ, ಮಹೇಶ ಕಂದಾರಿ, ಜಗನ್ನಾಥ ಮುನಿರಾಬಾದ್, ಆನಂದ ಕುಟ್ಟಿ, ಮೈಲಾರಪ್ಪ ಗುಡದಳ್ಳಿ, ರವಿ ಮೆದಾರ, ಮುತ್ತು ನಾಯಕ್, ಮಲ್ಲಪ್ಪ ಹಂದ್ರಾಳ, ವಿರೂಪಾಕ್ಷಗೌಡ ನರೇಗಲ್, ಸೋಮನಗೌಡ ಪಾಟೀಲ್ ಸೇರಿದಂತೆ ಜೆಡಿಎಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!