ಬಾಲ್ಯ ವಿವಾಹ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ : ತಾ.ಪಂ ಇಓ ಕೆ.ರಾಜಶೇಖರ್

ಕನಕಗಿರಿ: ಗ್ರಾಮ ಹಾಗೂ ತಾಲ್ಲೂಕು ಮಟ್ಟದ ಬಾಲ್ಯವಿವಾಹ ನಿಷೇಧ ಅಧಿಕಾರಿಗಳು ಬಾಲ್ಯ ವಿವಾಹ ನಡೆಯದಂತೆ ತಡೆಯಲು ಅಗತ್ಯ ಮುಂಜಗ್ರತಾ ಕ್ರಮ ಕೈಗೊಳ್ಳಬೇಕು. ಮದುವೆಯಾಗುವ ಯುವಕ-ಯುವತಿಯರ ಜನ್ಮ ದಾಖಲೆ ಪರಿಶೀಲಿಸಬೇಕು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ್ ಹೇಳಿದರು.
ಅವರು, ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಕುಡಿಯುವ ನೀರು , ಬಾಲ್ಯ ವಿವಾಹ ಮತ್ತು SLWM ಘಟಕಗಳ ಜಾಗದ ಕುರಿತು ಜರುಗಿದ ಸಭೆಯಲ್ಲಿ ಮಾತನಾಡಿದರು. ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು, ತಮ್ಮ ವ್ಯಾಪ್ತಿಗಳಲ್ಲಿ ನಡೆಯುವ ಸಾಮೂಹಿಕ ಮತ್ತು ವೈಯಕ್ತಿಕ ಮದುವೆಗಳ ಬಗ್ಗೆ ಮಾಹಿತಿ ಕಲೆಹಾಕಬೇಕು. ಬಾಲ್ಯ ವಿವಾಹ ನಡೆಯದಂತೆ ನಿಯಮಾನುಸಾರ ಕಾರ್ಯ ಪ್ರವೃತ್ತರಾಗಬೇಕು. ವಧು ವರರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರು ಮಾತನಾಡಿ, ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೂ, ಇಲಾಖೆಗಳ ಗಮನಕ್ಕೆ ಬಾರದಂತೆ ಬಾಲ್ಯ ವಿವಾಹಗಳು ನಡೆಯುತ್ತಿವೆ. ತಾಲೂಕಿನ ಎಲ್ಲ ವಲಯ, ಗ್ರಾಮ ಮಟ್ಟದಲ್ಲಿರುವ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮಗಳ ಮೂಲಕ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.
ಬಳಿಕ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿರುಪಾಕ್ಷಿ ಅವರು ಮಾತನಾಡಿ, ತಾಲೂಕು & ಗ್ರಾಮೀಣ ಮಟ್ಟದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ, ಬಾಲ್ಯ ವಿವಾಹ ಪ್ರಕರಣಗಳು ಕೇವಲ ಸಿಡಿಪಿಓ ಇಲಾಖೆಗೆ ಮಾತ್ರ ಸಂಬಂಧಿಸಿದ್ದಲ್ಲ. ಪ್ರತಿಯೊಂದು ಇಲಾಖೆಯವರು ಕೂಡ ಇಂತಹ ಪ್ರಕರಣಗಳು ನಿಮ್ಮ ವ್ಯಾಪ್ತಿಯಲ್ಲಿ ಕಂಡುಬಂದರೇ ಕೂಡಲೇ ಕ್ರಮಕೈಗೊಳ್ಳಿ. ಇನ್ನು, ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ನಡೆಯುವುದು ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ 1098 ಅಥವಾ 112 ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು. ಬಾಲ್ಯವಿವಾಹಗಳನ್ನು ತಡೆಗಟ್ಟಲು ಸಾರ್ವಜನಿಕರು ಸಹ ಸಹಕರಿಸಬೇಕು ಎಂದರು.
ನಂತರ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆ ಕುರಿತು ಗ್ರಾ.ಪಂ ಪಿಡಿಓಗಳಿಂದ ಮಾಹಿತಿ ಪಡೆದು ತಹಶೀಲ್ದಾರರು ಸಾರ್ವಜನಿಕರಿಗೆ ಕುಡಿಯುವ ನೀರು ಸಮಸ್ಯೆಯಾಗದಂತೆ ಕ್ರಮವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಕಂದಾಯ ನೀರಿಕ್ಷಕಾದ ಮಂಜುನಾಥ ಹಿರೇಮಠ, ಹನುಮಂತಪ್ಪ, ರವಿಕುಮಾರ ಸೇರಿದಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ತಾ.ಪಂ ಸಿಬ್ಬಂದಿಗಳು ಹಾಜರಿದ್ದರು.
Comments are closed.