ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕೊಪ್ಪಳ ಜಿ.ಪಂ.ನಿಂದ ಅಗತ್ಯ ಕ್ರಮ

ಕೊಪ್ಪಳ ಜಿಲ್ಲಾ ವ್ಯಾಪ್ತಿಯ 7 ತಾಲ್ಲೂಕುಗಳಲ್ಲಿಯ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ಈಗಾಗಲೇ ಎಲ್ಲಾ ತಾಲ್ಲೂಕು ಪಂಚಾಯತಿಗಳಲ್ಲಿ “ಸಹಾಯವಾಣಿ” ತೆರೆಯಲು ಸೂಚಿಸಲಾಗಿದ್ದು, ಅದರಂತೆ ತಾಲ್ಲೂಕು ಪಂಚಾಯತಿಗಳಲ್ಲಿ “ಸಹಾಯವಾಣಿ” ತೆರೆದು ಪತ್ರಿಕಾ ಪ್ರಕಟಣೆಯನ್ನು ನೀಡಿರುತ್ತಾರೆ. ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಕುಡಿಯುವ ನೀರಿನ ಸಹಾಯವಾಣಿ ತೆರೆಯಲಾಗಿದ್ದು, ಸಂಖ್ಯೆ: 08539-221207 ಆಗಿರುತ್ತದೆ.
ಕೊಪ್ಪಳ ಜಿಲ್ಲೆಯ 153 ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿಯ ಒಟ್ಟು 2,278 ಸರ್ಕಾರಿ ಕೊಳವೆ ಬಾವಿಗಳು ಮತ್ತು 5,551 ಖಾಸಗಿ ಕೊಳವೆ ಬಾವಿಗಳಿರುತ್ತವೆ. ಖಾಸಗಿ ಕೊಳವೆ ಬಾವಿಗಳ ಪೈಕಿ 776 ಕೊಳವೆ ಬಾವಿಗಳನ್ನು ತುರ್ತು ಸಂದರ್ಭದಲ್ಲಿ ಕುಡಿಯುವ ನೀರು ಒದಗಿಸಲು ಬಾಡಿಗೆ ಆಧಾರದ ಮೇಲೆ ಪಡೆಯಲು ಗುರುತಿಸಲಾಗಿದೆ. ಈಗಾಗಲೇ 11 ಗ್ರಾಮಗಳ ಪಂಚಾಯತಿಗಳ ಪೈಕಿ 14 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿರುವ ಹಿನ್ನೆಲೆಯಲ್ಲಿ 17 ಖಾಸಗಿ ಕೊಳವೆ ಬಾವಿಗಳನ್ನು (ಕೊಪ್ಪಳದಲ್ಲಿ 14, ಕುಷ್ಟಗಿಯಲ್ಲಿ 1 ಮತ್ತು ಕನಕಗಿರಿ 2 ಕೊಳವೆ ಬಾವಿಗಳು) ಬಾಡಿಗೆ ಆಧಾರದ ಮೇಲೆ ಪಡೆದು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಕ್ರಮವಹಿಸಲಾಗುತ್ತಿದೆ. ಈ ಗ್ರಾಮಗಳ ಪೈಕಿ ಕನಕಗಿರಿ ತಾಲ್ಲೂಕಿನ ಹಿರೇಖೇಡ ಗ್ರಾಮ ಪಂಚಾಯತಿಯ ಚಿಕ್ಕಖೇಡ ಮತ್ತು ಹುಲಿಹೈದರ್ ಗ್ರಾಮ ಪಂಚಾಯತಿಯ ಕನಕಾಪುರ ಗ್ರಾಮಗಳಿಗೆ ಸ್ಥಾನಿಕವಾಗಿ ಭೇಟಿ ನೀಡಿ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿರುತ್ತದೆ. ಮುಂದಿನ 3 ತಿಂಗಳುಗಳಲ್ಲಿ 111 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರಬಹುದೆಂದು ಅಂದಾಜಿಸಲಾಗಿರುತ್ತದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಖಾಸಗಿ ಬೋರ್‌ವೆಲ್ ಹಾಗೂ ಖಾಸಗಿ ಟ್ಯಾಂಕರ್‌ಗಳ ಮೂಲಕ ನಿಯಮಾನುಸಾರ ನೀರು ಸರಬರಾಜು ಮಾಡಲು ಸಹ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ.
ಅಲ್ಲದೇ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿಯ ಕುಡಿಯುವ ನೀರಿನ ಮೂಲಗಳನ್ನು ಕಾಲಕಾಲಕ್ಕೆ ನಿಯಮಾನುಸಾರ ಪರೀಕ್ಷೆಗೊಳಪಡಿಸಿ ಶುದ್ಧತೆಯನ್ನು ಖಚಿತಪಡಿಸಿಕೊಂಡು ಅಗತ್ಯ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ ಮತ್ತು ಓ.ಹೆಚ್.ಟಿ., ಸಂಪು, ಮಿನಿ ವಾಟರ್ ಟ್ಯಾಂಕ್, ಜಿ.ಎಲ್.ಎಸ್.ಆರ್. ಹಾಗೂ ಇತರೆ ನೀರು ಸಂಗ್ರಾಹಕಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ, ಶುದ್ಧೀಕರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ. ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಗತ್ಯವಾದ ಪೈಪ್‌ಲೈನ್ ಕಾಮಗಾರಿಗಳು, ಬೋರ್‌ವೆಲ್ ಕೊರೆಯಿಸುವುದು, ಬೋರ್‌ವೆಲ್‌ಗಳ ಪ್ಲಶಿಂಗ್ ಮಾಡಿಸುವುದು, ಇತ್ಯಾದಿ ಕಾಮಗಾರಿಗಳು ಕೈಗೊಳ್ಳಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೊಪ್ಪಳ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು, ಇವರಿಂದ ಸಿದ್ಧಪಡಿಸಲಾದ ಕ್ರಿಯಾಯೋಜನೆಯು ರಾಜ್ಯ ಕಛೇರಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕೊಪ್ಪಳ ವಿಭಾಗದಿಂದ ಕಳುಹಿಸಲಾಗಿರುತ್ತದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.