ನಿಷ್ಟುರ ಪತ್ರಕರ್ತರಾದ ಡಿ. ಉಮಾಪತಿ ಅವರಿಗೆ ಚಂದ್ರಶೇಖರ ಹೊಸಮನಿ ಅಂಬೇಡ್ಕರ್ ಮಾರ್ಗಿ ಪತ್ರಕರ್ತ ಪ್ರಶಸ್ತಿ

Get real time updates directly on you device, subscribe now.

11ನೇ ಮೇ ಸಾಹಿತ್ಯ ಮೇಳದ ಗೌರವ ಪ್ರಕಟ-6

ನಿಷ್ಟುರ ವರದಿಗಾರಿಕೆ ಮತ್ತು ವೈಚಾರಿಕ ಬರಹಗಳಿಂದ ಕರ್ನಾಟಕದ ವಿವೇಕವನ್ನು ಎಚ್ಚರಿಸುವ ಕೆಲಸ ಮಾಡಿದ ಮತ್ತು ಮಾಡುತ್ತಿರುವ ಡಿ. ಉಮಾಪತಿ ಅವರನ್ನು ಮೇ ಸಾಹಿತ್ಯ ಮೇಳವು ಕೊಡಮಾಡುವ 2025ರ ಸಾಲಿನ ‘ಚಂದ್ರಶೇಖರ ಹೊಸಮನಿ ಅಂಬೇಡ್ಕರ್ ಮಾರ್ಗಿ ಪತ್ರಕರ್ತ ಪ್ರಶಸ್ತಿಗೆ ಮೇಳದ ಸಮಿತಿಯು ಆಯ್ಕೆ ಮಾಡಿದೆ. 11ನೇ ಮೇ ಸಾಹಿತ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು..

ಕರ್ನಾಟಕದ ಹಿರಿಯ ಪತ್ರಕರ್ತರು ಡಿ. ಉಮಾಪತಿ. ಕನ್ನಡ ನಾಡಿನಲ್ಲಿ ಕಣ್ಣೆದುರಿಗಿನ ವರ್ತಮಾನವನ್ನು, ಘಟನೆಗಳನ್ನು ತೆರೆದಿಡುವ ಪತ್ರಕರ್ತರು ಸಾಕಷ್ಟಿದ್ದಾರೆ. ಆದರೆ ವರ್ತಮಾನದ ಹಿಂದಿನ ಭೂತವನ್ನೂ, ಭವಿಷ್ಯವನ್ನೂ ಗ್ರಹಿಸಿ, ಕೇವಲ ಬರಿಗಣ್ಣಿನಿಂದ ನೋಡದೆ ಹೃದಯವಂತಿಕೆಯಿಂದ ಬರೆಯುವವರು ವಿರಳ. ಅಂತಹ ವಿರಳರ ಸಾಲಿಗೆ ಸೇರುವ ಅಪರೂಪದ ಪತ್ರಕರ್ತ ಡಿ.ಉಮಾಪತಿ. ಕರ್ನಾಟಕದಿಂದ ದೆಹಲಿಗೆ ಯಾರೇ ಹೋಗಲಿ, ಅಲ್ಲಿನ ಪ್ರವಾಸದುದ್ದಕ್ಕೂ ಸ್ನೇಹಮಯಿಯಾಗಿ ಜೊತೆಯಾಗುವ ಉಮಾಪತಿಯವರ ಹೃದಯ ಅವರ ಬರೆಹದಷ್ಟೇ ಸೊಗಸು ಎಂದು ವಿರೋಧಿ ತಾತ್ವಿಕತೆಯ ಗೆಳೆಯರೂ ಸ್ಮರಿಸಿಕೊಳ್ಳುವಷ್ಟು ಸ್ನೇಹಮಯ ವ್ಯಕ್ತಿತ್ವ ಅವರದು.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಅತ್ಯಂತ ಹಿಂದುಳಿದ ಸಮಾಜದಿಂದ ಬಂದ ಅವರು ದಾಸಪ್ಪ ಮತ್ತು ಹನುಮಮ್ಮ ದಂಪತಿಗಳ ಮಗ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರ ಬದುಕೂ ಸಂಘರ್ಷಮಯವಾದದ್ದು. ಬದುಕಿನ ಅನುಭವ, ಒಡನಾಟ ಮತ್ತು ಆಳ ಒಳನೋಟಗಳು ಅವರೊಳಗಣ ವಿಶಿಷ್ಟ ಪತ್ರಕರ್ತ ರೂಪು ತಳೆಯಲು ಕಾರಣವಾಗಿವೆ ಎನ್ನಬಹುದು. ಪತ್ರಕರ್ತರಾಗಿ ಅವರ ಕೆಲಸ ಮತ್ತು ಅನುಭವದ ಹರಹು ವಿಶಾಲವಾದದ್ದು. ಕನ್ನಡಪ್ರಭ, ಆಂದೋಲನ, ರೈತ ಚಳವಳಿ, ಪ್ರಜಾವಾಣಿ, ಈ ಟಿವಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ, ನ್ಯಾಯಪಥ (ಗೌರಿ ಮೀಡಿಯಾ) ಮತ್ತು ಈ ದಿನ ವೆಬ್ ಜರ್ನಲ್‌ಗಳಲ್ಲಿ ಅವರ ಪತ್ರಿಕಾ ಬರಹ ಮತ್ತು ವೃತ್ತಿ ವ್ಯಾಪ್ತಿ ಹರಡಿಕೊಂಡಿದೆ. ದೆಹಲಿ ವರದಿಗಾರರಾಗಿ, ಸಂಸತ್ತಿನ ವರದಿಗಾರರಾಗಿ, ಚುನಾವಣಾ ವಿಶ್ಲೇಷಕರಾಗಿ, ಸುಪ್ರೀಂ ಕೋರ್ಟಿನ ನದಿ ನೀರು ನ್ಯಾಯಾಧಿಕರಣ ವ್ಯಾಜ್ಯಗಳ ತೀರ್ಪುಗಳ ವಿಶ್ಲೇಷಕರಾಗಿ, ಚುನಾವಣಾ ವಿಶ್ಲೇಷಕರಾಗಿ ಅವರ ಬರಹ ಗಮನಾರ್ಹವಾದುದಾಗಿದೆ. ರಾಜ್ಯ, ರಾಷ್ಟ್ರ ಮಟ್ಟದ ರಾಜಕೀಯ ಬೆಳವಣಿಗೆಗಳು, ವಿದೇಶಾಂಗ ಸಚಿವರೊಡನೆ ಪ್ರವಾಸ ಮಾಡಿ ಬರೆದ ರಾಜಕೀಯ ವರದಿಗಾರಿಕೆಯೂ ಗಮನ ಸೆಳೆದ ಬರಹಗಳಾಗಿವೆ.

