ಏಮ್ಸ್ ಹೋರಾಟ ಸಮಿತಿಯ ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ಖಂಡನೀಯ: ಭಾರಧ್ವಾಜ್

ಗಂಗಾವತಿ: ಸುಮಾರು ನಾಲ್ಕು ವರ್ಷಗಳಿಂದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ರಾಯಚೂರುನಲ್ಲಿ ಸ್ಥಾಪಿಸಲು ಒತ್ತಾಯಿಸಿ ಏಮ್ಸ್ ಹೋರಾಟ ಸಮಿತಿಯನ್ನು ರಚಿಸಿಕೊಂಡು ಹೋರಾಟ ನಡೆಸುತ್ತಿದ್ದು, ಹೋರಾಟವು ಶಾಂತಿಯಿAದಲೇ ನಡೆಯುತ್ತಿದೆ. ಆದರೆ ಸದರಿ ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಐ.ಐ.ಟಿ ಸ್ಥಾಪನೆಗೆ ರಾಯಚೂರು ಜಿಲ್ಲೆಯು ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೂ ಸಹ ಪ್ರಹ್ಲಾದ ಜೋಷಿಯವರು ಧಾರವಾಡದಲ್ಲಿ ಸ್ಥಾಪಿಸುವ ಮೂಲಕ ನಮ್ಮ ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ ಅನ್ಯಾಯವೆಸಗಿದ್ದರು. ಏಮ್ಸ್ ಸಂಸ್ಥೆಯನ್ನಾದರೂ ರಾಯಚೂರುನಲ್ಲಿಯೇ ಸ್ಥಾಪಿಸಬೇಕೆಂದು ಹೋರಾಟಗಾರರು ಕಳೆದ ನಾಲ್ಕು ವರ್ಷಗಳಿಂದ ಡಾ. ಬಸವರಾಜ ಕಳಸ ಅವರ ನೇತೃತ್ವದಲ್ಲಿ ಶಾಂತಿಯಿAದ ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರು ಹೋರಾಟ ಮಾಡಿದರೆ ಮಾತ್ರ ರಾಯಚೂರುನಲ್ಲಿ ಏಮ್ಸ್ ಸ್ಥಾಪನೆ ಆಗುವುದಿಲ್ಲ. ತಜ್ಞರ ವರದಿಯ ಆಧಾರದ ಮೇಲೆ ಏಮ್ಸ್ ಸ್ಥಾಪನೆಯಾಗುತ್ತದೆ ಎಂದು ಏಮ್ಸ್ ಹೋರಾಟಗಾರರ ಹೋರಾಟಕ್ಕೆ ಅಪಮಾನವೆಸಗಿರುತ್ತಾರೆ. ಪ್ರಹ್ಲಾದ ಜೋಷಿಯವರ ಈ ಹೇಳಿಕೆಯನ್ನು ವಿರೋಧಿಸಿ ಹೋರಾಟಗಾರರ ನೀಡಿದ ಪತ್ರಿಕಾ ಹೇಳಿಕೆಗಳನ್ನೇ ನೆಪವಾಗಿಟ್ಟುಕೊಂಡು ಹೋರಾಟಗಾರರು ಪ್ರಹ್ಲಾದ ಜೋಷಿಯವರಿಗೆ ಕೊಲೆ ಬೆದರಿಕೆ ಹಾಕಿ, ಗಲಭೆಗಳನ್ನು ಮಾಡಲಿದ್ದಾರೆ ಎಂದು ರಾಯಚೂರು ಶಾಸಕರಾದ ಡಾ. ಶಿವರಾಜ ಪಾಟೀಲ್ ರವರು ರಾಯಚೂರು ನಗರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಹೋರಾಟಗಾರರಾದ ಡಾ. ಬಸವರಾಜ ಕಳಸ, ಎಸ್. ಮಾರೆಪ್ಪ ವಕೀಲರು, ಎಂ.ಆರ್. ಬೇರಿ, ಅಶೋಕಕುಮಾರ ಜೈನ್, ಶ್ರೀನಿವಾಸ ಕಲವಲದೊಡ್ಡಿ ಅವರುಗಳ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಹೋರಾಟವನ್ನು ಹತ್ತಿಕ್ಕಲು ಹುನ್ನಾರ ನಡೆಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸದರಿ ಹೋರಾಟಗಾರರ ಮೇಲೆ ದಾಖಲಿಸಿದ ಸುಳ್ಳು ಪ್ರಕರಣಗಳನ್ನು ವಾಪಸ್ಸು ಪಡೆಯದಿದ್ದಲ್ಲಿ ಹೈದ್ರಾಬಾದ್-ಕರ್ನಾಟಕದಾಧ್ಯಂತ ಹೋರಾಟಗಳು ನಡೆಯಲಿವೆ ಎಂದು ಎಚ್ಚರಿಸಿದರು.
Comments are closed.