ಮೇ 16, 17ರಂದು ಉತ್ಸವ ನಡೆಸಲು ಸಭೆಯಲ್ಲಿ ನಿರ್ಣಯ
- ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ
* ಉತ್ಸವದ ರೂಪುರೇಷ ಸಿದ್ಧತೆಗೆ ಅಧಿಕಾರಿಗಳಿಗೆ ನಿರ್ದೇಶನ
ಕನಕಗಿರಿ ಉತ್ಸವ-2026ಕ್ಕೆ ಅಗತ್ಯ ಸಿದ್ಧತೆಯಾಗಲಿ: ಸಚಿವರಾದ ಶಿವರಾಜ ತಂಗಡಗಿ ನಿರ್ದೇಶನ
ಕೊಪ್ಪಳ : : ಕನಕಗಿರಿ ಉತ್ಸವ-2026ರ ಅದ್ಧೂರಿ ಆಯೋಜನೆಯ ಪ್ರಕ್ರಿಯೆಗೆ ಏಪ್ರೀಲ್ 21ರಂದು ವಿದ್ಯುಕ್ತ ಚಾಲನೆ ಸಿಕ್ಕಿತು.
ಪೂರ್ವ ನಿಗದಿಯಂತೆ, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಕನಕಗಿರಿ ಉತ್ಸವ-2026 ಆಚರಣೆ ಸಂಬಂಧ ಏಪ್ರಿಲ್ 21ರಂದು ಸಂಜೆ ವೇಳೆ ಕನಕಗಿರಿ ಪಟ್ಟಣದ ಶ್ರೀ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಆರಂಭದಲ್ಲಿ ಸಚಿವರು ಉತ್ಸವಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಸಲಹೆ ಪಡೆದುಕೊಂಡರು.
ಸ್ಥಳೀಯ ಜಾತ್ರೆಯ ಸಂಬಂಧ ವಾರ ಕಾಲ ಉತ್ಸವ ಮುಂದೂಡಬೇಕು. ಉತ್ಸವದ ಜೊತೆಗೆ ದೇವಾಲಯ, ಕೋಟೆದ್ವಾರಗಳನ್ನು ದುರಸ್ತಿಗೊಳಿಸಬೇಕು. ಬಿಸಿಲಿನ ಕಾರಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸಾರ್ವಜನಿಕರು ಸಲಹೆ ಮಾಡಿದರು.
ಈ ವೇಳೆ ಸಚಿವರು ಮಾತನಾಡಿ, ಕನಕಾಚಲಪತಿ ಜಾತ್ರೆ ಮತ್ತು ಉತ್ಸವ ಎರಡು ಏಕಕಾಲಕ್ಕೆ ನಡೆದಲ್ಲಿ ಜಾತ್ರೆಗೆ ಸೇರುವ ಜನತೆಗೆ ಉತ್ಸವ ನೋಡಲು ಅನುಕೂಲವಾಗಲಿದೆ ಎಂದು ಯೋಜಿಸಿ ಮತ್ತು ಉತ್ಸವಕ್ಕೆ ಬರುವ ಜನತೆ ಜಾತ್ರೆಯನ್ನು ಸಹ ನೋಡಬೇಕು ಎಂದು ಆಶಿಸಿ ಜಾತ್ರೆ ಸಂದರ್ಭದಲ್ಲಿ ಉತ್ಸವ ನಿಗದಿಗೆ ಯೋಜಿಸಲಾಗಿತ್ತು ಎಂದು ತಿಳಿಸಿದರು. ಸಾರ್ವಜನಿಕರ ಸಲಹೆಯಂತೆ ಮೇ 9 ಮತ್ತು 10ರ ಬದಲಾಗಿ ಮೇ 16 ಮತ್ತು ಮೇ 17 ರಂದು ಉತ್ಸವ ಮಾಡಲಾಗುವುದು ಎಂದು ತಿಳಿಸಿದರು. ಇದಕ್ಕೆ ಸಾರ್ವಜನಿಕರು ಒಪ್ಪಿಗೆ ಸೂಚಿಸಿದರು.
ಈ ಬಾರಿಯ ಉತ್ಸವದಲ್ಲಿ
ಬೆಳಗ್ಗೆಯಿಂದ ಸಂಜೆವರೆಗೆ ಎರಡು ದಿನ ಹೆಲಿಕ್ಯಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗುವುದು. ಕಳೆದ ಬಾರಿಗಿಂತ ಈ ಬಾರಿ ಅದ್ದೂರಿ ಉತ್ಸವ ಆಯೋಜನೆ ಮಾಡಲಾಗುವುದು.