ಧರ್ಮ ಗುರುತಿಸುವುದು ಇಷ್ಟೊಂದು ಸುಲಭವಾಗಿರುವ ಈ ಬೌದ್ಧಿಕ ದುರ್ದಿನಗಳಲ್ಲಿ ಉಮಾಪತಿಯವರು ಕೆಲ ವರುಷಗಳ ಹಿಂದೆ ಪತ್ರಿಕೆಗೆ ಬರೆದ ಅಂಕಣದಲ್ಲಿ, ಫೈಜ್ ಅಹ್ಮದ್ ಫೈಜ್‌ರವರ ‘ಹಮ್ ದೇಖೇಂಗೇ’ ಕವಿತೆಯ ಸಾಲನ್ನು ಉದ್ದರಿಸಿದ್ದರು. ಎಂಭತ್ತರ ದಶಕದಲ್ಲಿ ಪಾಕಿಸ್ತಾನದಲ್ಲಿ ಅಂದಿನ ಮಿಲಿಟರಿ ಸರ್ವಾಧಿಕಾರಿ ಜನರಲ್ ಜಿಯಾವುಲ್ ಹಕ್ ಆಡಳಿತದ ವಿರುದ್ಧ ಪ್ರತಿಭಟನೆಯ ಗೀತೆಯಾಗಿ ಮಾರ್ದನಿಸಿದ್ದ, ‘ರಾಜ್ಯಗಳಳಿಯಲಿ/ರಾಜ್ಯಗಳುಳಿಯಲಿ/ಹಾರಲಿ ಗದ್ದುಗೆ, ಮುಕುಟಗಳು/ ತೂರಾಡಲಾದೀತು ಮುಕುಟಗಳ ಗಾಳಿಗೆಸೆದು/ಕೆಡವಲಾದೀತು ಸಿಂಹಾಸನವನ್ನು ಕುಟ್ಟಿ ನೆಲಕ್ಕೆ’ ಎಂಬ ಕವಿತೆಯ ಸಾಲುಗಳನ್ನು ಅಂತರ್ಗತಗೊಳಿಸಿಕೊಂಡು ಗತವು ಅನುಭವದ ರೂಪದಲ್ಲಿ ವರ್ತಮಾನವನ್ನು ಪ್ರಭಾವಿಸುವಂತೆ ಬರೆದರು. ಎಂದೇ ಚರಿತ್ರೆಯನ್ನು ಗತವನ್ನಾಗಿ ಮತ್ತು ಗತವನ್ನು ಸುವರ್ಣಯುಗವನ್ನಾಗಿ ನೋಡುವ ಪ್ರಭುತ್ವ ಪ್ರಾಯೋಜಿತ ಮೀಡಿಯಾಗಳಿರುವ ಈ ಹೊತ್ತು, ಹೀಗೆ ಪರಿಭಾವಿಸುವುದರಿಂದ ಚರಿತ್ರೆ ನಿರಂತರತೆಯನ್ನು ಕಳೆದುಕೊಳ್ಳುತ್ತದೆ ಎಂಬ ಗಾಢ ಅರಿವಿರುವ ಮಹತ್ವದ, ಅಪರೂಪದ ಲೇಖಕ ಅವರು. ಸಮಕಾಲೀನ ಸಂದರ್ಭ ಹೆಚ್ಚು ಸಂಕೀರ್ಣವಾಗಿ ಸವಾಲುಗಳನ್ನು ಒಡ್ಡುತ್ತಿರುವ ಈ ಕಾಲದಲ್ಲಿ, ಸಾಮಾಜಿಕ ಸಮಸ್ಯೆಗಳ ಮೇಲೆ ಹೆಚ್ಚು ಗಮನ ಹರಿಸುತ್ತಿರುವ ಉಮಾಪತಿಯವರ ಎಲ್ಲಾ ಲೇಖನಗಳು, ವರದಿಗಳು ಇಂದಿನ ಯುವ ಪೀಳಿಗೆಯನ್ನು ಮತ್ತಷ್ಟು ಮಾನವೀಯಗೊಳಿಸುತ್ತಿದೆ ಎಂಬುದು ನಿಸ್ಸಂಶಯ.

