ಶಿಕ್ಷಣದ ಪ್ರಾಮುಖ್ಯತೆ ಒತ್ತಿ ಹೇಳುವ ದುರ್ಗತಿ ಯಾವ ದೇಶಕ್ಕೂ ಬರಬಾರದು: ಯಾಳಗಿ

Get real time updates directly on you device, subscribe now.

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಸಮಾರೋಪ ಸಮಾರಂಭ

ಕೊಪ್ಪಳ: ಶಿಕ್ಷಣದ ಪ್ರಾಮುಖ್ಯತೆಯನ್ನು ಒತ್ತಿ ಹೇಳುವ ದುರ್ಗತಿ ಯಾವ ದೇಶಕ್ಕೂ ಬರಬಾರದು. ಪ್ರತಿಯೊಬ್ಬರು ಅದನ್ನು ಅರಿತುಕೊಂಡು ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಉಪನ್ಯಾಸಕ, ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ವಾರ್ಷಿಕ ಸಮಾರೋಪ ಸಮಾರಂಭ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕವಾಗಿ ಪ್ರಗತಿ ಸಾಧಿಸದಿದ್ದರೆ ಸಾಮಾಜಿಕವಾಗಿ ಕೊಡುಗೆ ಶೂನ್ಯ. ಸಮಾಜ ಚನ್ನಾಗಿಲ್ಲ ಎನ್ನುವ ಬದಲು ನಾವು ಸರಿಯಾಗಬೇಕಿದೆ. ಸಂಸ್ಕಾರರಹಿತ ವಿದ್ಯಾರ್ಥಿಗಳಿಂದ ಭಯಾನಕ ವಾತಾವರಣ ಸೃಷ್ಟಿಯಾಗುತ್ತದೆ. ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕೃತಿ ಅಳವಡಿಸಿಕೊಂಡು ಬದುಕನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ವಿದ್ಯಾರ್ಥಿ ದೆಸೆಯಲ್ಲಿ ಸಮಯಕ್ಕೆ ಆದ್ಯತೆ ನೀಡಬೇಕು. ಕಳೆದು ಹೋದ ವಸ್ತುವನ್ನು ಯಾವಗಲಾದರೂ ಪಡೆಯಬಹುದು, ಗಳಿಸಬಹುದು. ಆದರೆ ಸಮಯ ಮತ್ತು ಸಮುದ್ರದ ಅಲೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಓದುವ ಸಮಯದಲ್ಲಿ ಓದುವುದನ್ನು ಬಿಟ್ಟು ಉಳಿದೆಲ್ಲ ಮಾಡಿದರೆ ಮುಂದೆ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಹೆತ್ತವರಿಗೆ ಮಕ್ಕಳ ಬಗ್ಗೆ ಅಪಾರ ಕನಸುಗಳಿರುತ್ತವೆ, ಭರವಸೆ ಇರುತ್ತದೆ. ಅದನ್ನು ಅರಿತುಕೊಂಡು ಸಮಯದೊಂದಿಗೆ ಹೆಜ್ಜೆ ಹಾಕಬೇಕು ಎಂದು ಮಾರ್ಮಿಕವಾಗಿ ತಿಳಿಸಿದರು.
ಕಾಲೇಜಿನ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರು, ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಭಾಗ್ಯಜ್ಯೋತಿ ಪ್ರಾಸ್ತಾವಿಕ ಮಾತನಾಡಿ, ಅತಿಥಿಗಳಿಗೆ ಕಾಲೇಜಿನ ಪರಿಚಯ ಮತ್ತು ಸಮಾರಂಭದ ಅತಿಥಿ ಪರಿಚಯ ಮಾಡಿಕೊಟ್ಟು, ಪರೀಕ್ಷಾ ಸಿದ್ಧತೆಗಳನ್ನು ವಿವರಿಸಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ವೈ.ಬಿ.ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅತಿಥಿ ಉಪನ್ಯಾಸಕ ಶಿವಪುತ್ರಪ್ಪ.ಎಂ., ಪತ್ರಾಂಕಿತ ವ್ಯವಸ್ಥಾಪಕ ಮಹಾಂತೇಶ ವೇದಿಕೆಯಲ್ಲಿದ್ದರು.
ಡಾ.ತುಕಾರಾಂ ನಾಯ್ಕ ಸ್ವಾಗತಿಸಿದರು. ವಿಜಯ ಮಠಪತಿ ಪ್ರಾರ್ಥಿಸಿದರು. ಶಾರದಾ ಹಾಗೂ ಸಂಗಡಿಗರಿಂದ ಸ್ವಾಗತ ನೃತ್ಯ ಗಮನ ಸೆಳೆಯಿತು. ಡಾ.ನಾಗರಾಜ ದೊರೆ ವಂದಿಸಿದರು. ಡಾ.ಮಹಾಂತೇಶ ನೆಲಾಗಣಿ ನಿರೂಪಿಸಿದರು.

ಬಾಕ್ಸ್..
ವಿದಾಯಭಾವದ ನಡುವೆಯೂ ವಿದ್ಯಾರ್ಥಿಗಳ ಆರ್ಸಿಬಿ ಸಂಭ್ರಮ:
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ದೇವರಾಜ ನಾಯಕ್ ಈಚೆಗೆ ವಿದ್ಯುತ್ ಅಪಘಾತಕ್ಕೊಳಗಾಗಿ ಸಾವನ್ನಪ್ಪಿದ್ದು ಹಾಗೂ ಹಿರಿಯ ಸಾಹಿತಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಅಗಲಿಕೆಗೆ ಮೌನವನ್ನು ಆಚರಿಸಲಾಯಿತು. ವಿದ್ಯಾರ್ಥಿ ದೇವರಾಜನ ದೊಡ್ಡ ಭಾವಚಿತ್ರವನ್ನು ಕಟ್ಟಡದ ಮೇಲಿಂದ ಕೆಳಗೆ ಬಿಟ್ಟು ಕ್ಷೀರಾಭಿಷೇಕ ಮಾಡಿ ಸಂತಾಪ ಸೂಚಿಸಲಾಯಿತು.
ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಸಹಪಾಠಿಗಳ ವಿದಾಯದ ನಡುವೆಯೂ ವೇದಿಕೆ ಕಾರ್ಯಕ್ರಮದ ನಂತರ ಮನರಂಜನಾ ಕಾರ್ಯಕ್ರಮಗಳಲ್ಲಿ ಕುಣಿದು ಸಂಭ್ರಮಿಸಿದರು. ಕಾಲೇಜಿನಲ್ಲಿ ಎಲ್ಲರೂ ಫೋಟೋಗಳ, ಸೆಲ್ಫಿಗಳ ಸಾಗರ ಕಂಡು ಬಂತು. ಇವೆಲ್ಲದರ ನಡುವೆ ಐಪಿಎಲ್ನ ಆರ್ಸಿಬಿ ತಂಡದ ಪರ ವಿದ್ಯಾರ್ಥಿಗಳ ಘೋಷಣೆ ಮೊಳಗಿತು. ಹಲವು ವಿದ್ಯಾರ್ಥಿಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿ ಧರಿಸಿದ್ದು ವಿಶೇಷವೆನಿಸಿತು.
—-

Get real time updates directly on you device, subscribe now.

Comments are closed.

error: Content is protected !!