ಪ್ರತಿಶತ ೫೦ ರಷ್ಟು ಸ್ಫರ್ಧಾತ್ಮಕ ಪರೀಕ್ಷೆಯ ಶುಲ್ಕವನ್ನು ನಾನೇ ಭರಿಸುತ್ತೇನೆ – ಶಾಸಕರಾದ ರಾಘವೇಂದ್ರ ಹಿಟ್ನಾಳ್
ಧಾರವಾಡ ಚಾಣಕ್ಯ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದರೆ
ಕೊಪ್ಪಳ: ಆತ್ಮವಿಶ್ವಾಸವಿದ್ದರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷಗಳಲ್ಲಿ ಯಶಸ್ವಿಯಾಗಬಹುದು. ಈ ನಿಟ್ಟಿನಲ್ಲಿ ಚಾಣಕ್ಯ ಕರಿಯರ್ ಅಕಾಡೆಮಿ ಧಾರವಾಡ ಸಂಸ್ಥೆಯ ಸೇವಾಕಾರ್ಯ ಶ್ಲಾಘನೀಯವಾದುದಾಗಿದೆ ಎಂದು ಶಾಸಕರಾದ ರಾಘವೇಂದ್ರ ಹಿಟ್ನಾಳ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ಜರುಗಿದ ಒಂದು ದಿನದ ಸ್ಫರ್ಧಾತ್ಮಕ ಪರೀಕ್ಷೆಯ ಕಾರ್ಯಗಾರದಲ್ಲಿ ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು. ಮುಂದುವರೆದು ಮಾತನಾಡಿ ಕೊಪ್ಪಳ ಕ್ಷೇತ್ರದ ವಿದ್ಯಾರ್ಥಿಗಳು ಧಾರವಾಡ ಚಾಣಕ್ಯ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದರೆ ಪ್ರತಿಶತ ೫೦ ರಷ್ಟು ಸ್ಫರ್ಧಾತ್ಮಕ ಪರೀಕ್ಷೆಯ ಶುಲ್ಕವನ್ನು ಸ್ವತ: ಭರಿಸುವುದಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಕಾಡೆಮಿಯ ನಿರ್ದೇಶಕರಾದ ಪ್ರದೀಪ್ ಗುಡ್ಡದ ಮಾತನಾಡಿ ಬಡವನಾಗಿ ಹುಟ್ಟುವುದು ತಪ್ಪಲ್ಲ. ಬಡವನಾಗಿ ಸಾಯುವುದು ತಪ್ಪು ಎಂದರು. ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು? ಮತ್ತು ಅವುಗಳ ಪಠ್ಯಕ್ರಮ, ಅರ್ಹತೆ ಇತ್ಯಾದಿ ಪ್ರಮುಖ ವಿಷಯಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಪ್ರಾಂಶುಪಾಲರಾದ ತಿಮ್ಮಾರೆಡ್ಡಿಮೇಟಿ ವಿದ್ಯಾರ್ಥಿ ಜೀವನದಲ್ಲಿ ಸ್ಫರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಪಡೆಯುವುದು ಅತ್ಯವಶ್ಯವಿದೆ. ಉತ್ತಮ ಅಧ್ಯಯನದ ಮೂಲಕ ಯಶಸ್ಸನ್ನು ಪಡೆಯಲು ಸಾಧ್ಯವೆಂದರು.
ಇತಿಹಾಸ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ರಾಜಕುಮಾರ ಡಿ.ಎಸ್. ಮಾತನಾಡಿ ಸಾಧನೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಸತತ ಪರಿಶ್ರಮದ ಮೂಲಕ ಸಾಧನೆ ಮಾಡಲು ಸಾಧ್ಯವೆಂದರು. ವೇದಿಕೆಯಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಶಿವಗಂಗಾಶಿವರೆಡ್ಡಿ ಭೂಮಕ್ಕನವರ್, ಕೃಷ್ಣಾರೆಡ್ಡಿ ಜಿ , ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ.ವಾರುಣಿ, ಪ್ರಾಧ್ಯಾಪಕಿಯರಾದ ಶ್ರೀಮತಿ ರಶ್ಮಿ ಹಾಗೂ ಅಕಾಡೆಮಿ ಸಂಚಾಲಕರಾದ ನಾಗಲಿಂಗ ಬಿ. ಇತರರು ಇದ್ದರು.
ಪ್ರಾಸ್ತಾವಿಕ ಮಾತುಗಳನ್ನು ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್ ಅಧಿಕಾರಿಗಳು ಮತ್ತು ಪ್ರಾಧ್ಯಾಪಕರಾದ ಶಿವನಾಥ ಇ.ಜಿ, ಸ್ವಾಗತವನ್ನು ಡಾ.ಪ್ರಕಾಶ ಬಳ್ಳಾರಿ, ವಂದನಾರ್ಪಣೆಯನ್ನು ಶಿವಬಸಪ್ಪ ಮಸ್ಕಿ , ನಿರೂಪಣೆಯನ್ನು ಮಹಾಂತೇಶ ನೆಲಾಗಣಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸು. ೪೦೦ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Comments are closed.