ರಂಗಭೂಮಿಯಿಂದ ಜೀವಪರವಾದ ಸಾಮರಸ್ಯದ ಒಳಿತಿನ ಸಮಾಜ ಕಟ್ಟಲು ಸಾಧ್ಯ: ಸಚಿವ ಶಿವರಾಜ್ ತಂಗಡಗಿ

ಹೆಗ್ಗೋಡು: ಮೇ 11
ಇವತ್ತಿನ ಕಾಲಘಟ್ಟದಲ್ಲಿ ರಂಗಭೂಮಿಯ ಜವಾಬ್ದಾರಿ ಬಹಳ ಮಹತ್ವದಾಗಿದ್ದು, ರಂಗಭೂಮಿಯಿಂದ ಜೀವಪರವಾದ ಸಾಮರಸ್ಯದ ಒಳಿತಿನ ಸಮಾಜ ಕಟ್ಟಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಅಭಿಪ್ರಾಯಪಟ್ಟರು.
ಸಾಗರ ತಾಲ್ಲೂಕು ಹೆಗ್ಗೋಡಿನ ನೀನಾಸಮ್ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ನವೀಕರಿಸಿರುವ ರಂಗಸಭಾಂಗಣದ ಲೋಕಾರ್ಪಣೆ, ನೀನಾಸಮ್ ರಂಗ ಶಿಕ್ಷಣ ಕೇಂದ್ರದ ವರ್ಷಾಂತ್ಯದ ನಾಟಕೋತ್ಸವ ಮತ್ತು ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿ ಒಂದು ಮಾಧ್ಯಮ ಕ್ಷೇತ್ರ ಇದ್ದಂತೆ. ಸಮಾಜಕ್ಕೆ ಹೇಳ ಬೇಕಾದ್ದನ್ನು ಗಟ್ಟಿಯಾಗಿ ಹೇಳಬಹುದು. ರಂಗಭೂಮಿಯಿಂದ ಸಮಾಜಕ್ಕೆ ಒಳ್ಳೆ ಸಂದೇಶಗಳನ್ನು ಕೆಲಸ ನಡೆಯುತ್ತಿದೆ ಎಂದು ಹೇಳಿದರು.
*ಕಲಾವಿದರನ್ನು ತಯಾರಿಸುವ ಫ್ಯಾಕ್ಟರಿ ನೀನಾಸಮ್:*
ಹೆಗ್ಗೋಡಿನಲ್ಲಿರುವ ನೀನಾಸಮ್ ಕಲಾವಿದರನ್ನು ತಯಾರಿಸುತ್ತಿರುವ ಫ್ಯಾಕ್ಟರಿ ಇದ್ದಂತೆ. ಇಲ್ಲಿಂದ ನೀನಾಸಂ ಸತೀಶ್, ಅಚ್ಯುತ್ ಕುಮಾರ್, ಮಂಡ್ಯ ರಮೇಶ್ ಹೀಗೆ ನೂರಾರು ಮಂದಿ ಕಲಾವಿದರನ್ನು ಈ ಸಂಸ್ಥೆ ನೀಡಿದೆ. ಒಂದು ಸಂಸ್ಥೆಯನ್ನು 75 ವರ್ಷ ಕಟ್ಟಿ ಬೆಳೆಸುವ ಕೆಲಸ ಸುಲಭವಲ್ಲ. ಆದರೆ ನೀನಾಸಂ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಪ್ರತಿ ವರ್ಷ ನೀನಾಸಂ ಸಂಸ್ಥೆಗೆ ಅನುದಾನ ನೀಡಲಾಗುತ್ತಿದೆ. ಕಳೆದ ವರ್ಷ 35 ಲಕ್ಷ ಅನುದಾನ ನೀಡಲಾಗಿದ್ದು, ಈ ವರ್ಷ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಬಿ.ವಿ.ಕಾರಂತರ ರಂಗಮಂದಿರ ನವೀಕರಣಕ್ಕೆ 75 ಲಕ್ಷದ ಅಗತ್ಯವಿದೆ ಎಂದು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಚರ್ಚೆ ನಡೆಸಿ ಅಗತ್ಯದ ಅನುದಾನ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಬೇಳೂರು ಗೋಪಾಲ ಕೃಷ್ಣ, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ನೀನಾಸಮ್ ನ ಸಿದ್ದಾರ್ಥ್ ಭಟ್, ಅಕ್ಷರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Comments are closed.