ಅವರ ಲೇಖನಗಳ ಹಿಂದೆ ಫುಲೆ, ಅಂಬೇಡ್ಕರ್ ಹಾಗೂ ತಳಸಮುದಾಯಗಳ ಅಭಿವ್ಯಕ್ತಿ ಕ್ರಮಗಳ ಪ್ರಭಾವವಿದೆ. ಅವರು ಪತ್ರಕರ್ತ ಮಾತ್ರವಲ್ಲ, ಅವರ ಬರೆಹಗಳಲ್ಲಿ ಚರಿತ್ರೆ, ವರ್ತಮಾನದ ನೆನಪುಗಳಿರುವಂತೆ ಭವಿಷ್ಯಕ್ಕೆ ಬೇಕಾದ ಹಣತೆಯ ಬೆಳಕೂ ಇರುತ್ತದೆ. ಜೊತೆಗೆ ಓದುಗರು ಯಾವ ಪಂಥದವರೇ ಆಗಿರಲಿ, ಅನುಕ್ಷಣ ಹೃದಯ ಮತ್ತು ಕಣ್ಣು ಆರ್ದ್ರವಾಗುವ ಹಾಗೆ ಬರೆಯಬಲ್ಲರು. ಅವರಿಗೆ ‘ಮೇ ಸಾಹಿತ್ಯ ಮೇಳ ಬಳಗ’ವು ೨೦೨೫ನೇ ಸಾಲಿನ ‘ಚಂದ್ರಶೇಖರ ಹೊಸಮನಿ ಅಂಬೇಡ್ಕರ್ ಪತ್ರಿಕಾ ಮಾರ್ಗಿ’ ಪ್ರಶಸ್ತಿ ಕೊಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅವರಿಗೆಲ್ಲವೂ ಒಳಿತೇ ಆಗಲಿ; ಲೋಕಹಿತ ಬಯಸಿ ಕಂಡ ಕನಸುಗಳೆಲ್ಲ ಸಾಕಾರವಾಗಲಿ ಎಂದು ಬಳಗವು ಹಾರೈಸುತ್ತದೆ.

Get real time updates directly on you device, subscribe now.

Comments are closed.

error: Content is protected !!