ಮೇ 14 ಮತ್ತು ಮೇ 15ರಂದು ಕ್ರೀಡಾಕೂಟ ಆಯೋಜನೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಈಗಾಗಲೇ ರಚನೆಯಾದ ಸಮಿತಿಗಳಿಂದ ಮೇಲಿಂದ ಮೇಲೆ ಸಿದ್ಧತಾ ಸಭೆಗಳು ಆಗಬೇಕು. ಕೃಷಿ ಮತ್ತು ತೋಟಗಾರಿಕಾ ಅಧಿಕಾರಿಗಳು ಉತ್ತಮ ಪ್ರದರ್ಶನಕ್ಕೆ ಆಸಕ್ತಿ ವಹಿಸಬೇಕು. ಬಸ್ ಗಳ ಮೇಲೆ
ಪೋಸ್ಟರ್ ಅಂಟಿಸಿ ಪ್ರಚಾರ ನಡೆಸಬೇಕು ಎಂದು ಸಚಿವರು ತಿಳಿಸಿದರು.
ಬೇಸಿಗೆ ಹಿನ್ನೆಲೆಯಲ್ಲಿ ಬೆಳಗಿನ ಅವಧಿಯಲ್ಲೇ ಮೆರವಣಿಗೆ ಆಗಬೇಕು. ಕವಿಗೋಷ್ಠಿ ಸೇರಿದಂತೆ ಬೇರೆ ಬೇರೆ ಗೋಷ್ಠಿಗಳು ಎರಡೂ ದಿನ ನಡೆಯಬೇಕು ಎಂದು ಸಚಿವರು ಸೂಚಿಸಿದರು.
ಉತ್ಸವ ಹಿನ್ನೆಲೆಯಲ್ಲಿ ಎರಡು ದಿನ ಕನಕಗಿರಿಯಲ್ಲಿ ಮೈಸೂರ ಮಾದರಿಯಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಸಾರ್ವಜನಿಕರು ಉತ್ಸವದಲ್ಲಿ ಸ್ವಯಂ ಪ್ರೇರಣೆಯಿಂದ ಭಾಗಿಯಾಗಬೇಕು ಎಂದು ಸಚಿವರು ಮನವಿ ಮಾಡಿದರು.
ಮುಖ್ಯ ವೇದಿಕೆಗೆ ಉಡಚಪ್ಪ ನಾಯಕ ವೇದಿಕೆ ಎಂದು ಮತ್ತು ಕವಿಗೋಷ್ಠಿ ವೇದಿಕೆಗೆ ಜಯತೀರ್ಥ ರಾಜಪುರೋಹಿತ ಅವರ ಹೆಸರನ್ನಿಡಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಬಸ್ ವ್ಯವಸ್ಥೆಗೆ ಕ್ರಮ: ಸಾರ್ವಜನಿಕರ ಒತ್ತಾಸೆಯಂತೆ ಸಂಜೆ 7 ಗಂಟೆಯಿಂದ 8, 9 ಗಂಟೆಗೆ ಬಸ್ಸುಗಳನ್ನು ಕೊಪ್ಪಳದಿಂದ ಕನಕಗಿರಿಗೆ ಓಡಿಸಲು ಸಚಿವರು ಕೆಎಸ್ ಆರ್ ಟಿಸಿ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ ಇಟ್ನಾಳ ಅವರು ಮಾತನಾಡಿ, ಕನಕಗಿರಿ ಉತ್ಸವಕ್ಕಾಗಿ ಈಗಾಗಲೇ
6 ಕೋಟಿ ರೂ ಅನುದಾನ ನಿಗದಿಯಾಗಿದೆ. ಇದಕ್ಕಾಗಿ 18 ಸಮಿತಿಗಳನ್ನು ರಚಿಸಿದ್ದೇವೆ. ಕಾರ್ಯ ಹಂಚಿಕೆ ಮಾಡಿದ್ದೇವೆ. ಈ ಭಾರಿಯೂ ಪುನಃ ಎರಡು ವೇದಿಕೆಗಳ ನಿರ್ಮಾಣಕ್ಕೆ, ಸ್ಥಳೀಯ ಹಾಗೂ ರಾಜ್ಯದ ಕಲಾವಿದರ ಆಹ್ವಾನಕ್ಕೆ ಕ್ರಮ ವಹಿಸಿದ್ದೇವೆ. ಕ್ರೀಡಾಕೂಟ ಸೇರಿದಂತೆ ಸಭೆಯಲ್ಲಿ ಚರ್ಚೆಯಾಗಿ ನಿರ್ಣಯಿಸುವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ತನುಶ್ರೀ ರಾಮಚಂದ್ರ, ಉಪಾಧ್ಯಕ್ಷರಾದ
ಕಂಠೀರಾವ್, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಡಿವೈಎಸ್ಪಿ ನ್ಯಾಮಗೌಡರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
